ಬೆಂಗಳೂರು: ಕಾಂಗ್ರೆಸ್ ನಾಯಕರ ಸಂಪರ್ಕಕ್ಕೆ ಸಿಗದೇ ಅಂತರ ಕಾಯ್ದುಕೊಂಡಿರುವ ಅತೃಪ್ತ ಶಾಸಕರ ನಡೆ ಕಾಂಗ್ರೆಸ್‌ನಲ್ಲಿ ತೀವ್ರ ಆತಂಕ ಸೃಷ್ಟಿಸಿದ್ದು, ಬಜೆಟ್ ಅಧಿವೇಶನದ ಮೇಲೆ ಕರಿನೆರಳು ಬೀರಿದೆ.
ಅತೃಪ್ತ ಶಾಸಕರು ರಾಜೀನಾಮೆ ನೀಡಿದರೆ, ಸರ್ಕಾರದ ಬಹುಮತಕ್ಕೆ ತಕ್ಷಣವೇ ಧಕ್ಕೆ ಉಂಟಾಗ ದಿದ್ದರೂ, ಜಂಟಿ ಅಧಿವೇಶನ ಹಾಗೂ ಬಜೆಟ್ ಮಂಡನೆ ಮಾಡುತ್ತಿರುವುದರಿಂದ ಬಜೆಟ್‌ಗೆ ಒಪ್ಪಿಗೆ ಪಡೆಯುವ ಸಂದರ್ಭದಲ್ಲಿ ಸರ್ಕಾರಕ್ಕೆ ಸಂಕಷ್ಟ ಎದುರಾಗುವ ಸಾಧ್ಯತೆ ಹೆಚ್ಚಿರುವುದರಿಂದ ಕೈ ನಾಯಕರು ಹೆಚ್ಚು ತಲೆಕೆಡಿಸಿಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ.
ಮಾಜಿ ಸಚಿವ ರಮೇಶ್ ಜಾರಕಿಹೊಳಿ ಸೇರಿ ನಾಲ್ವರು ಕಾಂಗ್ರೆಸ್ ಶಾಸಕರು ಇಪ್ಪತ್ತು ದಿನಗಳಿಂದ ಮುಂಬೈನಲ್ಲಿಯೇ ವಾಸ್ತವ್ಯ ಹೂಡಿದ್ದು, ಪಕ್ಷದ ನೋಟಿಸ್‌ಗೆ ಅಲ್ಲಿಂದಲೇ ಉತ್ತರ ನೀಡಿದ್ದಾರೆ. ರಮೇಶ್ ಅವರೊಂದಿಗೆ ಗುರುತಿಸಿ ಕೊಂಡಿರುವ ಮಹೇಶ್ ಕುಮಠಳ್ಳಿ, ನಾಗೇಂದ್ರ ಹಾಗೂ ಉಮೇಶ್ ಜಾಧವ್ ತಮ್ಮ ಕ್ಷೇತ್ರಗಳಿಗೆ ಆಗಮಿಸಿದ್ದರು. ಮಹೇಶ್ ಕುಮಠಳ್ಳಿ ಮತ್ತು ರೆಸಾರ್ಟ್ ಗಲಾಟೆಯಿಂದಾಗಿ ಅಮಾನತಾಗಿರುವ ಕಂಪ್ಲಿ ಶಾಸಕ ಜೆ.ಎನ್.ಗಣೇಶ್ ಕೂಡ ಮುಂಬೈಗೆ ತೆರಳಿದ್ದಾರೆ ಎಂದು ಹೇಳಲಾಗುತ್ತಿದೆ. ಜತೆಗೆ ಗಣೇಶ್ ಕೂಡ ರಾಜೀನಾಮೆ ನೀಡುವ ಸಾಧ್ಯತೆ ಇದೆ ಎನ್ನಲಾಗಿದೆ.
ಈ ಹಿನ್ನೆಲೆಯಲ್ಲಿಯೇ ಐವರು ಶಾಸಕರು ರಾಜೀನಾಮೆ ನೀಡಿದರೆ, ಆಡಳಿತ ಪಕ್ಷದ ಸಂಖ್ಯಾ ಬಲ 113 ಕ್ಕೆ ಕುಸಿಯಲಿದೆ. ಪ್ರತಿಪಕ್ಷದ ಸಂಖ್ಯಾ ಬಲ 106 ಕ್ಕೆ ಏರಿಕೆ ಆಗಿರುವುದರಿಂದ ಬಜೆಟ್‌ಗೆ ಅನುಮೋದನೆ ಪಡೆಯುವ ಸಂದರ್ಭದಲ್ಲಿ ಕನಿಷ್ಠ ನಾಲ್ಕು ಜನ ಅತೃಪ್ತ ಶಾಸಕರು ಸರ್ಕಾರದ ವಿರುದ್ಧ ಮತ ಚಲಾವಣೆ ಅಥವಾ ಗೈರು ಹಾಜರಾದರೆ, ಬಜೆಟ್ ಅಂಗೀಕಾರ ಗೊಳ್ಳುವುದು ಕಷ್ಟವಾಗಲಿದೆ.
ಸ್ಪೀಕರ್ ಭೇಟಿ ಮಾಡಿದ ದಿನೇಶ್ : ಶಾಸಕರೇ ನಾದರೂ ರಾಜೀನಾಮೆ ನೀಡಿದಲ್ಲಿ ಸ್ಪೀಕರ್ ನಿರ್ಧಾರದ ಮೇಲೆ ಸರ್ಕಾರದ ಭವಿಷ್ಯ ಅಡಗಿರುತ್ತದೆ. ಆ ಕಾರಣಕ್ಕಾಗಿಯೇ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಅವರು, ಸ್ಪೀಕರ್ ರಮೇಶ್ ಕುಮಾರ್ ಅವರನ್ನು ಭೇಟಿ ಮಾಡಿ, ಪಕ್ಷಾಂತರ ನಿಷೇಧ ಕಾಯ್ದೆ, ಹಿಂದೆ ಆಪರೇಷನ್ ಕಮಲ ಕಾರ್ಯಾಚರಣೆಯಡಿ ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಟ್ಟ ಪ್ರಕರಣಗಳ ಬಗ್ಗೆ ಮಾಹಿತಿ ಪಡೆದರು ಎಂದು ಮೂಲಗಳು ತಿಳಿಸಿವೆ.