Advertisement

ಭೂಗತ ವಿದ್ಯುತ್‌ ಕೇಬಲ್‌: ಎಲ್ಲೆಡೆ ಅನುಷ್ಠಾನವಾಗಲಿ 

06:00 AM Jul 12, 2018 | |

ಮಲೆನಾಡು ಭಾಗದಲ್ಲಿ ನೆಲದಡಿ ವಿದ್ಯುತ್‌ ತಂತಿಗಳನ್ನು ಅಳವಡಿಸುವ ಬಗ್ಗೆ ಚಿಂತನೆ ನಡೆಸಲಾಗುವುದು ಎಂದಿದ್ದಾರೆ ಮುಖ್ಯಮಂತ್ರಿ ಕುಮಾರಸ್ವಾಮಿ. ಮಳೆಗಾಲದಲ್ಲಿ ಮರಗಳು ಉರುಳಿ ಬಿದ್ದು ದಿನಗಟ್ಟಲೆ ವಿದ್ಯುತ್‌ ವ್ಯತ್ಯಯವಾಗುವುದು ಮಲೆನಾಡಿನ ಪ್ರತಿ ವರ್ಷದ ಸಮಸ್ಯೆ. ಹಾಗೆಂದು ಇದು ಮಲೆನಾಡಿಗೆ ಮಾತ್ರ ಸೀಮಿತವಾಗಿಲ್ಲ. ಆದರೆ ಮಲೆನಾಡಿನಲ್ಲಿ ಹೆಚ್ಚು ಅಷ್ಟೆ. ಹೀಗಾಗಿ ನೆಲದಡಿಯಲ್ಲಿ ವಿದ್ಯುತ್‌ ತಂತಿಗಳನ್ನು ಅಳವಡಿಸಿ ಈ ಸಮಸ್ಯೆಯನ್ನು ಶಾಶ್ವತವಾಗಿ ಬಗೆಹರಿಸುವುದು ಬಹಳ ಉತ್ತಮವಾದ ಚಿಂತನೆ. ಮಲೆನಾಡಿನಲ್ಲಿ ಮಾತ್ರವಲ್ಲ ಇಡೀ ರಾಜ್ಯದಲ್ಲೇ ಈ ಯೋಜನೆ ಅನುಷ್ಠಾನಗೊಂಡರೆ ಇನ್ನೂ ಉತ್ತಮ. 

Advertisement

ಈ ಮಳೆಗಾಲದಲ್ಲಿ ಇಷ್ಟರ ತನಕ ಮಲೆನಾಡಿನಲ್ಲೇ 700ಕ್ಕೂ ಹೆಚ್ಚು ವಿದ್ಯುತ್‌ ಕಂಬಗಳು ಉರುಳಿ ಬಿದ್ದಿವೆ. ಇಲ್ಲೆಲ್ಲ ಬದಲಿ ಕಂಬ ಹಾಕಲು ವಿದ್ಯುತ್‌ ಮಂಡಳಿ ಹಗಲೂ ರಾತ್ರಿ ದುಡಿಯಬೇಕು ಹಾಗೂ ಅಷ್ಟೇ ಖರ್ಚು ಮಾಡಬೇಕು. ವಿದ್ಯುತ್‌ ಕಂಬಗಳು ನೆಟ್ಟಗಾಗುವ ತನಕ ಮಲೆನಾಡು ವಾಸಿಗಳಿಗೆ ಕತ್ತಲೆವಾಸ. ಅದೇ ರೀತಿ ಉಳಿದೆಡೆಗಳಲ್ಲೂ ಮಳೆಗಾಳಿಗೆ ಮರ ಉರುಳಿಯೋ ಗೆಲ್ಲುಗಳು ಮುರಿದು ಬಿಧ್ದೋ ವಿದ್ಯುತ್‌ ವ್ಯತ್ಯಯವಾಗುವುದು ಮಾಮೂಲು ಸಮಸ್ಯೆ. ಈ ವರ್ಷ ವರುಣನ ಅಬ್ಬರ ಹೆಚ್ಚಾಗಿರುವುದರಿಂದ ಸಮಸ್ಯೆಯೂ ಬಿಗಡಾಯಿಸಿದೆ. 

ಭೂಗತ ವಿದ್ಯುತ್‌ ಕೇಬಲ್‌ಗ‌ಳನ್ನು ಅಳವಡಿಸುವುದು ಬಹಳ ದುಬಾರಿ ಕೆಲಸ ನಿಜ. ಆದರೆ ಇದರಿಂದ ಅನಂತರ ಬಹಳ ಪ್ರಯೋಜನಗಳು ಇವೆ. ಇದು ಹೊಸ ಯೋಜನೆಯೇನೂ ಅಲ್ಲ. ಮುಂದುವರಿದ ದೇಶಗಳಲ್ಲಿ ಎಂದೋ ವಿದ್ಯುತ್‌ ಕೇಬಲ್‌ಗ‌ಳನ್ನು ನೆಲದಡಿ ಹಾಕಿಯಾಗಿದೆ. ನಮ್ಮಲ್ಲೂ ಮುಂಬಯಿ, ದಿಲ್ಲಿ, ಬೆಂಗಳೂರಿನಂತಹ ಮಹಾನಗರಗಳಲ್ಲಿ ಈ ಕೆಲಸ ಆಗಿದೆ. ಆದರೆ ಉಳಿದಂತೆ ವಿದ್ಯುತ್‌ ಪ್ರಸರಣ ಕಂಪೆನಿಗಳು ಏಕೋ ಈ ಕುರಿತು ಹೆಚ್ಚಿನ ಆಸಕ್ತಿ ತೋರಿಸುತ್ತಿಲ್ಲ. ಮಾಮೂಲಿ ಓವರ್‌ಹೆಡ್‌ ಕೇಬಲ್‌ ಅಳವಡಿಸುವುದಕ್ಕಿಂತ 8-10 ಪಟ್ಟು ಹೆಚ್ಚು ಖರ್ಚು ಬೀಳುತ್ತದೆ ಎನ್ನುವುದು ಇದಕ್ಕೆ ಕಾರಣವಾಗಿರಬಹುದು. ಆದರೆ ಇದೇ ವೇಳೆ ಇದರಿಂದ ಆಗುವ ಲಾಭಗಳು ಮತ್ತು ಪ್ರಯೋಜನಗಳನ್ನು ಕೂಡಾ ಪರಿಗಣಿಸಬೇಕು. ಇದು ಏನು ಎಂದು ತಿಳಿಯಬೇಕಾದರೆ ಪ್ರಧಾನಿ ಮೋದಿಯವರ ಚುನಾವಣಾ ಕ್ಷೇತ್ರ ವಾರಣಾಸಿಯತ್ತ ಒಮ್ಮೆ ನೋಡಬೇಕು. ಪುರಾತನ ನಗರಿಯಾಗಿರುವ ವಾರಣಾಸಿಯಲ್ಲಿ ಎಲ್ಲೆಂದರಲ್ಲಿ ವಿದ್ಯುತ್‌ ತಂತಿಗಳು ಜೋತು ಬಿದ್ದ ದೃಶ್ಯ ಈಗ ಕಾಣಸಿಗುವುದಿಲ್ಲ. ಮೋದಿಯ ಮುತುವರ್ಜಿಯಿಂದಾಗಿ ಅಲ್ಲಿ ವಿದ್ಯುತ್‌ ಕೇಬಲ್‌ಗ‌ಳನ್ನು ಭೂಗತವಾಗಿ ಅಳವಡಿಸಲಾಗಿದೆ. ಸಂಪೂರ್ಣ ಭೂಗತ ಕೇಬಲ್‌ ಅಳವಡಿಕೆಯಾಗಿರುವ ಮೊದಲ ನಗರಿ ಎಂಬ ಹಿರಿಮೆಗೂ ವಾರಣಾಸಿ ಪಾತ್ರವಾಗಿದೆ. ಅಲ್ಲೀಗ ವಿದ್ಯುತ್‌ ಸೋರಿಕೆ ಶೇ. 45ರಷ್ಟು ಕಡಿಮೆಯಾಗಿದೆ. ದೇಶದ ದೊಡ್ಡ ಸಮಸ್ಯೆಯೇ ಪ್ರಸರಣದಲ್ಲಾಗುವ ವಿದ್ಯುತ್‌ ಸೋರಿಕೆ.ಉತ್ಪಾದನೆಯಾದ ಶೇ. 25ರಷ್ಟು ವಿದ್ಯುತ್‌ ಪ್ರಸರಣ ಸಂದರ್ಭದಲ್ಲಿ ಸೋರಿಕೆಯಾಗುತ್ತಿದೆ. ಈ ಸಮಸ್ಯೆಗೆ ಶಾಶ್ವತವಾಗಿ ವಿದಾಯ ಹೇಳಲು ಸಾಧ್ಯವಿದೆ. 

 ಈಗಾಗಲೇ ಪ್ರತಿ ಹಳ್ಳಿಗೆ ವಿದ್ಯುತ್‌ ಸಂಪರ್ಕ ನೀಡಿದ ಸಾಧನೆಯನ್ನು ಕೇಂದ್ರ ಮಾಡಿದೆ. ಇದರ ಜತೆಗೆ ಪ್ರತಿ ಊರಿನಲ್ಲೂ ಭೂಗತ ವಿದ್ಯುತ್‌ ಕೇಬಲ್‌ ಅಳವಡಿಸುವ ಯೋಜನೆಯನ್ನು ಕೈಗೆತ್ತಿಕೊಂಡರೆ ವಿದ್ಯುತ್‌ ಕ್ಷೇತ್ರದಲ್ಲಿ ನಾವು ಗಮನಾರ್ಹವಾದ ಸಾಧನೆಯನ್ನು ಮಾಡಿದ್ದೇವೆ ಎಂದು ಹೇಳಿಕೊಳ್ಳಬಹುದು. ಹೀಗಾಗಿ ರಾಜ್ಯ ಸರಕಾರ ಈ ಯೋಜನೆಯನ್ನು ಜಾರಿಗೊಳಿಸುವಾಗ ವಿಶಾಲ ವ್ಯಾಪ್ತಿಯಲ್ಲಿ ಚಿಂತಿಸಬೇಕು. 

Advertisement

Udayavani is now on Telegram. Click here to join our channel and stay updated with the latest news.

Next