ಪ್ರತಿಯೊಂದು ನೆನಪುಗಳು ಇಂದಿಗೂ ಮಾಗದೆ ಹಾಗೆಯೇ ಇದೆ. ಸಮಯ ಎಲ್ಲವನ್ನೂ ಮರುಕಳಿಸುತ್ತದೆ. ಇಂದಿಗೂ ನೆನಪಿನ ಬುತ್ತಿ ಮಾತ್ರ ಅಳಿಯದೆ ಉಳಿದಿದೆ. ಅದುವೇ ಬಾಲ್ಯದ ನೆನಪು. ಮಳೆ ಸುರಿವಾಗಲಂತೂ ಮಳೆಯ ಹನಿಗಳು ಸಹ ಪ್ರತಿಯೊಂದನ್ನು ಕ್ಷಣದ ಸಾಕ್ಷಿಯಾಗಿ ಕರಗಿದ ಮಾಯಾಲೋಕವನ್ನೇ ಸೃಷ್ಟಿಸುತ್ತದೆ. ನನ್ನ ಜೀವನದ ಸುಮಧುರ ನೆನಪೆಂದರೆ ನಮ್ಮ ಅಜ್ಜಿ ಮನೆಯಲ್ಲಿ ಬಾಲ್ಯವನ್ನು ಕಳೆದ ದಿನಗಳು.
ಮನೆಯ ಕಿಟಕಿ ಹಾರಿ ಮಳೆ, ಚಳಿ ಎನ್ನದೇ ಎಲ್ಲ ಕಡೆಯಲ್ಲೂ ತಿರುಗುವ ಹುಮ್ಮಸ್ಸು. ಬೆಟ್ಟ-ಗುಡ್ಡ, ಕಾಡು-ಮೇಡು ತಿರುಗಾಡಿದ್ದು ಇಂದಿಗೂ ಮಾಸದ ನೆನಪು. ಅಲ್ಲಿ ಸಿಗುವ ಕಾರೇ ಹಣ್ಣು ಕೀಳುವುದಕ್ಕೆ ಹೋಗಿ ಕಾಲು ಜಾರಿ ಬಿದ್ದದ್ದು, ಜಿಂರ್ಜಿಬೆ ಹಿಡಿದು ಬೆಂಕಿ ಪಟ್ಟಣದಲ್ಲಿ ಬಚ್ಚಿಟ್ಟಿದ್ದು, ಚಿಟ್ಟೆ ಹಿಡಿಯಲು ಹೋಗಿ ಬೇಲಿ ಮೇಲೆ ಬಿದ್ದವರನ್ನು ನೋಡಿ ಮಿಕ್ಕವರೆಲ್ಲರೂ ನಕ್ಕಿದ್ದು. ಸೀಮೆಎಣ್ಣೆ ದೀಪದಲ್ಲಿ ಅಕ್ಷರ ಕಲಿತಿದ್ದು. ಮಳೆ ಬಂದಾಗ ಅಂಚಿನಿಂದ ಸೋರುತ್ತಿದ್ದ ನೀರನ್ನು ಸಂಗ್ರಹಿಸುವುದು ಇವೆಲ್ಲ ಸಾಹಸದ ಆಟಗಳಾಗಿದ್ದವು. ಮಣ್ಣಿನಿಂದ ಆಟದ ಸಾಮಾನು ಮಾಡಿದ್ದು, ಅಜ್ಜಿ ಕೊಡಿಸಿದ ಗೊಂಬೆಗೆ ಸಿಂಗಾರ ಮಾಡಿ ಮದುವೆಯಾಟ ಆಡಿದ್ದು ಕೂಡ ಇನ್ನೂ ಅಚ್ಚಳಿಯದ ನೆನಪು.
ದೇವಸ್ಥಾನಕ್ಕೆ ಪೂಜೆಗೆಂದು ಬೇಗ ಬರಲು ಅಜ್ಜ ಹೇಳಿದ್ದರು. ಆದರೆ ನಾವು ಮರೆತು ಬಿಟ್ಟಿದ್ದೆವು. ಬಳಿಕ ಅಜ್ಜ ನಮ್ಮನ್ನೇ ಹುಡುಕಿ ಬರುವಾಗ ಸುಳ್ಳು ಹೇಳಿ ಸಿಕ್ಕಿ ಬಿದ್ದು ಅಜ್ಜಿ ನನ್ನ ವಾರಗಳ ಕಾಲ ಮಾತಾಡಿರಲಿಲ್ಲ. ನನ್ನ ಬಾಲ್ಯವನ್ನು ಅಜ್ಜಿ ಮನೆಯಲ್ಲಿಯೇ ಕಳೆದಿದ್ದೇನೆ. ಆ ಹಿರಿಯ ಜೀವ ತೋರುವ ಕಾಳಜಿ, ಪ್ರೀತಿ, ಮುದ್ದು, ನಮಗಾಗಿಯೇ ಅಜ್ಜಿ ತಯಾರಿಸುತ್ತಿದ್ದ ಅದೆಷ್ಟೊಂದು ಬಗೆಬಗೆಯ ಸಿಹಿ ತಿನಿಸುಗಳು, ಕರಿದ ತಿಂಡಿಗಳು ರೆಡಿಯಾಗಿ ಡಬ್ಬದೊಳಗೆ ನಮಗಾಗಿಯೇ ಇರುತ್ತಿದ್ದವು. ಅದನ್ನು ನಮ್ಮ ಶಾಲೆ ಮುಗಿದ ಅನಂತರ ನಾವು ಸವಿಯುತ್ತಿದ್ದೆೆವು. ಶಾಲೆಗೆ ರಜೆ ನೀಡಿದ ದಿನ ನಾವೆಲ್ಲರೂ ಸೇರಿ ಹರಿಯುವ ತೊರೆ, ಕೆರೆ, ಗದ್ದೆ ಬದಿ, ಗುಡ್ಡೆ, ಕಾಡು ಮೇಡಿನಲ್ಲಿನ ಮಾವಿನ ಹಣ್ಣು ಕದ್ದು ತಂದು ತಿಂದಿದ್ದು. ನೇರಳೆ ಹಣ್ಣು ಮುಂತಾದುವುಗಳನ್ನು ಆರಿಸುತ್ತಾ, ಕೊಯ್ಯುತ್ತಾ ಬಿಸಿಲನ್ನೂ ಲೆಕ್ಕಿ ಓಡಾಡಿಕೊಂಡು ಇದ್ದೆವು. ನೆಲ್ಲಿಕಾಯಿ ಕೀಳುವುದಕ್ಕೆ ಮರ ಹತ್ತುವುದು ಹೀಗೆ ನಾವು ಕಾಲ ಕಳೆಯುತ್ತಿದ್ದೆವು. ಹೀಗೆ ದಿನದಲ್ಲಿ ಸಮಯ ಕಳೆಯುವುದೇ ಗೊತ್ತಾಗುತ್ತಿರಲಿಲ್ಲ.
ನಮ್ಮದು ಹಳ್ಳಿ ಮನೆಯಾದ ಕಾರಣ ದನಕರು, ಎಮ್ಮೆ ಸಾಕಿ ಅವುಗಳನ್ನು ಮೇಯಿಸಲು ಹೊಲಗಳಿಗೆ ಹೋಗಿ ಮೇಯಿಸಿಕೊಂಡು ಅವು ಮನೆಗೆ ಬರದೇ ಇದ್ದಲ್ಲಿ ಅವುಗಳನ್ನು ಅಟ್ಟಿಸಿಕೊಂಡು ಮನೆಗೆ ಬರುವುದೇ ಒಂದು ದೊಡ್ಡ ಕಥೆಯಾಗುತ್ತಿತ್ತು. ಒಂದು ದಿನ ನಮ್ಮ ಎಮ್ಮೆ ಕಾಣೆಯಾಗಿತ್ತು. ಅದನ್ನು ಹುಡುಕಿಕೊಂಡು ನಾನು ನಮ್ಮ ಅಜ್ಜಿ ಹೊರಟೆವು. ದಾರಿಯಲ್ಲಿ ಎಮ್ಮೆ ಕಾಣಿಸಲೇ ಇಲ್ಲ. ಆತಂಕದಿಂದ ಅಜ್ಜಿ ದಾರಿಯಲ್ಲಿ ಕುಸಿದ್ದು ಬಿದ್ದಳು. ಅಲ್ಲಿ ಸ್ವಲ್ಪ ಸಮಯದವರೆಗೆ ಸುಧಾರಿಸಿಕೊಂಡು ಮುಂದೆ ಸಾಗಿದೆವು ಸ್ವಲ್ಪ ದೂರ ನಡೆದುಕೊಂಡು ಹೋಗುತ್ತಿದ್ದಾಗ ಅಲ್ಲಿಯೇ ರಾಗಿ ಹೊಲದಲ್ಲಿ ಮೇಯುತ್ತಿರುವುದನ್ನು ಕಂಡೆವು, ಯಾರಾದರೂ ನೋಡಿ ಹೊಲದ ಮಾಲಕರಿಗೆ ಹೇಳಿದರೆ ರಂಪಾಟವೇ ಶುರುವಾದೀತು ಎಂದು ಬೇಗನೆ ಮನೆ ಎಮ್ಮೆ ಹಿಡಿದು ಮನೆಯ ಕಡೆ ಸಾಗಿದೆವು. ಇನ್ನು ಬಾಲ್ಯದಲ್ಲಿ ಮರೆಯದ ನೆನಪೆಂದರೆ ಮಂಗಳವಾರದ ಸಂತೆ. ಸಂತೆಯಲ್ಲಿ ಅಜ್ಜ ತರುತ್ತಿದ್ದ ಬಜ್ಜಿ, ಬೋಂಡಾ, ಕಡಲೆಪುರಿಯ ಸ್ವಾದ ನನ್ನ ನಾಲಿಗೆಯ ಮೇಲೆ ಇನ್ನೂ ಇದೆ. ರುಚಿ ಇನ್ನೂ ಮರೆತಿಲ್ಲ.
ಸವಿತಾ ಜಿ.
ತುಮಕೂರು ವಿ.ವಿ.