Advertisement

Student Life: ವಿದ್ಯಾರ್ಥಿ ಜೀವನದ ಮರೆಯಲಾಗದ ಕ್ಷಣಗಳು

02:29 PM Mar 06, 2024 | Team Udayavani |

ವಿದ್ಯಾರ್ಥಿ ಜೀವನ ಪ್ರತಿಯೊಬ್ಬರ ಬದುಕಿನ ಅಡಿಪಾಯ. ವಿದ್ಯಾರ್ಥಿ ದಿಸೆಯಲ್ಲಿ   ಕೇವಲ ಪುಸ್ತಕಗಳು ಮಾತ್ರವಲ್ಲ, ನಮ್ಮ ನಡೆ ನುಡಿ ಘಟಿಸಿದ ಘಟನೆಗಳು ನಮಗೆ ಪಾಠವನ್ನು ಕಲಿಸಿ, ಜೀವನಕ್ಕೆ ಹೊಸ ಆಯಾಮ ನೀಡುತ್ತವೆ.

Advertisement

ಆಗಿನ್ನೂ ನಾನು ಎರಡನೆಯ ತರಗತಿಯ ವಿದ್ಯಾರ್ಥಿನಿ. ಪ್ರೌಢಿಮೆ ಇಲ್ಲದ ಎಳೆಯ ವಯಸ್ಸು. ತುಂಬಾ ಚೂಟಿ ಮಾತಿನ ಮಲ್ಲಿ ಮನಬಂದಂತೆ ಮಾತನಾಡುವುದು, ವರ್ತಿಸುವುದು ನನಗೆ ರೂಢಿಯಾಗಿತ್ತು. ಪೋಷಕರ ಮಾತನ್ನು ಸಹ ಕಡೆಗಣಿಸುತ್ತಿದ್ದೆ. ಆ ವರ್ಷ ನಮ್ಮ ಶಾಲೆಗೆ ಹೊಸ ಶಿಕ್ಷಕಿಯೋರ್ವರು ಬಂದಿದ್ದರು. ನಮಗೆ ನೈತಿಕ ಮೌಲ್ಯದ ಪಾಠವನ್ನು ಕಲಿಸಲು ಅವರನ್ನು ನೇಮಿಸಲಾಗಿತ್ತು. ಅವರು ನೋಡುವುದಕ್ಕೆ  ತುಂಬಾ ಶಾಂತ ಸ್ವಭಾವದವರು.

ಒಮ್ಮೆ ನಮ್ಮ ಶಾಲೆಯಿಂದ ನಮಗೆ ಉಡುಪಿಗೆ ಪ್ರವಾಸವನ್ನು ಹಮ್ಮಿಕೊಂಡಿದ್ದರು. ಅಂದು ನಮ್ಮೊಂದಿಗೆ ಪ್ರಯಾಣಿಸುತ್ತಿದ್ದ ಆ ಶಿಕ್ಷಕಿಯನ್ನು ನಾನು ಹಿಂದೆ-ಮುಂದೆ ಏನನ್ನು ಯೋಚಿಸದೇ ನೀವೇಕೆ ಇಷ್ಟು ಕಪ್ಪಗಿದ್ದೀರಿ? ಎಂದು ಪ್ರಶ್ನಿಸಿಯೇ ಬಿಟ್ಟಿದ್ದೆ.

ಆ ಕ್ಷಣದಲ್ಲಿ ಅವರು ಏನು ಮಾತನಾಡಲಿಲ್ಲ.. ನನಗೆ ಬಯ್ಯಲೂ ಇಲ್ಲ. ಮರುದಿನ ನಮ್ಮ ಶಾಲೆಯ ಇನೋರ್ವ ಶಿಕ್ಷಕಿ ನನ್ನನ್ನು ಕರೆದು “ಮೈಬಣ್ಣ ಎನ್ನುವುದು ದೇವರು ಕೊಡುವಂತಹದ್ದು ಇದರಲ್ಲಿ ಮನುಷ್ಯರ ಪಾತ್ರವೇನು ಇರುವುದಿಲ್ಲ, ಹಾಗೆಯೇ ನಮ್ಮ ಕೂದಲಿನ ಬಣ್ಣ ಕಪ್ಪು, ಕಣ್ಣಿನ ಬಣ್ಣವೂ ಕಪ್ಪು’ ಎಂದು ಉದಾಹರಣೆಯೊಂದಿಗೆ ನನಗರ್ಥವಾಗುವ ರೀತಿಯಲ್ಲಿ ತಿಳಿಸಿದರು ಮತ್ತು ಎಂದು ಹೀಗೆ ಮಾಡಬಾರದಾಗಿ ಹೇಳಿದರು. ಈ ಒಂದು ಘಟನೆಯೂ ನನ್ನಲ್ಲಿ ತುಂಬಾ ಬದಲಾವಣೆಗೆ ಕಾರಣವಾಯಿತು.

ಪ್ರೌಢಶಾಲೆಯಲ್ಲಿ ಓದುತಿದ್ದ ಸಂದರ್ಭ ಸಂವಿಧಾನ ದಿನದ ಅಂಗವಾಗಿ ಶಾಲೆಯಲ್ಲಿ ರಸಪ್ರಶ್ನೆ ಸ್ಪರ್ಧೆ ಏರ್ಪಡಿಸಿದ್ದರು. ಇದಕ್ಕೆ ನಾನೂ ಕೂಡ ಹೆಸರು ನೋಂದಾಯಿಸಿದ್ದೆ. ಅಂದು ನಾನು ಸ್ಪರ್ಧೆಯ ಎಲ್ಲ ಪ್ರಶ್ನೆಗಳಿಗೆ ಉತ್ತರಿಸಿದ್ದೆ.  ಸ್ಪರ್ಧೆಯಲ್ಲಿ ನನಗೆ ಪ್ರಥಮ ಬಹುಮಾನ ಬಂದಿತ್ತು. ನನಗೆ ನನ್ನ ನೆಚ್ಚಿನ ಗುರುಗಳಿಂದ ಬಹುಮಾನವಾಗಿ ಪ್ಲೇರ್‌ಪೆನ್‌ ಅನ್ನು ಸ್ವೀಕರಿಸಿದೆ.

Advertisement

ಆ ಬಹುಮಾನವನ್ನು ತಾಯಿಗೆ ತೋರಿಸುವ ಉತ್ಸಾಹದಲ್ಲಿ ಅದನ್ನು ಜೋಪಾನವಾಗಿ ಬ್ಯಾಗಿನಲ್ಲಿ ಇರಿಸಿದ್ದೆ.  ಶಾಲೆಯಿಂದ ಮರಳುವಾಗ ದಾರಿ ಮಧ್ಯೆ ಏನನೋ ತೆಗೆಯುವ ಬರದಲ್ಲಿ ಬಹುಮಾನವಾಗಿ ಪಡೆದ ಪೆನ್ನು ಕೆಳಗೆ ಬಿದ್ದದ್ದು ನನ್ನ ಅರಿವಿಗೆ ಬರಲಿಲ್ಲ. ಹಾಗೆ ಮನೆಗೆ ಹೋಗಿ ಆ ಪೆನ್ನನ್ನು ಅಮ್ಮನಿಗೆ ತೋರಿಸಿ ಖುಷಿಪಡಿಸಬೇಕು ಎಂಬ ಹಂಬಲದಲ್ಲಿ ಬ್ಯಾಗಿನ ಜಿಪ್‌ ತೆರೆದಾಗ ಆ ಬ್ಯಾಗಿನಲ್ಲಿ ಪೆನ್‌ ಇರಲಿಲ್ಲ. ಈ ವಿಷಯವನ್ನು ಅಮ್ಮನಿಗೆ ತಿಳಿಸಿದಾಗ ಆಕೆ ನನ್ನನ್ನು ಸಮಾಧಾನ ಪಡಿಸಿ, ಅದನ್ನು ಎಲ್ಲಿ ಬಿಟ್ಟಿರಬಹುದು ಎಂದು ಸರಿಯಾಗಿ ಯೋಚಿಸಲು ಹೇಳಿದರು.

ಹಾಗೆ ಸರಿಯಾಗಿ ಯೋಚಿಸಿದಾಗ ಆ ಪೆನ್‌ ನಾನು ಬ್ಯಾಗಿನಿಂದ ಏನ್ನನ್ನೂ ತೆಗೆಯುವಾಗ ಕೆಳಗೆ ಬಿದ್ದಿರಬಹುದು ಎಂಬುದು ಜ್ಞಾಪಕಕ್ಕೆ ಬಂದು ಕೂಡಲೇ ಹುಡುಕುತ್ತ ಹೊರಟೆ. ಪೆನ್ನು ಬಿದ್ದ ಸ್ಥಳಕ್ಕೆ ಹೋದಾಗ ಅದಾಗಲೇ ಯಾರೋ ಅದರ ಮೇಲೆ ಗೂಡ್ಸ್‌ ವಾಹನವನ್ನು ನಿಲ್ಲಿಸಿದ್ದರು. ನಾನು ಚಾಲಕನಿಗೆ ವಾಹನವನ್ನು ತೆಗೆಯಲು ವಿನಂತಿಸಿದೆ. ಪೆನ್ನು ವಾಹನದಡಿ ತುಂಡಾದ ಸ್ಥಿತಿಯಲ್ಲಿ ಬಿದ್ದಿತ್ತು. ನಾನು ಆ ತುಂಡಾದ ಪೆನ್ನನ್ನು ಮನೆಗೆ ತಂದು ಅದನ್ನು ಸರಿಪಡಿಸಿದರೂ ಕೂಡ ಅದು ಮೊದಲಿದ್ದ ಸ್ಥಿತಿಗೆ ಮರಳಲಿಲ್ಲ. ಆ ದಿನ ನನ್ನ ಎಲ್ಲ ಸಂತೋಷವೂ ನೀರುಪಾಲಾಯಿತು. ನನ್ನ ಬೇಜವಾಬ್ದಾರಿ ತನಕ್ಕೆ ಸರಿಯಾದ ಶಿಕ್ಷೆಯೂ ದೊರೆಯಿತು.

ಜೀವನದಲ್ಲೂ ಕೂಡ ಹಾಗೆ ನಾವು ಒಳ್ಳೆಯ ಸಂಬಂಧವನ್ನು ಉಳಿಸಿಕೊಳ್ಳುವುದರಲ್ಲಿ ಸಕಾರಾತ್ಮಕವಾಗಿ ಪ್ರಯತ್ನಿಸಬೇಕು. ಯಾವ ವಸ್ತುವನ್ನು ಬೀಳಿಸಿ ಅದನ್ನು ಹಾಳುಗೆಡವಿ ಮತ್ತೆ ಜೋಡಿಸಿದರೂ ಅದು ಹೇಗೆ ಮೊದಲಿದ್ದ ಸ್ಥಿತಿಗೆ ಮರಳುವುದಿಲ್ಲವೋ ಹಾಗೆಯೇ ನಾವು ಬೇರೆಯವರೊಂದಿಗೆ ಯೋಚಿಸದೆ ಮಾತನಾಡುವುದು, ಸಿಟ್ಟಿನಿಂದ ವರ್ತಿಸಿ ಅವರಿಗೆ ನೋವನ್ನುಂಟು ಮಾಡಿ, ಮತ್ತೆ ಅವರೊಂದಿಗೆ ಎಷ್ಟೇ ಸಮಾಧಾನದ ಮಾತುಗಳನ್ನಾಡಿದರೂ ಅವರ ಮನಸ್ಸು ಮೊದಲಿದ್ದ ಸ್ಥಿತಿಗೆ ಮರಳಲು ಕಷ್ಟವಾಗುತ್ತದೆ.

ಆದ್ದರಿಂದ ನಾವು ಯಾವುದೇ ಬೆಲೆಬಾಳುವ ವಸ್ತುವಾಗಲಿ ಅಥವಾ ಸಂಬಂಧಗಳೇ ಅದನ್ನು ಜೋಪಾನವಾಗಿ ಉಳಿಸಿಕೊಳ್ಳಬೇಕು ಇಲ್ಲದಿದ್ದಲ್ಲಿ ನಾವೂ ಅದನ್ನು ಶಾಶ್ವತವಾಗಿ ಕಳೆದುಕೊಳ್ಳಬೇಕಾಗುತ್ತದೆ.

-ಸಮೃದ್ಧಿ ಕಿಣಿ

ಡಾ| ಬಿ.ಬಿ.ಹೆಗ್ಡೆ ಕಾಲೇಜು, ಕುಂದಾಪುರ

Advertisement

Udayavani is now on Telegram. Click here to join our channel and stay updated with the latest news.

Next