ಬಹಳಷ್ಟು ವರ್ಷಗಳ ಸಂಶೋಧನೆ ಬಳಿಕ ಸಾಸಿವೆಯನ್ನು ಹೈಬ್ರಿಡ್ ತಳಿಯಾಗಿ ರೂಪಾಂತರ ಮಾಡಲಾಗಿದೆ. ಜೆನೆಟಿಕ್ ಎಂಜಿನಿಯರಿಂಗ್ ಅಪ್ರೈಸಲ್ ಕಮಿಟಿಯು ಇದಕ್ಕೆ ಅನುಮೋದನೆ ನೀಡಿದೆ. ಹಾಗಾದರೆ ಈ ಹೈಬ್ರಿಡ್ ಸಾಸಿವೆ ಎಂದರೇನು? ಇದನ್ನು ಹೈಬ್ರೀಡೀಕರಣ ಮಾಡುವುದು ಅಷ್ಟು ಸುಲಭವಾಗಿರಲಿಲ್ಲ ಏಕೆ? ಇಲ್ಲಿದೆ ನೋಡಿ ಮಾಹಿತಿ…
ಏನಿದು ವಿದ್ಯಮಾನ? :
ಕಳೆದ ಅ. 18ರಂದು ಕೇಂದ್ರ ಪರಿಸರ ಇಲಾಖೆಯ ಅಡಿಯಲ್ಲಿ ಬರುವ ಜೆನೆಟಿಕ್ ಎಂಜಿನಿಯರಿಂಗ್ ಅಪ್ರೈಸಲ್ ಕಮಿಟಿಯು ಕುಲಾಂತರಿ ಹೈಬ್ರಿಡ್ ಸಾಸಿವೆ ಬಳಕೆ ಕುರಿತು ಮಾಹಿತಿ ಬಿಡುಗಡೆ ಮಾಡಿದೆ. ಇದು ಹೊಲದಲ್ಲಿ ಸಂಪೂರ್ಣ ಪ್ರಯೋಗ ನಡೆಸಿ ಇದನ್ನು ಬಿಡುಗಡೆಗೊಳಿಸಿದೆ.
ಇದರಿಂದ ರೈತರಿಗೆ ಉಪಯೋಗವೇ? :
ವಿಜ್ಞಾನಿಗಳ ಪ್ರಕಾರ ಸಾಸಿವೆಯನ್ನು ಹೈಬ್ರಿಡ್ ರೀತಿಯಲ್ಲಿ ಬೆಳೆಯುವುದರಿಂದ ಹೆಚ್ಚು ಇಳುವರಿಯನ್ನು ಕಾಣಬಹುದಾಗಿದೆ. ಆದರೆ ಈ ವರ್ಷವೇ ರೈತರಿಗೆ ಈ ತಳಿಗಳು ಸಿಗುವುದು ಕಷ್ಟ. ಅಲ್ಲದೆ ಕೇಂದ್ರ ಸರಕಾರವೂ ಕಮಿಟಿ ನೀಡಿರುವ ಸಲಹೆಗಳನ್ನು ಒಪ್ಪಬೇಕಾಗಿದೆ. ಈ ಪ್ರಕ್ರಿಯೆ ಮುಗಿದ ಮೇಲೆ ಸಿಗಬಹುದು.
ಸಾಸಿವೆಯಲ್ಲಿ ಹೈಬ್ರಿಡ್ ಏಕೆ ಕಷ್ಟ? :
ಸಾಸಿವೆಯಲ್ಲಿ ಹೈಬ್ರೀಡೀಕರಣ ಅಷ್ಟು ಸುಲಭದ ಕೆಲಸವಲ್ಲ. ಏಕೆಂದರೆ ಅದರ ಹೂವುಗಳು ಹೆಣ್ಣು (ಪಿಸ್ಟಿಲ್) ಮತ್ತು ಗಂಡು (ಕೇಸರ) ಸಂತಾನೋತ್ಪತ್ತಿ ಅಂಗಗಳನ್ನು ಹೊಂದಿರುತ್ತವೆ. ಇವು ಸಸ್ಯಗಳನ್ನು ಹೆಚ್ಚಾಗಿ ಸ್ವಯಂ ಪರಾಗಸ್ಪರ್ಶ ಮಾಡುತ್ತದೆ. ಒಂದು ಸಸ್ಯದ ಅಂಡಗಳನ್ನು ಮತ್ತೂಂದು ಸಸ್ಯದ ಪರಾಗರೇಣುಗಳಿಂದ ಫಲವತ್ತಾಗಿಸಲು ಸಾಧ್ಯವಿಲ್ಲದ ಕಾರಣ ಇದು ಮಿಶ್ರತಳಿಗಳನ್ನು ಅಭಿವೃದ್ಧಿಪಡಿಸುವ ವ್ಯಾಪ್ತಿಯನ್ನು ಮಿತಿಗೊಳಿಸುತ್ತದೆ. ಅಲ್ಲದೆ ಭಾರತದಲ್ಲಿನ ಸಾಸಿವೆ ತಳಿಗಳು ಸಂಕುಚಿತ ಆನುವಂಶಿಕ ತಳಹದಿಯನ್ನು ಹೊಂದಿವೆ. ಪೂರ್ವ ಐರೋಪ್ಯದ ಹೀರಾ ಮತ್ತು ಡೊನ್ಸ್ಕಾಜಾ ಸೇರಿದಂತೆ ಕೆಲವು ಪ್ರಬೇಧಗಳನ್ನು ಬಳಕೆ ಮಾಡಿಕೊಂಡು ಮಿಶ್ರತಳಿಗಳನ್ನು ಬೆಳೆಸಲಾಗಿದೆ.