ನವದೆಹಲಿ/ ಬೀಜಿಂಗ್: ಕಟ್ಟುನಿಟ್ಟಿನ ಕೋವಿಡ್ ಲಾಕ್ ಡೌನ್ ನಿಂದ ಚೀನದ ಜನರು ತತ್ತರಿಸಿ ಹೋಗಿದ್ದಾರೆ. ಅಲ್ಲಿನ ಸರ್ಕಾರ ಕಠಿಣ ನಿಯಮಗಳನ್ನು ಜಾರಿಗೆ ತಂದು ಜನಸಾಮಾನ್ಯರ ಬದುಕನ್ನು ದುಸ್ತರಗೊಳಿಸಿದೆ. ಜನ ದಿನನಿತ್ಯದ ಸಾಮಾಗ್ರಿಗಳನ್ನು ಪಡೆಯಲು ಪರದಾಟ ಮಾಡುವಂಥ ಸ್ಥಿತಿ ಚೀನದಲ್ಲಿ ನಿರ್ಮಾಣಗೊಂಡಿದೆ.
ಇತ್ತೀಚೆಗೆ ಕೋವಿಡ್ ಪ್ರಕರಣಗಳು ಹೆಚ್ಚಾಗಿ ಪತ್ತೆಯಾಗಿರುವುದಕ್ಕೆ ಚೀನದ ಹೆನಾನ್ ಪ್ರಾಂತ್ಯದ ರಾಜಧಾನಿ ಝೆಂಗ್ಝೌ ನಲ್ಲಿ ಇರುವ ಐಫೋನ್ ತಯಾರಿಕಾ ಘಟಕದಿಂದ ಹತ್ತು ಮಂದಿ ಕಾರ್ಮಿಕರು ಪರಾರಿಯಾಗುತ್ತಿರುವ ದೃಶ್ಯ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು.
ಚೀನದ ಜನರು ಅನ್ನ – ಉಪಹಾರದ ಸಾಮಾಗ್ರಿಯನ್ನು ಪಡೆಯಲು ಹೊರಗೆ ಹೋಗುವುದಕ್ಕೂ ಕೂಡ ಪರದಾಟ ನಡೆಸಬೇಕು. ಕಠಿಣ ಲಾಕ್ ಡೌನ್ ನಿಯಮಗಳಿಂದ ಜನರ ಮನೆಯಲ್ಲಿಯೇ ಬಂಧಿಯಾಗಿದ್ದಾರೆ.
ಸರ್ಕಾರದ ಈ ನಿಯಮದಿಂದ ಬೇಸತ್ತು ಹೋದ ಟಿಕ್ ಟಾಕ್ ವಿಡಿಯೋ ಮಾಡಿ ಪ್ರತಿಭಟನೆ ನಡೆಸುತ್ತಿದ್ದಾರೆ. ದಿಗ್ಗಜ ಸಂಗೀತ ಸಂಯೋಜಕ ಬಪ್ಪಿ ಲಹರಿ ಅವರ ʼಜಿಮ್ಮಿ ಜಿಮ್ಮಿʼ ಹಾಡನ್ನು ನೀವು ಕೇಳಿರಬಹುದು. 1982 ರಲ್ಲಿ ಬಂದ ʼಡಿಸ್ಕೋ ಡ್ಯಾನ್ಸರ್ʼ ಚಿತ್ರದ ಸೂಪರ್ ಹಿಟ್ ಹಾಡಿದು. ಈ ಹಾಡು ಈಗ ಚೀನಿಯರ ಪ್ರತಿಭಟನೆಯ ಕೂಗಿಗೆ ಧ್ವನಿಯಾಗಿದೆ.
ಚೀನದ ಜನಪ್ರಿಯ ಡೌಯಿನ್ ( ಟಿಕ್ ಟಾಕ್) ಆ್ಯಪ್ ನಲ್ಲಿ ಜನರು ಸರ್ಕಾರದ ವಿರುದ್ಧ ಪ್ರತಿಭಟನೆಯ ವಿಡಿಯೋಗಳನ್ನು ಮನೆಯಲ್ಲಿಯೇ ಕುಳಿತು ಹಾಕುತ್ತಿದ್ದಾರೆ. ಚೀನದ ಮ್ಯಾಂಡರಿನ್ ಭಾಷೆಯಲ್ಲಿ “ಜೀ ಮಿ, ಜೀ ಮಿ” ಹಾಡನ್ನು ಹಾಕಿ ನಟಿಸಿ ಪ್ರತಿಭಟಿಸಿದ್ದಾರೆ. ಈ ಹಾಡಿನ ಅರ್ಥ ಚೀನ ಭಾಷೆಯಲ್ಲಿ “‘ನನಗೆ ಅನ್ನ ಕೊಡು, ಅನ್ನ ಕೊಡು’ಎಂದು ಬರುತ್ತದೆ.
ಜನರು ತಟ್ಟೆ, ಪಾತ್ರೆ ಹಿಡಿದುಕೊಂಡು ಅಮ್ಮನ ಬಳಿ “ಜೀ ಮಿ, ಜೀ ಮಿ” ( “‘ನನಗೆ ಅನ್ನ ಕೊಡು, ಅನ್ನ ಕೊಡು) ಎಂದು ಹೇಳುತ್ತಿರುವ ವಿಡಿಯೋಗಳು ವೈರಲ್ ಆಗಿದೆ. ಚೀನದಲ್ಲಿ ʼಶೂನ್ಯ ಕೋವಿಡ್ ನೀತಿʼ ಜಾರಿಯಲ್ಲಿದೆ. ಅಲ್ಲಲಿ ಕ್ವಾರಂಟೈನ್ ಸೆಂಟರ್ ಗಳನ್ನು ತೆರೆಯಲಾಗಿದೆ.