Advertisement

ಮೋದಿ ಅವಧಿಯಲ್ಲೇ ದೇಶದಲ್ಲಿ ನಿರುದ್ಯೋಗ ಪ್ರಮಾಣ ಹೆಚ್ಚು

10:35 AM Mar 06, 2019 | Team Udayavani |

ನವದೆಹಲಿ: ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರವು ಮೇಕ್ ಇನ್ ಇಂಡಿಯಾ, ಪ್ರಧಾನಮಂತ್ರಿ ಕೌಶಲಾಭಿವೃದ್ಧಿ, ಮುದ್ರಾ ಸಾಲ ಯೋಜನೆ, ಸ್ಟಾರ್ಟ್ ಅಪ್  ಗಳಂತಹ ಉದ್ಯೋಗ ಸ್ನೇಹಿ ಯೋಜನೆಗಳನ್ನು ಜಾರಿಗೊಳಿಸಿದ ಹೊರತಾಗಿಯೂ ದೇಶದಲ್ಲಿ ನಿರುದ್ಯೋಗ ಪ್ರಮಾಣವನ್ನು ತಹಬದಿಗೆ ತರುವಲ್ಲಿ ಮೋದಿ ನೇತೃತ್ವದ ಕೆಂದ್ರ ಸರಕಾರ ವಿಫಲಗೊಂಡಿದೆ ಎಂಬ ವಿಚಾರ ಇದೀಗ ಬಹಿರಂಗಗೊಂಡಿದೆ.

Advertisement

ಫೆಬ್ರವರಿ 2019ರಲ್ಲಿ ನಿರುದ್ಯೋಗ ಪ್ರಮಾಣ 7.2 ಪ್ರತಿಶತವಾಗಿದ್ದು ಇದು 2016 ಸೆಪ್ಟಂಬರ್ ಬಳಿಕಕ್ಕಿಂತ ಹೆಚ್ಚಿನದ್ದಾಗಿದೆ. ಭಾರತದ ಅರ್ಥ ವ್ಯವಸ್ಥೆ ನಿಗಾ ಕೇಂದ್ರ (ಸಿ.ಎಂ.ಐ.ಇ.) ಕಲೆ ಹಾಕಿರುವ ದತ್ತಾಂಶಗಳಿಂದ ಈ ಮಾಹಿತಿ ಲಭ್ಯವಾಗಿದೆ. ಕಳೆದ ವರ್ಷ ಫೆಬ್ರವರಿಯಲ್ಲಿ ಇದೇ ಪ್ರಮಾಣ 5.9 ಪ್ರತಿಶತದಷ್ಟಿತ್ತು. ದೇಶಾದ್ಯಂತ ಹತ್ತು ಸಾವಿರ ಕುಟುಂಬಗಳಿಂದ ಕಲೆ ಹಾಕಿದ ಮಾಹಿತಿ ಆಧಾರದಲ್ಲಿ ಈ ವರದಿಯನ್ನು ಸಿದ್ಧಪಡಿಸಲಾಗಿದೆ. 1972-73ರ ಬಳಿಕ ದೇಶದಲ್ಲಿ ಅತೀ ಹೆಚ್ಚಿನ ನಿರುದ್ಯೋಗ ಪ್ರಮಾಣ ದಾಖಲಾಗಿರುವುದು 2017-18ರಲ್ಲಿ ಎಂಬ ವಿಚಾರವೂ ಈ ವರದಿಯಿಂದ ಬಹಿರಂಗಗೊಂಡಿದೆ.

ಉದ್ಯೋಗಾಕಾಂಕ್ಷಿಗಳ ಸಂಖ್ಯೆಯಲ್ಲಿ ಇಳಿಮುಖ ಕಂಡುಬಂದಿದ್ದರೂ ನಿರುದ್ಯೋಗ ಪ್ರಮಾಣದಲ್ಲಿ ಏರಿಕೆ ಕಂಡುಬಂದಿರುವುದು ವಿಶೇಷವಾಗಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಫೆಬ್ರವರಿವರೆಗಿನ ಉದ್ಯೋಗಸ್ಥರ ಸಂಖ್ಯೆ 40 ಕೋಟಿಗಳಾಗಿತ್ತು, ಕಳೆದ ವರ್ಷ ಈ ಸಂಖ್ಯೆ 40.6 ಕೋಟಿಗಳಷ್ಟಾಗಿತ್ತು.

ನ್ಯಾಷನಲ್ ಸ್ಯಾಂಪಲ್ ಸರ್ವೇ ಆಫೀಸಿನ ಮಾಹಿತಿಯಂತೆ ಭಾರತದಲ್ಲಿ ನಿರುದ್ಯೋಗ ಪ್ರಮಾಣ ಕಳೆದ 45 ವರ್ಷಗಳಲ್ಲೇ ಹೆಚ್ಚಿನದ್ದಾಗಿದ್ದು, 2017-18ರಲ್ಲಿ ಈ ಪ್ರಮಾಣ 6.1 ಪ್ರತಿಶತದಷ್ಟಿತ್ತು. ಇದೇ ಸಂಸ್ಥೆಯ ವರದಿಗಳ ಪ್ರಕಾರ ದೇಶದ ಗ್ರಾಮೀಣ ಪ್ರದೇಶಗಳಿಗೆ ಹೋಲಿಸಿದರೆ ನಿರುದ್ಯೋಗ ಪ್ರಮಾಣ ನಗರ ಪ್ರದೇಶಗಳಲ್ಲೇ ಹೆಚ್ಚಿದ್ದು ಅದರ ಪ್ರಮಾಣ 7.8 ಪ್ರತಿಶದಷ್ಟಿತ್ತು. ಗ್ರಾಮೀಣ ಪ್ರದೇಶದಲ್ಲಿನ ನಿರುದ್ಯೋಗ ಪ್ರಮಾಣ 5.3 ಪ್ರತಿಶತವಾಗಿದೆ. ಇನ್ನು ನಗರ ಪ್ರದೇಶಗಳಲ್ಲಿರುವ 15 ರಿಂದ 29 ವರ್ಷಪ್ರಾಯವರ್ಗದ ಪುರುಷರಲ್ಲಿ ನಿರುದ್ಯೋಗ ಪ್ರಮಾಣ 2011-12ರಲ್ಲಿ  8.1 ಇದೀಗ 18.7 ಪ್ರತಿಶತಕ್ಕೆ ಏರಿಕೆಯಾಗಿದೆ.ಇನ್ನು ನಗರಪ್ರದೇಶದ ಮಹಿಳೆಯರಲ್ಲಿ 2011-12ರಲ್ಲಿ 13.1 ಪ್ರತಿಶದಷ್ಟಿದ್ದ ನಿರುದ್ಯೋಗ ಪ್ರಮಾಣ 2017-18ರಲ್ಲಿ 27.2 ಪ್ರತಿಶತಕ್ಕೆ ಏರಿಕೆಯಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next