Advertisement

ಡ್ರಗ್ಸ್‌ಗೆ ಭೂಗತ ನಂಟು: ಇಬ್ಬರು ಆರೋಪಿಗಳಿಗೆ ಭೂಗತ ಪಾತಕಿಗಳ ಆಪ್ತರ ಸಂಪರ್ಕ

12:19 AM Sep 11, 2020 | mahesh |

ಬೆಂಗಳೂರು: ಸ್ಯಾಂಡಲ್‌ವುಡ್‌ ಮಾದಕ ವಸ್ತು ಪ್ರಕರಣ ಮತ್ತೂಂದು ರೋಚಕ ತಿರುವು ಪಡೆದುಕೊಂಡಿದ್ದು, ಹವಾಲಾ ದಂಧೆ, ಭೂಗತ ಜಗತ್ತಿನ ನಂಟು ಬೆಸೆದುಕೊಂಡಿರುವುದು ವಿಚಾರಣೆ ವೇಳೆ ಬೆಳಕಿಗೆ ಬಂದಿದೆ. ಜತೆಗೆ ಮಾದಕ ವಸ್ತುಗಳು ವಿದೇಶದಿಂದ ಸರಬರಾಜಾಗುತ್ತಿರುವುದರಿಂದ ವಿದೇಶೀ ಭೂಗತ ಲೋಕದ ಛಾಯೆ ಕಂಡುಬಂದಿದೆ.

Advertisement

ಹವಾಲಾ ಮತ್ತು ಭೂಗತ ಜಗತ್ತಿನ ಛಾಯೆ ಕಾಣಿಸಿಕೊಳ್ಳುತ್ತಿದ್ದಂತೆ ಕೇಂದ್ರ ತನಿಖಾ ಸಂಸ್ಥೆಗಳು ಅಖಾಡಾಕ್ಕಿಳಿದಿವೆ. ಜಾರಿ ನಿರ್ದೇಶನಾಲಯ, ಕೇಂದ್ರ ಗುಪ್ತಚರ ಇಲಾಖೆ, ಸಿಸಿಬಿ ಮತ್ತು ಎನ್‌ಸಿಬಿ (ಮಾದಕ ವಸ್ತು ನಿಯಂತ್ರಣ ಘಟಕ)ಗಳು ಮಾಹಿತಿ ವಿನಿಮಯಕ್ಕೆ ಮುಂದಾಗಿದ್ದು, ವಿಚಾರಣೆಯಲ್ಲಿ ಪೊಲೀಸರಿಗೆ ಸಹಕರಿಸಲು ನಿರ್ಧರಿಸಿವೆ.

ಯಾವ ದೇಶಗಳ ಮೂಲಕ ಹವಾಲಾ ದಂಧೆ ನಡೆಸಲಾಗುತ್ತಿದೆ ಎಂಬ ಬಗ್ಗೆಯೂ ತನಿಖೆ ನಡೆಸಲಾಗುವುದು. ಹಂತ ಹಂತವಾಗಿ ಆರೋಪಿಗಳ ವಿಚಾರಣೆ ನಡೆಸಿ ತಾರ್ಕಿಕ ಅಂತ್ಯಕ್ಕೆ ಬರಲಾಗುವುದು. ಇದುವರೆಗೆ ಆರು ಆರೋಪಿಗಳು ಬಂಧಿತರಾಗಿದ್ದು, ಕೆಲವರು ಹವಾಲಾ ದಂಧೆ ಮೂಲಕ ವಿದೇಶಿ ಡ್ರಗ್‌ ಪೆಡ್ಲರ್‌ಗಳ ಜತೆ ಹಣಕಾಸಿನ ವ್ಯವಹಾರ ನಡೆಸಿರುವುದು ಬೆಳಕಿಗೆ ಬಂದಿದೆ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ.

ಇಬ್ಬರಿಗೆ ಭೂಗತ ಲೋಕ ಸಂಪರ್ಕ
ಸ್ಯಾಂಡಲ್‌ವುಡ್‌ ಪ್ರಕರಣದಲ್ಲಿ ಇಬ್ಬರು ಆರೋಪಿಗಳು ಭೂಗತ ಪಾತಕಿಗಳ ಆಪ್ತರ ಜತೆ ಸಂಪರ್ಕ ಹೊಂದಿದ್ದಾರೆ ಎಂಬುದು ತನಿಖೆಯಿಂದ ಗೊತ್ತಾಗಿದೆ. ಅಲ್ಲದೆ ಈ ಆರೋಪಿಗಳು ಸುಮಾರು 7-8 ವರ್ಷಗಳಿಂದ ಮಾದಕ ವಸ್ತು ದಂಧೆಯಲ್ಲಿ ತೊಡಗಿದ್ದು, ಭೂಗತ ಪಾತಕಿಗಳ ಆಪ್ತರ ಮೂಲಕ ಬೆಂಗಳೂರಿಗೆ ಮಾದಕ ವಸ್ತು ಪೂರೈಕೆ ಮಾಡುತ್ತಿದ್ದರು ಎನ್ನಲಾಗಿದೆ.

ಮುಂಬಯಿ ಮೂಲದ ಭೂಗತ ಪಾತಕಿಯ ಆಪ್ತನ ಜತೆ ಆರೋಪಿಗಳು ನಿರಂತರ ಸಂಪರ್ಕದಲ್ಲಿದ್ದರು. ಆತ ಸೂಚಿಸಿದ ಪೆಡ್ಲರ್‌ಗಳ ಜತೆ ಮಾತ್ರ ವ್ಯವಹಾರ ನಡೆಸುತ್ತಿದ್ದರು. ಹೆಚ್ಚಾಗಿ ನೈಜೀರಿಯಾದ ಪೆಡ್ಲರ್‌ಗಳಿಂದ ಮಾತ್ರ ವ್ಯವಹಾರ ನಡೆಸುತ್ತಿದ್ದರು. ಈ ಆರೋಪಿಗಳು ಸೆಲೆಬ್ರಿಟಿಗಳು, ರಾಜಕಾರಣಿಗಳ ಮಕ್ಕಳು, ವಿದ್ಯಾರ್ಥಿಗಳಿಗೆ ಸರಬರಾಜು ಮಾಡುತ್ತಿದ್ದರು ಎಂಬುದು ಸಿಸಿಬಿಯ ವಿಚಾರಣೆ ಸಂದರ್ಭ ಗೊತ್ತಾಗಿದೆ. ಸದ್ಯ ಭೂಗತ ಪಾತಕಿಯ ಆಪ್ತ ಫೋನ್‌ ಸ್ವಿಚ್‌ ಆಫ್ ಮಾಡಿಕೊಂಡು ತಲೆಮರೆಸಿ ಕೊಂಡಿದ್ದಾನೆ ಎಂದು ಮೂಲಗಳು ತಿಳಿಸಿವೆ.

Advertisement

ಇ.ಡಿ. ವಿಚಾರಣೆ
ದಿಲ್ಲಿ ಮೂಲದ ವೀರೇನ್‌ ಖನ್ನಾನನ್ನು ವಶಕ್ಕೆ ಪಡೆದುಕೊಂಡ ಜಾರಿ ನಿರ್ದೇಶನಾಲಯ (ಇ.ಡಿ.) ಅಧಿಕಾರಿಗಳು ಸುಮಾರು ಐದು ತಾಸು ವಿಚಾರಣೆ ನಡೆಸಿದ್ದಾರೆ. ವೀರೇನ್‌ ಖನ್ನಾ, ವೀರೇನ್‌ ಈವೆಂಟ್‌ ಮ್ಯಾನೇಜ್‌ಮೆಂಟ್‌ ಸಂಸ್ಥೆ ಹೊಂದಿದ್ದು, ಬೆಂಗಳೂರು, ಮುಂಬಯಿ, ದಿಲ್ಲಿ ಸಹಿತ ದೇಶದ ನಾನಾ ಕಡೆಗಳಲ್ಲಿ, ವಿದೇಶಗಳಲ್ಲಿಯೂ ರೇವ್‌ ಸಹಿತ ಎಲ್ಲ ಮಾದರಿಯ ಪಾರ್ಟಿಗಳನ್ನು ಆಯೋಜಿಸುತ್ತಿದ್ದ. ದೇಶದಲ್ಲಿ ಆಯೋಜಿಸುವ ಪ್ರತಿಯೊಂದು ಪಾರ್ಟಿಯಲ್ಲಿ ಕನಿಷ್ಠ 8-10 ಲ.ರೂ. ಹಾಗೂ ವಿದೇಶಿ ಪಾರ್ಟಿಗಳಲ್ಲಿ 15 ಲ.ರೂ. ಗಳಿಸಿದ್ದಾನೆ. ಜತೆಗೆ ವಾರ್ಷಿಕ 1.5 ಕೋ.ರೂ.ಗೂ ಅಧಿಕ ಆದಾಯ ತೆರಿಗೆ ಪಾವತಿಸುತ್ತಿದ್ದ. ಹೀಗಾಗಿ ಆತನ ಆಸ್ತಿ, ವಿದೇಶಿ ಹಣಕಾಸು ವಹಿವಾಟು, ಆದಾಯ ಮುಂತಾದ ಮಾಹಿತಿಯನ್ನು ಅಧಿಕಾರಿಗಳು ಪಡೆದುಕೊಂಡಿದ್ದಾರೆ. ಆರೋಪಿಯು ವಿದೇಶಿ ಡ್ರಗ್ಸ್‌ ಪೆಡ್ಲರ್‌ಗಳ ಜತೆ ಶೇ. 60ರಷ್ಟು ಹಣಕಾಸಿನ ವಹಿವಾಟನ್ನು ಹವಾಲಾ ಮೂಲಕವೇ ನಡೆಸುತ್ತಿದ್ದ ಎಂಬುದು ಇ.ಡಿ. ಅಧಿಕಾರಿಗಳ ಪ್ರಾಥಮಿಕ ತನಿಖೆಯಲ್ಲಿ ಬಯಲಾಗಿದೆ. ರಾಹುಲ್‌ ಕೂಡ ಶ್ರೀಲಂಕಾದಲ್ಲಿ ಕ್ಯಾಸಿನೋ ನಡೆಸುತ್ತಿದ್ದುದರಿಂದ ಹವಾಲಾದಲ್ಲಿ ಭಾಗಿಯಾಗಿರುವ ಸಾಧ್ಯತೆಯಿದ್ದು, ಆತನನ್ನು ಶುಕ್ರವಾರ ವಿಚಾರಣೆ ನಡೆಸಲಾಗುವುದು ಎನ್ನಲಾಗಿದೆ.

ವಿದೇಶಿ ಕರೆನ್ಸಿ
ವೀರೇನ್‌ ಖನ್ನಾ ಮನೆ ಮೇಲೆ ದಾಳಿ ನಡೆಸಿದಾಗ 8 ದೇಶಗಳ ಕರೆನ್ಸಿಗಳು ಪತ್ತೆಯಾಗಿದ್ದವು. ಆತ ವಿದೇಶಿ ಪೆಡ್ಲರ್‌ಗಳ ಜತೆ ನೇರ ಸಂಪರ್ಕದಲ್ಲಿರುವುದು ಪತ್ತೆಯಾಗಿದೆ. ಖನ್ನಾ ಆಫ್ರಿಕಾ ಮೂಲದ ಬಂಧಿತ ಆರೋಪಿ ಲೂಮ್‌ ಪೆಪ್ಪರ್‌ ಸಾಂಬಾನಿಗೆ ಲಕ್ಷಾಂತರ ರೂ.ಗಳನ್ನು ಬ್ಯಾಂಕ್‌ ಮೂಲಕ ವರ್ಗಾಯಿಸಿದ್ದ. ಸಾಂಬಾ ಅದನ್ನು ಹವಾಲಾ ಮೂಲಕ ಬೇರೆಯವರಿಗೆ ತಲುಪಿಸಿದ್ದ. ಆದರೆ, ಎಲ್ಲಿಗೆ ಮತ್ತು ಯಾರಿಗೆ ತಲುಪಿಸಿದ್ದ ಎಂಬ ಬಗ್ಗೆ ತನಿಖೆ ನಡೆಯುತ್ತಿದೆ.

ಇ.ಡಿ.ಯಿಂದ ಇಸಿಐಆರ್‌
ಇ.ಡಿ. ಅಧಿಕಾರಿ ಗಳು ಒಂದೆರಡು ದಿನಗಳಲ್ಲಿ ಆರೋಪಿಗಳ ವಿರುದ್ಧ ಇಸಿಐಆರ್‌(ಎನ್‌ಫೋರ್ಸ್‌ಮೆಂಟ್‌ ಕೇಸ್‌ ಇನ್‌ವೆಸ್ಟಿಗೇ ಷನ್‌ ರಿಪೋರ್ಟ್‌) ದಾಖಲು ಮಾಡಲಿ ದ್ದಾರೆ. ಮೂಲಗಳ ಪ್ರಕಾರ ವೀರೇನ್‌ ಖನ್ನಾ, ರಾಹುಲ್‌ ಟೋನ್ಸಿ, ನಟಿ ರಾಗಿಣಿ, ಸಂಜನಾ ಗಲ್ರಾನಿ ಮತ್ತು ಆಫ್ರಿಕಾದ ಲೂಮ್‌ ಪೆಪ್ಪರ್‌ ಸಾಂಬಾ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.

ಆಪರೇಷನ್‌ ಕುರಿ ಫಾರ್ಮ್
ಬೆಂಗಳೂರಿನ ಇತಿಹಾಸದಲ್ಲೇ ಹಿಂದೆಂದೂ ಕೇಳರಿಯದಷ್ಟು ಪ್ರಮಾಣದ ಗಾಂಜಾ ಏಕಕಾಲದಲ್ಲಿ ಪತ್ತೆಯಾಗಿದೆ! ನಗರದಲ್ಲಿ ಬಂಧಿತನಾದ ಗಾಂಜಾ ದಂಧೆಕೋರ ನೀಡಿದ ಸಣ್ಣ ಸುಳಿವಿನ ಆಧಾರದ ಮೇರೆಗೆ ಶೇಷಾದ್ರಿಪುರಂ ಠಾಣೆ ಪೊಲೀಸರು 10 ದಿನಗಳ ಕಾಲ “ಆಪರೇಷನ್‌ ಕುರಿಫಾರ್ಮ್’ ನಡೆಸಿದ್ದಾರೆ. ಈ ವೇಳೆ ಕೋಟ್ಯಂತರ ರೂ. ಮೌಲ್ಯದ 1,300 ಕೆಜಿ ಗಾಂಜಾ ವಶಪಡಿಸಿಕೊಂಡಿದ್ದಾರೆ. ಕಲಬುರಗಿ ಜಿಲ್ಲೆಯ ಲಚ್ಚುನಾಯಕ ತಾಂಡಾದ ಕುರಿ ಫಾರ್ಮ್ ಒಂದರಲ್ಲಿಭೂಗತವಾಗಿ ಅಡಗಿಸಿ ಇರಿಸಿದ್ದ ಈ ಭಾರೀ ಪ್ರಮಾಣದ ಗಾಂಜಾ ವಶಪಡಿಸಿಕೊಂಡಿದ್ದಾರೆ. ಈ ಪ್ರಕರಣ ಸಂಬಂಧ ಅಂತಾರಾಜ್ಯ ಗಾಂಜಾ ದಂಧೆಕೋರರಾದ ಕಲಬುರಗಿಯ ಚಂದ್ರಕಾಂತ್‌, ಬೀದರ್‌ನ ನಾಗನಾಥ, ವಿಜಯಪುರದ ಸಿದ್ದುನಾಥ ಲಾವಟೆ, ಬೆಂಗಳೂರಿನ ಗಾಯತ್ರಿನಗರದ ಜ್ಞಾನಶೇಖರ್‌ನನ್ನು ಬಂಧಿಸಿದ್ದಾರೆ.

ಯಾರನ್ನೂ ರಕ್ಷಿಸುವುದಿಲ್ಲ: ಸಿಎಂ
ಮಾದಕ ದ್ರವ್ಯ ಪ್ರಕರಣದಲ್ಲಿ ಯಾರನ್ನೂ ರಕ್ಷಿಸುವ ಪ್ರಶ್ನೆಯೇ ಇಲ್ಲ ಎಂದು ಸಿಎಂ ಯಡಿಯೂರಪ್ಪ ಹೇಳಿದ್ದಾರೆ. ಈ ಬಗ್ಗೆ ಸಮಗ್ರ ತನಿಖೆ ನಡೆಸಲಾಗುತ್ತಿದ್ದು, ಅನೇಕರ ಬಣ್ಣ ಬಯಲಾಗುತ್ತಿದೆ ಎಂದು ಅವರು ತಿಳಿಸಿದ್ದಾರೆ. ದೇಶದ ಇತಿಹಾಸದಲ್ಲಿ ಹತ್ತಾರು ವರ್ಷಗಳಿಂದ ಇದೆಲ್ಲ ನಡೆಯುತ್ತಿದ್ದು, ಹಿಂದಿನ ಸರಕಾರಗಳು ಕಣ್ಣು ಮುಚ್ಚಿ, ಕೈ ಕಟ್ಟಿ ಕುಳಿತಿದ್ದವು ಎಂದು ಸಿಎಂ ಗೃಹ ಕಚೇರಿ “ಕೃಷ್ಣಾ’ದಲ್ಲಿ ಗುರುವಾರ ಮಾಧ್ಯಮ ಪ್ರತಿನಿಧಿಗಳಿಗೆ ಪ್ರತಿಕ್ರಿಯಿಸಿ ಆರೋಪಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next