ಬ್ಯಾಡಗಿ: ವೈದ್ಯಕೀಯ ಇಲಾಖೆ ಮಾರಣಾಂತಿಕ ರೋಗದ ಬಗ್ಗೆ ಪ್ರತಿಯೊಬ್ಬರಿಗೂ ಮಾಹಿತಿ ರವಾನಿಸಬೇಕು. ಇದರಲ್ಲಿ ತಾತ್ಸಾರ ಮನೋಭಾವನೆ ತೋರದೆ ಪ್ರತಿಯೊಬ್ಬರೂ ಸಾಮೂಹಿಕ ಹೊಣೆಗಾರಿಕೆ ತೋರುವ ಮೂಲಕ ರೋಗಮುಕ್ತ ಸಮಾಜ ನಿರ್ಮಾಣಕ್ಕೆ ಕೈಜೋಡಿಸುವಂತೆ ಶಾಸಕ ವಿರೂಪಾಕ್ಷಪ್ಪ ಬಳ್ಳಾರಿ ಕರೆ ನೀಡಿದರು.
ಸ್ಥಳೀಯ ಎಸ್‌ಜೆಜೆಎಂ ಕರ್ನಾಟಕ ಪಬ್ಲಿಕ್ ಸ್ಕೂಲ್ನಲ್ಲಿ ನಡೆದ ಮಲೇರಿಯಾ ವಿರೋಧಿ ಮಾಸಾಚರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಮೋಬೈಲ್ ಬಳಕೆ ಹೆಚ್ಚಾದ ಪರಿಣಾಮ ಪ್ರತಿಯೊಂದು ರೋಗದ ಬಗ್ಗೆ ವಿವರಗಳು ಮತ್ತು ಅದಕ್ಕೆ ಪರಿಹಾರದ ಬಗ್ಗೆ ಉಪಯುಕ್ತ ಮಾಹಿತಿಗಳು ದೊರೆಯುತ್ತಿದೆ. ಅದಾಗ್ಯೂ ಕೆಲವೊಂದು ಮಾರಣಾಂತಿಕ ರೋಗಗಳ ಬಗ್ಗೆ ಜನರು ಇಂದಿಗೂ ನಿರ್ಲಕ್ಷ ್ಯ ಮನೋಭಾವನೆ ತೋರುತ್ತಿರುವುದು ವಿಪರ್ಯಾಸ ಎಂದರು.
ನಾವು ವಾಸಿಸುವ ಸುತ್ತಮುತ್ತಲ ಪರಿಸರ ಸ್ವಚ್ಛವಾಗಿಟ್ಟುಕೊಳ್ಳುವ ಮೂಲಕ ಪುರಸಭೆ ಜತೆಗೆ ನಮ್ಮೆಲ್ಲರ ಸಹಭಾಗಿತ್ವ ಹೆಚ್ಚು ಪರಿಣಾಮಕಾರಿಯಾಗಲಿದೆ. ಮಲೇರಿಯಾ, ಡೆಂಘೀ ಸೇರಿದಂತೆ ಇನ್ನಿತರ ಮಾರಣಾಂತಿಕ ರೋಗಗಳಿಂದ ಮುಕ್ತಿ ಹೊಂದಬೇಕು. ಆರೋಗ್ಯ ಸಂರಕ್ಷಣೆ ವಿಚಾರದಲ್ಲಿ ಸಾರ್ವಜನಿಕರ ಸಹಭಾಗಿತ್ವ ಬಹಳ ಮುಖ್ಯವಾಗರಲಿದೆ ಎಂದರು.
ಮಹಾಮಾರಿ ಮಲೇರಿಯಾ, ಡೆಂಘೀ ಸೇರಿದಂತೆ ಇನ್ನಿತರ ರೋಗಗಳ ಬಗ್ಗೆ ಗ್ರಾಮಾಂತರ ಪ್ರದೇಶಗಳ ಶಾಲಾ ಮಕ್ಕಳಲ್ಲಿ ಅರಿವು ಮೂಡಿಸುವುದರಿಂದ ಮಕ್ಕಳು ತಮ್ಮ ಪೋಷಕರಿಗೆ ಹಾಗೂ ನೆರೆ ಹೊರೆಯವರಿಗೆ ಮತ್ತು ಬಂಧುಗಳಿಗೆ ಮಾಹಿತಿ ನೀಡಿ ಜಾಗೃತಿ ಮೂಡಿಸಬಹುದಾಗಿದೆ ಎಂದರು.
ಆರೋಗ್ಯಾಧಿಕಾರಿ ಬಿ.ಆರ್.ಲಮಾಣಿ ಮಾತನಾಡಿ, ಸೊಳ್ಳೆಗಳನ್ನು ಉತ್ಪಾದನೆ ಮಾಡುವ ಸಿಮೆಂಟ್ ತೊಟ್ಟಿ, ಬ್ಯಾರಲ್, ಒಡೆದ ಚಿಪ್ಪು, ಮಡಕೆ, ಪ್ಲಾಸ್ಟಿಕ್ ಇನ್ನಾವುದೇ ತ್ಯಾಜ್ಯ ವಸ್ತುಗಳಲ್ಲಿ ತಿಳಿ ನೀರು ನಿಲ್ಲದಂತೆ ನೋಡಕೊಳ್ಳಬೇಕು. ಇಲ್ಲಾವದಲ್ಲಿ ಅವುಗಳೇ ಸೊಳ್ಳೆ ಉತ್ಪಾದಿಸುವ ತಾಣವಾಗಿ ಪರಿಣಮಿಸಲಿವೆ ಎಂದರು.
ಈ ಸಂದರ್ಭದಲ್ಲಿ ಶಂಕ್ರಣ್ಣ ಮಾತನವರ, ಸುರೇಶ ಅಸಾದಿ, ವಿರೇಂದ್ರ ಶೆಟ್ಟರ, ವಿಷ್ಣುಕಾಂತ ಬೆನ್ನೂರ, ಪುರಸಭೆ ಸದಸ್ಯರಾದ ರಾಮಣ್ಣ ಕೋಡಿಹಳ್ಳಿ, ಫಕ್ಕೀರವ್ವ ಚಲವಾದಿ, ಕಲಾವತಿ ಬಡಿಗೇರ, ಮಾಜಿ ಅಧ್ಯಕ್ಷ ಮುರಿಗೆಪ್ಪ ಶೆಟ್ಟರ, ಜೆ.ಟಿ.ಖಾನಬಸಣ್ಣನವರ, ವೈ.ಎಂ. ಹಿರಿಯಕ್ಕನವರ, ಉಪಪ್ರಾಚಾರ್ಯ ಎಸ್.ಬಿ.ಇಮ್ಮಡಿ ಉಪಸ್ಥಿತರಿದ್ದರು.