ಸುರತ್ಕಲ್: ಸುರತ್ಕಲ್‌ನ ವಿದ್ಯಾದಾಯಿನಿ ಹಾಗೂ ಎನ್‌ಐಟಿಕೆ ಬಳಿ ಹೆದ್ದಾರಿ ಪ್ರಾಧಿಕಾರ ನಿರ್ಮಿಸಿರುವ ಅಂಡರ್ ಪಾಸ್ ಸ್ವಚ್ಛತೆಯ ಸಮಸ್ಯೆ ಹಾಗೂ ಬೆಳಕಿನ ಕೊರತೆಯನ್ನು ಎದುರಿಸುತ್ತಿದೆ. ಇದರಿಂದಾಗಿ ನೂರಾರು ವಿದ್ಯಾರ್ಥಿಗಳು ಭೀತಿಯಿಂದ ಅಂಡರ್ ಪಾಸ್ ಬಳಕೆ ಮಾಡದೆ ಹೆದ್ದಾರಿಯಲ್ಲಿ ಅಪಾಯಕಾರಿಯಾಗಿ ದಾಟುವ ಸ್ಥಿತಿ ಒದಗಿ ಬಂದಿದೆ.
ವಿದ್ಯಾದಾಯಿನಿ ಬಳಿ ಇರುವ ಅಂಡರ್ ಪಾಸ್ ಸಾವಿರಾರು ವಿದ್ಯಾರ್ಥಿಗಳು ಮತ್ತು ಹಿರಿಯರಿಗೆ ಈ ಸೌಲಭ್ಯ ಅಗತ್ಯವಿದ್ದು, ನಿರ್ವಹಣೆ ಮಾಡಬೇಕಿದೆ. ಮಳೆಗಾಲದಲ್ಲಿ ನೀರು ಸರಾಗವಾಗಿ ಹರಿದುಹೋಗಲು ಇಲ್ಲಿ ಚರಂಡಿ ಅದನ್ನು ಶುಚಿಗೊಳಿಸಲಾಗಿಲ್ಲ. ಕಸಕಡ್ಡಿಗಳು ತುಂಬಿ ನೀರು ಹರಿಯುತ್ತಿಲ್ಲ. ಹೀಗಾಗಿ ಮೊಣಕಾಲು ಮಟ್ಟಕ್ಕೆ ನೀರು ನಿಲ್ಲುವುದರಿಂದ ವಿದ್ಯಾರ್ಥಿಗಳು ಸಮವಸ್ತ್ರ ಧರಿಸಿ ಬರಲು ಹಿಂದೇಟು ಹಾಕುತ್ತಾರೆ. ಅಲ್ಲದೆ ನೀರು ಹಾವು, ಹುಳ ಹುಪ್ಪಟೆಗಳ ಕಾಟವಿದೆ. ಅಂಡರ್ ಪಾಸ್‌ನ ಮಧ್ಯ ಭಾಗದಲ್ಲಿ ಬೆಳಕಿನ ಕೊರತೆಯಿರುವುದರಿಂದ ನಡೆಯುವಾಗ ಏನು ಕಾಣದಂತಾಗುತ್ತದೆ. ಸ್ವಚ್ಛತಾ ಕಾರ್ಯ ಕೈಗೊಂಡು ಸೋಲಾರ್ ಲೈಟ್ ಅಳವಡಿಸಿ ಬೆಳಕಿನ ಸೌಲಭ್ಯ ನೀಡಿದಲ್ಲಿ ಹೆದ್ದಾರಿಯಲ್ಲಿ ಅಪಾಯಕಾರಿಯಾಗಿ ವಿದ್ಯಾರ್ಥಿಗಳು ರಸ್ತೆ ದಾಟುವುದನ್ನು ತಡೆಯಬಹುದಾಗಿದೆ ಎನ್ನುತ್ತಾರೆ ವಿದ್ಯಾದಾಯಿನಿ ಪ್ರೌಢಶಾಲೆಯ ಮುಖ್ಯೋಪಾಧ್ಯಾಯ ಬಾಲಚಂದ್ರ ಅವರು.
ಎನ್‌ಐಟಿಕೆ ಬಳಿಯ ಅಂಡರ್‌ಪಾಸ್
ಎನ್‌ಐಟಿಕೆ ಬಳಿ ಇರುವ ಅಂಡರ್‌ಪಾಸ್‌ನಲ್ಲಿಯೂ ಮಳೆ ನೀರು ನಿಂತು ಕೆಸರು, ಕಲ್ಲು ಮಣ್ಣು ತುಂಬಿದೆ. ಇಲ್ಲಿ ಸಣ್ಣಪುಟ್ಟ ವಾಹನಗಳು ಓಡಾಡಲು ಅವಕಾಶವಿದ್ದು, ವಾಹನ ಹೋಗುವ ಸಂದರ್ಭ ಪಾದಚಾರಿಗಳಿಗೆ ಕೆಸರು ನೀರಿನ ಸಿಂಚನವಾಗುತ್ತದೆ. ಹೆದ್ದಾರಿ ಇಲಾಖೆ ಈ ಎರಡು ಸೌಲಭ್ಯವನ್ನು ವಿದ್ಯಾರ್ಥಿಗಳಿಗೆ, ಸಾರ್ವಜನಿಕರಿಗೆ ಸದ್ಬಳಕೆ ಮಾಡಿಕೊಳ್ಳಲು ಅನುವು ಮಾಡಿಕೊಡಬೇಕಿದೆ.
ಸೂಕ್ತ ನಿರ್ವಹಣೆಗೆ ಸೂಚಿಸಲಾಗುವುದು: ವಿದ್ಯಾರ್ಥಿಗಳ ಸುರಕ್ಷೆಗೆ ಒತ್ತು ನೀಡುವುದು ಅಧಿಕಾರಿಗಳ ಜವಾಬ್ದಾರಿಯಾಗಿದೆ. ಅಂಡರ್ ಪಾಸ್‌ನಲ್ಲಿ ಶುಚಿತ್ವ ಹಾಗೂ ಬೆಳಕಿನ ವ್ಯವಸ್ಥೆ ಕಲ್ಪಿಸುವ ಬಗ್ಗೆ ಹೆದ್ದಾರಿ ಪ್ರಾದೇಶಿಕ ಅಧಿಕಾರಿಗಳಿಗೆ ಸೂಕ್ತ ನಿರ್ವಹಣೆ ಮಾಡಲು ಸೂಚಿಸಲಾಗುವುದು. –
ಡಾ| ಭರತ್ ಶೆಟ್ಟಿ ವೈ., ಶಾಸಕರು