Advertisement
ಬಂಟ್ವಾಳ ಪುರಸಭೆಯ ಅವರಣದೊಳಗಿರುವ ಅಂಗನವಾಡಿ ಕೇಂದ್ರದ ಕಟ್ಟಡ ತೀರಾ ದುಃಸ್ಥಿತಿಯಲ್ಲಿದೆ. ಯಾವುದೇ ಕ್ಷಣದಲ್ಲಿ ಕುಸಿಯುವ ಭೀತಿಯಲ್ಲಿದೆ. ಇದರಿಂದ ಮಕ್ಕಳ ಜೀವಕ್ಕೆ ಅಪಾಯವಿದೆ. ಈಗಾಗಲೇ ಕಟ್ಟಡ ಕುಸಿಯುವ ಹಂತದಲ್ಲಿದೆ. ಹಂಚುಗಳು ಕಳಚಿ ಬಿದ್ದಿವೆ. ಆದ್ದರಿಂದ ಬಿಸಿಲಿಗೆ ಬಸವಳಿಯುವಂತಿದೆ. ಅನಿರೀಕ್ಷಿತವಾಗಿ ಸಣ್ಣ ಮಳೆ ಬಂದರೂ ಇಡೀ ಕೇಂದ್ರ ಈಜುಕೊಳವಾಗಲಿದೆ. ಆದರೂ ಈ ಕಷ್ಟ ಯಾರಿಗೂ ತಿಳಿಯುತ್ತಿಲ್ಲ.
ಈ ಕೇಂದ್ರ ಇರುವುದು ಯಾವುದೋ ಗುಡ್ಡಗಾಡು ಪ್ರದೇಶದಲ್ಲಿಲ್ಲ. ಬಂಟ್ವಾಳ ಪುರಸಭೆಯ ಹೃದಯ ಭಾಗದಲ್ಲಿದೆ.
ಪುರಸಭೆ ಕಚೇರಿಯ ಹಿಂಭಾಗದಲ್ಲಿ ಈ ಕೇಂದ್ರವಿದೆ. ಈ ಹಿಂದೆ ಇಲ್ಲಿ 32 ಮಕ್ಕಳು ನಲಿದಾಡುತ್ತಿದ್ದರು. ಕೇಂದ್ರದ ದುಃಸ್ಥಿತಿಯಿಂದ ಮಕ್ಕಳ ಸಂಖ್ಯೆ 10ಕ್ಕೆ ಇಳಿದಿದೆ. ಕೇವಲ ಕಟ್ಟಡದ ದುಃಸ್ಥಿತಿಯಲ್ಲಷ್ಟೇ ಅಲ್ಲ, ಮೂಲ ಸೌಕರ್ಯಗಳ ಕೊರತೆ ಇದೆ. ಇದೇ ಕಾರಣದಿಂದ ಹೆತ್ತವರೂ ತಮ್ಮ ಮಕ್ಕಳನ್ನು ಇಲ್ಲಿಗೆ ಕಳುಹಿಸಲು ಹಿಂಜರಿಯುತ್ತಿದ್ದಾರೆ. ಆಟದ ಸಾಮಗ್ರಿ ಇಲ್ಲ
ಸಾಮಾನ್ಯವಾಗಿ ಅಂಗನವಾಡಿ ಕೇಂದ್ರವೆಂದರೆ ಸ್ವಲ್ಪ ಹೊತ್ತು ಕಲಿ, ಹೆಚ್ಚು ಹೊತ್ತು ನಲಿ ಎಂಬ ಮಾತಿದೆ. ಕಲಿಸಲಿಕ್ಕೇನೋ ಜನ ಇರಬಹುದು. ಆದರೆ ಮಕ್ಕಳು ನಲಿಯಲಿಕ್ಕೆ ಆಟದ ಸಾಮಗ್ರಿ ಬೇಕು. ಆದರೆ ಈ ಕೇಂದ್ರದಲ್ಲಿ ಸಾಕಷ್ಟು ಆಟದ ಸಾಮಗ್ರಿಗಳಿಲ್ಲ.ಆದ ಕಾರಣ ಮಕ್ಕಳು ಮೂಲೆ ಹಿಡಿದು ಕುಳಿತುಕೊಳ್ಳುವುದು ಬಿಟ್ಟರೆ ಬೇರೇನೂ ಮಾಡುವಂತಿಲ್ಲ.
Related Articles
Advertisement
ಪುಣ್ಯಭೂಮಿ ತುಳುನಾಡ ಸೇವಾ ಫೌಂಡೇಶನ್ ಇತ್ತೀಚೆಗಷ್ಟೇ ಕೇಂದ್ರಕ್ಕೆ ವತಿಯಿಂದ ಈ ಅಂಗನವಾಡಿ ಕೇಂದ್ರಕ್ಕೆ ಮಿಕ್ಸಿ ಹಾಗೂ ಆಟಿಕೆ ಒದಗಿಸಿದೆ. ಕೇಂದ್ರದ ಅಭಿವೃದ್ಧಿಗೆ ಸಂಬಂಧಪಟ್ಟ ಇಲಾಖೆಗೆ ಮನವಿ ಮಾಡಿದ್ದಾರೆ.
ಪುರಸಭೆಯ ಆಸಕ್ತಿಯೂ ಕಡಿಮೆಕೇಂದ್ರ ಶಿಶು ಅಭಿವೃದ್ದಿ ಇಲಾಖೆಯ ಅಧೀನದಲ್ಲಿ ಈ ಕೇಂದ್ರವಿದ್ದರೂ ಕಟ್ಟಡದ ನಿರ್ವಹಣೆ ಪುರಸಭೆ ಸೇರಿದ್ದಾಗಿದೆ. ಎರಡು ಬಾರಿ ಕಟ್ಟಡದ ದುರಸ್ತಿಗೆ ಪುರಸಭೆಯನ್ನು ಲಿಖಿತವಾಗಿ ಗಮನ ಸೆಳೆದಿದ್ದರೂ ಯಾವುದೇ ಪ್ರಯೋಜನವಾಗಿಲ್ಲ ಎಂಬ ಮಾಹಿತಿ ಲಭ್ಯವಾಗಿದೆ. ಈ ಹಿನ್ನೆಲೆಯಲ್ಲಿ ಪುರಸಭೆಯ ಕಾಳಜಿಯೂ ಪ್ರಶ್ನೆಗೀಡಾಗಿದೆ. ಈ ಅಂಗನವಾಡಿ ಕೇಂದ್ರದ ಕಟ್ಟಡ ನಿರ್ವಹಣೆ ಬಂಟ್ವಾಳ ಪುರಸಭೆಗೆ ಸಂಬಂಧಿಸಿದೆ. ಮಕ್ಕಳ ಸಂಖ್ಯೆ ಇಳಿಮುಖವಾದುದರಿಂದ ಕೇಂದ್ರವನ್ನು ಮುಚ್ಚಲು ಸೂಚಿಸಲಾಗಿತ್ತು. ಪ್ರಸ್ತುತ ಹೊಸ ಕಟ್ಟಡ ನಿರ್ಮಾಣಕ್ಕೆ ಪುರಸಭೆ ಮುಖ್ಯಾಧಿಕಾರಿ ಅವರಿಗೆ ಮನವಿ ಸಲ್ಲಿಸಲಾಗಿದ್ದು, ನಿರ್ಮಿಸಿ ಕೊಡುವ ಭರವಸೆ ನೀಡಿದ್ದಾರೆ.
– ಹಿರಿಯ ಮೇಲ್ವಿಚಾರಕಿ,
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಭಿವೃದ್ಧಿ ಇಲಾಖೆ, ಬಂಟ್ವಾಳ ರತ್ನದೇವ್ ಪುಂಜಾಲಕಟ್ಟೆ