Advertisement

ಭಾರತದ ಕ್ರಿಕೆಟ್‌ ಕಲಿಗಳೆದುರು ಬಾಂಗ್ಲಾ ಹುಲಿಗಳು

10:57 AM Feb 09, 2020 | sudhir |

ಪೊಚೆಫ್ ಸ್ಟ್ರೂಮ್ (ದಕ್ಷಿಣ ಆಫ್ರಿಕಾ): ಹದಿಮೂರನೇ ಅಂಡರ್‌-19 ವಿಶ್ವಕಪ್‌ ಕ್ರಿಕೆಟ್‌ ಫೈನಲ್‌ ಹೋರಾಟಕ್ಕೆ ಕ್ಷಣಗಣನೆ ಆರಂಭಗೊಂಡಿದೆ. ಆದರಿದು “ಏಶ್ಯ ಕಪ್‌ ಫೈನಲ್‌’ ಏನೋ ಎಂಬಂತೆ ಭಾಸವಾಗುತ್ತಿದೆ. ರವಿವಾರ ದಕ್ಷಿಣ ಆಫ್ರಿಕಾದ ಪೊಚೆಫ್ ಸ್ಟ್ರೂಮ್ನಲ್ಲಿ ನಡೆಯುವ ಪ್ರಶಸ್ತಿ ಕಾಳಗದಲ್ಲಿ ಹಾಲಿ ಚಾಂಪಿಯನ್‌ ಖ್ಯಾತಿಯ ಭಾರತ ಹಾಗೂ ನೆರೆಯ ಬಾಂಗ್ಲಾದೇಶ ಎದುರಾಗುತ್ತಿರುವುದೇ ಇದಕ್ಕೆ ಕಾರಣ!

Advertisement

ಭಾರತಕ್ಕೆ ಇದು 7ನೇ ಫೈನಲ್‌. ಅತೀ ಹೆಚ್ಚು 4 ಸಲ ಚಾಂಪಿಯನ್‌ ಆಗಿರುವ ಭಾರತ, 2 ಸಲ ಎಡವಿದೆ. ಬಾಂಗ್ಲಾಕ್ಕೆ ಇದು ಮೊದಲ ಫೈನಲ್‌ ಸಂಭ್ರಮ. ಸಹಜವಾಗಿಯೇ ಇತಿಹಾಸ ನಿರ್ಮಿಸುವ ತವಕ. ಆದರೆ ಇದು ಸುಲಭವಲ್ಲ ಎಂಬುದು ಮೇಲ್ನೋಟಕ್ಕೆ ಸ್ಪಷ್ಟ. ಎದುರಾಳಿಯನ್ನು ಭಾರತ ಲಘುವಾಗಿ ಪರಿಗಣಿಸದೇ ಹೋದರೆ “ಕಪ್‌ ನಮ್ಮದೇ’ ಆಗುವುದರಲ್ಲಿ ಅನುಮಾನವಿಲ್ಲ.

ಸಾಮಾನ್ಯವಾಗಿ ಇಂಥ ಬಲಾಡ್ಯ ಹಾಗೂ ಅಚ್ಚರಿಯ ಫೈನಲ್‌ ತಂಡದ ನಡುವಿನ ಕದನ ಏರುಪೇರಿನ ಫ‌ಲಿತಾಂಶಕ್ಕೆ ಸಾಕ್ಷಿಯಾಗುತ್ತದೆ. ಇದಕ್ಕೆ 1983ರ ಪ್ರುಡೆನ್ಶಿಯಲ್‌ ವಿಶ್ವಕಪ್‌ ಪಂದ್ಯಾವಳಿಯ ನಿದರ್ಶನವೊಂದೇ ಸಾಕು. ಅಂದು ಹ್ಯಾಟ್ರಿಕ್‌ ಹಾದಿಯಲ್ಲಿದ್ದ ವೆಸ್ಟ್‌ ಇಂಡೀಸಿಗೆ ಮೊದಲ ಸಲ ಫೈನಲಿಗೆ ಲಗ್ಗೆ ಇರಿಸಿದ ಭಾರತ ಮರ್ಮಾಘಾತವಿಕ್ಕಿತ್ತು. ರವಿವಾರದ ಪ್ರಶಸ್ತಿ ಸಮರದ ವೇಳೆ ಪ್ರಿಯಂ ಗರ್ಗ್‌ ಬಳಗ ಇಂಥದೊಂದು ಎಚ್ಚರಿಕೆಯಲ್ಲಿ ಇರುವುದು ಕ್ಷೇಮ.

ಭಾರತದ ಅಜೇಯ ಓಟ
ಕೂಟದುದ್ದಕ್ಕೂ ಅಮೋಘ ಪ್ರದರ್ಶನ ಕಾಯ್ದುಕೊಂಡ ಭಾರತ ಮಂಗಳವಾರದ ಸೆಮಿಫೈನಲ್‌ನಲ್ಲಿ ಪಾಕಿಸ್ಥಾನವನ್ನು 10 ವಿಕೆಟ್‌ಗಳಿಂದ ಕೆಡವಿ ಫೈನಲ್‌ಗೆ ಲಗ್ಗೆ ಇರಿಸಿತ್ತು. ಇನ್ನೊಂದೆಡೆ ಬಾಂಗ್ಲಾದೇಶ 6 ವಿಕೆಟ್‌ಗಳಿಂದ ನ್ಯೂಜಿಲ್ಯಾಂಡನ್ನು ಪರಾಭವಗೊಳಿಸಿತ್ತು.

ಕೂಟದ ಅಜೇಯ ತಂಡವಾಗಿರುವ ಭಾರತ ಕೆಲವು ಮಂದಿ ಅಸಾಮಾನ್ಯ ಕ್ರಿಕೆಟಿಗರಿಂದ ಹೆಚ್ಚು ಬಲಾಡ್ಯವಾಗಿದೆ. ಎಡಗೈ ಆರಂಭಕಾರ ಯಶಸ್ವಿ ಜೈಸ್ವಾಲ್‌, ಸ್ಪಿನ್ನರ್‌ಗಳಾದ ರವಿ ಬಿಶ್ನೋಯ್‌, ಅಥರ್ವ ಅಂಕೋಲೆಕರ್‌, ಪೇಸ್‌ ಬೌಲರ್‌ ಕಾರ್ತಿಕ್‌ ತ್ಯಾಗಿ ಇವರಲ್ಲಿ ಪ್ರಮುಖರು. ಭಾರತದ ಈ ಓಟದಲ್ಲಿ ಉಳಿದ ಆಟಗಾರರ ಕೊಡುಗೆಯೂ ಗಮನಾರ್ಹ. ಇವರೆಲ್ಲರ ಒಟ್ಟು ಪ್ರಯತ್ನ ರವಿವಾರ ಹರಿಣಗಳ ನಾಡಿನಲ್ಲಿ ಗೆಲುವಿನ ರೂಪದಲ್ಲಿ ಅನಾವರಣಗೊಳ್ಳಬೇಕಿದೆ.

Advertisement

ಒತ್ತಡಮುಕ್ತ ಆಟ
ಬಾಂಗ್ಲಾದೇಶ ಪಾಲಿಗೆ ಇದೊಂದು “ಬಿಗ್‌ ಗೇಮ್‌’. 2018ರ ಕ್ವಾರ್ಟರ್‌ ಫೈನಲ್‌ನಲ್ಲಿ ಎಡವಿದ ಬಳಿಕ ಬಾಂಗ್ಲಾದ ಕಿರಿಯರ ಕ್ರಿಕೆಟ್‌ ಪ್ರಗತಿಯ ಪಥದಲ್ಲಿ ಸಾಗಿದೆ. ಒತ್ತಡ ಬಿಟ್ಟು ಬಿಂದಾಸ್‌ ಆಗಿ ಆಡಿದರೆ ಅದು ಭಾರತಕ್ಕೆ ಸವಾಲಾಗುವುದರಲ್ಲಿ ಅನುಮಾನವಿಲ್ಲ.

“ಯಾವುದೇ ಅನಗತ್ಯ ಒತ್ತಡವನ್ನು ನಾವು ಹೇರಿಕೊಳ್ಳಲು ಬಯಸುವುದಿಲ್ಲ. ಭಾರತ ಅತ್ಯುತ್ತಮ ತಂಡ. ನಾವೂ ಮೂರೂ ವಿಭಾಗಗಳಲ್ಲಿ “ಎ’ ದರ್ಜೆಯ ಪ್ರದರ್ಶನ ನೀಡಬೇಕಿದೆ. ನಿಮ್ಮ ಬೆಂಬಲ ನಮಗಿರಲಿ ಎಂದು ಅಭಿಮಾನಿಗಳಲ್ಲಿ ವಿನಂತಿಸಿಕೊಂಡಿದ್ದೇನೆ’ ಎಂಬುದಾಗಿ ಬಾಂಗ್ಲಾ ತಂಡದ ನಾಯಕ ಅಕºರ್‌ ಅಲಿ ಹೇಳಿದ್ದಾರೆ.

ಹೊಸ ಹುರುಪಿನ ತಂಡ
ಭಾರತ ಈ ಪಂದ್ಯಾವಳಿಯಲ್ಲಿ “ಫ್ರೆಶ್‌ ಮುಖ’ಗಳನ್ನು ಹೊಂದಿರುವ ಏಕೈಕ ತಂಡವೆಂಬುದು ವಿಶೇಷ. ಉಳಿದ ಕೆಲವು ತಂಡಗಳಲ್ಲಿ ಹಿಂದಿನ ಸಲದ ಕೂಟದಲ್ಲಿ ಆಡಿದ ಕೆಲವು ಆಟಗಾರರನ್ನು ಕಾಣಬಹುದಾಗಿದೆ. ಈ ಪಂದ್ಯಾವಳಿಗೆ ಆಗಮಿಸುವ ಮುನ್ನ ಭಾರತದ ಕಿರಿಯ ಕ್ರಿಕೆಟಿಗರು ವಿಶ್ವದ ವಿವಿಧ ಭಾಗಗಳಲ್ಲಿ 30ಕ್ಕೂ ಹೆಚ್ಚು ಪಂದ್ಯಗಳನ್ನಾಡಿ ಅನುಭವ ಗಳಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next