ಶ್ರೀನಗರ : ಪವಿತ್ರ ಅಮರನಾಥ ಯಾತ್ರೆಯನ್ನು ಕೈಗೊಂಡ ಯಾತ್ರಿಕರ ಮೇಲೆ ಉಗ್ರರು ದಾಳಿ ನಡೆಸಿ ಏಳು ಮಂದಿಯನ್ನು ಕೊಂದಿರುವ ಘಟನೆಯಿಂದ ಎದೆಗುಂದದ ನೂರಾರು ಭಕ್ತರನ್ನು ಒಳಗೊಂಡ ಇನ್ನೊಂದು ತಂಡ ಇಂದು ಮಂಗಳವಾರ ನಸುಕಿನ ವೇಳೆ ಬಿಗಿ ಭದ್ರತೆಯ ನಡುವೆ ಗುಹಾ ದೇವಾಲಯದ ಅಮರನಾಥ ಯಾತ್ರೆಯನ್ನು ಆರಂಭಿಸಿದರು.
ಇಂದು ನಸುಕಿನ ವೇಳೆ ನೂರಾರು ಅಮರನಾಥ ಯಾತ್ರಿಕರು “ಬಮ್ ಬಮ್ ಭೋಲೆ’ ಘೋಷಣೆಯೊಂದಿಗೆ ಸಾಂಪ್ರದಾಯಿಕ ಪೆಹಲ್‌ಗಾಂವ್ ಮಾರ್ಗವಾಗಿ ಮತ್ತು ಕಡಿಮೆ ದೂರದ ಬಾಲತಾಲ್ ಮಾರ್ಗವಾಗಿ ಯಾತ್ರೆಯನ್ನು ಆರಂಭಿಸಿದರು ಎಂದು ಶ್ರೀ ಅಮರನಾಥ ದೇವಾಲಯ ಮಂಡಳಿಯ ಅಧಿಕಾರಿ ಹೇಳಿದರು.
“ಅಮರನಾಥ್ ಯಾತ್ರೆ ಸರಾಗವಾಗಿ ಸಾಗುತ್ತಿದ್ದು ಉಗರ್ರದಾಳಿಯಿಂದ ಭಕ್ತಾದಿಗಳು ಧೃತಿಗೆಟ್ಟಿಲ್ಲ, ಎದೆಗುಂದಿಲ್ಲ’ ಎಂದು ಅಧಿಕಾರಿಗಳು ಹೇಳಿದರು.
ಇಂದು ಬೆಳಗ್ಗೆ ಅಮರನಾಥ ಯಾತ್ರೆಯನ್ನು ಆರಂಭಿಕ ಯಾತ್ರಿಕರ ನಿಖರ ಸಂಖ್ಯೆ ಗೊತ್ತಾಗಿಲ್ಲ.
ದಕ್ಷಿಣ ಕಾಶ್ಮೀರದ ಅನಂತನಾಗ್ ಜಿಲ್ಲೆಯಲ್ಲಿ ನಿನ್ನೆ ಸೋಮವಾರ ರಾತ್ರಿ ಉಗ್ರರು ದಾಳಿ ನಡೆಸಿ ಏಳು ಅಮರನಾಥ ಯಾತ್ರಿಗಲನ್ನು ಕೊಂದು ಇತರ 19 ಮಂದಿಯನ್ನು ಗಾಯಗೊಳಿಸಿದ್ದರು.
ಈ ದಾಳಿಯ ಹಿಂದೆ ಪಾಕಿಸ್ಥಾನದ ಲಷ್ಕರ್ ಎ ತಯ್ಯಬ ಉಗ್ರ ಸಂಘಟನೆಯ ಪಾಕ್ ಉಗ್ರ ಇಸ್ಮಾಯಿಲ್ ಎಂಬಾತ ಇರುವುದನ್ನು ಪತ್ತೆಹಚ್ಚಲಾಗಿರುವುದು ತಾಜಾ ಬೆಳವಣಿಗೆಯಾಗಿದೆ.