ಹೆಸರು, ಕೀರ್ತಿ ಎಂದು ಗುರುತಿಸಿಕೊಳ್ಳಲು ಹಂಬಲಿಸುವವರ ಸಂಖ್ಯೆ ಅತಿಯಾದವರ ಈ ಕಾಲದಲ್ಲಿ ಬಾಹ್ಯವಾಗಿ ತೋರುವ ಸಂಗತಿಗಳನ್ನಷ್ಟೇ ನಾವು ಗಮನಿಸಿ ಕಣ್ಣಿಗೆ ಕಾಣದವುಗಳನ್ನು ಮರೆತುಬಿಡುತ್ತೇವೆ. ಇಂದಿನ ಜಗತ್ತಿನ ವಿದ್ಯಮಾನಗಳನ್ನು ಪರಿಶೀಲಿಸಿದರೆ ಇದು ಸ್ಪಷ್ಟವಾಗುತ್ತದೆ.
ಈ ಜಗತ್ತಿನಲ್ಲಿ ನಾವೊಂದು ಕ್ಷುದ್ರ ಜೀವಿ ಅಥವಾ ಸಣ್ಣ ಮನುಷ್ಯ ಎಂದು ಭಾವಿಸುವುದು ಶುದ್ಧ ತಪ್ಪು. ಪ್ರತಿಯೊಂದು ಜೀವಿಯೂ, ಪ್ರತಿಯೊಬ್ಬ ಮನುಷ್ಯನೂ ಈ ವಿಶ್ವದ ಮೇಲೆ ಪ್ರಭಾವ, ಪರಿಣಾಮ ಬೀರುತ್ತಾನೆ. ಪ್ರತಿಯೊಬ್ಬನಿಗೂ ತನ್ನ ಪರಿಸರದ ಮೇಲೆ ಪ್ರಭಾವ ಬೀರಿ ಅದನ್ನು ಬದಲಿಸುವ ತಾಕತ್ತಿದೆ. ಭಾರತದ ಪ್ರಾಚೀನ ಗ್ರಂಥವಾದ ಉಪನಿಷತ್‌ನಲ್ಲಿ ಹೇಳಿರುವುದು ಕೂಡ ಇದೇ. ಅಣುವಿನಂತೆ ಈ ವಿಶ್ವ , ಮನುಷ್ಯನ ಮನದಂತೆ ಈ ಪ್ರಪಂಚ.
ರೈತ ನಮ್ಮ ದೇಶದ ಬೆನ್ನೆಲುಬು. ನಮ್ಮ ಅನ್ನದಾತ. ಕೂಲಿ ಕಾರ್ಮಿಕರ ಶ್ರಮ, ತ್ಯಾಗಗಳಿಲ್ಲದೆ ಆಹಾರ ಪಡೆಯುವುದು ಕಷ್ಟ. ಅಂಗಡಿಯಲ್ಲಿ ಸಿದ್ಧವಿರುವ ಅಕ್ಕಿ, ಧಾನ್ಯಗಳನ್ನು ಖರೀದಿಸುವ ಮಂದಿ ಅದನ್ನು ಬೆಳೆದು ಕೊಡುವ ರೈತನ ಬಗ್ಗೆ ಯಾವತ್ತೂ ಗಂಭೀರವಾಗಿ ಯೋಚಿಸುವುದಿಲ್ಲ. ಹತ್ತುಹಲವು ಕಾರ್ಯಕ್ರಮಗಳಿಗೆ ನಾವು ಹೋಗುತ್ತೇವೆ. ಕಾರ್ಯಕ್ರಮ ಮುಗಿದ ನಂತರ ಅದನ್ನು ಸಂಯೋಜಿಸಿದ ಸಂಸ್ಥೆಯ ಅಧ್ಯಕ್ಷರಿಗೆ ಅಭಿನಂದನೆ ತಿಳಿಸಿ ಬರುತ್ತೇವೆ. ಆದರೆ, ಈ ಕಾರ್ಯಕ್ರಮ ಸಂಘಟನೆಯ ಯಶಸ್ಸಿಗೆ ದುಡಿದ ಇತರರನ್ನು ಮರೆತುಬಿಡುತ್ತೇವೆ. ವಿಮಾನಯಾನದ ಸಂದರ್ಭದಲ್ಲಿ ನಮಗೆ ವಿಮಾನ ಚಾಲಕನೊಬ್ಬನೇ ನಮ್ಮ ರಕ್ಷಣೆಗೆ ಎಂದುಕೊಳ್ಳುತ್ತೇವೆ. ಆದರೆ, ಪ್ಯಾರಾಚೂಟ್ ಕಟ್ಟುವವನ ಕರ್ತವ್ಯವೂ ಬಹು ಮುಖ್ಯವಾಗಿರುತ್ತದೆ. ನಾವು ಎಂದಾದರೂ ಉತ್ತಮ ಬಡಗಿ, ದರ್ಜಿ, ಕೂಲಿ, ಮಾಲಿಯನ್ನು ಕರೆದು ಅವನನ್ನು ಗೌರವಿಸಿದ್ದೇವಾ? ಯಾವುದೇ ಒಂದು ಸಂಸ್ಥೆಯಲ್ಲಿನ ಉದ್ಯೋಗಿಗಳನ್ನು ಸದಾ Engage ಮಾಡುವ ಸೂತ್ರವೇ ಆ ಸಂಸ್ಥೆ ಗಟ್ಟಿಯಾಗಿ ಬೆಳೆಯಲು ಕಾರಣವಾಗುತ್ತದೆ. “ಕೊನೊಸುಕೆ ಮನ್ಸುಶಿತಾ’ನ ಹೆಸರು ಜಪಾನಿನಲ್ಲಿ ಮನೆಮಾತು. ಆತ ಕಟ್ಟಿದ ಸಂಸ್ಥೆ ಸಾವಿರಾರು ಮಂದಿಗೆ ಉದ್ಯೋಗ ಕಲ್ಪಿಸಿದೆ. ಆತನ ಉದ್ಯಮದ ಸರಳ ನಿಯಮ Engage your employees as well as your customers.
ಈ ದೇಶದಲ್ಲಿ ಅಪರಿಮಿತ ಸಂಪತ್ತನ್ನು ಸೃಷ್ಟಿಸಿದ, ನಂಬಿಕೆಯನ್ನು ಸಾಂಸ್ಥಿàಕರಣಗೊಳಿಸಿದ ಜೆ.ಆರ್.ಡಿ. ಟಾಟಾನ ಸಿದ್ಧಾಂತ, ಸೂತ್ರ ಕೂಡ ಇದೇ ಆಗಿತ್ತು. ಒಮ್ಮೆ ಟಾಟಾ ತನ್ನ ಉಕ್ಕು ಕಾರ್ಖಾನೆಗೆ ಭೇಟಿ ನೀಡಿದಾಗ ಹಿರಿಯ ಅಧಿಕಾರಿಗಳು ಅವನಿಗೆ ವಿವರಿಸಲೆಂದು ಎಲ್ಲಾ ಸಿದ್ಧತೆಗಳನ್ನು ಮಾಡಿಕೊಂಡಿದ್ದರು. ಟಾಟಾ ಯಾವಾಗ ಏನು ಬೇಕಾದರೂ ಕೇಳಿದರೂ ಅದಕ್ಕೆ ಸೂಕ್ತ ಉತ್ತರ ನೀಡಲು ಸಕಲ ಏರ್ಪಾಟುಗಳನ್ನು ಮಾಡಿಕೊಂಡಿದ್ದರು. ಕಾರ್ಖಾನೆಯ ಎಲ್ಲ ವಿಭಾಗಗಳನ್ನು ನೋಡುತ್ತ ಕೊನೆಗೆ ಟಾಟಾ ಸುಡುಸುಡು ಕುಲುಮೆಯ ಹತ್ತಿರ ಬಂದರು. ಅಲ್ಲಿ ನಿಂತಿದ್ದ ಮೇಲ್ವಿಚಾರಕನಿಗೆ ದುಗುಡ, ಟಾಟಾ ಕುಲುಮೆಯ ಹತ್ತಿರ ಬಂದು ಆಗಸದೆತ್ತರಕ್ಕೆ ನೆಗೆಯುತ್ತಿದ್ದ ಬೆಂಕಿಯ ಜ್ವಾಲೆಯನ್ನು ನೋಡಿದರು. ಅವರ ಮನಸ್ಸು ಆದ್ರìವಾಯಿತು. ಕುಲುಮೆಯ ಸುತ್ತ ನಿಂತಿರುವ ಸಿಬ್ಬಂದಿಯನ್ನು ತದೇಕಚಿತ್ತದಿಂದ ನೋಡುತ್ತ, “ಈ ಅಗಾಧ ಉಷ್ಣಾಂಶವನ್ನು ನೀವು ಹೇಗೆ ಸಹಿಸಿಕೊಳ್ಳುತ್ತೀರಿ? ನಿಮ್ಮ ಆರೋಗ್ಯವನ್ನು ನೋಡಿಕೊಳ್ಳುವ ಹಾಗೂ ಆರೋಗ್ಯದ ಬಗ್ಗೆ ಕಾಳಜಿಯಿರಲಿ’ ಎಂದರು.
ಇದರಂತೆ ನಮ್ಮ ದಿನನಿತ್ಯದ ಬದುಕಿನಲ್ಲಿ ನಡೆಯುವ ಪ್ರತಿಯೊಂದು ಘಟನೆಯ ಹಿಂದೆ ನಮ್ಮ ಕಣ್ಣಿಗೆ ಬೀಳದ ಹಲವು ವ್ಯಕ್ತಿಗಳ ಪರಿಶ್ರಮ ಇದ್ದೇ ಇರುತ್ತದೆ. ಹಾಲು ತಂದುಕೊಡುವವ, ಡಾಕ್ಟರ್ ಹಿಂದೆ ಸಹಾಯಕರಾಗಿ ದುಡಿಯುವ ನರ್ಸ್‌ಗಳು, ಕೈಗಾರಿಕೋದ್ಯಮಿಯ ಶ್ರೀಮಂತಿಕೆಯ ಹಿಂದೆ ಅದೆಷ್ಟೋ ಕಾರ್ಮಿಕರ ಬೆವರಿನ ಹರಿವು ಇರುತ್ತದೆ.
ಒಟ್ಟು ಸಾರಾಂಶವೆಂದರೆ, ನಮ್ಮ ಅಭಿನಂದನೆ, ಮೆಚ್ಚುಗೆಗಳು ಏಕವ್ಯಕ್ತಿಗೆ ಸಲ್ಲುವ ಬದಲು ಅನೇಕರಿಗೆ ಸಲ್ಲಬೇಕಾಗಿರುತ್ತದೆ. ವಿಶಾಲವಾದ ಆಕಾಶದಲ್ಲಿ ಎಲ್ಲರೂ ಸೂರ್ಯರಾಗಲು ಸಾಧ್ಯವಿಲ್ಲ. ಆದರೂ ಸೂರ್ಯನಷ್ಟು ಪ್ರಕಾಶವಾಗಿರದಿದ್ದರೂ ರಾತ್ರಿ ಹೊತ್ತು ಮನೆ ಬೆಳಗುವ ದೀಪಗಳು ಕೂಡ ಮಹತ್ವವಾದದ್ದು. ಹೀಗೆ ಕೇವಲ ಗುರುತಿಸಿಕೊಳ್ಳುವವರ ಜೊತೆಗೆ ಎಲೆಮರೆಯ ಕಾಯಿಯಂತಿರುವ ಗುರುತಿಸಲ್ಪಡದವರನ್ನು ಗುರುತಿಸುವ ಮನಸ್ಸು ಮತ್ತು ಹೃದಯವಂತಿಕೆಯನ್ನು ಬೆಳೆಸಿಕೊಳ್ಳುವುದು ತೀರಾ ಅಗತ್ಯವಾಗಿದೆ.
ಅಶ್ವಿತಾ ಎಸ್. ಶೆಟ್ಟಿ
ಅಂತಿಮ ವರ್ಷದ ಪತ್ರಿಕೋದ್ಯಮ
ಭಂಡಾರ್‌ಕಾರ್ಸ್ ಕಾಲೇಜು, ಕುಂದಾಪುರ