Advertisement

ಕೋಮು ಗಲಭೆ ಯಾರ ಆಡಳಿತದಲ್ಲಿ ಹೆಚ್ಚಾಗಿತ್ತು… ಜೆಪಿ ನಡ್ಡಾ ಬಹಿರಂಗ ಪತ್ರದಲ್ಲಿ ಏನಿದೆ?

03:02 PM Apr 18, 2022 | Team Udayavani |

ಭಾರತದಲ್ಲಿ ಕೋಮು ಗಲಭೆ ಹೆಚ್ಚಳವಾಗುತ್ತಿರುವ ಬಗ್ಗೆ 13 ವಿಪಕ್ಷಗಳು ಎತ್ತಿರುವ ಆಕ್ಷೇಪಕ್ಕೆ ಭಾರತೀಯ ಜನತಾ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಸೋಮವಾರ (ಏಪ್ರಿಲ್ 18) ಬಹಿರಂಗ ಪತ್ರವನ್ನು ಬಿಡುಗಡೆಗೊಳಿಸಿದ್ದು, ಕಾಂಗ್ರೆಸ್ ಆಡಳಿತಾವಧಿಯಲ್ಲಿಯೇ ಅತೀ ಹೆಚ್ಚು ಕೋಮುಗಲಭೆ ನಡೆದಿರುವುದಾಗಿ ತಿರುಗೇಟು ನೀಡಿದ್ದಾರೆ.

Advertisement

ಇದನ್ನೂ ಓದಿ:ಬಾಲಕಿಯರೊಂದಿಗೆ ಅಶ್ಲೀಲವಾಗಿ ವರ್ತಿಸಿ ಲೈಂಗಿಕ ಕ್ರಿಯೆಗೆ ಪ್ರಚೋದನೆ ನೀಡುತ್ತಿದ್ದವ ಜೈಲಿಗೆ

ಜೆಪಿ ನಡ್ಡಾ ಹೇಳಿದ್ದೇನು?

ಕಾಂಗ್ರೆಸ್ ಆಡಳಿತಾವಧಿಯಲ್ಲಿ ನಡೆದ ಕೋಮು ಗಲಭೆಯ ಪಟ್ಟಿ ಬಹಳ ದೊಡ್ಡದಿದೆ. 1969ರಲ್ಲಿ ಗುಜರಾತ್ ನಲ್ಲಿ, 1980ರಲ್ಲಿ ಮೊರಾದಾಬಾದ್, 1984ರಲ್ಲಿ ಭಿವಂಡಿ, 1987ರಲ್ಲಿ ಮೀರತ್ ನಲ್ಲಿ ಕೋಮುಗಲಭೆ ನಡೆದಿತ್ತು. ಅದೇ ರೀತಿ 1980ರ ದಶಕದಲ್ಲಿ ಕಾಶ್ಮೀರ ಕಣಿವೆಯಲ್ಲಿ ಹಿಂದೂಗಳ ವಿರುದ್ಧ ಹಿಂಸಾಚಾರ, 1989ರಲ್ಲಿ ಭಾಗಲ್ಪುರ್, 1994ರಲ್ಲಿ ಹುಬ್ಬಳ್ಳಿಯಲ್ಲಿ ಕೋಮು ದಳ್ಳುರಿ ನಡೆದಿತ್ತು ಎಂದು ಜೆಪಿ ನಡ್ಡಾ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

ಅದೇ ರೀತಿ ಕಾಂಗ್ರೆಸ್ ಆಡಳಿತಾವಧಿಯಲ್ಲಿ ದಲಿತರು ಮತ್ತು ಬುಡಕಟ್ಟು ಜನಾಂಗದವರ ವಿರುದ್ಧ ಪೈಶಾಚಿಕ ಹತ್ಯಾಕಾಂಡ ನಡೆದಿತ್ತು. ಲೋಕಸಭಾ ಚುನಾವಣೆಯಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಅವರನ್ನು ಸೋಲಿಸಿದ್ದು ಕೂಡಾ ಇದೇ ಕಾಂಗ್ರೆಸ್ ಪಕ್ಷ ಎಂದು ಆರೋಪಿಸಿದ್ದಾರೆ.

Advertisement

ವಿರೋಧ ಪಕ್ಷಗಳು ಕ್ಷುಲ್ಲಕ, ಒಡೆದಾಳುವ ಮತ್ತು ವೋಟ್ ಬ್ಯಾಂಕ್ ರಾಜಕೀಯ ಮಾಡುತ್ತಿರುವುದಾಗಿ ಜೆಪಿ ನಡ್ಡಾ ಪತ್ರದಲ್ಲಿ ದೂರಿದ್ದಾರೆ. ಜನರಿಂದ ತಿರಸ್ಕರಿಸಲ್ಪಟ್ಟ ವಿಪಕ್ಷಗಳು ದೇಶದ ಅಭಿವೃದ್ಧಿ ರಾಜಕಾರಣವನ್ನು ಸ್ವೀಕರಿಸಲು ಮುಂದಾಗಬೇಕಾಗಿದೆ ಎಂದು ನಡ್ಡಾ ಮನವಿ ಮಾಡಿಕೊಂಡಿದ್ದಾರೆ.

ಇಂದು ಎಲ್ಲಾ ಧರ್ಮದ ಜನರು, ಎಲ್ಲಾ ವಯೋಮಾನದವರು, ಎಲ್ಲಾ ವರ್ಗದ ಜನರು ಬಡತನವನ್ನು ನಿವಾರಿಸಿ ಭಾರತವನ್ನು ಹೊಸ ಅಭಿವೃದ್ಧಿಯ ಪಥದತ್ತ ಕೊಂಡೊಯ್ಯಲು ಒಗ್ಗೂಡಿದ್ದಾರೆ. ಈ ನಿಟ್ಟಿನಲ್ಲಿ ವಿಪಕ್ಷಗಳು ಕೂಡಾ ಅಭಿವೃದ್ಧಿಯ ರಾಜಕಾರಣವನ್ನು ಸ್ವೀಕರಿಸಬೇಕು ಎಂದು ಈ ಸಂದರ್ಭದಲ್ಲಿ ಒತ್ತಾಯಿಸುವುದಾಗಿ ಜೆಪಿ ನಡ್ಡಾ ಪತ್ರದಲ್ಲಿ ತಿಳಿಸಿದ್ದಾರೆ.

ವಿರೋಧ ಪಕ್ಷಗಳ ಆರೋಪವೇನು?

ದೇಶದಲ್ಲಿ ಕೋಮು ಗಲಭೆ ಹೆಚ್ಚಳವಾಗುತ್ತಿದ್ದರೂ ಕೂಡಾ ಪ್ರಧಾನಿ ನರೇಂದ್ರ ಮೋದಿ ಅವರು ಮೌನಕ್ಕೆ ಶರಣಾಗಿದ್ದಾರೆ ಎಂದು ವಿರೋಧ ಪಕ್ಷಗಳು ಆರೋಪಿಸಿದ್ದವು. ಸಮಾಜದಲ್ಲಿ ಅಶಾಂತಿ ಮೂಡಿಸಲು, ಕೋಮುಗಲಭೆ ಸೃಷ್ಟಿಸಲಾಗುತ್ತಿದೆ. ಆದರೆ ಪ್ರಧಾನಿ ಮೋದಿ ಅವರ ಮೌನದಿಂದ ನಮಗೆ ಆಘಾತವಾಗಿದೆ ಎಂದು ವಿಪಕ್ಷಗಳು ಹೇಳಿದ್ದವು. ಪ್ರಧಾನಿ ಅವರ ಮೌನದಿಂದಾಗಿ ಇಂತಹ ಗಲಭೆಕೋರರು ತಮಗೆ ದೊರೆತ ಉತ್ತಮ ಅವಕಾಶ ಎಂದು ಆನಂದಿಸುತ್ತಿದ್ದಾರೆ ಎಂಬುದಾಗಿ ವಿಪಕ್ಷಗಳು ಆರೋಪಿಸಿವೆ.

ದೇಶದ ಹಲವು ರಾಜ್ಯಗಳಲ್ಲಿ ನಡೆದ ಕೋಮುಗಲಭೆ ಘಟನೆಯನ್ನು ತೀವ್ರವಾಗಿ ಖಂಡಿಸುವುದಾಗಿ ವಿರೋಧಪಕ್ಷಗಳು ತಿಳಿಸಿವೆ. ದ್ವೇಷದ ಭಾಷಣಗಳ ಪ್ರಚೋದನೆಯಿಂದಾಗಿ ಪರಿಣಾಮ ಧಾರ್ಮಿಕ ಮೆರವಣಿಗಳ ಸಂದರ್ಭದಲ್ಲಿ ಕೋಮು ಹಿಂಸಾಚಾರಕ್ಕೆ ಕಾರಣವಾಗಿರುವುದಾಗಿ ವಿಪಕ್ಷಗಳು ಜಂಟಿಯಾಗಿ ಬಿಡುಗಡೆ ಮಾಡಿದ್ದ ಪ್ರಕಟಣೆಯಲ್ಲಿ ದೂರಿದ್ದವು.

Advertisement

Udayavani is now on Telegram. Click here to join our channel and stay updated with the latest news.

Next