ಮಂಡ್ಯ: ಅಂಬರೀಶ್ ಸಾವಿನ ಹಿನ್ನೆಲೆಯಲ್ಲಿ ಮಂಡ್ಯ ಜಿಲ್ಲೆಯಾದ್ಯಂತ ಅಘೋಷಿತ ಬಂದ್ ವಾತಾವರಣ ನಿರ್ಮಾಣವಾಗಿದ್ದು, ವರ್ತಕರು ಭಾನುವಾರ ಸ್ವಯಂಪ್ರೇರಿತರಾಗಿ ಅಂಗಡಿ ಬಾಗಿಲು ಮುಚ್ಚಿದ್ದರು. ಜತೆಗೆ, ನೆಚ್ಚಿನ ನಾಯಕನ ಪಾರ್ಥಿವ ಶರೀರವನ್ನು ಮಂಡ್ಯಕ್ಕೆ ಕರೆ ತರುವಂತೆ, ಸ್ವಗ್ರಾಮ ದೊಡ್ಡರಸಿನಕೆರೆಯಲ್ಲಿ ಅಂತ್ಯಕ್ರಿಯೆ ನಡೆಸುವಂತೆ ಅಭಿಮಾನಿಗಳು ಅಲ್ಲಲ್ಲಿ ರಸ್ತೆ ತಡೆ ನಡೆಸಿದರು. ಚಿತ್ರಮಂದಿರಗಳಲ್ಲಿ ಪ್ರದರ್ಶನ ರದ್ದು ಪಡಿಸಲಾಗಿದ್ದು, ಪ್ರಮುಖ ರಸ್ತೆಗಳಲ್ಲಿ ವಾಹನಗಳ ಸಂಚಾರ ವಿರಳವಾಗಿತ್ತು. ಮುನ್ನೆಚ್ಚರಿಕಾ ಕ್ರಮವಾಗಿ ಜಿಲ್ಲೆಯಾದ್ಯಂತ ನಿಷೇಧಾಜ್ಞೆ ಜಾರಿಗೊಳಿಸಲಾಗಿತ್ತು.
ಅಂಬರೀಶ್ ಪಾರ್ಥಿವ ಶರೀರದ ದರ್ಶನಕ್ಕಾಗಿ ಜಿಲ್ಲೆಯ ಜನರನ್ನು ಕರೆದೊಯ್ಯಲು ಬೆಂಗಳೂರಿಗೆ ಸಾರಿಗೆ ಬಸ್‌ಗಳನ್ನು ಬಿಡಲಾಗಿತ್ತು. ಬಹುತೇಕ ಖಾಸಗಿ ಬಸ್‌ಗಳು ಸಂಚಾರವನ್ನು ಸ್ಥಗಿತಗೊಳಿಸಿದ್ದವು. ಇದರ ಪರಿಣಾಮ ಬಸ್‌ಗಳ ಕೊರತೆಯಿಂದ ಪ್ರಯಾಣಿಕರು ದೂರದ ಊರುಗಳಿಗೆ ತೆರಳಲು ಪರದಾಡುವ ಸ್ಥಿತಿ ನಿರ್ಮಾಣವಾಗಿತ್ತು.
ಈ ಮಧ್ಯೆ, ಅಂಬರೀಶ್ ಪಾರ್ಥಿವ ಶರೀರವನ್ನು ಮಂಡ್ಯಕ್ಕೆ ತರುವಂತೆ ಒತ್ತಾಯಿಸಿ ಅಭಿಮಾನಿಗಳು ಮಂಡ್ಯ ಜಯಚಾಮರಾಜೇಂದ್ರ ಒಡೆಯರ್ ವೃತ್ತದಲ್ಲಿ ಪ್ರತಿಭಟನೆ ನಡೆಸಿದರು. ಹೆದ್ದಾರಿಯಲ್ಲಿ ವಾಹನ ತಡೆದು ಪ್ರತಿಭಟನೆ ನಡೆಸಿದರು. ಜಿಲ್ಲೆ ಯಲ್ಲಿನ ಎಲ್ಲಾ ಚಿತ್ರಮಂದಿರಗಳಲ್ಲಿ ಚಿತ್ರ ಪ್ರದರ್ಶನ ರದ್ದುಪಡಿಸಲಾಗಿತ್ತು. ಚಿತ್ರಮಂದಿರದ ಆವರಣದಲ್ಲಿ ಅಂಬರೀಷ್ ಭಾವಚಿತ್ರವಿರಿಸಿ ಶ್ರದ್ಧಾಂಜಲಿ ಅರ್ಪಿಸಲಾಯಿತು.
ಅಂಬಿ ಮತ್ತೆ ಹುಟ್ಟಿ ಬಾ…. ಎಂಬ ಘೋಷಣೆ ಬರೆದಿರುವ ಅಂಬಿಯ ಕಟೌಟ್‌ಗಳನ್ನು ಗೂಡ್ಸ್ ಆಟೋದಲ್ಲಿ ಮೆರವಣಿಗೆ ಮಾಡುತ್ತಿದ್ದ ದೃಶ್ಯ ಎಲ್ಲೆಡೆ ಕಂಡು ಬಂತು. ಅಂತ್ಯಕ್ರಿಯೆಯನ್ನು ಅವರ ಹುಟ್ಟೂರು ದೊಡ್ಡರಸಿನಕೆರೆಯಲ್ಲಿ ನಡೆಸಬೇಕೆಂದು ಆಗ್ರಹಿಸಿ ಗ್ರಾಮಸ್ಥರು ದೊಡ್ಡರಸಿನಕೆರೆ ಗೇಟ್ ಬಳಿ ಹೆದ್ದಾರಿ ತಡೆದು ಪ್ರತಿಭಟನೆ ನಡೆಸಿದರು.
ಮಂಡ್ಯ ಮಿಠಾಯಿ ಎಂದರೆ ಅಂಬಿಗೆ ಬಲು ಪ್ರಿಯ: ಅಂಬರೀಶ್‌ಗೆ ಬಹಳ ಇಷ್ಟವಾದ ಸಿಹಿ ಎಂದರೆ ಅದು ಮಂಡ್ಯ ಮಿಠಾಯಿ. ತವರು ಜಿಲ್ಲೆಗೆ ಭೇಟಿ ನೀಡಿದ ಬಹುತೇಕ ಸಂದರ್ಭಗಳಲ್ಲಿ ತಮಗಿರುವ ಮಧುಮೇಹ ರೋಗವನ್ನು ಮರೆತು ಮಿಠಾಯಿಯನ್ನು ಬಾಯ್ತುಂಬ ಚಪ್ಪರಿಸಿ ತಿಂದು ಹೋಗುತ್ತಿದ್ದರು. ಅಂದ ಹಾಗೆ ಅಂಬರೀಶ್ ತಿನ್ನುತ್ತಿದ್ದ ಆ ಮಿಠಾಯಿ ಯಾವುದೋ ಸ್ಟಾರ್ ಹೋಟೆಲ್ ಅಥವಾ ಬೇಕರಿಯಲ್ಲಿ ತಯಾರಾದ ಮಿಠಾಯಿಯಲ್ಲ.
ಅದೊಂದು ಪುಟ್ಟ ಮನೆಯಲ್ಲಿ ತಯಾರಾಗುತ್ತಿದ್ದ ಕೊಬ್ಬರಿ ಮಿಠಾಯಿ. ಮಂಡ್ಯ ನಗರದಿಂದ ಚಿಕ್ಕಮಂಡ್ಯಕ್ಕೆ ಹೋಗುವ ಮಾರ್ಗದ ಕಾರೇಮನೆ ಗೇಟ್ ಬಳಿ ಮಾದಯ್ಯ ಎಂಬುವರು ತಯಾರಿಸುತ್ತಿದ್ದ ಮಿಠಾಯಿ ಅಂಬರೀಶ್‌ಗೆ ಬಹಳ ಅಚ್ಚುಮೆಚ್ಚು. ಆ ಮಾರ್ಗದಲ್ಲಿ ಹೋಗುವಾಗ ಅಂಬರೀಶ್ ಕಾರಿನಿಂದ ಇಳಿದು ಬಂದು ಮಿಠಾಯಿ ತೆಗೆದುಕೊಂಡು ಸವಿಯುತ್ತಿದ್ದರು. ಜತೆಗೆ, ಪ್ಯಾಕೆಟ್‌ಗಳಲ್ಲಿ ಕಟ್ಟಿಸಿಕೊಂಡು ಹೋಗುತ್ತಿದ್ದರು.
ಅಂಬರೀಶ್‌ಗೆ ಮಂಡ್ಯದ ಗಂಡು ಎಂದು ಬಿರುದು ಕೊಟ್ಟಿದ್ದು ನಾನೇ. ಅವರ ಸಾವು ನನಗೆ ಅತೀವ ದುಃಖವನ್ನು ಉಂಟುಮಾಡಿದೆ. ಅವರದ್ದು ಇನ್ನೂ ಚಿಕ್ಕ ವಯಸ್ಸು. ಸಾಯುವಂತಹ ವಯಸ್ಸೇನೂ ಆಗಿರಲಿಲ್ಲ. ತುಂಬಾ ಒಳ್ಳೆಯ ಮನುಷ್ಯ. ಮೃದು ಸ್ವಭಾವದ ವ್ಯಕ್ತಿ. ಮಾತು ಕಠಿಣವಾಗಿದ್ದರೂ, ಹೂವಿನಂಥ ಮನಸ್ಸುಳ್ಳವರಾಗಿದ್ದರು.
-ಜಿ.ಮಾದೇಗೌಡ, ಮಾಜಿ ಸಂಸದ.