Advertisement

ಅಭಿಮತ: ಸಿಂಗಾಪೂರ್‌ ನಿರುದ್ಯೋಗ ಸಮಸ್ಯೆ ಭಾರತೀಯರ ಮೇಲೆ ಜನರ ಮುನಿಸು!

01:28 AM Sep 19, 2020 | Hari Prasad |

ಸಿಂಗಾಪೂರ್‌ನಲ್ಲಿ ನಿರುದ್ಯೋಗ ಸಮಸ್ಯೆ ಹೆಚ್ಚುತ್ತಿದ್ದು, ಇದಕ್ಕೆ ಒಂದಲ್ಲ ಒಂದು ರೀತಿಯಲ್ಲಿ ಭಾರತೀಯರು ಕಾರಣ ಎನ್ನುವ ಕೂಗು ಜೋರಾಗಿದೆ. ಸಿಂಗಾಪೂರ್‌ ಸರಕಾರ ಭಾರತದೊಂದಿಗೆ ಮಾಡಿಕೊಂಡಿದ್ದ ಮುಕ್ತ ವ್ಯಾಪಾರ ಒಪ್ಪಂದವೇ ಇದಕ್ಕೆಲ್ಲ ಕಾರಣ ಎನ್ನುವುದು ಸ್ಥಳೀಯರ ವಾದ. ಆದರೆ, ಇದು ಸತ್ಯವಲ್ಲ ಎನ್ನುವುದು ಸಿಂಗಾಪೂರ್‌ ಸರಕಾರದ ವಾದ. ಹಾಗಿದ್ದರೆ ನಿಜಕ್ಕೂ ಅಲ್ಲಿ ಏನಾಗುತ್ತಿದೆ?

Advertisement

ಕೋವಿಡ್ 19 ವೈರಸ್‌ ಸಾಂಕ್ರಾಮಿಕದ ಕಾರಣದಿಂದಾಗಿ ಸಿಂಗಾಪೂರ್‌ನ ಆರ್ಥಿಕತೆ ಕುಂಟುತ್ತಾ ಸಾಗುತ್ತಿದ್ದು, ದಶಕಗಳಲ್ಲೇ ಅತಿದೊಡ್ಡ ಆರ್ಥಿಕ ಪೆಟ್ಟು ಬಿದ್ದಿದೆ. ಇದರಿಂದಾಗಿ ನಿರುದ್ಯೋಗ ಸಮಸ್ಯೆ ಹೆಚ್ಚುತ್ತಿದೆ, ಭವಿಷ್ಯದ ಬಗ್ಗೆ ಜನರಲ್ಲಿ ಆತಂಕ ಹೆಚ್ಚಾಗುತ್ತಿದೆ. ಈ ಸಮಸ್ಯೆಗಳಿಗೆಲ್ಲ ಯಾರನ್ನು ದೂರಬೇಕು? ಇದಕ್ಕೆ ಅಲ್ಲಿನ ಜನರು ಕಂಡುಕೊಂಡಿರುವ ಮಾರ್ಗವೆಂದರೆ ಭಾರತೀಯರತ್ತ ಬೆರಳು ತೋರಿಸುವುದು. ಅನೇಕರು ಭಾರತ ಮತ್ತು ಸಿಂಗಾಪೂರ್‌ ನಡುವೆ 2005ರಲ್ಲಿ ನಡೆದ ಮುಕ್ತವ್ಯಾಪಾರ ಒಪ್ಪಂದವೇ ಸ್ಥಳೀಯರಲ್ಲಿ ನಿರುದ್ಯೋಗ ಸಮಸ್ಯೆ ಹೆಚ್ಚಳಕ್ಕೆ ಕಾರಣ ಎಂದು ಆರೋಪಿಸಲಾರಂಭಿಸಿದ್ದಾರೆ.

15 ವರ್ಷಗಳ ಹಿಂದೆ ಎರಡೂ ರಾಷ್ಟ್ರಗಳ ನಡುವೆ ಆದ ಕಾಂಪ್ರಹೆನ್ಸಿವ್‌ ಎಕನಾಮಿಕ್‌ ಕೊ-ಆಪರೇಷನ್‌ ಅಗ್ರಿಮೆಂಟ್‌ (CECA)ನಿಂದಾಗಿ ಭಾರತೀಯರು ಸಿಂಗಾಪೂರಕ್ಕೆ ಹರಿದುಬರುತ್ತಿದ್ದು, ಅವರೆಲ್ಲ ಸ್ಥಳೀಯರ ಕೆಲಸಗಳನ್ನು ಕಿತ್ತುಕೊಳ್ಳುತ್ತಿದ್ದಾರೆ ಎಂದು ಅಲ್ಲಿನ ಸಾಮಾಜಿಕ ಮಾಧ್ಯಮಗಳಲ್ಲೀಗ ಕ್ಯಾಂಪೇನ್‌ ಆರಂಭವಾಗಿದೆ. CECA ಒಪ್ಪಂದ ಆಗಿದೆ ಎಂದಾಕ್ಷಣ ಭಾರತೀಯರಿಗೆ ಸಹಜವಾಗಿಯೇ ನಾಗರಿಕತ್ವ ಅಥವಾ ಉದ್ಯೋಗ ದೊರೆತುಬಿಡುತ್ತದೆ ಎನ್ನುವುದು ಸುಳ್ಳು ಎಂದು ಅಲ್ಲಿನ ಸರಕಾರ ಪದೇ ಪದೆ ಸ್ಪಷ್ಟಪಡಿಸಿದರೂ ಅಲ್ಲಿನ ಜನರು ಈ ಮಾತನ್ನು ಒಪ್ಪಲು ಸಿದ್ಧರಿಲ್ಲ.

ಕಳೆದ ವರ್ಷದ ಅಕ್ಟೋಬರ್‌ ತಿಂಗಳಲ್ಲಿ ಒಂದು ಘಟನೆ ನಡೆಯಿತು. ರಮೇಶ್‌ ಎರ್ರಂಪಲ್ಲಿ ಎನ್ನುವ ಯುವಕನೊಬ್ಬ ತಾನು ವಾಸಿಸುವ ಅಪಾರ್ಟ್‌ಮೆಂಟ್‌ನ ಸೆಕ್ಯೂರಿಟಿ ಗಾರ್ಡ್‌ ಅನ್ನು ಪಾರ್ಕಿಂಗ್‌ ಶುಲ್ಕದ ವಿಚಾರವಾಗಿ ಅವಾಚ್ಯವಾಗಿ ನಿಂದಿಸಿದ. ಅಪಾರ್ಟ್‌ಮೆಂಟ್‌ನಲ್ಲಿ ಕಾರು ಪಾರ್ಕಿಂಗ್‌ ಮಾಡಲು ಹೆಚ್ಚುವರಿ ಹಣ ಪಾವತಿಸಬೇಕು ಎಂಬ ನಿಯಮವಿತ್ತಂತೆ.

ಆದರೆ ರಮೇಶ್‌, ತಾನು ಅಪಾರ್ಟ್‌ಮೆಂಟ್‌ನಲ್ಲಿ ಮನೆ ಖರೀದಿಸಲು 1.1 ದಶಲಕ್ಷ ಅಮೆರಿಕನ್‌ ಡಾಲರ್‌ ಪಾವತಿಸಿರುವುದಾಗಿ, ಪಾರ್ಕಿಂಗ್‌ಗೆ ಹೆಚ್ಚುವರಿ ಹಣ ಕೊಡಲು ಸಿದ್ಧವಿಲ್ಲ ಎಂಬುದಾಗಿ ವಾದಿಸುತ್ತಾ, ಆ ಸೆಕ್ಯೂರಿಟಿ ಗಾರ್ಡ್‌ನನ್ನು ನಿಂದಿಸಲಾರಂಭಿಸಿದ. ಈ ವೀಡಿಯೋ ಹೊರಬೀಳುತ್ತಿದ್ದಂತೆಯೇ ಸಿಂಗಾಪೂರ್‌ನ ಸಾಮಾಜಿಕ ಮಾಧ್ಯಮಗಳಲ್ಲಿ ಜನ, “ರಮೇಶ್‌ ನೀನು ಭಾರತಕ್ಕೆ ಹಿಂದಿರುಗು, ನಮ್ಮ ಜನರನ್ನು ಕೀಳಾಗಿ ಕಾಣಲು ನಿನಗೆ ಹಕ್ಕಿಲ್ಲ.

Advertisement

ನಿಮ್ಮ ದೇಶದ ಜಾತಿ ವ್ಯವಸ್ಥೆಯನ್ನು ಇಲ್ಲಿ ತರಬೇಡ’ ಎಂದು ಕ್ಯಾಂಪೇನ್‌ ಆರಂಭಿಸಿದರು. ರಮೇಶ್‌ನ ವೀಡಿಯೋ ವೈರಲ್‌ ಆಗುತ್ತಿದ್ದಂತೆಯೇ, ನೂರಾರು ಜನರು ರಸ್ತೆಗಿಳಿದು CECA ಒಪ್ಪಂದ ರದ್ದು ಮಾಡಿ ಎಂದು ಸರಕಾರವನ್ನು ಆಗ್ರಹಿಸಿದರು. ಅಲ್ಲದೇ ಸಿಂಗಾಪೂರ್‌ನಲ್ಲಿ ವಲಸಿಗರಿಂದಾಗಿ ಜನಸಂಖ್ಯೆ ಹೆಚ್ಚುತ್ತಿದೆ, ಭಾರತೀಯರು ನಕಲಿ ಸರ್ಟಿಫಿಕೆಟ್‌ಗಳನ್ನು ತೋರಿಸಿ ಕೆಲಸ ದಕ್ಕಿಸಿಕೊಳ್ಳುತ್ತಿದ್ದಾರೆ, ಹೀಗಾಗಿ ವಲಸಿಗರನ್ನು ಒಳಬಿಟ್ಟುಕೊಳ್ಳಬೇಡಿ ಎಂದು ಸರಕಾರವನ್ನು ಆಗ್ರಹಿಸಿದರು.

ಭಾರತೀಯ ರಮೇಶ್‌ನನ್ನು ಉದ್ಯೋಗದಿಂದ ಕಿತ್ತೆಸೆಯಬೇಕೆಂದು ಆತ ಕೆಲಸ ಮಾಡುವ ಕಂಪೆನಿಯ ಮೇಲೆ ಒತ್ತಡ ತಂದರು. ಆಗ ಸಿಂಗಾಪೂರ್‌ನ ಆಡಳಿತ ವರ್ಗ, “ರಮೇಶ್‌ ಭಾರತೀಯ ಮೂಲದವರೇ ಆದರೂ ಅವರು ಸಿಂಗಾಪೂರ್‌ ಪೌರತ್ವ ಪಡೆದಿದ್ದಾರೆ. ಅವರ ಹೆಂಡತಿ ಸಿಂಗಾಪೂರ್‌ನ ಮಹಿಳೆ. CECA ಒಪ್ಪಂದದಿಂದಾಗಿ ಭಾರತೀಯರಿಗೆ ಅನುಕೂಲವಾಗುತ್ತಿದೆ, ಸುಲಭವಾಗಿ ಪೌರತ್ವ ಸಿಗುತ್ತದೆ ಎನ್ನುವುದು ಸುಳ್ಳು’ ಎಂದು ಹೇಳಿತು. ಆದರೆ, ಈ ವಿಷಯದಲ್ಲಿ ಆಕ್ರೋಶ ಈಗಲೂ ಮುಂದುವರಿದಿದೆ. ಪ್ರಸಕ್ತ ಸಿಂಗಾಪೂರ್‌ನಲ್ಲಿ 57 ಲಕ್ಷ ಜನಸಂಖ್ಯೆಯಿದ್ದು, ಇದರಲ್ಲಿ 17 ಲಕ್ಷ ಜನರು ಭಾರತ, ಚೀನ, ಫಿಲಿಪ್ಪೀನ್ಸ್‌, ಲಂಕಾದಿಂದ ಬಂದವರು.

ಭಾರತೀಯರೆಂದಷ್ಟೇ ಅಲ್ಲ, ಚೀನಿಯರು ಮತ್ತು ಫಿಲಿಪ್ಪೀನೋಗಳಿಂದಾಗಿ ಸ್ಥಳೀಯರಿಗೆ ನಿರುದ್ಯೋಗ ಹೆಚ್ಚುತ್ತಿದೆ, ಸಾರ್ವಜನಿಕ ಸಾರಿಗೆಗಳು ತುಂಬಿ ತುಳುಕುತ್ತಿವೆ ಎನ್ನುವ ಆಕ್ರೋಶ ಆಗಾಗ ಕೇಳಿಬರುತ್ತಿರುತ್ತದೆ. ಆದರೆ, ಕಳೆದ ಎರಡು ದಶಕಗಳಲ್ಲಿ ವಿದ್ಯಾವಂತ ಭಾರತೀಯರ ಹರಿವು ಹೆಚ್ಚಾಗಿದ್ದು, ಅವರೆಲ್ಲ ಫೈನಾನ್ಸ್‌, ತಂತ್ರಜ್ಞಾನ, ವಿಜ್ಞಾನ, ವೈದ್ಯಕೀಯ ಕ್ಷೇತ್ರಗಳಲ್ಲೆಲ್ಲ ಉದ್ಯೋಗ ಕಂಡುಕೊಂಡಿದ್ದಾರೆ.

2011ರಿಂದಲೂ ವಲಸಿಗರ ವಿಚಾರ ಸಿಂಗಾಪೂರ್‌ನಲ್ಲಿ ಚುನಾವಣೆಯ ವಿಷಯವಾಗಿ ಬದಲಾಗಿದೆ. ಆಗಿನಿಂದ ಅಲ್ಲಿನ ಸರಕಾರ ವಿದೇಶಿಯರು ತಮ್ಮ ದೇಶಕ್ಕೆ ಬರಲು ಅನೇಕ ಕಟ್ಟುನಿಟ್ಟಾದ ನಿಯಮಗಳನ್ನೂ ಜಾರಿಗೊಳಿಸಿದೆ. 2011ರಲ್ಲಿ 32,000 ವಿದೇಶಿಯರು ಸಿಂಗಾಪೂರ್‌ನಲ್ಲಿ ಉದ್ಯೋಗ ಗಿಟ್ಟಿಸಿಕೊಂಡರೆ, ಈ ಸಂಖ್ಯೆ 2014 ಮತ್ತು 2017ರಲ್ಲಿ  ಸರಾಸರಿ 3,000ಕ್ಕೆ ಇಳಿದಿದೆ.

ಸಿಂಗಾಪೂರ್‌ನ ರಾಷ್ಟ್ರೀಯತೆಯ ಧ್ವನಿ ಎತ್ತುತ್ತಿರುವವರಿಗೆ ರಮೇಶ್‌ ವಿಚಾರ ಮುಖ್ಯ ಅಸ್ತ್ರವಾಗಿ ಬದಲಾಗಿದೆ. ರಮೇಶ್‌ನಂಥ ಭಾರತೀಯರು ಸಿಂಗಾಪೂರದ ನಾಗರಿಕತ್ವ ಪಡೆದರೂ ಸ್ಥಳೀಯ ಜನರೊಡನೆ ಸರಿಯಾಗಿ ಬೆರೆಯುವುದಿಲ್ಲ, ಸ್ಥಳೀಯ ಸಂಸ್ಕೃತಿಯನ್ನು ಗೌರವಿಸುವುದಿಲ್ಲ ಎನ್ನುವುದು CECA ವಿರೋಧಿ ಪ್ರತಿಭಟನಾಕಾರರ ವಾದ. ಇದೀಗ “ರಾಷ್ಟ್ರೀಯತೆಯ’ ವಿಷಯವಾಗಿಯೂ ಮಾರ್ಪಾಡಾಗಿದೆ.  ಇಉಇಅ ಅನ್ನು ಬಲವಾಗಿ ವಿರೋಧಿಸುವ ಎಸ್‌ಜಿ ಅಪೋಸಿಷನ್‌ ಸಂಘಟನೆಯ ಮುಖ್ಯಸ್ಥ ಮೈಖೆಲ್‌ ಡಿ ಸಿಲ್ವಾ ಅವರು, “ಸಿಂಗಾಪೂರ್‌ ಸರಕಾರ ಭಾರತೀಯ ವೃತ್ತಿಪರರನ್ನು ಕರೆತಂದು, ಅವರಿಗೆ ಪೌರತ್ವ ನೀಡಿ, ಅವರ ಮತಗಳನ್ನು ತನ್ನತ್ತ ಸೆಳೆಯುವ‌ ಯತ್ನ ಮಾಡುತ್ತಿದೆ’ ಎಂದು ಆರೋಪಿಸುತ್ತಾರೆ.

ಸಿಂಗಾಪೂರ್‌ ಸರಕಾರ ಸುಳ್ಳು ಹೇಳುತ್ತಿದೆಯೇ?
ರೀಲೊಕೇಶ‌ನ್‌ ಇಂಡಸ್ಟ್ರಿಯಲ್ಲಿ ಕೆಲಸ ಮಾಡುವ ವಿಕ್ಟರ್‌ ಟ್ಯಾನ್‌ (ಹೆಸರು ಬದಲಿಸಲಾಗಿದೆ) ಎನ್ನುವವರು CECAದಿಂದಾಗಿ ಭಾರತೀಯರಿಗೆ ಮುಕ್ತ ಓಡಾಟಕ್ಕೆ, ಉದ್ಯೋಗಾವಕಾಶಗಳಿಗೆ, ಪೌರತ್ವಕ್ಕೆ ಅವಕಾಶ ದೊರೆತುಬಿಟ್ಟಿದೆ. 2016ಕ್ಕೂ ಮೊದಲು ಆಸ್ಟ್ರೇಲಿಯನ್‌, ಬ್ರಿಟಿಷ್‌ ನಾಗರಿಕರು ಹೆಚ್ಚಾಗಿ ಸಿಂಗಾಪೂರಕ್ಕೆ ಬಂದುಹೋಗಿ ಮಾಡುತ್ತಿದ್ದರು, ಈಗ ಭಾರತೀಯರ ಸಂಖ್ಯೆ ಇವೆರಡೂ ರಾಷ್ಟ್ರಗಳನ್ನೂ ಹಿಂದಿಕ್ಕಿದೆ ಎನ್ನುತ್ತಾರೆ.

ಸಿಇಸಿಎ ಒಪ್ಪಂದ ಭಾರತದ ಪರವಾಗಿದೆಯೇ ಹೊರತು, ಸಿಂಗಾಪೂರ್‌ನ ಪರವಾಗಿಲ್ಲ ಎಂದು ಟ್ಯಾನ್‌ ಹೇಳುತ್ತಾರೆ. “ಅನೇಕ ಭಾರತೀಯರು ಸಿಂಗಾಪೂರ್‌ಗೆ ಬಂದು ಉನ್ನತ ಹುದ್ದೆಗಳಲ್ಲಿ ಕೂಡುತ್ತಿದ್ದಾರೆ. ಆದರೆ ಸಿಂಗಾಪೂರ್‌ನ ಜನರು ಭಾರತದಲ್ಲಿ ದೊಡ್ಡ ಸ್ಥಾನಕ್ಕೇರುವುದು ನಮಗೆ ಕಾಣಿಸುತ್ತಿಲ್ಲ. ನಾನು ಉದ್ಯೋಗ ಹುಡುಕುತ್ತಿದ್ದಾಗ, ಸಿಂಗಾಪೂರ್‌ನ ಜನರಿಗೆ ಅನುಕೂಲವಾಗುವಂಥ ಯಾವ ಉದ್ಯೋಗಗಳೂ ಭಾರತದಲ್ಲಿ ಕಾಣಿಸಲಿಲ್ಲ’ ಎನ್ನುವುದು ಟ್ಯಾನ್‌ ವಾದ.

ವಿಕ್ಟರ್‌ ಟ್ಯಾನ್‌ನಂಥ ಜನರು ಏನೇ ಹೇಳಿದರೂ, ಈ ಮುಕ್ತ ವ್ಯಾಪಾರ ಒಪ್ಪಂದದಿಂದಾಗಿ ಕೇವಲ ಭಾರತಕ್ಕಷ್ಟೇ ಅಲ್ಲದೇ, ಸಿಂಗಾಪೂರ್‌ಗೂ ಲಾಭವಾಗಿದೆ ಎಂದು ಅಲ್ಲಿನ ಸರಕಾರ ಪುನರುಚ್ಚರಿಸುತ್ತಲೇ ಇದೆ. CECA ಒಪ್ಪಂದದಿಂದಾಗಿಯೇ ಇಂದು ಡಿಬಿಎಸ್‌ ಮತ್ತು ಯುಒಬಿಯಂಥ  ಬ್ಯಾಂಕ್‌ಗಳು ಭಾರತದಲ್ಲಿ ತಲೆ ಎತ್ತಿವೆ. ಅಂದರೆ, ಭಾರತದಲ್ಲಿ ಕಾರ್ಯನಿರ್ವಹಿಸುತ್ತಿರುವ ಸಿಂಗಾಪೂರ್‌ನ ಕಂಪೆನಿಗಳು ಸುಲಭವಾಗಿ ಆರ್ಥಿಕ ಸೇವೆಗಳನ್ನು ಇವುಗಳಿಂದ ಪಡೆಯಬಹುದಾಗಿದೆ. 2018ರ ವೇಳೆಗೆ ಭಾರತದಲ್ಲಿ 650ಕ್ಕೂ ಅಧಿಕ ಸಿಂಗಾಪೂರ್‌ ಮೂಲದ ಕಂಪನಿಗಳು ಕಾರ್ಯನಿರ್ವಹಿಸುತ್ತಿವೆ ಅಥವಾ ಹೂಡಿಕೆ ಮಾಡಿವೆ.

ಕಾಕ್ಸಿಂಗ್‌ ಹ್ಯೂ
(ಲೇಖನ ಕೃಪೆ: ಸೌತ್‌ ಚೀನಾ ಮಾರ್ನಿಂಗ್‌ ಪೋಸ್ಟ್‌)

Advertisement

Udayavani is now on Telegram. Click here to join our channel and stay updated with the latest news.

Next