ಕುಂದಾಪುರ: ವೈದ್ಯಕೀಯ, ದಂತ ವೈದ್ಯಕೀಯ, ನರ್ಸಿಂಗ್‌ಗಳಿಗೆ ಅಖೀಲ ಭಾರತ ಮಟ್ಟದಲ್ಲಿ ಕೌನ್ಸಿಲ್‌ಗಳಿದ್ದು ಅರೆವೈದ್ಯಕೀಯ (ಪಾರಾ ಮೆಡಿಕಲ್) ಕೌನ್ಸಿಲ್ ರಚನೆಗೆ ಕೇಂದ್ರ ಸೂಚಿಸಿ ದ್ದರೂ ರಾಜ್ಯದಲ್ಲಿ ರಚನೆಯಾಗಿಲ್ಲ. ಇದರಿಂದಾಗಿ ರಾಜ್ಯದ ಕಾಲೇಜುಗಳಲ್ಲಿ ಕಲಿತವರಿಗೆ ವಿದೇಶದಲ್ಲಿ ಉದ್ಯೋಗಕ್ಕೆ ತೊಂದರೆ ಯಾಗುತ್ತಿದೆ. ನೆರೆಯ ಕೇರಳದಲ್ಲೂ ಉದ್ಯೋಗ ನಿರಾಕರಿಸ ಲಾಗುತ್ತಿದೆ.
ಯಾವೆಲ್ಲಾ ಕೋರ್ಸುಗಳು:
ಡಿಪ್ಲೊಮಾ ಕೋರ್ಸುಗಳಾದ ಡಯಾಲಿಸಿಸ್ ಟೆಕ್ನಾಲಜಿ, ಆಪರೇಷನ್ ಥಿಯೇಟರ್ ಮತ್ತು ಅನಸ್ತೇಶಿಯಾ ಟೆಕ್ನಾಲಜಿ, ಮೆಡಿಕಲ್ ಲ್ಯಾಬೊರೇಟರಿ ಟೆಕ್ನಾಲಜಿ, ಮೆಡಿಕಲ್ ಇಮೇಜಿಂಗ್ ಟೆಕ್ನಾಲಜಿ, ಒಪ್ತಾಲಿ¾ಕ್ ಟೆಕ್ನಾಲಜಿ, ಮೆಡಿಕಲ್ ರೆಕಾರ್ಡ್ಸ್ ಟೆಕ್ನಾಲಜಿ, ಹೆಲ್ತ್ ಇನ್‌ಸ್ಪೆಕ್ಟರ್, ಬಿಎಸ್‌ಸಿ ಜತೆಗೆ ಮಿಳಿತಗೊಂಡ ಅಲೈಡ್ ಹೆಲ್ತ್ ಸೈನ್ಸ್, ಕಾರ್ಡಿಯಾಕ್ ಕೇರ್, ಇಮೇಜಿಂಗ್, ರೆನಲ್ ಡಯಾಲಿಸಿಸ್, ನ್ಯೂರೋ ಸೈನ್ಸ್, ಒಪೊ¤ಮೆಟ್ರಿ, ಎಮರ್ಜೆನ್ಸಿ ಮತ್ತು ಟ್ರೊಮಾ ಕೇರ್, ಮೆಡಿಕಲ್ ಲ್ಯಾಬೊರೇಟರಿ, ರೇಡಿಯೋಥೆರಪಿ, ಪರ್‌ಫ್ಯೂಶನ್, ರೆಸ್ಪಿರೇಟರಿ ಕೇರ್, ಪದವಿ ಕೋರ್ಸುಗಳಾದ ಹಾಸ್ಪಿಟಲ್ ಅಡ್ಮಿನಿಸ್ಟ್ರೇಶನ್, ಪಬ್ಲಿಕ್ ಹೆಲ್ತ್, ಅಡಿಯಾಲಜಿ ಮತ್ತು ಸ್ಪೀಚ್ ಲಾಂಗ್ವೇಜ್ ಪೆಥಾಲಜಿ, ಸ್ನಾತಕೋತ್ತರ ಪದವಿಗಳಾದ ಮಾಸ್ಟರ್ ಆಫ್ ಪಬ್ಲಿಕ್ ಹೆಲ್ತ್, ಮಾಸ್ಟರ್ ಇನ್ ಹಾಸ್ಪಿಟಲ್ ಅಡ್ಮಿನಿಸ್ಟ್ರೇಶನ್, ಎಂಎಸ್‌ಸಿ ಜತೆಗಿನ ಕ್ಲಿನಿಕಲ್ ಸೈಕಾಲಜಿ, ರೆನಲ್ ಡಯಾಲಿಸಿಸ್ ಟೆಕ್ನಾಲಜಿ, ಮೆಡಿಕಲ್ ಲ್ಯಾಬೋರೇಟರಿ ಟೆಕ್ನಾಲಜಿ, ಪರ್‌ಫ್ಯೂಶನ್ ಟೆಕ್ನಾಲಜಿ ಹಾಗೂ ಫಿಸಿಯೋಥೆರಪಿ ಕೋರ್ಸುಗಳಿಗೆ ಕೌನ್ಸಿಲ್ ರಚನೆಯಾಗಬೇಕಿದೆ.
ಕೌನ್ಸಿಲ್‌ಗೆ ಬೇಡಿಕೆ:
ರಾಜೀವ್ ಗಾಂಧಿ ವಿ.ವಿ. 1996ರಿಂದ ಬಿಎಸ್‌ಸಿ ಜತೆಗಿನ ಸಮ್ಮಿಳಿತ ಕೋರ್ಸುಗಳನ್ನು ಆರಂಭಿಸಿದ್ದು 16 ಪದವಿ, 20 ಸ್ನಾತಕೋತ್ತರ ಪದವಿಗಳಿವೆ. 100 ಕಾಲೇಜು ಗಳು ವಿ.ವಿ.ಯಿಂದ ಮಾನ್ಯತೆ ಪಡೆದಿದ್ದು 86 ಕಾಲೇಜುಗಳು ಪದವಿ, 12 ಕಾಲೇಜುಗಳು ಸ್ನಾತಕೋತ್ತರ ಪದವಿ ಬೋಧಿಸುತ್ತಿವೆ. ಈವರೆಗೂ ಈ ಕೋರ್ಸುಗಳಿಗೆ ಕೌನ್ಸಿಲ್ ಇರಲಿಲ್ಲ. ಪದವಿ ಪಡೆದು ಹೊರಬಂದ ಬಳಿಕ ಕೌನ್ಸಿಲ್‌ನಲ್ಲಿ ನೋಂದಣಿಯಾಗದ ಹೊರತು ಅವರಿಗೆ ವಿದೇಶದಲ್ಲಿ ಉದ್ಯೋಗ ದೊರೆಯುವುದಿಲ್ಲ. ಕೇರಳದಲ್ಲಿ ಕೌನ್ಸಿಲ್ ರಚನೆಯಾದ ಬಳಿಕ ಕರ್ನಾಟಕದಲ್ಲಿ ವಿದ್ಯಾರ್ಜನೆ ಮಾಡಿದವರಿಗೆ ಉದ್ಯೋಗ ನಿರಾಕರಿಸಲಾಗುತ್ತಿದೆ. ಕೋವಿಡ್ ಸಂದರ್ಭ ಕೇಂದ್ರ, ರಾಜ್ಯ ಸರಕಾರ ಕೂಡ ತಂತ್ರಜ್ಞಾನ, ಕೌಶಲಾಧಾರಿತ ಈ ವೃತ್ತಿ ತರಬೇತಿ ಪಡೆದವರಿಗೆ ಆರೋಗ್ಯ ಇಲಾಖಾ ನೇಮಕಾತಿಯಲ್ಲಿ ಆದ್ಯತೆ ನೀಡಿಲ್ಲ. ಕೌನ್ಸಿಲ್ ರಚನೆಗೆ ಬೇಡಿಕೆಗೆ ಧ್ವನಿ ಬಂದಿದೆ. ವಿದ್ಯಾರ್ಥಿಗಳು ವಿವಿಗೆ ಇಮೇಲ್ ಚಳವಳಿ, ಟ್ವಿಟರ್ ಅಭಿಯಾನ ನಡೆಸಿದ್ದಾರೆ.
ಆರಂಭ:
ಕೇಂದ್ರ ಸರಕಾರ ಕೌನ್ಸಿಲ್ ರಚನೆಗೆ ಮಾ. 28ರಂದು “ದ ನ್ಯಾಶನಲ್ ಕಮಿಷನ್ ಫಾರ್ ಅಲೈಡ್ ಆ್ಯಂಡ್ ಹೆಲ್ತ್‌ಕೇರ್ ಪ್ರೊಫೆಶನ್ಸ್ ಆ್ಯಕ್ಟ್’ ರೂಪಿಸಿ ಗಜೆಟ್ ನೋಟಿಫಿಕೇಶನ್ ಹೊರಡಿಸಿದೆ. ಇದರನ್ವಯ ರಾಜ್ಯ ಸರಕಾರ 6 ತಿಂಗಳ ಒಳಗೆ ಕೌನ್ಸಿಲ್ ರಚಿಸಬೇಕಿದೆ. ಸೆಪ್ಟಂಬರ್ ಒಳಗೆ ರಚನೆಯಾಗಬೇಕಾದ ಕೌನ್ಸಿಲ್ ಇನ್ನೂ ಶೈಶವಾವಸ್ಥೆಯಲ್ಲಿದೆ. ವಿ.ವಿ. ಜು. 23ರಂದು ರಾಜ್ಯ ವೈದ್ಯಕೀಯ ಶಿಕ್ಷಣ ಸಚಿವಾಲಯದ ನಿರ್ದೇಶಕರಿಗೆ ಪತ್ರ ಬರೆದು ಕೌನ್ಸಿಲ್ ರಚನೆಯ ಅಗತ್ಯವನ್ನು ಹೇಳಿದೆ.
ವಿದ್ಯಾರ್ಥಿಗಳ ಪ್ರವೇಶ : ಕರಾವಳಿಯಲ್ಲಿ ಬಿಎಸ್‌ಸಿ ಸಮ್ಮಿಳಿತ ಕೋರ್ಸುಗಳಿಗೆ ಶೇ. 60ರಿಂದ 70ರಷ್ಟು ವಿದ್ಯಾರ್ಥಿಗಳು ನೆರೆಯ ಕೇರಳ, ಶೇ. 10ರಷ್ಟು ಈಶಾನ್ಯ ರಾಜ್ಯಗಳು, ಶೇ. 10ರಷ್ಟು ಇತರ ರಾಜ್ಯಗಳಿಂದ, ಶೇ. 10 ಸ್ಥಳೀಯ ವಿದ್ಯಾರ್ಥಿಗಳಿರುತ್ತಾರೆ. ಡಿಪ್ಲೊಮಾ ಕೋರ್ಸುಗಳಿಗೆ ಶೇ. 60 ಕೇರಳ, ಶೇ. 30 ಸ್ಥಳೀಯರು, ಶೇ. 10 ಇತರ ರಾಜ್ಯಗಳಿಂದ ಪ್ರವೇಶ ಪಡೆಯುತ್ತಾರೆ.
- ರಾಜ್ಯದಲ್ಲಿರುವ ಪಾರಾ ಮೆಡಿಕಲ್ ಬೋರ್ಡ್ ಅಧೀನದ ಕಾಲೇಜುಗಳು 396
- ದ.ಕ., ಉಡುಪಿಯಲ್ಲಿ 22
- ವಾರ್ಷಿಕ ಪದವೀಧರರಾಗುವ ವಿದ್ಯಾರ್ಥಿಗಳು 10,000
- ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನ ವಿ.ವಿ.ಯ ಅಧೀನದಲ್ಲಿ ರಾಜ್ಯದಲ್ಲಿ ಅಲೈಡ್ ಸೈನ್ಸ್ ಬೋಧಿಸುವ ಕಾಲೇಜುಗಳು 100
- ದ.ಕ., ಉಡುಪಿಯಲ್ಲಿರುವ ಕಾಲೇಜುಗಳು 19 ವಾರ್ಷಿಕ ಪದವೀಧರರಾಗುವ ವಿದ್ಯಾರ್ಥಿಗಳು 3,000
ಮಾರ್ಗಸೂಚಿ ಅನ್ವಯ: ಕೇಂದ್ರದ ಮಾರ್ಗಸೂಚಿ ಯನ್ವಯ ರಾಜ್ಯ ಸರಕಾರ ಕೌನ್ಸಿಲ್ ರಚಿಸಲಿದೆ. ಇದರಿಂದ ರಾಜ್ಯದ ವಿದ್ಯಾರ್ಥಿಗಳಿಗೆ ವಿದೇಶದಲ್ಲಿ ಉದ್ಯೋಗ ಪಡೆಯಲು ಅನುಕೂಲವಾಗಲಿದೆ.
– ಡಾ| ಜಯಕರ ಶೆಟ್ಟಿ ಮೊಗೆಬೆಟ್ಟು ಕುಲಪತಿ, ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನ ವಿ.ವಿ. ಬೆಂಗಳೂರು
ಫಿಸಿಯೋಥೆರಪಿ, ಪಾರಾ ಮೆಡಿಕಲ್ ಕೋರ್ಸುಗಳಿಗೆ, ಅಲೈಡ್ ಸೈನ್ಸ್ ಕೋರ್ಸುಗಳಿಗೆ ಕೌನ್ಸಿಲ್ ರಚನೆ ಯಾಗಲೇಬೇಕು. ಅದಕ್ಕಾಗಿ ರಾಜ್ಯ ಸರಕಾರ ನೇಮಿಸಿದ ಸಮಿತಿಯ ಒಂದು ಸಭೆ ನಡೆದಿದೆ. ಕೇರಳದಲ್ಲಿ ಕರ್ನಾಟಕದ ವಿದ್ಯಾರ್ಥಿಗಳಿಗೆ ಉದ್ಯೋಗ ನಿರಾಕರಣೆ ಸರಿಯಲ್ಲ.
– ಇಫ್ತಿಕಾರ್ ಯು. ಟಿ. ರಾಜೀವ್ ಗಾಂಧಿ ವಿ.ವಿ. ಸಿಂಡಿಕೇಟ್ ಸದಸ್ಯ ಹಾಗೂ ಕೌನ್ಸಿಲ್ ರಚನೆ ಸಮಿತಿ ಸದಸ್ಯ
–ಲಕ್ಷ್ಮೀ ಮಚ್ಚಿನ