Advertisement

ಕೃಪೆ ತೋರದ ಮುಂಗಾರು ಪೂರ್ವ ಮಳೆ: ಐದು ವರ್ಷಗಳ ಬಳಿಕ ಕನಿಷ್ಠ

12:43 AM May 22, 2023 | Team Udayavani |

ಉಡುಪಿ: ಪ್ರತೀ ವರ್ಷ ಮಾರ್ಚ್‌ ಕೊನೆಯಿಂದ ಮೇ ತಿಂಗಳ ಕೊನೆಯವರೆಗೆ ಬರಬೇಕಾಗಿದ್ದ ಮುಂಗಾರು ಪೂರ್ವ ಮಳೆ ಈ ಬಾರಿ ಕೃಪೆ ತೋರಿಲ್ಲ. ಐದು ವರ್ಷಗಳ ಅನಂತರ ಕನಿಷ್ಠ ಮಳೆಯಾಗಿದೆ. ಇದರ ನೇರ ಪರಿಣಾಮ ಕುಡಿಯುವ ನೀರಿನ ಸಮಸ್ಯೆಗೆ ಕಾರಣವಾಗಿದೆ.

Advertisement

ಪ್ರತೀ ವರ್ಷ ಮಾರ್ಚ್‌ ತಪ್ಪಿದರೆ ಎಪ್ರಿಲ್‌ನಲ್ಲಿ ಮುಂಗಾರು ಪೂರ್ವ ಮಳೆ ಕರಾವಳಿ ಜಿಲ್ಲೆಗೆ ಖಾಯಂ ಆಗಿರುತ್ತದೆ. ಮೇಯಲ್ಲಿ ಗುಡುಗು- ಸಿಡಿಲು- ಬಿರುಗಾಳಿ ಸಹಿತ ಮಳೆ ಮಳೆಗಾಲದ ಮಳೆಗಿಂತಲೂ ಹೆಚ್ಚಿನ ಆರ್ಭಟ ಇರುತ್ತದೆ. ಆದರೆ ಈ ಬಾರಿ ಮೇ ಕೊನೆಯ ವಾರ ಆರಂಭಗೊಳ್ಳುತಿದ್ದು, ಇದುವರೆಗೆ ಬಿದ್ದ ಮಳೆಯ ನೀರು ಕನಿಷ್ಠ ಪ್ರಮಾಣದ್ದಾಗಿದೆ.

ಜನವರಿಯಿಂದ ಇಲ್ಲಿಯವರೆಗೆ ಜಿಲ್ಲೆಯಲ್ಲಿ ಬಿದ್ದ ಮಳೆ ಪ್ರಮಾಣ ಕೇವಲ 33 ಮಿ.ಮೀ. ಮಾತ್ರ. ಜನವರಿ ಮತ್ತು ಫೆಬ್ರವರಿಯಲ್ಲಿ ಜಿಲ್ಲೆಯಲ್ಲಿ ಸ್ವಲ್ಪವೂ ಮಳೆಯಾಗಿಲ್ಲ. ಮಾರ್ಚ್‌ನಲ್ಲಿ ಕೇವಲ 3 ಮಿ.ಮೀ. ಮಳೆಯಾಗಿತ್ತು.

ಎಪ್ರಿಲ್‌ ತಿಂಗಳಲ್ಲೂ ಯಾವುದೇ ಸುಧಾರಣೆ ಕಾಣದೇ 6 ಮಿ.ಮೀ. ಮಳೆ ಬಿದ್ದಿತ್ತು. ಇನ್ನು ಧಾರಾಕಾರ ಮಳೆ ಸುರಿಯ ಬೇಕಿದ್ದ ಮೇಯಲ್ಲಿ ಇದುವರೆಗೆ ಬಿದ್ದಿರುವುದು 24 ಮಿ.ಮೀ. ಮಳೆ ಮಾತ್ರ.

100 ಮಿ.ಮೀ. ವಾಡಿಕೆ ಮಳೆಯಾಗಬೇಕಿತ್ತು
ಹವಾಮಾನ ಇಲಾಖೆ ಪ್ರಕಾರ ಜನವರಿಯಿಂದ ಮೇ ವರೆಗೆ ಜಿಲ್ಲೆಯಲ್ಲಿ ವಾಡಿಕೆ ಮಳೆ 201 ಮಿ.ಮೀ. ಸಾಮಾನ್ಯವಾಗಿ ಜನವರಿ-ಫೆಬ್ರವರಿಯಲ್ಲಿ 1 ಮಿ.ಮೀ., ಮಾರ್ಚ್‌ನಲ್ಲಿ 8.5 ಮಿ.ಮೀ., ಎಪ್ರಿಲ್‌ನಲ್ಲಿ 26 ಮಿ.ಮೀ. ಹಾಗೂ ಮೇಯಲ್ಲಿ 165 ಮಿ.ಮೀ. ವಾಡಿಕೆ ಮಳೆಯಾಗಿದೆ. ಈಗಿನ್ನೂ ಮೇ 19 ಆಗಿರುವುದರಿಂದ ಈ ತಿಂಗಳಲ್ಲಿ ಇಂದಿನವರೆಗೆ 100 ಮಿ.ಮೀ. ವಾಡಿಕೆ ಮಳೆ ಬೀಳಬೇಕಿತ್ತು. ಆದರೆ ಜಿಲ್ಲೆಯಲ್ಲಿ ಇದುವರೆಗೆ (ಜನವರಿ-ಮೇ) ಬಿದ್ದಿರುವುದು ಒಟ್ಟು ಕೇವಲ 33ಮಿ.ಮೀ. ಮಳೆ ಮಾತ್ರ.

Advertisement

ಐದು ವರ್ಷಗಳ ಹಿಂದೆ 27 ಮಿ.ಮೀ. ಮಳೆ
ಜಿಲ್ಲೆಯಲ್ಲಿ ಐದು ವರ್ಷಗಳ ಹಿಂದೆ ಇದೇ ರೀತಿ ಕನಿಷ್ಠ ಮಳೆ ಸುರಿದಿತ್ತು. 2019ರಲ್ಲಿ ಜನವರಿಯಿಂದ ಮೇ ವರೆಗೆ ಸುರಿದ ಒಟ್ಟು ಮಳೆ 27 ಮಿ.ಮೀ. ಜನವರಿ- ಫೆಬ್ರವರಿ- ಮಾರ್ಚ್‌ ನಲ್ಲಿ 0, ಎಪ್ರಿಲ್‌ನಲ್ಲಿ 16 ಮಿ.ಮೀ. ಹಾಗೂ ಮೇಯಲ್ಲಿ 11ಮಿ.ಮೀ. ಮಳೆಯಾಗಿತ್ತು. ಆಗಲೂ ಜೂನ್‌ ಎರಡನೇ ವಾರದವರೆಗೆ ಜಿಲ್ಲೆಯಲ್ಲಿ ಸಾಕಷ್ಟು ನೀರಿನ ಕೊರತೆ ಎದುರಾಗಿತ್ತು. ಎಪ್ರಿಲ್‌-ಮೇಯಲ್ಲಿ ಸುರಿಯುವ ಈ ಮಳೆಯಿಂದ ಕುಡಿಯುವ ನೀರಿನ ಜತೆಗೆ ರೈತರು, ಗ್ರಾಮೀಣ ಪ್ರದೇಶಗಳ ಜನರು ಮಳೆಗಾಲಕ್ಕೆ ಪೂರ್ವಸಿದ್ಧತೆಯಲ್ಲಿ ತೊಡಗಿಕೊಳ್ಳುವ ಸಮಯವಾಗಿದೆ. ಜಿಲ್ಲೆಗೆ ಸಮಪ್ರಮಾಣದ ಮುಂಗಾರು ಪೂರ್ವ ಮಳೆ ಅಗತ್ಯವಿದೆ.

(ಜನವರಿಯಿಂದ ಇಲ್ಲಿಯವರೆಗೆ ಮಳೆ ಪ್ರಮಾಣ)
ವರ್ಷ                      ಒಟ್ಟು ಮಳೆ
2019                         27 ಮಿ.ಮೀ.
2020                        170 ಮಿ.ಮೀ.
2021                         616 ಮಿ.ಮೀ.
2022                        434 ಮಿ.ಮೀ.
2023                          33 ಮಿ.ಮೀ.

ವಾಡಿಕೆ ಮಳೆ 201 ಮಿ.ಮೀ.

Advertisement

Udayavani is now on Telegram. Click here to join our channel and stay updated with the latest news.

Next