Advertisement

ಭೂಗತ ಪಾತಕಿ ರವಿ ಪೂಜಾರಿ ಬಂಧನ

01:00 AM Feb 12, 2019 | Harsha Rao |

ಮಂಗಳೂರು: ಎರಡು ದಶಕದಿಂದ ಉದ್ಯಮಿಗಳು ಹಾಗೂ ಪೊಲೀಸರನ್ನು ಕಾಡುತ್ತಿದ್ದ ಭೂಗತ ಪಾತಕಿ ರವಿ ಪೂಜಾರಿಯನ್ನು ಸೆನೆಗಲ್‌ ಪೊಲೀಸರು ಬಂಧಿಸಿರುವ ಹಿನ್ನೆಲೆಯಲ್ಲಿ ಇದುವರೆಗೆ ಆತನ ಬೆದರಿಕೆಗೆ ಗುರಿಯಾಗುತ್ತಿದ್ದ ಕರಾವಳಿ ಸಹಿತ ರಾಜ್ಯದ ಉದ್ಯಮಿಗಳು, ಶ್ರೀಮಂತರು, ವೈದ್ಯರು ನೆಮ್ಮದಿಯ ನಿಟ್ಟುಸಿರು ಬಿಡುವಂತಾಗಿದೆ.

Advertisement

ಸುಮಾರು 20 ವರ್ಷಗಳಿಂದ ನಿರಂತರ ಬೆದರಿಕೆ ಕರೆಗಳನ್ನು ಎದುರಿ ಸುತ್ತಿದ್ದ ಕರಾವಳಿಯ ಉದ್ಯಮಿಗಳ ಪೈಕಿ ಕೆಲವರು ಜೀವ ಭೀತಿಯಿಂದ ಆತನಿಗೆ ಒಂದಷ್ಟು ಹಫ್ತಾ ನೀಡಿ ಸುಮ್ಮನಾಗುತ್ತಿದ್ದರು. ಕೆಲವರಷ್ಟೇ ಪೊಲೀಸರಿಗೆ ದೂರು ನೀಡುತ್ತಿದ್ದರು.

ಒಂದು ಕಾಲದಲ್ಲಿ ಪಾತಕ ಲೋಕದಲ್ಲಿ ಮೆರೆದಿದ್ದ ಕೆಲವರು ಬಳಿಕ ಅಲ್ಲಿಂದ ಹೊರಬಂದು ಸಮಾಜ ಮುಖೀಗಳಾಗಿದ್ದಾರೆ. ಇನ್ನೋರ್ವ ಪಾತಕಿ ಬನ್ನಂಜೆ ರಾಜಾನನ್ನು 2015ರಲ್ಲಿ ಪೊಲೀಸರು ಬಂಧಿಸಿದ್ದು, ಬೆಳಗಾವಿಯ ಹಿಂಡಲಗಾ ಜೈಲಿನಲ್ಲಿದ್ದಾನೆ. ಈಗ ರವಿ ಪೂಜಾರಿಯೂ ಪೊಲೀಸ್‌ ವಶದಲ್ಲಿರುವುದರಿಂದ ಸದ್ಯಕ್ಕೆ ಭೂಗತ ಪಾತಕಿಗಳ ಅಟ್ಟಹಾಸ ಸ್ವಲ್ಪಮಟ್ಟಿಗೆ ಕಡಿಮೆಯಾಗುವಂತಿದೆ.

ಮಂಗಳೂರಿನಲ್ಲಿ ರವಿ ಪೂಜಾರಿಯ ಸಹಚರರು ಎನ್ನಲಾದ ಕನಿಷ್ಠ 50 ಮಂದಿ ಇದ್ದಾರೆ ಎನ್ನಲಾಗಿದ್ದು, ಅವರೆಲ್ಲರೂ ಬಂಧನದ ಭೀತಿ ಎದುರಿಸುತ್ತಿದ್ದಾರೆ. ಸಹಚರರೆಲ್ಲರ ಪಟ್ಟಿ ತಯಾರಿಸುವಂತೆ ಕೇಂದ್ರ ಗುಪ್ತಚರ ಇಲಾಖೆಯು ಮಂಗಳೂರು, ಬೆಂಗಳೂರು ಮತ್ತು ಮುಂಬಯಿ ಪೊಲೀಸರಿಗೆ ಸೂಚಿಸಲು ನಿರ್ಧರಿಸಿದೆ ಎಂಬ ಮಾಹಿತಿ ಇದೆ.

ಮಂಗಳೂರಿನಲ್ಲಿ 32 ಕೇಸು
ಮಂಗಳೂರಿನಲ್ಲಿ ರವಿ ಪೂಜಾರಿ ವಿರುದ್ಧ ಒಂದು ಕೊಲೆ, 2 ಶೂಟೌಟ್‌ ಮತ್ತು 29 ಬೆದರಿಕೆ ಕರೆ ಸೇರಿದಂತೆ 32 ಪ್ರಕರಣಗಳಿವೆ. ಈ ಪೈಕಿ ವಕೀಲ ನೌಶಾದ್‌ ಕಾಶಿಂಜಿ ಕೊಲೆ, ವಾಸ್‌ಲೇನ್‌ನಲ್ಲಿ ಪ್ರಸಿಡೆನ್ಸಿ ಬಿಲ್ಡರ್ ಕಚೇರಿಯಲ್ಲಿ ಮತ್ತು ಕೂಳೂರಿನ ವರ್ಲ್ಡ್ವೈಡ್‌ ಶಿಪಿಂಗ್‌ ಕಂಪೆನಿಯ ಕಚೇರಿಯಲ್ಲಿ ಶೂಟೌಟ್‌ ಪ್ರಮುಖವಾದವು.

Advertisement

ಶ್ರೀಮಂತರೇ ಟಾರ್ಗೆಟ್‌
ಉದ್ಯಮಿಗಳು, ವೈದ್ಯರು, ಶ್ರೀಮಂತರೇ ರವಿ ಪೂಜಾರಿಯ ಗುರಿ. ಸಹಚರರ ಮೂಲಕ ಆತ ಇಂಥವರ ಫೋನ್‌ ನಂಬರ್‌ ಸಂಗ್ರಹಿಸುತ್ತಿದ್ದ. ಬಳಿಕ ತಾನೇ ಕರೆ ಮಾಡಿ ಹಣಕ್ಕೆ ಬೇಡಿಕೆ ಮಂಡಿಸುತ್ತಿದ್ದ. ಇನ್ನು ಶೂಟೌಟ್‌ ನಡೆಸಿದ ಕಡೆಗಳಲ್ಲಿ ತನ್ನ ವಿಸಿಟಿಂಗ್‌ ಕಾರ್ಡ್‌ ಹಾಕಿಸುತ್ತಿದ್ದ.

ವಕೀಲರ ಕೊಲೆ
ಮಂಗಳೂರಿನಲ್ಲಿ ರವಿ ಪೂಜಾರಿ ನಡೆಸಿದ ಕೊಲೆ ಒಂದು ಮಾತ್ರ. ಅದು ವಕೀಲ ನೌಶಾದ್‌ ಕಾಶಿಂಜಿಯದು. ಕೊಲೆ ಮಾಡಿಸಿದ್ದು ಹಣಕ್ಕಾಗಿ ಅಲ್ಲ. ದಾವೂದ್‌ ಇಬ್ರಾಹಿಂನ ಸಹಚರ ಎನ್ನಲಾದ ರಶೀದ್‌ ಮಲಬಾರಿ ಪರ ವಕಾಲತ್ತು ವಹಿಸಿದ್ದು ಮತ್ತು ಆ ಬಳಿಕ ಮಂಗಳೂರಿನ ಉಳ್ಳಾಲದ ಮುಕ್ಕಚ್ಚೇರಿ, ಚೆಂಬುಗುಡ್ಡೆ,ಮಂಗಳೂರಿನ ಪಾಂಡೇಶ್ವರದ ಸುಭಾಸ್‌ನಗರ ಪ್ರದೇಶಗಳಲ್ಲಿ ನಡೆದ ಶಂಕಿತ ಉಗ್ರರ ಮನೆಗಳಿಗೆ ದಾಳಿ ಪ್ರಕರಣಗಳಲ್ಲಿ ಆರೋಪಿಗಳ ಪರವಾಗಿ ವಕಾಲತ್ತು ವಹಿಸಲು ಮುಂದೆ ಬಂದ ಹಿನ್ನೆಲೆಯಲ್ಲಿ ಕಾಶಿಂಜಿಗೆ ಬೆದರಿಕೆ ಕರೆ ಮಾಡಿದ್ದ. ಆದರೆ ಕಾಶಿಂಜಿ ನಿರ್ಲಕ್ಷಿಸಿದ್ದರು. ಬಳಿಕ ಪೂಜಾರಿ ಸಹಚರರ ಮೂಲಕ ಅವರ ಕೊಲೆ ಮಾಡಿಸಿದ್ದ. ಕೊಲೆಯಾದ ಬಳಿಕ ಅವರ ಮೊಬೈಲ್‌ ಫೋನನ್ನು ಪರಿಶೀಲಿಸಿದಾಗ ಈ ಬೆದರಿಕೆ ಕರೆಗಳ ಬಗ್ಗೆ ಮಾಹಿತಿ ಲಭಿಸಿತ್ತು.
– ಜಯಂತ್‌ ಶೆಟ್ಟಿ, ನಿವೃತ್ತ ಮಂಗಳೂರು ಎಸ್‌ಪಿ

Advertisement

Udayavani is now on Telegram. Click here to join our channel and stay updated with the latest news.

Next