Advertisement

ಕೆಕೆಆರ್‌ಡಿಬಿ ನಿಗದಿತ ಗುರಿ ಸಾಧಿಸದ್ದಕ್ಕೆ ಅಸಮಾಧಾನ

12:20 PM Jan 21, 2022 | Team Udayavani |

ಕಲಬುರಗಿ: ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ ವ್ಯಾಪ್ತಿಯ ಜಿಲ್ಲೆ ಗಳಿಗೆ ನೀಡಿರುವ ಅನುದಾನದಲ್ಲಿ ನಿಗದಿತ ಆರ್ಥಿಕ ಪ್ರಗತಿ ಸಾಧಿಸದಿರುವುಕ್ಕೆ ಮಂಡಳಿಯ ಅಧ್ಯಕ್ಷ ದತ್ತಾತ್ರೇಯ ಪಾಟೀಲ ರೇವೂರ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.

Advertisement

ನಗರದ ಮಿನಿ ವಿಧಾನಸೌಧದ ಪ್ರಾದೇಶಿಕ ಆಯುಕ್ತರ ಕಚೇರಿ ಸಭಾಂಗಣದಲ್ಲಿ ಗುರುವಾರ ಆರು ಜಿಲ್ಲೆಗಳ ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳೊಂದಿಗೆ ವಿಡಿಯೋ ಸಂವಾದದ ಮೂಲಕ ಪ್ರಗತಿ ಪರಿಶೀಲನೆ ನಡೆಸಿ ಅವರು ಮಾತನಾಡಿದರು.

ಕಲಬುರಗಿ, ರಾಯಚೂರು ಹಾಗೂ ಬಳ್ಳಾರಿ ಜಿಲ್ಲೆಗಳಲ್ಲಿ ತೀರ ಕಡಿಮೆ ಸಾಧನೆ ಮಾಡಲಾಗಿದೆ. ಆರ್ಥಿಕ ಪ್ರಗತಿ ಸಾಧಿ ಸಿದಲ್ಲಿ ಮಂಡಳಿಗೆ ಹೆಚ್ಚಿನ ಅನುದಾನ ನೀಡುವುದಾಗಿ ಮುಖ್ಯಮಂತ್ರಿಗಳು ತಿಳಿಸಿದ್ದರು. ಆದರೆ ಆರ್ಥಿಕ ಪ್ರಗತಿ ಸಾಧಿಸದೆ ಇರುವುದು ಮಂಡಳಿಗೆ ಹೆಚ್ಚಿನ ಅನುದಾನ ಬರಲು ಸಮಸ್ಯೆಯಾಗಲಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಬಿಲ್‌ಗ‌ಳಲ್ಲಿ ನ್ಯೂನತೆಗಳನ್ನು ಸರಿಪಡಿಸಿ ಜ.31ರೊಳಗೆ ಎಲ್ಲ ಬಿಲ್‌ಗ‌ಳನ್ನು ಸಲ್ಲಿಸಬೇಕು. ಬಾಕಿ ಕಾಮಗಾರಿಗಳಿಗೆ ಆಡಳಿತ ಮಂಜೂರಾತಿ ನೀಡಬೇಕು. ಇಲ್ಲದಿದ್ದರೆ ಅವುಗಳನ್ನು ರದ್ದು ಪಡಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.

ಎಲ್ಲ ಅನುಷ್ಠಾನಾಧಿಕಾರಿಗಳು 2021-22 ನೇ ಸಾಲಿನಲ್ಲಿ ಅನುಮೋದನೆಗೊಂಡ ಕ್ರಿಯಾ ಯೋಜನೆಯಂತೆ ಕಾಮಗಾರಿಗಳು ಪೂರ್ಣಗೊಳಿಸಬೇಕು. ಪೂರ್ಣವಾಗಿ ಬಳಸಿಕೊಳ್ಳಲು ಅನುಷ್ಠಾನ ಅಧಿಕಾರಿಗಳು ವಿಫಲಗೊಂಡಲ್ಲಿ ಅವರೇ ಜವಾಬ್ದಾರೆಂದು ತಾಕೀತು ಮಾಡಿದರು. ಇದೇ ಸಂದರ್ಭದಲ್ಲಿ ಕಾರ್ಯದರ್ಶಿ ಆರ್‌.ವೆಂಕಟೇಶ ಕುಮಾರ ಮಾತನಾಡಿ, ತಾಂತ್ರಿಕ ಸಂಬಂಧಪಟ್ಟ ಯೋಜನೆ ಮತ್ತು ತಾಂತ್ರಿಕ ವಿಷಯಗಳಿಗೆ ಸಂಬಂಧಿಸಿದ ಬಿಲ್‌ಗ‌ಳನ್ನು ಅಪ್‌ಲೋಡ್‌ ಮಾಡುವಾಗ ಸರಿಯಾಗಿ ಸಲ್ಲಿಸುತ್ತಿಲ್ಲ ಎಂದು ಹೇಳಿದರು.

Advertisement

2.5 ಕೋಟಿ ರೂ. ವೆಚ್ಚದ ಕಾಮಗಾರಿಗಳಿಗೆ ಆಯಾ ಜಿಲ್ಲಾಧಿಕಾರಿಗಳೇ ಆಡಳಿತ ಮಂಜೂರಾತಿ ನೀಡಬೇಕು. ಆದರೆ, ಆರು ಜಿಲ್ಲೆಗಳಿಂದ 600ಕ್ಕೂ ಹೆಚ್ಚು ಕಾಮಗಾರಿಗಳಿಗೆ ಆಡಳಿತ ಮಂಜೂರಾತಿ ನೀಡಲಾಗಿಲ್ಲ. ಈ ಪೈಕಿ ಕಲಬುರಗಿ ಜಿಲ್ಲೆಯಲ್ಲೇ ಅತಿ ಹೆಚ್ಚು 227 ಕಾಮಗಾರಿಗಳಿಗೆ ಅಡಳಿತ ಮಂಜೂರಾತಿ ನೀಡಿಲ್ಲ. ಈಗಾಗಲೇ ಸಂಪೂರ್ಣವಾಗಿ ಮುಗಿದ ಕಾಮಗಾರಿಗಳಿಗೂ ಬಿಲ್‌ ಗಳನ್ನು ಸಲ್ಲಿಸುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ವೀಡಿಯೋ ಸಂವಾದ ಸಭೆಯಲ್ಲಿ ಕೆಕೆಆರ್‌ಡಿಬಿಯ ಜಂಟಿ ನಿರ್ದೇಶಕರಾದ ಪ್ರವೀಣಪ್ರಿಯಾ ದೇವಿಡ್‌, ಹಣಕಾಸು ನಿಯಂತ್ರಕರಾದ ರಾಮಣ್ಣ ಅಥಣಿ, ಅಧೀಕ್ಷಕ ಅಭಿಯಂತರ ಸುರೇಶ ಶರ್ಮಾ ಹಾಗೂ ಎಲ್ಲ ಜಿಲ್ಲೆಯ ಜಿಲ್ಲಾಧಿಕಾರಿಗಳು, ಜಿಲ್ಲಾ ಪಂಚಾಯಿತಿ ಸಿಇಒಗಳು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next