Advertisement

ಪೂರ್ಣಗೊಳ್ಳದ ಒಳಾಂಗಣ ಕ್ರೀಡಾಂಗಣ

12:14 PM Oct 11, 2017 | Team Udayavani |

ಸುಳ್ಯ : ಸುಳ್ಯ ನಗರದ ಪಂಚಾಯತ್‌ ವ್ಯಾಪ್ತಿಯ ಹೃದಯಭಾಗದ ಕುರುಂಜಿಗುಡ್ಡೆ ಬಳಿ ನಿರ್ಮಿಸಲಾಗಿರುವ
ಒಳಾಂಗಣ ಕ್ರೀಡಾಂಗಣ ಕಾಮಗಾರಿ ಮೊತ್ತದ ಕುರಿತು ಮಾಹಿತಿ ಹಕ್ಕಿನಲ್ಲಿ ಕೇಳಿದ್ದಕ್ಕೆ ಅಸಮರ್ಪಕ ಮಾಹಿತಿ ಹಾಗೂ ದಾರಿ ತಪ್ಪಿಸುವ ಹೇಳಿಕೆ ನೀಡಿದ್ದಾರೆಂದು ಸಾಮಾಜಿಕ ಕಾರ್ಯಕರ್ತರೊಬ್ಬರು ಸುಳ್ಯ ನ.ಪಂ. ಮುಖ್ಯಾಧಿಕಾರಿ ವಿರುದ್ಧ ಮಂಗಳೂರಿನ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕರ ವಿರುದ್ಧ ಮೇಲ್ಮನವಿ ಸಲ್ಲಿಸಿದ್ದಾರೆ.

Advertisement

ಮಾಹಿತಿ ಹಕ್ಕು ಕಾರ್ಯಕರ್ತ ಡಿ.ಎಂ. ಶಾರಿಕ್‌ ಅವರು 2017 ಸೆ. 12ರಂದು ಮಾಹಿತಿ ಹಕ್ಕಿನಡಿ ಕುರುಂಜಿಗುಡ್ಡೆಯಲ್ಲಿ
ನಿರ್ಮಾಣ ಹಂತದ ಒಳಾಂಗಣ ಕ್ರೀಡಾಂಗಣದ ಬಗ್ಗೆ ಅರ್ಜಿ ಸಲ್ಲಿಸಿದ್ದರು. ಅದರಂತೆ ಸೆ. 27ರಂದು ನ.ಪಂ. ಮಾಹಿತಿ ನೀಡಿತ್ತು. ಆದರೆ ಟೆಂಡರ್‌ ಬಗ್ಗೆ ಸಂಪೂರ್ಣ ಮಾಹಿತಿ ನೀಡಿರಲಿಲ್ಲ. ಹೀಗಾಗಿ 2017ರ ಸೆ. 30ರಂದು ಮೇಲ್ಮನವಿ ಸಲ್ಲಿಸಿದ್ದಾರೆ.

ಅಸಮರ್ಪಕ ಮಾಹಿತಿ
ಕೀಡಾಂಗಣ ಕಾಯಕಲ್ಪಕ್ಕಾಗಿ ನೀಡಿದ್ದ ಟೆಂಡರ್‌ನ ದೃಢೀಕೃತ ಪ್ರತಿ, ಟೆಂಡರ್‌ದಾರರಿಗೆ ಪಾವತಿಯಾದ ಮೊತ್ತ ಮತ್ತು
ಕಾಮಗಾರಿ ಹಂತದ ಸ್ವರೂಪ ಕುರಿತು ಮಾಹಿತಿ ಹಕ್ಕಿನಲ್ಲಿ ಕೇಳಲಾಗಿತ್ತು. ಇದಕ್ಕೆ ಉತ್ತರಿಸಿದ ನಗರ ಪಂಚಾಯತ್‌
ಕಾರ್ಯಾಲಯ ಕಾಮಗಾರಿ ಸಂಪೂರ್ಣಗೊಂಡಿಲ್ಲ. ಕಾಮಗಾರಿ ಎರಡು ಹಂತದಲ್ಲಿ ನಡೆಯಲಿದೆ. ಮೊದಲ ಹಂತದಲ್ಲಿ ಮೂಲ ಕಟ್ಟಡ ಕಾಮಗಾರಿ ಟೆಂಡರು ಮುಖಾಂತರ ಅಂದಾಜು 50 ಲಕ್ಷ ರೂ. ಮೊತ್ತದಲ್ಲಿ ನಡೆಸಲಾಗಿದೆ. ಇದಕ್ಕಾಗಿ 2011-13 ನೇ ಸಾಲಿನಲ್ಲಿ 51,52,743 ರೂ.ಗಳನ್ನು ಪಾವತಿಸಿರುವುದಾಗಿ ತಿಳಿಸಿದೆ. ಆದರೆ ಅರ್ಜಿದಾರರು ಕೇಳಿದಂತೆ ಟೆಂಡರ್‌ದಾರರಿಗೆ ಪಾವತಿಸಲಾದ ಮೊತ್ತದ ಪೂರ್ಣ ವಿವರಗಳನ್ನು ತಿಳಿಸಿಲ್ಲ. 

ಅಪೂರ್ಣ ಕಾಮಗಾರಿ
ನಗರದ ಮೂಲೆಯಲ್ಲಿರುವ ಗುಡ್ಡ ದಲ್ಲಿ ಇಲ್ಲಿ ನಿಂತು ವೀಕ್ಷಣೆ ಮಾಡಿದರೆ ಸುಳ್ಯ ನಗರದ ಪರಿಸರವೇ ಕಾಣಿಸುತ್ತಿದ್ದು ವೀಕ್ಷಣಾ ತಾಣದಂತಿದೆ. ಇಲ್ಲಿ ಕ್ರೀಡಾಂಗಣಕ್ಕೆ 2009ರಲ್ಲಿ ಮುಖ್ಯ ಮಂತ್ರಿ ಯಡಿಯೂರಪ್ಪ ಅವರು ಶಿಲಾನ್ಯಾಸ ನೆರವೇರಿಸಿದ್ದರೂ ಕಾಮಗಾರಿ ಸಮರ್ಪಕ ವಾಗಿ ಮುಗಿದಿರಲಿಲ್ಲ. ಹೀಗಾಗಿ, ಅದನ್ನು ನಿರ್ಮಿತಿ ಕೇಂದ್ರಕ್ಕೆ ವಹಿಸಲಾಗಿತ್ತು. ಕಾಮಗಾರಿ ಪೂರ್ಣಗೊಂಡರೂ ನಿರ್ಮಿತಿ ಕೇಂದ್ರದವರು ನ.ಪಂ.ಗೆ ಬಿಲ್‌ ಹಸ್ತಾಂತರಿಸದ ಕಾರಣ ಗುತ್ತಿಗೆದಾರರಿಗೆ ಹಣ ಪಾವತಿ ಬಾಕಿಯಾಗಿತ್ತು. ಹಣಕಾಸಿನ ಕೊರತೆಯಿಲ್ಲ ಎಂದು ನ.ಪಂ. ಮಾಜಿ ಅಧ್ಯಕ್ಷ ಪ್ರಕಾಶ್‌ ಹೆಗ್ಡೆ ತಿಳಿಸಿದ್ದಾರೆ. ಒಳಾಂಗಣ ಕ್ರೀಡಾಂಗಣ ಜನರಿಗೆ ಉಪಯೋಗವಾಗದ ಬಗ್ಗೆ ಸುಳ್ಯದ ಶಿಕ್ಷಣ ಸಂಸ್ಥೆಯ ಪದಾಧಿಕಾರಿಯೊಬ್ಬರು ಈಚೆಗೆ ಅಸಮಾಧಾನ ವ್ಯಕ್ತಪಡಿಸಿದ್ದರು.

ಮತ್ತೆ ಪಾಳು ಬೀಳುತ್ತಿದೆ ಕಟ್ಟಡ
ಒಳಾಂಗಣ ಸಹಿತ ಕಟ್ಟಡ ಕಾಮಗಾರಿ ಬಹುತೇಕ ಪೂರ್ಣಗೊಂಡಿದೆ. ಚರಂಡಿ, ಒಂದು ಭಾಗದಲ್ಲಿ ತಡೆಬೇಲಿಯೂ
ನಿರ್ಮಾಣ ವಾಗಿದೆ. ಶೌಚಾಲಯ ಗುಂಡಿ ಪೂರ್ತಿ ಗೊಂಡಿದ್ದರೂ ಸ್ಲಾಬ್‌ ಮುಚ್ಚಿಲ್ಲ. ಕೆಲವು ಕಿಟಕಿಗಳು ಆಗಲೇ
ಒಡೆದಿವೆ. ಒಂದು ಭಾಗದ ಗೋಡೆ ಬಿರುಕುಬಿಟ್ಟಿದೆ. ಕಾವಲುಗಾರರ ಕಟ್ಟಡದ ಕಾಮಗಾರಿ ಅರ್ಧದಷ್ಟಾಗಿದೆ. ಸುಸಜ್ಜಿತ ಕಟ್ಟಡವಾಗಿದ್ದರೂ ಸುತ್ತ ಪೊದೆಗಳು ಬೆಳೆದು ಪಾಳು ಬಿದ್ದಂತೆ ಕಾಣುತ್ತಿದೆ.

Advertisement

ಕಾಳಜಿ ಅಗತ್ಯ
ಕಾಮಗಾರಿಯ ಬಿಲ್‌ ನೀಡದಿದ್ದರಿಂದ ನಿರ್ಮಿತಿ ಕೇಂದ್ರಕ್ಕೆ 9.40 ಲಕ್ಷ ರೂ. ಪಾವತಿ ಬಾಕಿಯಿದೆ. ಪಾವತಿ ಬಳಿಕ ಕಟ್ಟಡ ನ.ಪಂ. ಗೆ ಹಸ್ತಾಂತರವಾಗಲಿದೆ. ಆ ಬಳಿಕ ಹಳೆಯ ಶೀಟುಗಳನ್ನು ಏಲಂ ಮಾಡಬೇಕಿದೆ. ನ.ಪಂ. ಕಟ್ಟಡದ ಮತ್ತಷ್ಟು ಕಾಮಗಾರಿಗೆ ಮೊತ್ತವನ್ನಿಡಬೇಕು ಮತ್ತು ಕಟ್ಟಡ ನಿರ್ವಹಣೆಗೂ ಸಮಿತಿ ರಚಿಸಬೇಕಾಗಿದೆ. ಸಾರ್ವಜನಿಕ ಸೊತ್ತಾದರೂ ಜನತೆ ಇದರ ರಕ್ಷಣೆಗೆ ಕಾಳಜಿ ವಹಿಸಬೇಕು.
-ಶೀಲಾವತಿ ಮಾಧವ, ನ.ಪಂ. ಅಧ್ಯಕ್ಷೆ

ಭರತ್‌ ಕನ್ನಡ್ಕ 

Advertisement

Udayavani is now on Telegram. Click here to join our channel and stay updated with the latest news.

Next