ನಾನು ಚೀಟಿ ಮಾಡಿಟ್ಟುಕೊಂಡಿದ್ದು ವ್ಯರ್ಥವಾಗಲಿಲ್ಲ ಎಂದು ಖುಷಿಯಲ್ಲಿ ತೆರೆದೆ. ಅದನ್ನು ನೋಡಿಕೊಂಡು ಕದ್ದು ಬರೆಯಲು ಹೊರಟಾಗ ಶಿಕ್ಷಕರು ಬಳಿ ಬಂದು ನಿಂತರು.
ಪಿಯುಸಿ ಓದುತ್ತಿದ್ದ ಕಾಲವದು. ಎಲ್ಲರ ದ್ವೇಷ ಕಟ್ಟಿಕೊಂಡು ಕಲಾ ವಿಭಾಗಕ್ಕೆ ಪ್ರವೇಶ ಪಡದುಕೊಂಡಿದ್ದೆ. ಎಲ್ಲಾ ಅಧ್ಯಾಪಕರುಗಳು ನನ್ನ ಬಗ್ಗೆ ಹೆಚ್ಚಿನ ನಿರೀಕ್ಷೆಯನ್ನು ಹೊಂದಿದ್ದರು. ತೆಗೆದುಕೊಂಡ ಭಂಡ ಧೈರ್ಯಕ್ಕಾದರೂ ನಾನು ಏನಾದರೂ ಸಾಧಿಸಬೇಕಿತ್ತು. ದಿನ ಕಳೆಯುತ್ತಿದ್ದಂತೆ ಪರೀಕ್ಷೆ ಹತ್ತಿರ ಬಂತು. ಬೆಳಗಾದರೆ ಇತಿಹಾಸದ ಪರೀಕ್ಷೆ. ಗತಕಾಲದ ಘಟನೆಗಳನ್ನು ಕೇಳಲು ಏನೋ ಕುತೂಹಲ. ಆದರೆ, ಅದನ್ನು ಇಸವಿ ಸಹಿತ ನೆನಪಿಡಬೇಕೆಂದರೆ ಅಂಗಿಯೊಳಗಡೆ ಇರುವೆ ಬಿಟ್ಟುಕೊಂಡ ಹಾಗೆ. ಅಧ್ಯಾಪಕರುಗಳ ನಿರೀಕ್ಷೆ ಮತ್ತು ಮಹತ್ವಾಕಾಂಕ್ಷೆ ಎರಡೂ ಸೇರಿ ಅಂಕ ಹೆಚ್ಚು ತೆಗೆಯಲೇಬೇಕಾಗಿತ್ತು. ಆದರೆ ಉತ್ತರ ನೆನಪಾಗಬೇಕಲ್ಲಾ!
ಪರೀಕ್ಷೆ ಹಾಲ್‌ಗೆ ಇನ್ನೇನು ಹೋಗುತ್ತಿದ್ದೆ. ಪಠ್ಯದಲ್ಲಿ ಪುಣ್ಯಾತ್ಮ ನೆಪೋಲಿಯನ್‌ನ ಜೀವನಗಾಥೆಯನ್ನು ನೆನಪಿಟ್ಟುಕೊಳ್ಳಬೇಕಾದ ಸಂಕಷ್ಟ. ಆತನ ದಂಡಯಾತ್ರೆಯಷ್ಟೇ ಉದ್ದ ಉದ್ದದ ಸಾಲುಗಳು. ನೆಪೋಲಿಯನ್ ಯಾರ ಜೊತೆ ಹೋರಾಡಿದ? ಯಾರ ಜೊತೆ ಒಪ್ಪಂದ ಮಾಡಿಕೊಂಡ? ಆಮೇಲೆ ಏನಾದ? ಎಲ್ಲವನ್ನು ನೆನಪಿಟ್ಟುಕೊಳ್ಳಬೇಕಿತ್ತು. ಪರೀಕ್ಷೆಗೆ ಖಂಡಿತವಾಗಿ ಬಂದೇ ಬರುವ ಪ್ರಶ್ನೆ ಎಂಬುದು ಗೊತ್ತಿತ್ತು. ಅದಕ್ಕೇ ಒಂದಷ್ಟು ಮುಖ್ಯಾಂಶಗಳನ್ನು ಒಂದು ಹಾಳೆ ಮೇಲೆ ಬರೆದುಕೊಂಡು ಪರೀûಾ ಕೊಠಡಿಯ ಒಳಹೊಕ್ಕೆ. ನನ್ನ ಅನುಮಾನದಂತೆಯೇ ಆ ಪ್ರಶ್ನೆ ಬಂದಿತ್ತು.
ನಾನು ಚೀಟಿ ಮಾಡಿಟ್ಟುಕೊಂಡಿದ್ದು ವ್ಯರ್ಥವಾಗಲಿಲ್ಲ ಎಂದು ಖುಷಿಯಲ್ಲಿ ತೆರೆದೆ. ಅದನ್ನು ನೋಡಿಕೊಂಡು ಕದ್ದು ಬರೆಯಲು ಹೊರಟಾಗ ಶಿಕ್ಷಕರು ಬಳಿ ಬಂದು ನಿಂತರು. ನನಗೆ ಪೆಚ್ಚಾಯಿತು. ಅವರು ನನ್ನನ್ನು ಮತ್ತು ಚೀಟಿಯನ್ನು ನೋಡಿ ಹೇಳಿದ್ದು ಒಂದೇ ಮಾತು: “ನೀನು ನಿನಗಾಗಿ ಓದು, ಬೇರೆಯವರನ್ನು ಮೆಚ್ಚಿಸಲು ಓದಬೇಡ’ ಎಂದು. ಅಲ್ಲಿಗೆ ನನ್ನ ಬುದ್ಧಿಗೆ ಹಿಡಿದಿದ್ದ ಗ್ರಹಣ ದೂರವಾಗಿ ಬೆಳಕು ಪಸರಿಸಿದಂತಾಯಿತು. ಆ ಶಿಕ್ಷಕರು ಉತ್ತರ ಪತ್ರಿಕೆ ಕಿತ್ತುಕೊಂಡು ನನ್ನನ್ನು ತರಗತಿಯಿಂದ ಹೊರ ಕಳಿಸಬಹುದಿತ್ತು. ಆದರೆ ಅವರು ಹಾಗೆ ಮಾಡಲಿಲ್ಲ. ನಾನು ಆ ಶಿಕ್ಷಕರ ಬಳಿ ತೆರಳಿ ಕ್ಷಮೆ ಕೇಳಿ, ಅವರ ಮುಂದೆಯೇ ಕಾಪಿ ಚೀಟಿ ದೂರ ಎಸೆದು ಪರೀಕ್ಷೆ ಬರೆಯಲು ಬಂದು ಕುಳಿತೆ. ಅದೇ ಕೊನೆ, ಮತ್ತೆಂದೂ ಕಾಪಿ ಹೊಡೆಯುವ ಯೋಚನೆ ನನ್ನ ಹತ್ತಿರ ಸುಳಿಯಲಿಲ್ಲ.
– ಪದ್ಮಶ್ರೀ ಭಟ್ಟ ಕೊಪ್ಪದಗದ್ದೆ, ಶಿರಸಿ