ಬೆಂಗಳೂರು: ವಿಜಯನಗರ ಮೆಟ್ರೋ ನಿಲ್ದಾಣ ಮುಂಭಾಗದ ಫುಟ್‌ಪಾತ್‌ನಲ್ಲಿ “ಸುರಂಗ ಮಾರ್ಗದ ಹೈಟೆಕ್ ಬಜಾರ್ ‘ ನಿರ್ಮಾಣ ಮಾಡಲು ನಿರ್ಧರಿಸಲಾಗಿದೆ ಎಂದು ಬಿಬಿಎಂಪಿ ಹೈಕೋರ್ಟ್‌ಗೆ ತಿಳಿಸಿದೆ.
ವಿಜಯನಗರ ಮೆಟ್ರೋ ನಿಲ್ದಾಣ ಮುಂಭಾಗದ ಫುಟ್‌ಪಾತ್ ಜಾಗ ತೆರವುಗೊಳಿಸಲು ನಿರ್ದೇಶಿಸುವಂತೆ ಕೋರಿ ಸಲ್ಲಿಕೆಯಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆಯನ್ನು ಶುಕ್ರವಾರ ನಡೆಸಿದ ಮುಖ್ಯನ್ಯಾಯಮೂರ್ತಿ ಎಸ್.ಕೆ ಮುಖರ್ಜಿ ಹಾಗೂ ಪಿ.ಎಸ್ ದಿನೇಶ್‌ಕುಮಾರ್ ಅವರಿದ್ದ ವಿಭಾಗೀಯ ಪೀಠ ನಡೆಸಿತು.
ಈ ವೇಳೆ ವಾದ ಮಂಡಿಸಿದ ಬಿಬಿಎಂಪಿ ಪರ ವಕೀಲರು, ಫುಟ್‌ಪಾತ್ ತೆರವುಗೊಳಿಸಲು ಪಾಲಿಕೆ ಹಲವು ಕ್ರಮಗಳನ್ನು ಕೈಗೊಳ್ಳಲು ಮುಂದಾಗಿದ್ದು, ವಿಜಯನಗರದ ಮೆಟ್ರೋ ನಿಲ್ದಾಣದ ಮುಂಭಾದ ಸುರಂಗ ಮಾರ್ಗದಲ್ಲಿ ಹೈಟೆಕ್ ಬಜಾರ್ ನಿರ್ಮಾಣ ಮಾಡಿ ವ್ಯಾಪಾರಿಗಳಿಗೆ ಅವಕಾಶ ಮಾಡಿಕೊಡಲಾಗುತ್ತಿದೆ. ಅದೇ ರೀತಿ ಶಿವಾಜಿನಗರ ಬಸ್ ನಿಲ್ದಾಣದಲ್ಲಿಯೂ ಬಜಾರ್ ನಿರ್ಮಿಸಲು ನಿರ್ಧರಿಸಿದ್ದು ಈ ಸಂಬಂಧ ಅಕ್ಟೋಬರ್ 9 ರಂದು 10 ಕೋಟಿ ರೂ. ವೆಚ್ಚದ ಟೆಂಡರ್‌ನ್ನು ಕರೆಯಲಾಗುತ್ತದೆ ಎಂದು ನ್ಯಾಯಪೀಠಕ್ಕೆ ತಿಳಿಸಿದರು.
ಈ ವಾದ ಪರಿಗಣಿಸಿದ ನ್ಯಾಯಪೀಠ, ಮುಂದಿನ ವಿಚಾರಣೆ ವೇಳೆಗೆ ಫುಟ್‌ಪಾತ್ ತೆರವಿಗೆ ಕೈಗೊಳ್ಳುವ ಕ್ರಮಗಳ ಬಗ್ಗೆ ವರದಿ ನೀಡಿ ಎಂದು ಸೂಚಿಸಿ ನಾಲ್ಕು ವಾರಗಳ ಕಾಲ ವಿಚಾರಣೆ ಮುಂದೂಡಿತು. ವಿಜಯನಗರ ಮುಖ್ಯರಸ್ತೆಗೆ ಹೊಂದಿಕೊಂಡಿರುವ ಮೆಟ್ರೋ ನಿಲ್ದಾಣದ ಮುಂಭಾಗದ ಫುಟ್‌ಪಾತ್ ಜಾಗ ಒತ್ತುವರಿ ಮಾಡಿಕೊಂಡಿರುವ ಕೆಲ ವ್ಯಕ್ತಿಗಳು, ಬಟ್ಟೆ ಅಂಗಡಿ, ಹೋಟೆಲ್ ಸೇರಿದಂತೆ ಇನ್ನಿತರೆ 140 ಅಂಗಡಿಗಳನ್ನು ನಡೆಸುತ್ತಿದ್ದಾರೆ.ಇದರಿಂದ ಜನಸಾಮಾನ್ಯರಿಗೆ ಓಡಾಡಲು ಜಾಗವಿಲ್ಲದೆ ಸಂಕಷ್ಟ ಅನುಭವಿಸುವಂತಾಗಿದೆ.
ಅಲ್ಲದೆ ಮೆಟ್ರೋ ರೈಲಿನ ಸಂಚಾರ ಅವಲಂಬಿಸಿರುವ ಬಹುತೇಕರು ಸರ್ವೀಸ್ ರಸ್ತೆಯಲ್ಲಿಯೇ ತಮ್ಮ ಬೈಕ್ ಹಾಗೂ ವಾಹನಗಳನ್ನು ನಿಲ್ಲಿಸುವುದರಿಂದ ಸಂಚಾರ ದಟ್ಟಣೆಯಾಗುತ್ತಿದೆ. ಹೀಗಾಗಿ, ಫುಟ್‌ಪಾತ್ ಮೇಲಿನ ಅಂಗಡಿಗಳನ್ನು ತೆರವುಗೊಳಿಸಲು ಬಿಬಿಎಂಪಿ ಹಾಗೂ ಪಾರ್ಕಿಂಗ್ ವ್ಯವಸ್ಥೆ ಸರಿಪಡಿಸಬೇಕು, ವಾಹನ ನಿಲುಗಡೆಗೆ ಸೂಕ್ತ ಸ್ಥಳ ದೊರಕಿಸಿಕೊಡುವಂತೆ ಸಂಚಾರ ಪೊಲೀಸ್ ವಿಭಾಗಕ್ಕೆ ನಿರ್ದೇಶಿಸುವಂತೆ ಕೋರಿ ದೇಸಾಯಿ ಡಿ. ಹೇಮೇಶ್ ಬಾಬು ಎಂಬುವವರು ಹೈಕೋರ್ಟ್ ಮೆಟ್ಟಿಲೇರಿದ್ದರು.