Advertisement

ಅಂತರ್ಜಲ ಹೆಚ್ಚಳಕ್ಕೆ ಅಕಾಲಿಕ ಮಳೆ ನೆರವು

12:49 AM Dec 17, 2021 | Team Udayavani |

ಬೆಂಗಳೂರು: ಇತ್ತೀಚಿನ ವರ್ಷಗಳಲ್ಲಿ ಮಳೆ ತನ್ನ ಜಾಯಮಾನ ಬದಲಿಸಿದೆ. ಬೆಂಗಳೂರು ಸೇರಿದಂತೆ ಬಯಲುಸೀಮೆಯಲ್ಲಿ ಹೆಚ್ಚು ಮಳೆ ಸುರಿಯುತ್ತಿದ್ದು, ಈ ಭಾಗಗಳಲ್ಲಿ ಅಂತರ್ಜಲ ಮಟ್ಟ ಕೂಡ ಏರಿಕೆಯಾಗುತ್ತಿದೆ. ಇದು ರೈತರಲ್ಲಿ  ಹೊಸ ಭರವಸೆ ಮೂಡಿಸಿದೆ.

Advertisement

ರಾಜ್ಯದ 227 ತಾಲೂಕುಗಳಲ್ಲಿ ರಾಜ್ಯ ಅಂತರ್ಜಲ ನಿರ್ದೇಶನಾಲಯ ನಿರ್ಮಿಸಿರುವ ಕೊಳವೆಬಾವಿಗಳ ಮೂಲಕ ಅಂತರ್ಜಲ ಮಟ್ಟವನ್ನು ಮಾಪನ ಮಾಡಲಾಗಿದೆ. ಈ ವೇಳೆ ಸುಮಾರು 144 ತಾಲೂಕುಗಳಲ್ಲಿ ಕನಿಷ್ಠ 0.5ರಿಂದ ಗರಿಷ್ಠ ಸುಮಾರು 27 ಮೀಟರ್‌ಗಳಷ್ಟು ಅಂತರ್ಜಲ ಮೇಲೆ ಬಂದಿರುವುದು ಕಂಡುಬಂದಿದೆ. ಇದರಲ್ಲಿ ಉತ್ತರ ಕರ್ನಾಟಕದ ಭಾಗಗಳು ಹೆಚ್ಚಿವೆ. ಮಂಡ್ಯ, ಮೈಸೂರು, ರಾಮನಗರ, ಚಾಮರಾಜನಗರ, ಕರಾವಳಿಯ ಉತ್ತರ ಕನ್ನಡ, ಮಲೆನಾಡಿನ ಶಿವಮೊಗ್ಗ, ಹಾಸನ, ಕೊಡಗಿನಲ್ಲಿ ಅಂತರ್ಜಲಮಟ್ಟ ಇಳಿಮುಖ ವಾಗಿರುವುದು ಅಚ್ಚರಿ ಮೂಡಿಸಿದೆ.

ಕೋಲಾರ, ಚಿಕ್ಕಬಳ್ಳಾಪುರ ಸಹಿತ ಬರದ ನಾಡಿನಲ್ಲಿ ಪ್ರಸಕ್ತ ವರ್ಷವೂ ಸೇರಿದಂತೆ ಈಚೆಗೆ ಹೆಚ್ಚು ಮಳೆಯಾಗುತ್ತಿದೆ. ಇದರೊಂದಿಗೆ ಸರಕಾರದ ವಿವಿಧ ಯೋಜನೆಗಳಡಿ ಕೆರೆ ತುಂಬಿಸುವುದು, ಕೃಷಿ ಹೊಂಡ ಅಂತರ್ಜಲ ಹೆಚ್ಚಳಕ್ಕೆ ನೆರವಾಗುತ್ತಿವೆ. ಈ ಎಲ್ಲ ಅಂಶಗಳಿಂದ ಪಾತಾಳಕ್ಕೆ ಕುಸಿದಿದ್ದ ಅಂತರ್ಜಲ ಮಟ್ಟವು ಭಾರೀ ಪ್ರಮಾಣದಲ್ಲಿ ಏರಿಕೆಯಾಗಿದೆ. ಈ ಬೆಳವಣಿಗೆಯು ಭವಿಷ್ಯದಲ್ಲಿ ಆ ಭಾಗದ ಕೃಷಿ ಚಟುವಟಿಕೆಗಳಿಗೆ ಪೂರಕವಾಗಲಿದೆ.

3-4 ವರ್ಷ ಕೃಷಿಗೆ ಪೂರಕ:

ಸಾಮಾನ್ಯವಾಗಿ ಈ ಅವಧಿಯಲ್ಲಿ ಬಯಲುಸೀಮೆಯಲ್ಲಿ ಅಂತರ್ಜಲ ಮಟ್ಟ 15 ಮೀ. ಏರುತ್ತದೆ. ಆದರೆ ಈ ವರ್ಷ 25-30 ಮೀ.ವರೆಗೂ ಹೆಚ್ಚಳ ಆಗಿರುವುದು ಮಳೆಯ ಹೆಚ್ಚಳವನ್ನು ಸೂಚಿಸುತ್ತದೆ. ಅಲ್ಲದೆ, ಮಣ್ಣಿನಲ್ಲಿ ಫ‌ಲವತ್ತತೆ ಮತ್ತು ನೀರನ್ನು ಹಿಡಿದಿಟ್ಟುಕೊಳ್ಳುವ ಸಾಮರ್ಥ್ಯ ಕಡಿಮೆಯಾಗಿಲ್ಲ ಎಂಬುದರ ಸೂಚನೆ. ಇದು ಮುಂದಿನ 3-4 ವರ್ಷ ಕೃಷಿಗೆ ಪೂರಕವಾಗಲಿದೆ ಎಂದು ಕೃಷಿ ಹವಾಮಾನ ತಜ್ಞ ಡಾ| ಎಂ.ಬಿ. ರಾಜೇಗೌಡ ತಿಳಿಸಿದ್ದಾರೆ.

Advertisement

ಏಲ್ಲಿ  ಏರಿಕೆ? :  ಉತ್ತರ ಕರ್ನಾಟಕ ಮತ್ತು ಬಯಲು ಸೀಮೆಯ ಜಿಲ್ಲೆಗಳು

ಎಲ್ಲಿ  ಇಳಿಕೆ? :  ಮಲೆನಾಡು, ಕರಾವಳಿ, ಹಳೇ ಮೈಸೂರು ಭಾಗದ ಜಿಲ್ಲೆಗಳು

ಈ ಸಲ ಜೂನ್‌ನಿಂದ ನಿರಂತರವಾಗಿ ಮಳೆಯಾಗಿದೆ. ನಾಲ್ಕೈದು ದಶಕಗಳಲ್ಲಿ ಕಂಡರಿಯದ ಮಳೆ ಎಂದೂ ವಿಶ್ಲೇಷಿಸಲಾಗಿದೆ. ಇದರ ಜತೆಗೆ ಕಳೆದ ವರ್ಷ ಲಾಕ್‌ಡೌನ್‌ನಿಂದ ಬಳಕೆ ಪ್ರಮಾಣ ಕಡಿಮೆಯಾಗಿ, ಅಂತರ್ಜಲದ ಮೇಲಿನ ಒತ್ತಡವೂ ತಗ್ಗಿದೆ. ಇದರ ಫ‌ಲ ಅಂತರ್ಜಲ ಮಟ್ಟ  ಏರಿಕೆಯಾಗಿದೆ. – ವಿ.ಎಸ್‌. ಪ್ರಕಾಶ್‌, ಅಂತರ್ಜಲ ತಜ್ಞ 

-ವಿಜಯಕುಮಾರ ಚಂದರಗಿ

Advertisement

Udayavani is now on Telegram. Click here to join our channel and stay updated with the latest news.