Advertisement

Central Government ಪಿಎಂ ವಿಶ್ವಕರ್ಮ ಯೋಜನೆ ವ್ಯಾಪ್ತಿಗೆ ಉಡುಪಿ, ದ.ಕ.

12:20 AM Nov 18, 2023 | Team Udayavani |

ಉಡುಪಿ: ಕೇಂದ್ರ ಸರಕಾರದ ಪಿಎಂ ವಿಶ್ವಕರ್ಮ ಯೋಜನೆಯನ್ನು ಉಡುಪಿ, ದ.ಕ. ಸೇರಿದಂತೆ ರಾಜ್ಯದ ಎಲ್ಲ ಜಿಲ್ಲೆಗಳಿಗೂ ಈಗ ವಿಸ್ತರಿಸಲಾಗಿದೆ. ಮೊದಲ ಹಂತದಲ್ಲಿ 18 ಜಿಲ್ಲೆಗಳನ್ನು ಮಾತ್ರ ಆಯ್ಕೆ ಮಾಡಲಾಗಿದ್ದು, ಈಗ ಉಳಿದ 13 ಜಿಲ್ಲೆಗಳನ್ನು ಯೋಜನೆಯೊಳಗೆ ತರಲಾಗಿದೆ.

Advertisement

ಅವಿಭಜಿತದ ದಕ್ಷಿಣ ಕನ್ನಡ ಜಿಲ್ಲೆ ಸಹಿತ ಉತ್ತರ ಕನ್ನಡ, ಕೊಡಗು, ಶಿವಮೊಗ್ಗ, ಹಾಸನ, ಚಿಕ್ಕಮಗಳೂರು, ಧಾರವಾಡ, ರಾಮನಗರ, ಮಂಡ್ಯ, ಮೈಸೂರು, ಚಾಮರಾಜನಗರ, ವಿಜಯನಗರ ಜಿಲ್ಲೆಗಳನ್ನು ಮೊದಲ ಹಂತದಲ್ಲಿ ಯೋಜನೆಯಡಿ ಆಯ್ಕೆ ಮಾಡಿಕೊಂಡಿರಲಿಲ್ಲ. ಎಲ್ಲ ಕುಶಲ ಕರ್ಮಿಗಳಿಗೂ ಅವಕಾಶ ಮಾಡಿ ಕೊಡುವ ನಿಟ್ಟಿನಲ್ಲಿ ಕೇಂದ್ರ ಸರಕಾರ ಯೋಜನೆಯನ್ನು ಎಲ್ಲ ಜಿಲ್ಲೆಗಳಿಗೂ ವಿಸ್ತರಿಸಿದೆ.

ಪಾರಂಪರಿಕವಾಗಿ ನಡೆದು ಕೊಂಡು ಬರುತ್ತಿರುವ ಸುಮಾರು 18 ವೃತ್ತಿಗಳವರಿಗೆ ಕೌಶಲ ಮತ್ತು ಆರ್ಥಿಕ ಬಲ ನೀಡಿ ಅವರ ಜೀವನ ಮಟ್ಟ ಸುಧಾರಿಸುವ ಜತೆಗೆ ದೇಶದ ಆರ್ಥಿಕ ಪ್ರಗತಿಗೆ ಅನುಕೂಲವಾಗುವಂತೆ ಕೇಂದ್ರ ಸರಕಾರ ಯೋಜನೆ ರೂಪಿಸಿ ಅನುಷ್ಠಾನ ಮಾಡಿದೆ. ಇದರಲ್ಲಿ ಬಡಗಿಗಳು, ದೋಣಿ ತಯಾರಕರು, ಕುಲುಮೆ ಕೆಲಸಗಾರರು, ಕಮ್ಮಾರರು, ಬುಟ್ಟಿ-ಚಾಪೆ, ಬಾಸ್ಕೆಟ್‌ ನೇಯ್ಗೆಗಾರರು, ಅಕ್ಕಸಾಲಿಗರು, ಅಗಸರು, ಶಿಲ್ಪಿಗಳು, ಸಾಂಪ್ರದಾಯಿಕ ಗೊಂಬೆ ತಯಾರಕರು, ಕುಂಬಾರರು, ಚಮ್ಮಾರರು, ದರ್ಜಿಗಳು, ಕೇಶ ವಿನ್ಯಾಸಕರು, ಗಾರೆಗಾರರು, ಮಾಲೆ ತಯಾರಕರು, ಮೀನುಗಾರಿಕೆ ಬಲೆ ತಯಾರಕರನ್ನು ಸೇರಿಸಲಾಗಿದೆ.

ಪ್ರಕ್ರಿಯೆ ಹೇಗೆ?
ಆನ್‌ಲೈನ್‌ ಮೂಲಕ ಅರ್ಜಿ ಯನ್ನು ಆಹ್ವಾನಿಸಿದೆ. ಗ್ರಾ.ಪಂ. ಅಥವಾ ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯ ಸಾಮಾನ್ಯ ಸೇವಾ ಕೇಂದ್ರದ ಮೂಲಕ ಅರ್ಹ ಫ‌ಲಾನುಭವಿಗಳು ಅರ್ಜಿ ಸಲ್ಲಿಸ ಬಹುದು. ಸಲ್ಲಿಸಿದ ಅರ್ಜಿ ಯು ಗ್ರಾ.ಪಂ. ಅಧ್ಯಕ್ಷರು/ನಗರ ಸ್ಥಳೀಯ ಸಂಸ್ಥೆಯ ಅಧ್ಯಕ್ಷರ ಲಾಗಿನ್‌ಗೆ ಹೋಗುತ್ತದೆ. 18 ವೃತ್ತಿಯಲ್ಲಿ ಯಾವುದಾದರೂ ಒಂದರಲ್ಲಿ ಅವರು ಬರಲಿದೆಯೇ ಎಂಬುದನ್ನು ಖಚಿತಪಡಿಸಬೇಕು, ಅವರ ಕುಟುಂಬದಲ್ಲಿ ಒಬ್ಬರು ಮಾತ್ರ ಅರ್ಜಿ ಸಲ್ಲಿಸಿರುವ ಬಗ್ಗೆ ಖಚಿತಪಡಿಸಬೇಕು ಮತ್ತು ಆ ಕುಟುಂಬದಲ್ಲಿ ಯಾರು ಸರಕಾರಿ ನೌಕರರು ಇಲ್ಲದಿರುವ ಬಗ್ಗೆ ಅಧ್ಯಕ್ಷರು ಪರಿಶೀಲಸಿ ಅಂಗೀಕರಿಸಬೇಕು. ಅನಂತರ ಜಿಲ್ಲಾಧಿಕಾರಿ ನೇತೃತ್ವದ ಜಿಲ್ಲಾಮಟ್ಟದ ಸಮಿತಿಗೆ ಬರಲಿದೆ. ಅಲ್ಲಿ, ಪರಿಶೀಲಿಸಿ ಅಂಗೀಕರಿಸಿ ರಾಜ್ಯ ಸಮಿತಿಗೆ ಕಳುಹಿಸಲಾಗುತ್ತದೆ. ರಾಜ್ಯಮಟ್ಟದ ಸಮಿತಿ ಅಂತಿಮಗೊಳಿಸಲಿದೆ.

ಮಾಹಿತಿಗಾಗಿ ಇಲ್ಲಿಗೆ ಸಂಪರ್ಕಿಸಿ
ಪಿಎಂ ವಿಶ್ವಕರ್ಮ ಯೋಜನೆಗೆ ಉಡುಪಿ, ದ.ಕ. ಜಿಲ್ಲೆಯ ಆಯ್ಕೆ ಮಾಡಲಾಗಿದೆ. ಅರ್ಜಿ ಸಲ್ಲಿಸುವ ಪ್ರಕ್ರಿಯೆ ಆರಂಭವಾಗಲಿದೆ. ಇಲ್ಲಿ ಸ್ಥಳೀಯಾಡಳಿತದ ಅಧ್ಯಕ್ಷರ ಪಾತ್ರವು ಬಹುಮುಖ್ಯವಾಗಿರುತ್ತದೆ. ಮಾಹಿತಿಗೆ ದ.ಕ. ಜಿಲ್ಲಾ ಕೈಗಾರಿಕೆ ಕೇಂದ್ರದ ದೂ: 08242225071 ಹಾಗೂ ಉಡುಪಿ ಜಿಲ್ಲಾ ಕೈಗಾರಿಕೆ ಕೇಂದ್ರದ ದೂ: 08202575650 ಸಂಪರ್ಕಿಸಬಹುದು ಎಂದು ಉಭಯ ಜಿಲ್ಲಾ ಕೈಗಾರಿಕೆ ಕೇಂದ್ರದ ಜಂಟಿ ನಿರ್ದೇಶಕರಾದ ಗೋಕುಲ್‌ದಾಸ್‌ ನಾಯಕ್‌(ದ.ಕ.), ನಾಗರಾಜ ವಿ. ನಾಯಕ್‌(ಉಡುಪಿ) ತಿಳಿಸಿದ್ದಾರೆ.

Advertisement

ಯೋಜನೆಯ ಉಪಯೋಗ
ನಿರ್ದಿಷ್ಟ ವೃತ್ತಿ ಮಾಡುತ್ತಿರುವವರಿಗೆ ಪ್ರಾರಂಭಿಕವಾಗಿ ಒಂದು ವಾರದ (40 ಗಂಟೆ) ಪ್ರಾಥಮಿಕ ಕೌಶಲ ತರಬೇತಿ ನೀಡಲಾಗುತ್ತದೆ. ಆಸಕ್ತರಿಗೆ ಎರಡು ವಾರಗಳ ತರಬೇತಿ ಪಡೆಯಲು ಅವಕಾಶವಿದೆ. ತರಬೇತಿ ಅವಧಿಯಲ್ಲಿ ದಿನಕ್ಕೆ 500 ರೂ.ಗಳಂತೆ ಭತ್ತೆ, ಅನಂತರ ವೃತ್ತಿಗೆ ಸಂಬಂಧಿಸಿದ ಸುಧಾರಿತ ಸಾಮಗ್ರಿ ಖರೀದಿಗೆ 15,000 ರೂ.ಗಳ ಅನುದಾನ ನೀಡಲಾಗುತ್ತದೆ. ತರಬೇತಿ ಮುಗಿಸಿದ ಬಳಿಕ ಸರಕಾರವು ಮೊದಲ ಹಂತದಲ್ಲಿ ಒಂದು ಲಕ್ಷ ರೂ. ಹಾಗೂ ಅದನ್ನು ಮರುಪಾವತಿಸಿದ ಬಳಿಕ ಎರಡನೇ ಹಂತದಲ್ಲಿ 2 ಲಕ್ಷ ರೂ. ಸಾಲವನ್ನು ಶೇ. 5ರ ಕಡಿಮೆ ಬಡ್ಡಿದರಲ್ಲಿ ಬ್ಯಾಂಕ್‌ಗಳ ಮೂಲಕ ಒದಗಿಸಲಿದೆ.

Advertisement

Udayavani is now on Telegram. Click here to join our channel and stay updated with the latest news.

Next