Advertisement
ಅಂತಾರಾಷ್ಟ್ರೀಯ ಟಿ20 ಇತಿಹಾಸದ ಅತ್ಯಂತ ಶ್ರೇಷ್ಠ ಇನಿಂಗ್ಸ್‌ಗಳಲ್ಲಿ ಒಂದು ವಿರಾಟ್ ಕೊಹ್ಲಿ ಹೆಸರಿನಲ್ಲಿದೆ. 2016ರಲ್ಲಿ ಭಾರತದ ಮೊಹಾಲಿಯಲ್ಲಿ ನಡೆದ ಆಸೀಸ್-ಭಾರತದ ನಡುವಿನ ವಿಶ್ವಕಪ್ ಪಂದ್ಯ ಸೆಮಿಫೈನಲ್ ಮಹತ್ವ ಪಡೆದಿತ್ತು. ಅಲ್ಲಿ ಭಾರತಕ್ಕೆ 20 ಓವರ್‌ಗಳಲ್ಲಿ 161 ರನ್ ಬಾರಿಸುವ ಗುರಿಯಿತ್ತು. ಭಾರತ 94 ರನ್‌ಗಳಿಗೆ 4 ವಿಕೆಟ್ ಕಳೆದುಕೊಂಡು ಚಡಪಡಿಸುತ್ತಿದ್ದಾಗ ಕೊಹ್ಲಿ ತಂಡದ ಕೈಹಿಡಿದರು. ಅವರು ಕೇವಲ 51 ಎಸೆತಗಳಲ್ಲಿ ಅಜೇಯ 82 ರನ್ ಬಾರಿಸಿ, ತಂಡವನ್ನು ಸುಲಭವಾಗಿ ಗುರಿ ಮುಟ್ಟಿಸಿದರು. ಆ ಇನಿಂಗ್ಸ್ ಅತ್ಯಂತ ಒತ್ತಡದ ಸನ್ನಿವೇಶದಲ್ಲಿ ದಾಖಲಾಯಿತು ಎನ್ನುವುದೇ ಇಲ್ಲಿನ ಗಮನಾರ್ಹ ಸಂಗತಿ.
Related Articles
Advertisement
2016ರ ಟಿ20 ವಿಶ್ವಕಪ್‌ನಲ್ಲೇ ಭಾರತ, ಬಾಂಗ್ಲಾದೇಶ ವಿರುದ್ಧ ಅತ್ಯಂತ ರೋಚಕವಾಗಿ 1 ರನ್‌ಗಳಿಂದ ಜಯ ಸಾಧಿಸಿತು. ಇದನ್ನು ಮರೆಯಲು ಸಾಧ್ಯವೇ ಇಲ್ಲ. ಗೆಲುವಿಗೆ 147 ರನ್ ಗಳಿಸಬೇಕಿದ್ದ ಬಾಂಗ್ಲಾದೇಶ 19.3 ಓವರ್‌ಗಳಲ್ಲಿ 145 ರನ್‌ಗಳಿಗೆ 6 ವಿಕೆಟ್ ಕಳೆದುಕೊಂಡು ಆರಾಮಾಗಿತ್ತು. ಆದರೆ ಮುಂದಿನೆರಡು ಎಸೆತಗಳಲ್ಲಿ ಹಾರ್ದಿಕ್ ಪಾಂಡ್ಯ ಬಾಂಗ್ಲಾದ ಸತತ 2 ವಿಕೆಟ್ ಎಗರಿಸಿದರು. ಆಗದಕ್ಕೆ ಕೊನೆಯ ಎಸೆತದಲ್ಲಿ ಎರಡು ರನ್ ಗಳಿಸಬೇಕಾದ ಒತ್ತಡ ಎದುರಾಗಿತ್ತು. ಹಾರ್ದಿಕ್‌ರ ಕೊನೆಯ ಎಸೆತವನ್ನು ಬಾಂಗ್ಲಾ ಬ್ಯಾಟಿಗ ಶುವಗತಗೆ ಬಾರಿಸಲು ಆಗಲಿಲ್ಲ. ಆದರೂ ಇನ್ನೊಂದು ತುದಿಯಲ್ಲಿದ್ದ ಮುಸ್ತಫಿಜುರ್ ರೆಹಮಾನ್ ರನ್ ಗಳಿಸಲು ಓಡಿದರು. ಈ ಸಂದರ್ಭದಲ್ಲಿ ಧೋನಿ ತೆಗೆದುಕೊಂಡ ನಿರ್ಧಾರ ಅತ್ಯಂತ ಅಚ್ಚರಿಯದ್ದಾಗಿದೆ. ಅವರು ದೂರದಿಂದಲೇ ಚೆಂಡನ್ನು ವಿಕೆಟ್‌ನತ್ತ ಎಸೆಯದೇ, ಅತಿ ವೇಗವಾಗಿ ಓಡಿಬಂದು ನೇರವಾಗಿ ಬೇಲ್ಸ್ ಎಗರಿಸಿದರು. ಕೂದಲೆಳೆ ಅಂತರದಲ್ಲಿ ಮುಸ್ತಫಿಜುರ್ ರನೌಟಾದರು. ಭಾರತಕ್ಕೆ 1 ರನ್ ಜಯ ಲಭಿಸಿತು.
2010- ಸುರೇಶ್ ರೈನಾ ಶತಕದ ಮೈಲುಗಲ್ಲು :
2010ರ ಟಿ20 ವಿಶ್ವಕಪ್ ವೆಸ್ಟ್ ಇಂಡೀಸ್‌ನಲ್ಲಿ ನಡೆದಿತ್ತು. ಅಲ್ಲಿ ಭಾರತ, ದಕ್ಷಿಣ ಆಫ್ರಿಕಾ ತಂಡವನ್ನು ಎದುರಿಸಿತ್ತು. ಇಲ್ಲಿ ಸುರೇಶ್ ರೈನಾ ಅದ್ಭುತ ಇನಿಂಗ್ಸ್ ಒಂದನ್ನು ಆಡಿದರು. ಅವರು ಕೇವಲ 60 ಎಸೆತಗಳಲ್ಲಿ 101 ರನ್ ಚಚ್ಚಿದರು. ಇದರಲ್ಲಿ 9 ಬೌಂಡರಿ, 5 ಸಿಕ್ಸರ್‌ಗಳಿದ್ದವು. ಭಾರತ 20 ಓವರ್‌ಗಳಲ್ಲಿ 186 ರನ್‌ಗಳ ಬೃಹತ್ ಮೊತ್ತ ಗಳಿಸಿತು. ಜೊತೆಗೆ 14 ರನ್‌ಗಳಿಂದ ಜಯವನ್ನೂ ಸಾಧಿಸಿತು. ರೈನಾ ಬಾರಿಸಿದ ಈ ಶತಕ ಒಂದು ಮೈಲುಗಲ್ಲು. ಅಂತಾರಾಷ್ಟ್ರೀಯ ಕ್ರಿಕೆಟ್‌ನ ಮೂರೂ ಮಾದರಿಯಲ್ಲಿ ಶತಕ ಬಾರಿಸಿದ ಮೊದಲ ಭಾರತೀಯ ಎನಿಸಿಕೊಂಡರು.
2007- ಯುವರಾಜ್ ಸಿಂಗ್‌ರ ಸತತ 6 ಸಿಕ್ಸರ್‌ಗಳು :
ಟಿ20 ಇತಿಹಾಸದ ಮೊದಲ ವಿಶ್ವಕಪ್ ನಡೆದಿದ್ದು 2007ರಲ್ಲಿ. ಈ ಕೂಟದಲ್ಲಿ ಹಲವು ಅಚ್ಚರಿಗಳು, ಮರೆಯಲಾಗದ ಘಟನೆಗಳು ನಡೆದವು. ಅದರಲ್ಲಿ ಯುವರಾಜ್ ಸಿಂಗ್ ಸತತ 6 ಸಿಕ್ಸರ್‌ಗಳನ್ನು ಬಾರಿಸಿದ್ದು ಅತ್ಯಂತ ಮಹತ್ವದ್ದು. ಇಂಗ್ಲೆಂಡ್ ವಿರುದ್ಧ ಅತ್ಯಂತ ಮಹತ್ವದ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಭಾರತದ ಪರ 19ನೇ ಓವರ್‌ನಲ್ಲಿ ಯುವರಾಜ್ ಸಿಡಿದರು. ಸ್ಟುವರ್ಟ್ ಬ್ರಾಡ್ ಅವರ ಓವರ್‌ನಲ್ಲಿ ಯುವಿ ನಂಬಲಸಾಧ್ಯ ರೀತಿಯಲ್ಲಿ ಸತತ 6 ಸಿಕ್ಸರ್ ಬಾರಿಸಿದರು. ಇದು ಅಂತಾರಾಷ್ಟ್ರೀಯ ಟಿ20ಯಲ್ಲಿ ಬಾರಿಸಲ್ಪಟ್ಟ ಮೊದಲ ಸತತ 6 ಸಿಕ್ಸರ್‌ಗಳ ದಾಖಲೆ. ಯುವಿ ಇಲ್ಲಿ ಕೇವಲ 16 ಎಸೆತಗಳಲ್ಲಿ 58 ರನ್ ಚಚ್ಚಿದ್ದರು. ಈ ಇನಿಂಗ್ಸ್ ಯಾವಾಗಲೂ ಎಲ್ಲರಿಂದಲೂ ಸ್ಮರಿಸಲ್ಪಡುತ್ತದೆ.