Advertisement
ತಲ್ಲೂರಿನ ಡಾ| ಬಿ.ಆರ್. ಅಂಬೇಡ್ಕರ್ ಭವನದಲ್ಲಿ ಗ್ರಾ.ಪಂ. ಅಧ್ಯಕ್ಷೆ ಭೀಮವ್ವ ಅಧ್ಯಕ್ಷತೆಯಲ್ಲಿ ನಡೆದ ತಲ್ಲೂರು ಗ್ರಾಮಸಭೆಯಲ್ಲಿ ಸೌಕೂರು ಏತ ನೀರಾವರಿ ಯೋಜನೆಯ ಕುರಿತಂತೆ ಚರ್ಚೆ ನಡೆಯಿತು.
Related Articles
Advertisement
ಉಪ್ಪಿನಕುದ್ರು ಚಿಪ್ಪು ಕಾರ್ಮಿಕರಿಗೆ ಕಾರ್ಮಿಕ ಇಲಾಖೆಯಿಂದ ಗುರುತಿನ ಚೀಟಿ ನೀಡಬೇಕೆಂದು ಹಿಂದಿನ ಸಭೆಯಲ್ಲಿ ತೀರ್ಮಾಸಲಾಗಿತ್ತು. ಏನಾದರೂ ಅವಘಡವಾದರೆ ಪರಿಹಾರಕ್ಕೆ ಗುರುತಿನ ಚೀಟಿ ಸಹಕಾರಿಯಾಗಲಿದ್ದು, ಈ ಬಗ್ಗೆ ಕ್ರಮಕೈಗೊಳ್ಳಿ ಎಂದು ಚಂದ್ರಮ ತಲ್ಲೂರು, ವೆಂಕಟ, ವಿಜೇಂದ್ರ, ಅಶೋಕ್ ಆಗ್ರಹಿಸಿದರು.
ತಲ್ಲೂರಿನ ರಾಷ್ಟ್ರೀಯ ಬ್ಯಾಂಕ್‌ನ ಎಟಿಎಂ ಸಮಸ್ಯೆ ಬಗ್ಗೆ ಮಹಿಳೆಯೊಬ್ಬರು ಪ್ರಸ್ತಾವಿಸಿದರು. 3ನೇ ವಾರ್ಡ್ ಆಶಾ ಕಾರ್ಯಕರ್ತೆ ಕಾರ್ಯವೈಖರಿ ಸರಿಯಿಲ್ಲವೆಂದು ರತ್ನಾ ಪೂಜಾರಿ ಆರೋಪಿಸಿದರು. ಕೋಟೆಬಾಗಿಲು ರಸ್ತೆಯಲ್ಲಿ ಅವೈಜ್ಞಾನಿಕ ಹಂಪ್ ಅಳವಡಿಸಿದ್ದನ್ನು ತೆರವು ಮಾಡಿದರೂ ಕೂಡ ಅವ್ಯವಸ್ಥೆ ಸರಿಪಡಿಸಿಲ್ಲ ಎನ್ನುವ ಆರೋಪ ಕೇಳಿ ಬಂತು.
ನೋಡಲ್ ಅಧಿಕಾರಿ ಸುಮಲತಾ ಮಾತನಾಡಿ, ಗ್ರಾಮಸಭೆಯಲ್ಲಿ ಗ್ರಾಮಸ್ಥರ ಪಾಲ್ಗೊಳ್ಳುವಿಕೆ ಅಗತ್ಯ. ಮಾರ್ಚ್‌ನಲ್ಲಿ ಗ್ರಾಮಸಭೆಯಿದ್ದರೆ, ಅಧಿಕಾರಿಗಳಿಗೆ ತುಸು ಸಮಸ್ಯೆಯಾಗುತ್ತದೆ. ಹಾಗಾಗಿ ಮಾರ್ಚ್‌ನಲ್ಲಿ ಗ್ರಾಮಸಭೆ ನಡೆಸದಿರುವುದು ಸೂಕ್ತ ಎಂಬ ಸಲಹೆ ನೀಡಿದರು.
ಆರಂಭದಲ್ಲಿ ಶಿಕ್ಷಣ ಮತ್ತು ಆರೋಗ್ಯ ಇಲಾಖೆ ಅಧಿಕಾರಿಗಳನ್ನು ಹೊರತುಪಡಿಸಿ ಬೇರೆ ಇಲಾಖಾಧಿಕಾರಿಗಳು ಬಾರದ ಬಗ್ಗೆ ಅಸಮಾಧಾನ ವ್ಯಕ್ತವಾಯಿತು. ಬಳಿಕ ಬಹುತೇಕ ಎಲ್ಲ ಅಧಿಕಾರಿಗಳು ಆಗಮಿಸಿದರು. ಸಾಮಾಜಿಕ ನ್ಯಾಯ ಸಮಿತಿ ಅಧ್ಯಕ್ಷ ಉದಯ್ ಕುಮಾರ್ ತಲ್ಲೂರು ಮಾತನಾಡಿದರು. ಗ್ರಾ.ಪಂ. ಸದಸ್ಯರು, ಗ್ರಾಮಸ್ಥರು, ಅಧಿಕಾರಿಗಳು, ಸಿಬಂದಿ ಉಪಸ್ಥಿತರಿದ್ದರು. ಪಿಡಿಒ ನಾಗರತ್ನಾ ಸ್ವಾಗತಿಸಿ, ಕಾರ್ಯದರ್ಶಿ ರತ್ನಾ ಕೆ. ವಂದಿಸಿದರು.
ಹೆದ್ದಾರಿ ಸಮಸ್ಯೆ ಪರಿಹರಿಸಿ
ಕಳೆದ ಗ್ರಾಮಸಭೆಯಲ್ಲಿ ಹೆದ್ದಾರಿ ಕಾಮಗಾರಿಯ ಗುತ್ತಿಗೆ ಕಂಪೆನಿ ಐಆರ್‌ಬಿ ಬಗ್ಗೆ ಹಲವು ದೂರುಗಳನ್ನು ಪ್ರಸ್ತಾವಿಸಲಾಗಿತ್ತು. ಸಂಬಂಧಪಟ್ಟ ಅಧಿಕಾರಿಗಳು ಬಾರಲಿಲ್ಲ. ಈಗಲೂ ಈ ಸಮಸ್ಯೆ ಬಗೆಹರಿದಿಲ್ಲ. ಇನ್ನೀಗ ಮಳೆಗಾಲ ಆರಂಭವಾಗಲಿದ್ದು, ಮತ್ತದೇ ಸಮಸ್ಯೆ ಉದ್ಭವಿಸಲಿದೆ. ಇದಕ್ಕೆ ಹೊಣೆ ಯಾರು. ಎಲ್ಲ ಕಡೆಯಿಂದ ಮಳೆ ನೀರು ಹೋಗಲು ಸೂಕ್ತ ಚರಂಡಿ ವ್ಯವಸ್ಥೆಯಿಲ್ಲ. ಸರ್ವಿಸ್ ರಸ್ತೆಯೂ ನಿರ್ಮಾಣವಾಗಿಲ್ಲ. ಈ ಬಗ್ಗೆ ಸೂಕ್ತ ಕ್ರಮಕೈಗೊಳ್ಳುವ ನಿರ್ಣಯ ಮಾಡುವಂತೆ ತಾ.ಪಂ. ಮಾಜಿ ಸದಸ್ಯ, ಕರಣ್ ಪೂಜಾರಿ ಒತ್ತಾಯಿಸಿದರು.
ಕೊಳಚೆ ನೀರಿನ ಸಮಸ್ಯೆ
ತಲ್ಲೂರು ಪೇಟೆಯಲ್ಲಿರುವ ವಸತಿ ಸಮುಚ್ಚಯ ವೊಂದರಿಂದ ಕೊಳಚೆ ನೀರನ್ನು ಚರಂಡಿಗೆ ಬಿಡುತ್ತಿದ್ದು, ದುರ್ನಾತ ಬೀರುತ್ತಿದೆ. ಈ ಬಗ್ಗೆ ಸೂಕ್ತ ಕ್ರಮಕೈಗೊಳ್ಳಿ, ಪಿಟ್ ತೆರವು ಮಾಡಿಸಿ ಎಂದು ಚಂದ್ರಮ ತಲ್ಲೂರು ಆಗ್ರಹಿಸಿದರು. ಇದಕ್ಕೆ ಧ್ವನಿಗೂಡಸಿದ ಕರಣ್ ಪೂಜಾರಿ, ಇದು ಸಾರ್ವಜನಿಕರ ಬಹುದೊಡ್ಡ ಸಮಸ್ಯೆ, ಪ್ರತಿ ಗ್ರಾಮಸಭೆಯಲ್ಲಿಯೂ ನಿರ್ಣಯ ಕೈಗೊಂಡರೂ, ಯಾವುದೇ ಸೂಕ್ತ ಕ್ರಮಕ್ಕೆ ಮುಂದಾಗಿಲ್ಲ ಯಾಕೆ ಎಂದು ಪ್ರಶ್ನಿಸಿದರು.