Advertisement

ಅತೃಪ್ತಿ ಕೈ ಮುಚ್ಚಿದ ಕೆಂಡ; ನಾಯಕರು ಮೌನ, ಬೆಂಬಲಿಗರಿಂದ ಬೆದರಿಕೆ

06:00 AM Jun 11, 2018 | Team Udayavani |

ಬೆಂಗಳೂರು: ಸಂಪುಟ ವಿಸ್ತರಣೆಗೆ ಸಂಬಂಧಿಸಿದಂತೆ ಸಮ್ಮಿಶ್ರ ಸರ್ಕಾರದ ಮಿತ್ರಪಕ್ಷ ಕಾಂಗ್ರೆಸ್‌ನಲ್ಲಿ ಸ್ಫೋಟಗೊಂಡಿರುವ ಅತೃಪ್ತಿ ವಾರಾಂತ್ಯದ ವೇಳೆ ಮೇಲ್ನೋಟಕ್ಕೆ ಸ್ವಲ್ಪ ತಣ್ಣಗಾದಂತೆ ಕಂಡುಬಂದಿದೆಯಾದರೂ ಪರಿಸ್ಥಿತಿ ಬೂದಿ ಮುಚ್ಚಿದ ಕೆಂಡದಂತಿದೆ.

Advertisement

ಕಳೆದ ಬುಧವಾರದಿಂದ ಪಕ್ಷದ ನಾಯಕರ ವಿರುದ್ಧ ತಿರುಗಿ ಬಿದ್ದಿದ್ದ ಮಾಜಿ ಸಚಿವ ಎಂ.ಬಿ.ಪಾಟೀಲ್‌ ತಮ್ಮನ್ನು ಉಪಮುಖ್ಯಮಂತ್ರಿಯಾಗಿ ಮಾಡಬೇಕು ಎಂದು ದೆಹಲಿಗೆ ಹೋಗಿ ವರಿಷ್ಠರನ್ನು ಭೇಟಿಯಾಗಿ ಬಂದ ಮೇಲೆ ಸ್ವಲ್ಪ ಮೆತ್ತಗಾದಂತೆ ಕಂಡುಬಂದಿದ್ದಾರೆ. ಆದರೆ, ಮತ್ತೂಂದು ಉಪಮುಖ್ಯಮಂತ್ರಿ ಸ್ಥಾನ ಇಲ್ಲ ಎಂಬ ವರಿಷ್ಠರ ಸಂದೇಶದಿಂದಾಗಿ ಅಸಮಾಧಾನ ಇರುವುದು ಸ್ಪಷ್ಟವಾಗಿ ಕಂಡುಬಂದಿದೆ.

ಇನ್ನೊಂದೆಡೆ ಪಕ್ಷದಲ್ಲಿ ಅಸಮಾಧಾನ ಇನ್ನೂ ಮುಂದುವರಿದಿದೆ. ಸೋಮವಾರ ತಮ್ಮ ತೀರ್ಮಾನ ತಿಳಿಸುವುದಾಗಿ ಮಾಜಿ ಸಚಿವ ಜಾರಕಿಹೊಳಿ ಹೇಳಿದ್ದರೆ, ಇನ್ನೊಬ್ಬ ಮಾಜಿ ಸಚಿವ ಎಚ್‌.ಕೆ.ಪಾಟೀಲ್‌ ಮಂಗಳವಾರ ತಮ್ಮ ನಿರ್ಧಾರ ತಿಳಿಸುವುದಾಗಿ ಹೇಳಿದ್ದಾರೆ. ಇದರ ಮಧ್ಯೆ ಸಚಿವ ಸ್ಥಾನ ಸಿಗದ ಅತೃಪ್ತರ ವಿರುದ್ಧ 40ಕ್ಕೂ ಹೆಚ್ಚು ಶಾಸಕರು ಸೋಮವಾರ ಸಭೆ ಕರೆದಿದ್ದಾರೆ. ಹೀಗಾಗಿ ಇವರೆಲ್ಲರ ನಿರ್ಧಾರಗಳು ಹೊರಬೀಳುವವರೆಗೆ ಆತಂಕ ಮುಂದುವರಿಯಲಿದೆ.

ಸೋಮವಾರ ಯಾವುದೇ ಸಭೆ ಇಲ್ಲ ಎಂದು ಅತೃಪ್ತ ಶಾಸಕರು ಹೇಳಿದ್ದಾರಾದರೂ ತಮ್ಮಲ್ಲಿ ಅಸಮಾಧಾನ ದೂರವಾಗಿದೆ ಎಂಬುದನ್ನು ಎಲ್ಲೂ ಸ್ಪಷ್ಟಪಡಿಸಿಲ್ಲ. ಅಲ್ಲದೆ, ಶಾಸಕರ ಬೆಂಬಲಿಗರು ಪಕ್ಷದಲ್ಲಿ ಹೊಂದಿರುವ ಸ್ಥಾನಗಳಿಗೆ ರಾಜೀನಾಮೆ ಬೆದರಿಕೆ ಮುಂದುವರಿಸಿದ್ದಾರೆ.

ಈ ಮಧ್ಯೆ ಸಚಿವ ಸ್ಥಾನ ಸಿಗದಿರುವ ಬೆಂಬಲಿಗರ ಪ್ರತಿಭಟನೆಗಳು ಮುಂದುವರಿದಿದ್ದು, ಭಾಲ್ಕಿ ಶಾಸಕ ಈಶ್ವರ ಖಂಡ್ರೆ ಅವರಿಗೆ ಸಚಿವ ಸ್ಥಾನ ನೀಡದಿರುವುದನ್ನು ಪ್ರತಿಭಟಿಸಿ ಕಾಂಗ್ರೆಸ್‌ನ ವಿವಿಧ ಘಟಕಗಳ ಪದಾಧಿಕಾರಿಗಳು, ಸದಸ್ಯರು ಸೇರಿದಂತೆ ಸುಮಾರು ಎರಡು ಸಾವಿರಕ್ಕೂ ಅಧಿಕ ಮಂದಿ ತಮ್ಮ ಸ್ಥಾನಗಳಿಗೆ ರಾಜೀನಾಮೆ ಸಲ್ಲಿಸಿದ್ದಾರೆ. ಅಲ್ಲದೆ, ಸ್ಥಳೀಯ ಸಂಸ್ಥೆ ಪ್ರತಿನಿಧಿಗಳೂ ರಾಜೀನಾಮೆ ಸಲ್ಲಿಸುವ ಬೆದರಿಕೆ ಹಾಕಿದ್ದಾರೆ. ಜತೆಗೆ ವಿಧಾನ ಪರಿಷತ್‌ ಸದಸ್ಯ ಪ್ರತಾಪ್‌ಚಂದ್ರಶೆಟ್ಟಿ ಅವರಿಗೆ ಸಚಿವ ಸ್ಥಾನ ನೀಡುವಂತೆ ಒತ್ತಾಯಿಸಿ ಕರ್ನಾಟಕ ರಕ್ಷಣಾ ವೇದಿಕೆ (ಪ್ರವೀಣ್‌ ಶೆಟ್ಟಿ ಬಣ) ಅಧ್ಯಕ್ಷ ಪ್ರವೀಣ್‌ ಶೆಟ್ಟಿ ನೇತೃತ್ವದಲ್ಲಿ ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್‌ ಅವರ ಬೆಂಗಳೂರಿನ ಮನೆ ಮುಂದೆ ಪ್ರತಿಭಟನೆ ನಡೆಸಿದೆ.

Advertisement

ಸಚಿವ ಸ್ಥಾನ ಸಿಗದೆ ಅಸಮಾಧಾನಗೊಂಡಿರುವ ಕಾಂಗ್ರೆಸ್‌ನ ಶಾಸಕರು ಕಳೆದ ನಾಲ್ಕೈದು ದಿನಗಳಿಂದ ಸತತ ಸಭೆ, ಚರ್ಚೆಗಳನ್ನು ನಡೆಸಿದ್ದು, ಭಾನುವಾರ ಇವೆಲ್ಲಕ್ಕೂ ವಿಶ್ರಾಂತಿ ನೀಡಿದ್ದಾರೆ. ಆದರೆ, ತಮ್ಮ ಅಸಮಾಧಾನವನ್ನು ಆಪ್ತರ ಬಳಿ ತೋಡಿಕೊಂಡಿದ್ದಾರೆ. ಸೋಮವಾರದಿಂದ ಮತ್ತೆ ಕಾರ್ಯಾಚರಣೆಗಿಳಿಯಲಿದ್ದಾರೆ ಎಂದು ಮೂಲಗಳು ಹೇಳಿವೆ.

ಅತೃಪ್ತಿ ಶಮನವಾಗಿದೆ ಎಂದು ಹೇಳುವ ಪ್ರಯತ್ನ:
ಇನ್ನೊಂದೆಡೆ ಸಚಿವ ಸ್ಥಾನ ವಂಚಿತರ ಅಸಮಾಧಾನ ಅಥವಾ ಅತೃಪ್ತಿ ಶಮನವಾಗಿದೆ. ಅಸಮಾಧಾನಗಳಿಂದ ಯಾವುದೇ ತೊಂದರೆಯಾಗಿಲ್ಲ ಎಂದು ಹೇಳುವ ಪ್ರಯತ್ನವನ್ನು ಕಾಂಗ್ರೆಸ್‌ ಮಾಡುತ್ತಿದೆ. ಸಚಿವ ಸ್ಥಾನ ಸಿಗದೆ ಅತೃಪ್ತಗೊಂಡವರು ನಡೆಸುತ್ತಿರುವ ಚಟುವಟಿಕೆಗಳಿಂದ ನಾವ್ಯಾರು ಟೆನÒನ್‌ ಮಾಡಿಕೊಂಡಿಲ್ಲ, ಕೂಲ್‌ ಆಗಿ ಇದ್ದೇವೆ. ನಮ್ಮ ಕೆಲಸಗಳನ್ನು ಮಾಡುತ್ತಿದ್ದೇವೆ. ಸಚಿವರಾಗಿರುವವರು ಇಲ್ಲಿ ದಿನನಿತ್ಯದ ಕೆಲಸಗಳನ್ನು ನಿರ್ವಹಿಸುತ್ತಿದ್ದೇವೆ. ಸಂಪುಟದಲ್ಲಿ ಸ್ಥಾನ ಸಿಗದ ಕಾರಣಕ್ಕಾಗಿ ಶಾಸಕರು ಅಸಮಾಧಾನ ವ್ಯಕ್ತಪಡಿಸುವುದು ನಿಜ. ಅದನ್ನು ಮಾತುಕತೆ ಮೂಲಕ ಬಗೆಹರಿಸುತ್ತೇವೆ ಎಂದು ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್‌ ಹೇಳಿದ್ದಾರೆ.

ನಮ್ಮಲ್ಲಿ ಯಾವ ಭಿನ್ನಮತವೂ ಇಲ್ಲ, ಬಣವೂ ಇಲ್ಲ. ಎಲ್ಲರೂ ಹೈಕಮಾಂಡ್‌ ತೀರ್ಮಾನಕ್ಕೆ ಬದ್ಧರಾಗಿರುತ್ತೇವೆ. ಎಂ.ಬಿ.ಪಾಟೀಲ್‌ ಅವರು ತಮಗಾಗಿರುವ ನೋವನ್ನು ಹೈಕಮಾಂಡ್‌ ಜತೆ ಹೇಳಿಕೊಂಡಿದ್ದು, ಇದು ತಪ್ಪಲ್ಲ. ಹಾಗೆಂದ ಮಾತ್ರಕ್ಕೆ ಇದನ್ನು ಭಿನ್ನಮತ ಎನ್ನುವುದು ಸರಿಯಲ್ಲ ಎನ್ನುವ ಮೂಲಕ ಪಕ್ಷದಲ್ಲಿ ಎಲ್ಲವೂ ಸರಿಯಿದೆ ಎಂದು ಹೇಳುವ ಪ್ರಯತ್ನವನ್ನು ಸಚಿವ ಡಿ.ಕೆ.ಶಿವಕುಮಾರ್‌ ಮಾಡಿದ್ದಾರೆ.

ಎಂ.ಬಿ.ಪಾಟೀಲ್‌ ಅಸಮಾಧಾನ ವಿಚಾರದಲ್ಲಿ ಸಮಸ್ಯೆಯೇ ಇಲ್ಲ. ನಾನು ಸೇರಿದಂತೆ ಡಿ.ಕೆ.ಶಿವಕುಮಾರ್‌, ಆರ್‌.ವಿ.ದೇಶಪಾಂಡೆ, ಕೆ.ಜೆ.ಜಾರ್ಜ್‌, ದಿನೇಶ್‌ ಗುಂಡೂರಾವ್‌, ಕೃಷ್ಣಬೈರೇಗೌಡ ಅವರು ಎಂ.ಬಿ.ಪಾಟೀಲರೊಂದಿಗೆ ಮಾತನಾಡಿದ್ದು, ಯಾವ ರೀತಿಯ ತೀರ್ಮಾನವಾಗಿದೆ ಎಂಬ ಬಗ್ಗೆಯೂ ಚರ್ಚೆ ಮಾಡಿದ್ದೇವೆ. ಆ ಹಿನ್ನೆಲೆಯಲ್ಲಿಯೇ ಅವರು ಎಐಸಿಸಿ ಅಧ್ಯಕ್ಷರನ್ನು ಭೇಟಿಯಾಗಿದ್ದರು.
– ಡಾ.ಜಿ.ಪರಮೇಶ್ವರ್‌, ಉಪಮುಖ್ಯಮಂತ್ರಿ

ಜೂ. 14ರಂದು ಸಮನ್ವಯ ಸಮಿತಿ ಸಭೆ
ಬೆಂಗಳೂರು
: ಜೆಡಿಎಸ್‌- ಕಾಂಗ್ರೆಸ್‌ ಮೈತ್ರಿ ಸರ್ಕಾರದ ಸುಗಮ ಆಡಳಿತ ನಿರ್ವಹಣೆಗಾಗಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ರಚನೆಯಾಗಿರುವ ಸಮನ್ವಯ ಸಮಿತಿಯ ಮೊದಲ ಸಭೆ ಜೂ. 14ರಂದು ನಡೆಯಲಿದೆ. ಸಭೆಯಲ್ಲಿ ಸಚಿವ ಸ್ಥಾನ ವಂಚಿತರ ಅಸಮಾಧಾನದ ಬಗ್ಗೆಯೂ ಚರ್ಚೆಯಾಗಲಿದೆ.

ಈ ಕುರಿತು ಮಾಹಿತಿ ನೀಡಿದ ಕೆಪಿಸಿಸಿ ಅಧ್ಯಕ್ಷರೂ ಆದ ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್‌, ಸಮನ್ವಯ ಸಮಿತಿ ಅಧ್ಯಕ್ಷರಾಗಿರುವ ಸಿದ್ದರಾಮಯ್ಯ ಅವರು ಜೂ. 14ರಂದು ಮೊದಲ ಸಭೆ ಕರೆದಿದ್ದಾರೆ. ಸಮ್ಮಿಶ್ರ ಸರ್ಕಾರದಲ್ಲಿ ಮುಂದಿನ ದಿನಗಳಲ್ಲಿ ಆಡಳಿತ ಹೇಗೆ ನಡೆಯಬೇಕು? ಸಮನ್ವಯ ಸಮಿತಿ ಯಾವ ರೀತಿ ತೀರ್ಮಾನ ಕೈಗೊಳ್ಳಬೇಕು? ಮುಂತಾದ ವಿಚಾರಗಳ ಬಗ್ಗೆ ಚರ್ಚೆಯಾಗಲಿದೆ. ಜತೆಗೆ ಸಾಮಾನ್ಯ ಕನಿಷ್ಠ ಕಾರ್ಯಕ್ರಮಗಳನ್ನು ರೂಪಿಸಬೇಕಿದ್ದು, ಅದರಲ್ಲಿರಬೇಕಾದ ಆದ್ಯತೆಗಳು, ಪ್ರಣಾಳಿಕೆ ಅಂಶಗಳ ಆದ್ಯತೆ ಬಗ್ಗೆಯೂ ಸಮಾಲೋಚನೆ ನಡೆಸಲಿದೆ ಎಂದರು.

ಮೈತ್ರಿ ಸರ್ಕಾರವು ಸಮನ್ವತೆಯಿಂದ ಕಾರ್ಯ ನಿರ್ವಹಿಸುತ್ತಾ ಆಡಳಿತ ನಡೆಸಬೇಕಿದೆ. ಈ ಮೈತ್ರಿ ಸರ್ಕಾರ ಯಶಸ್ವಿಯಾಗಬೇಕು ಎಂಬ ನಿಟ್ಟಿನಲ್ಲಿ ಹಲವು ವಿಚಾರ ಚರ್ಚಿಸಲಾಗಿದೆ. ಒಟ್ಟಾರೆ ಮೈತ್ರಿ ಸರ್ಕಾರ ಯಶಸ್ವಿಯಾಗುವ ನಿಟ್ಟಿನಲ್ಲಿ ಹಲವು ವಿಷಯಗಳ ಬಗ್ಗೆ ಸಭೆಯಲ್ಲಿ ಚರ್ಚಿಸಲಾಗುವುದು ಎಂದು ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next