ಕಲಬುರ್ಗಿ: ಸ್ನೇಹ ಮಾನವ ಜೀವನದ ಜೀವಾಳ-ಉಸಿರು. ಸ್ನೇಹವಿಲ್ಲದ ಜೀವನ ಬರಡು. ಸ್ನೇಹ ಸ್ವಾರ್ಥ ರಹಿತವಿರಬೇಕು. ನಿಸ್ವಾರ್ಥ, ನಿಷ್ಕಾಮ ಸ್ನೇಹ ಕೇವಲ ಪರಮಪಿತ ಪರಮಾತ್ಮ ಕೊಡಬಲ್ಲ. ಇಂದು ಆ ಪರಮಪಿತ ಪರಮಾತ್ಮ ಆಕಾಶದಿಂದ ಅತ್ತತ್ತವಿರುವ ಮಹಾಮನೆಯಿಂದ ಅವತರಿಸಿ ಮಕ್ಕಳಾದ ನಮ್ಮೆಲ್ಲರನ್ನು ತನ್ನ ಸ್ನೇಹಸೂತ್ರದಲ್ಲಿ ಬಂಧಿಸುತ್ತಿದ್ದಾನೆ ಅದುವೇ ರಕ್ಷಾಬಂಧನ ಎಂದು ರಾಜಯೋಗಿನಿ ಬಿ.ಕೆ. ವಿಜಯಾ
ನುಡಿದರು.
ವಲಯ ಕೇಂದ್ರ, ಸತ್ಯತೀರ್ಥ ಆದರ್ಶನಗರ ರಾಜಯೋಗ ಕೇಂದ್ರದಲ್ಲಿ ಸೋಮವಾರ ಆಯೋಜಿಸಲಾದ ರಾಖೀ ಹಬ್ಬದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಇತಿಹಾಸ ಹಾಗೂ ಪುರಾಣಗಳಲ್ಲಿ ರಾಖೀಯ ಮಹಿಮೆಯ ಅನೇಕ ದೃಷ್ಟಾಂತಗಳಿವೆ. ಆದರೆ ವಿಶ್ವಬಂಧುತ್ವದ ಎರಡೆಳೆ ಸೂತ್ರದಲ್ಲಿ ನಾವು ಬಂಧಿಯಾಗಿದ್ದೇವೆ ಎಂದು ವಿವರಿಸಿದರು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎನ್. ಶಶಿಕುಮಾರ ಮಾತನಾಡಿ, ಇಂದು ಭಾರತದಲ್ಲಿ ಹೆಣ್ಣು ಮಕ್ಕಳ ಮೇಲಿನ ಪ್ರೀತಿ ಸ್ನೇಹ ಬೆಳೆಯುತ್ತಿದೆ. ಹೆಣ್ಣು ಭ್ರೂಣ ಹತ್ಯೆಯ ಸಂಖ್ಯೆ ಬಹಳ ಕಡಿಮೆಯಾಗಿದ್ದು ಸಂತಸದ ವಿಷಯ. ಆ ದಿಶೆಯೊಳಗೆ
ಬ್ರಹ್ಮಾಕುಮಾರಿ ಸೋದರಿಯರ ಕಾರ್ಯ ಶ್ಲಾಘನೀಯ ಎಂದು ಹೇಳಿದರು.
ಕಲಬುರಗಿ ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಅಸಗರ ಚುಲಬುಲ್ ಮಾತನಾಡಿ, ಬ್ರಹ್ಮಾಕುಮಾರಿ ಸೋದರಿಯರು ಜಾತಿ, ಮತ ಭೇದವಿಲ್ಲದೆ ಕಾರ್ಯಮಾಡುತ್ತಿದ್ದಾರೆ. ರಾಖೀ ನಮ್ಮ ರಾಷ್ಟ್ರೀಯ ಹಬ್ಬ ನಮ್ಮೆಲ್ಲರನ್ನು ಒಂದೆಡೆ ಸೇರಿಸುವ ಸುಂದರ ಬೆಸುಗೆ ಎಂದರು. ಜಿಲ್ಲಾ ಪಂಚಾಯತ್ ಸದಸ್ಯ ಹರ್ಷಾನಂದ ಗುತ್ತೇದಾರ, ಕರ್ನಾಟಕ ಮೀಸಲು ಪಡೆ ಘಟಕಾಧಿಕಾರಿ ಬಸವರಾಜ ಜಿಳ್ಳೆ, ಮಹಾದೇವಪ್ಪ ರಾಂಪೂರೆ ವೈದ್ಯಕೀಯ ಕಾಲೇಜಿನ ಪ್ರಾಂಶುಪಾಲರಾದ ಡಾ| ಎಸ್. ಆರ್. ಹರವಾಳ, ಕೆಎಸ್‌ಎಫ್‌ಸಿ ಸಹಾಯಜ ಜನರಲ್ ಮ್ಯಾನೇಜರ ಗಣಪತಿ ರಾಠೊಡ ಹಾಗೂ ರಾಜಯೋಗಿ
ಪ್ರೇಮಣ್ಣ ಹಾಜರಿದ್ದರು.