Advertisement
ನಿನ್ನೆಯಷ್ಟೇ ಇಹಲೋಕ ತ್ಯಜಿಸಿದ ದಿಲೀಪ್ ಕುಮಾರ್ ಅವರಿಗೆ ಭಾರತದಲ್ಲಿ ಮಾತ್ರವಲ್ಲ. ಪಾಕಿಸ್ಥಾನವೂ ಸೇರಿದಂತೆ ವಿಶ್ವದ ಹಲವು ಭಾಗಗಳಲ್ಲಿ ಅಭಿಮಾನಿಗಳಿದ್ದಾರೆ. ಮುಹಮ್ಮದ್ ಯೂಸುಫ್ ಖಾನ್ ಎಂಬ ಯುವಕ ದಿಲೀಪ್ ಕುಮಾರ್ ಎಂದು ಹೆಸರು ಬದಲಿಸಿಕೊಂಡಿದ್ದು, ಚಿತ್ರಕಥೆಗಾರನಾಗಿ ವೃತ್ತಿ ಬದುಕು ಆರಂಭಿಸಿ ಅನಂತರ ನಟನಾದದ್ದು, ಆನಂತರ ನಿರ್ಮಾಪಕನೂ ಆಗಿ ಬೆಳೆದಿದ್ದನ್ನು, ಭಾರತದ ಶ್ರೇಷ್ಠ ನಟ ಎಂದು ಹೆಸರು ಮಾಡಿದ್ದನ್ನು ಮರೆಯಲು ಸಾಧ್ಯವೇ ಇಲ್ಲ.
1942ರಲ್ಲಿ, ಯೂಸೂಫ್ ಖಾನ್ ಬದುಕಿಗೆ ಒಂದು ಅನಿರೀಕ್ಷಿತ ತಿರುವು ಸಿಕ್ಕಿತು. ಆ ದಿನಗಳ ಹೆಸರಾಂತ ನಟಿ ಮತ್ತು ಬಾಂಬೆ ಟಾಕೀಸ್‌ನ ಮಾಲಕರೂ ಆಗಿದ್ದ ನಟಿ ದೇವಿಕಾ ರಾಣಿಯನ್ನು ಭೇಟಿ ಮಾಡುವ ಅವಕಾಶ ಸಿಕ್ಕಿತು. ಉರ್ದು ಭಾಷೆಯಲ್ಲಿ ಈ ಯುವಕನಿಗಿದ್ದ ಪ್ರಾವೀಣ್ಯತೆ ಗಮನಿಸಿದ ದೇವಿಕಾರಾಣಿ, ತಮ್ಮ ಸಂಸ್ಥೆಯಲ್ಲಿ ಸ್ಕ್ರಿಪ್ಟ್ ಬರಹಗಾರನ ಕೆಲಸ ಕೊಟ್ಟರು. ಎರಡು ವರ್ಷಗಳ ಅನಂತರ, ಈ ಯುವಕನ ಬದುಕಿನಲ್ಲಿ ಮತ್ತೂಂದು ತಿರುವು. ಅವನಿಗೆ ನಾಯಕ ನಟನಾಗುವ ಅದೃಷ್ಟ ಜೊತೆಯಾಯಿತು. ದೇವಿಕಾ ರಾಣಿ ಅವರ ಸಲಹೆಯಂತೆಯೇ ತನ್ನ ಹೆಸರನ್ನು ದಿಲೀಪ್ ಕುಮಾರ್ ಎಂದು ಬದಲಿಸಿಕೊಂಡ ಆತ, 1944ರಲ್ಲಿ ಜ್ವಾರ್ ಭಾಟ ಚಿತ್ರದಲ್ಲಿ ಮುಖ್ಯ ಪಾತ್ರದಲ್ಲಿ ನಟಿಸಿದ. ಭಾರತೀಯ ಚಿತ್ರರಂಗಕ್ಕೆ, ದಿಲೀಪ್ ಕುಮಾರ್ ಎಂಬ ತಾರೆಯ ಪ್ರವೇಶವಾಗಿದ್ದು ಹೀಗೆ.
Related Articles
Advertisement
ಲಕ್ಷ ರೂ. ಸಂಭಾವನೆ!ಮೊಘಲ್-ಎ-ಅಜಂನಲ್ಲಿ ದುರಂತ ನಾಯಕನ ಪಾತ್ರ ನಿರ್ವಹಿಸಿದ ದಿಲೀಪ್ ಕುಮಾರ್, ಆನಂತರದಲ್ಲಿ ಅಂಥದೇ ಪಾತ್ರಗಳಿಗೆ ಬ್ರ್ಯಾಂಡ್ ಆಗಿದ್ದೂ ಉಂಟು. ದೇವದಾಸ್ ಚಿತ್ರದ ಅವರ ನಟನೆಗೆ ಮರುಳಾಗದವರೇ ಇಲ್ಲವೇನೋ. ಈ ಯಶಸ್ಸಿನ ಅನಂತರ ದಿಲೀಪ್ ಅವರ ಸಂಭಾವನೆ 1 ಲಕ್ಷ ರೂಪಾಯಿಗೆ ಏರಿತು. ಲಕ್ಷ ರೂಪಾಯಿ ಸಂಭಾವನೆ ಪಡೆದ ಮೊದಲ ಭಾರತೀಯ ನಟ ಎಂಬ ಹೆಗ್ಗಳಿಕೆ ದಿಲೀಪ್ ಕುಮಾರ್ ಪಾಲಾಯಿತು. ಪಾತ್ರ ನಿರ್ವಹಣೆಯಲ್ಲಿ ಅವರ ಶ್ರದ್ಧೆ ಮತ್ತು ಉತ್ಸಾಹವನ್ನು ಗಮನಿಸಿದ ನಿರ್ದೇಶಕ ಸತ್ಯಜಿತ್ ರೇ-“ದಿಲೀಪ್ ಕುಮಾರ್ ಅವರಂಥ ನಟರು ಸಿಗುವುದು ವಿರಳ. ಆತ ಭಾರತ ಚಿತ್ರರಂಗ ಕಂಡ ಶ್ರೇಷ್ಠ ನಟ’ ಎಂದಿದ್ದರು.
“ದಿಲೀಪ್ ಕುಮಾರ್ ಅವರೇ ಒಂದು ವಿಶ್ವವಿದ್ಯಾಲಯದಂತೆ ಇದ್ದರು. ಅವರೊಂದಿಗೆ ಇದ್ದಷ್ಟು ಹೊತ್ತೂ ಏನಾದರೂ ಹೊಸದನ್ನು ಕಲಿಯಬಹುದಿತ್ತು. ಭಾರತೀಯ ಚಿತ್ರರಂಗದ ಇತಿಹಾಸ ಬರೆಯುವಾಗಲೆಲ್ಲ ದಿಲೀಪ್ ಕುಮಾರ್‌ಗೂ ಮೊದಲು, ದಿಲೀಪ್ ಕುಮಾರ್‌ರ ಅನಂತರ ಎಂದೇ ಬರೆಯಲಾಗುತ್ತದೆ. ಅಂಥ ದೊಡ್ಡ ಜೀವವನ್ನು ಕಳೆದುಕೊಂಡು ಚಿತ್ರರಂಗ ಬಡವಾಗಿದೆ’ ಎಂಬ ಅಮಿತಾಬ್ ಬಚ್ಚನ್ ಅವರ ಮಾತುಗಳನ್ನು ನೆನೆಯುತ್ತಲೇ, ದಿಲೀಪ್ ಕುಮಾರ್ ಅವರಿಗೆ ಶ್ರದ್ಧಾಂಜಲಿ.