Advertisement

470 ವಿಮಾನ ಖರೀದಿ; ಟಾಟಾ ಸನ್ಸ್‌ ಮಹತ್ವದ ನಿರ್ಧಾರ

11:20 PM Feb 14, 2023 | Team Udayavani |

ನವದೆಹಲಿ/ವಾಷಿಂಗ್ಟನ್‌: ಟಾಟಾ ಸನ್ಸ್‌ ಮಾಲೀಕತ್ವದಲ್ಲಿ ಇರುವ ಏರ್‌ ಇಂಡಿಯಾ ಏರ್‌ಬಸ್‌, ಬೋಯಿಂಗ್‌ನಿಂದ ಒಟ್ಟು 470 ವಿಮಾನಗಳನ್ನು ಖರೀದಿ ಮಾಡಲಿದೆ.

Advertisement

ಬೆಂಗಳೂರಿನಲ್ಲಿ ಏರೋ ಇಂಡಿಯಾ ಪ್ರದರ್ಶನ ನಡೆಯುತ್ತಿರುವಾಗಲೇ ಟಾಟಾ ಸನ್ಸ್‌ ಅಧ್ಯಕ್ಷ ಎನ್‌.ಚಂದ್ರಶೇಖರನ್‌ ಏರ್‌ಬಸ್‌ನಿಂದ 250 ವಿಮಾನಗಳನ್ನು ಖರೀದಿ ಮಾಡುವ ಬಗ್ಗೆ ಘೋಷಣೆ ಮಾಡಿದ್ದಾರೆ. ಇದಾದ ಬೆನ್ನಲ್ಲೇ ವಾಷಿಂಗ್ಟನ್‌ನಲ್ಲಿ ಮಾತನಾಡಿದ ಅಮೆರಿಕ ಅಧ್ಯಕ್ಷ ಜೋ ಬೈಡೆನ್‌ 220 ವಿಮಾನಗಳನ್ನು ಏರ್‌ ಇಂಡಿಯಾ ಖರೀದಿಸಲಿದೆ.

ಈ ಒಪ್ಪಂದದಿಂದಾಗಿ ಭಾರತ ಮತ್ತು ಅಮೆರಿಕ ನಡುವಿನ ಬಾಂಧವ್ಯ ವೃದ್ಧಿಯಾಗಲಿದೆ ಎಂದು ಹರ್ಷ ವ್ಯಕ್ತಪಡಿಸಿದ್ದಾರೆ.

ಬೆಂಗಳೂರಿನಿಂದ ವರ್ಚುವಲ್‌ ಆಗಿ ಮಾತನಾಡಿದ ಟಾಟಾ ಸನ್ಸ್‌ ಅಧ್ಯಕ್ಷ ಎನ್‌.ಚಂದ್ರಶೇಖರ್‌ 250 ವಿಮಾನಗಳ ಪೈಕಿ ಎ350 ಮಾದರಿಯ ವೈಡ್‌ ಬಾಡಿ (ದೀರ್ಘ‌ ಶ್ರೇಣಿ) ಏರ್‌ಕ್ರಾಫ್ಟ್ 40, 210 ನ್ಯಾರೋ ಬಾಡಿ ಏರ್‌ಕ್ರಾಫ್ಟ್ (ಕಿರಿದಾಗಿರುವ) ವಿಮಾನಗಳನ್ನು ಖರೀದಿಸಲಾಗುತ್ತದೆ. ಈ ಬಗ್ಗೆ ಏರ್‌ಬಸ್‌ ಜತೆಗೆ ಒಪ್ಪಂದಕ್ಕೆ ಸಹಿ ಹಾಕಲಾಗಿದೆ ಎಂದರು.

ಪ್ರಧಾನಿ ಶ್ಲಾಘನೆ:
ಈ ಸಂದರ್ಭದಲ್ಲಿ ಉಪಸ್ಥಿತರಿದ್ದ ಪ್ರಧಾನಿ ನರೇಂದ್ರ ಮೋದಿ ಒಪ್ಪಂದದ ಬಗ್ಗೆ ಹರ್ಷ ವ್ಯಕ್ತಪಡಿಸಿದ್ದಾರೆ. ನಾಗರಿಕ ವಿಮಾನಯಾನ ಕ್ಷೇತ್ರದಲ್ಲಿ ಭಾರತ ಜಗತ್ತಿನ ಮೂರನೇ ಅತಿ ದೊಡ್ಡ ಮಾರುಕಟ್ಟೆಯಾಗಲಿದೆ. ಮುಂದಿನ 15 ವರ್ಷಗಳಲ್ಲಿ ದೇಶದ ವಿಮಾನಯಾನ ಕ್ಷೇತ್ರ ವಿಸ್ತಾರವಾಗಲಿದ್ದು, ಆ ಸಂದರ್ಭದಲ್ಲಿ ಇನ್ನೂ 2 ಸಾವಿರ ವಿಮಾನಗಳು ಬೇಕಾಗಲಿವೆ. ನಾಗರಿಕ ವಿಮಾನಯಾನ ಕ್ಷೇತ್ರ ದೇಶದ ಬೆಳವಣಿಗೆಯಲ್ಲಿ ಪ್ರಧಾನ ಪಾತ್ರ ವಹಿಸಿದೆ ಎಂದರು. ಫ್ರಾನ್ಸ್‌ ಅಧ್ಯಕ್ಷ ಎಮಾನ್ಯುವೆಲ್‌ ಮಾಕ್ರನ್‌, ಕೇಂದ್ರ ಕೈಗಾರಿಕೆ ಮತ್ತು ವಾಣಿಜ್ಯ ಸಚಿವ ಪಿಯೂಷ್‌ ಗೋಯಲ್‌, ಟಾಟಾ ಸನ್ಸ್‌ನ ಮಾಜಿ ಅಧ್ಯಕ್ಷ ರತನ್‌ ಟಾಟಾ ಈ ಸಂದರ್ಭದಲ್ಲಿ ಇದ್ದರು.

Advertisement

ಬೋಯಿಂಗ್‌ನಿಂದ:
ವಾಷಿಂಗ್ಟನ್‌ನಲ್ಲಿ ಮಾತನಾಡಿದ ಅಮೆರಿಕ ಅಧ್ಯಕ್ಷ ಜೋ ಬೈಡೆನ್‌ ಬೋಯಿಂಗ್‌ ಕೂಡ ಏರ್‌ ಇಂಡಿಯಾಕ್ಕೆ 220 ವಿಮಾನಗಳನ್ನು ಪೂರೈಕೆ ಮಾಡಲಿದೆ. ಒಪ್ಪಂದದ ಅನ್ವಯ ಬೋಯಿಂಗ್‌ ಏರ್‌ ಇಂಡಿಯಾಕ್ಕೆ ಹೆಚ್ಚುವರಿಯಾಗಿ 70 ವಿಮಾನಗಳನ್ನು ನೀಡುವ ಅವಕಾಶ ಕೂಡ ಇರಲಿದೆ. ಅಂದರೆ ಒಟ್ಟು 290 ವಿಮಾನಗಳ ವರೆಗೆ ಟಾಟಾ ಸನ್ಸ್‌ ಮಾಲೀಕತ್ವದ ಕಂಪನಿಗೆ ಸಿಗಲಿದೆ. 190 ಬೋಯಿಂಗ್‌ 737 ಮಾಕ್ಸ್‌, 20 ಬೋಯಿಂಗ್‌ 787, 10 ಬೋಯಿಂಗ್‌ 777ಎಕ್ಸ್‌ ವಿಮಾನಗಳು ಲಭ್ಯವಾಗಲಿವೆ.

17 ವರ್ಷಗಳ ಬಳಿಕ:
ಏರ್‌ ಇಂಡಿಯಾ 17 ವರ್ಷಗಳ ಬಳಿಕ ಮತ್ತು ಟಾಟಾ ಸನ್ಸ್‌ ಮಾಲೀಕತ್ವಕ್ಕೆ ಒಳಪಟ್ಟ ಬಳಿಕ ಮೊದಲ ಬಾರಿಗೆ ಇಷ್ಟು ದೊಡ್ಡ ಪ್ರಮಾಣದಲ್ಲಿ ವಿಮಾನಗಳ ಖರೀದಿ ಮಾಡುತ್ತಿದೆ. 2005ರಲ್ಲಿ 111 ವಿಮಾನಗಳನ್ನು (ಬೋಯಿಂಗ್‌ನಿಂದ 68, ಏರ್‌ಬಸ್‌ನಿಂದ 43) ಖರೀದಿ ಮಾಡಿತ್ತು. ಹೊಸ ಖರೀದಿಯ ಮೌಲ್ಯ 100 ಬಿಲಿಯನ್‌ ಡಾಲರ್‌ಗಿಂತ ಅಧಿಕ ಎಂದು ಹೇಳಲಾಗಿದೆ.

ಈ ಒಪ್ಪಂದದಿಂದ ಯು.ಕೆ.ಗೆ ನೆರವಾಗಲಿದೆ. ಉತ್ತಮ ವೇತನ ನೀಡುವ ಉದ್ಯೋಗ ಸೃಷ್ಟಿಗೆ ಕೂಡ ಈ ಒಪ್ಪಂದ ಕಾರಣವಾಗಲಿದೆ. ಜತೆಗೆ ನಮ್ಮ ಅರ್ಥ ವ್ಯವಸ್ಥೆ ಬೆಳೆಯಲೂ ನೆರವಾಗಲಿದೆ.
-ರಿಷಿ ಸುನಕ್‌, ಬ್ರಿಟನ್‌ ಪ್ರಧಾನಿ

Advertisement

Udayavani is now on Telegram. Click here to join our channel and stay updated with the latest news.

Next