Advertisement

Under-19 World Cup: ಸಹಾರಣ್‌-ಸಚಿನ್‌ ಗೆಲುವಿನ ಜತೆಯಾಟ ಭಾರತದ ಯುವ ಪಡೆ ಫೈನಲ್‌ಗೆ ಲಗ್ಗೆ

10:38 PM Feb 06, 2024 | Team Udayavani |

ಬೆನೋನಿ (ದಕ್ಷಿಣ ಆಫ್ರಿಕಾ): ನಾಯಕ ಉದಯ್‌ ಸಹಾರಣ್‌ ಮತ್ತು ಕೆಳ ಸರದಿಯ ಬ್ಯಾಟರ್‌ ಸಚಿನ್‌ ದಾಸ್‌ ದಾಖಲಿಸಿದ 172 ರನ್‌ ಜತೆಯಾಟದ ಸಾಹಸದಿಂದ ಹಾಲಿ ಚಾಂಪಿಯನ್‌ ಭಾರತ ಅಂಡರ್‌-19 ವಿಶ್ವಕಪ್‌ ಫೈನಲ್‌ಗೆ ಲಗ್ಗೆ ಹಾಕಿದೆ. ಮಂಗಳವಾರದ ರೋಚಕ ಹೋರಾಟದಲ್ಲಿ ಭಾರತ ಆತಿಥೇಯ ದಕ್ಷಿಣ ಆಫ್ರಿಕಾವನ್ನು 2 ವಿಕೆಟ್‌ಗಳಿಂದ ಮಣಿಸಿತು.

Advertisement

ಈಗಾಗಲೇ ದಾಖಲೆ 5 ಸಲ ಕಪ್‌ ಎತ್ತಿರುವ ಭಾರತ, ರವಿವಾರದ ಫೈನಲ್‌ನಲ್ಲಿ ಆಸ್ಟ್ರೇಲಿಯ ಅಥವಾ ಪಾಕಿ ಸ್ಥಾನವನ್ನು ಎದುರಿಸಲಿದೆ. ಇತ್ತಂಡಗಳ ನಡುವಿನ 2ನೇ ಸೆಮಿಫೈನಲ್‌ ಗುರು ವಾರ ನಡೆಯಲಿದೆ.

ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ದಕ್ಷಿಣ ಆಫ್ರಿಕಾ 7 ವಿಕೆಟಿಗೆ 244 ರನ್‌ ಮಾಡಿದರೆ, ಭಾರತ 48.5 ಓವರ್‌ಗಳಲ್ಲಿ 8 ವಿಕೆಟಿಗೆ 248 ರನ್‌ ಬಾರಿಸಿತು.

172 ರನ್‌ ಜತೆಯಾಟ
32 ರನ್ನಿಗೆ 4 ವಿಕೆಟ್‌ ಬಿದ್ದ ಸ್ಥಿತಿಯಿಂದ ಭಾರತವನ್ನು ಎತ್ತಿ ನಿಲ್ಲಿಸಿದ ಸಾಹಸಗಾಥೆಗೆ ಸಹಾರಣ್‌-ಸಚಿನ್‌ ಸಾಕ್ಷಿಯಾದರು. 31 ಓವರ್‌ಗಳನ್ನು ಎದುರಿಸಿ ನಿಂತ ಈ ಜೋಡಿ 5ನೇ ವಿಕೆಟಿಗೆ 172 ರನ್‌ ಪೇರಿಸಿ ಗೆಲುವಿನ ರೂವಾರಿ ಎನಿಸಿತು.

ಕ್ರೀಸ್‌ ಇಳಿದವರೇ ಅತ್ಯಂತ ಆಕ್ರ ಮಣಕಾರಿಯಾಗಿ ಬ್ಯಾಟ್‌ ಬೀಸಿದ ಸಚಿನ್‌ ದಾಸ್‌ 95 ಎಸೆತಗಳಿಂದ ಸರ್ವಾಧಿಕ 96 ರನ್‌ ಬಾರಿಸಿದರು (11 ಬೌಂಡರಿ, 1 ಸಿಕ್ಸರ್‌). ಕೇವಲ 4 ರನ್ನಿನಿಂದ ಶತಕ ವಂಚಿತರಾದರು. ಕಪ್ತಾನನ ಆಟವಾಡಿದ ಉದಯ್‌ ಸಹಾರಣ್‌ ಅವರದು 81 ರನ್‌ ಕೊಡುಗೆ. 124 ಎಸೆತ ಎದುರಿಸಿ ನಿಂತ ಅವರು 6 ಬೌಂಡರಿ ಹೊಡೆದರು. ದಾಸ್‌ಗೆ ಅಮೋಘ ಬೆಂಬಲ ನೀಡಿದ ಅವರು ಕೊನೆಯ ಕ್ಷಣದಲ್ಲಿ ರನೌಟಾಗಿ ನಿರ್ಗಮಿಸಿದರು.

Advertisement

ಮೊದಲ ಎಸೆತಕ್ಕೇ ವಿಕೆಟ್‌!
ಭಾರತದ ಆರಂಭ ಅತ್ಯಂತ ಆಘಾತಕಾರಿಯಾಗಿತ್ತು. ಈ ಕೂಟದ ಯಶಸ್ವಿ ಬೌಲರ್‌ ಕ್ವೇನ ಎಂಫ‌ಕ ಇನ್ನಿಂಗ್ಸ್‌ನ ಮೊದಲ ಎಸೆತದಲ್ಲೇ ಆದರ್ಶ್‌ ಸಿಂಗ್‌ ವಿಕೆಟ್‌ ಹಾರಿಸಿ ಅಪಾಯದ ಸೂಚನೆ ರವಾನಿಸಿದರು. ಬಳಿಕ ಟ್ರಿಸ್ಟನ್‌ ಲೂಸ್‌ ಅವಳಿ ಆಘಾತವಿಕ್ಕಿದರು. ಬ್ಯಾಟಿಂಗ್‌ ಹೀರೋ ಮುಶೀರ್‌ ಖಾನ್‌ (4), ಆರಂಭಕಾರ ಅರ್ಶಿನ್‌ ಕುಲಕರ್ಣಿ (4) ಮತ್ತು ಪ್ರಿಯಾಂಶು ಮೋಲಿಯ (5) ಅವರಿಗೆ ಪೆವಿಲಿಯನ್‌ ಹಾದಿ ತೋರಿಸಿದರು. 32ಕ್ಕೆ 4 ವಿಕೆಟ್‌ ಕಳೆದುಕೊಂಡ ಭಾರತ ಚಿಂತಾಜನಕ ಸ್ಥಿತಿ ತಲುಪಿತು.
ಮುಂದಿನದು ಉದಯ್‌ ಸಹಾರಣ್‌ – ಸಚಿನ್‌ ದಾಸ್‌ ಜೋಡಿಯ ಯಶೋಗಾಥೆ.

ಆ. ಆಫ್ರಿಕಾ ಸವಾಲಿನ ಮೊತ್ತ
ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ದಕ್ಷಿಣ ಆಫ್ರಿಕಾ ಸವಾಲಿನ ಮೊತ್ತ ದಾಖಲಿಸು ವಲ್ಲಿ ಯಶಸ್ವಿಯಾಯಿತು. 2014ರ ಚಾಂಪಿಯನ್‌ ಆಗಿರುವ ಹರಿಣಗಳ ಪಡೆ, ಈ ಕೂಟದಲ್ಲಿ ಭಾರತದ ವಿರುದ್ಧ 200 ಪ್ಲಸ್‌ ರನ್‌ ಪೇರಿಸಿದ ಮೊದಲ ತಂಡವೆಂಬ ಹೆಗ್ಗಳಿಕೆಗೆ ಪಾತ್ರವಾಯಿತು. ಆದರೆ ಆತಿಥೇಯರ ಸರದಿಯಲ್ಲಿ ಮಿಂಚಿದ್ದು ಇಬ್ಬರು ಮಾತ್ರ. ಓಪನರ್‌ ಕಂ ಕೀಪರ್‌ ಲುವಾನ್‌ ಡ್ರಿ ಪ್ರಿಟೋರಿಯಸ್‌ ಮತ್ತು ಮಧ್ಯಮ ಕ್ರಮಾಂಕದ ಬ್ಯಾಟರ್‌ ರಿಚರ್ಡ್‌ ಸಿಲೆಟ್‌ಸ್ವೇನ್‌. ಇಬ್ಬರಿಂದಲೂ ಅರ್ಧ ಶತಕ ದಾಖಲಾಯಿತು.

ಆರಂಭಕಾರ ಪ್ರಿಟೋರಿಯಸ್‌ ಸರ್ವಾಧಿಕ 76 ರನ್‌ ಬಾರಿಸಿದರು. 102 ಎಸೆತಗಳ ಈ ಇನ್ನಿಂಗ್ಸ್‌ ನಲ್ಲಿ 6 ಫೋರ್‌ ಹಾಗೂ 3 ಸಿಕ್ಸರ್‌ ಸೇರಿತ್ತು. ಸಿಲೆಟ್‌ಸ್ವೇನ್‌ ಭರ್ತಿ 100 ಎಸೆತ ಎದುರಿಸಿ 64 ರನ್‌ ಹೊಡೆದರು. ಸಿಡಿಸಿದ್ದು 4 ಬೌಂಡರಿ ಹಾಗೂ 2 ಸಿಕ್ಸರ್‌. ಇವರಿಬ್ಬರನ್ನು ಹೊರತುಪಡಿಸಿದರೆ 24 ರನ್‌ ಮಾಡಿದ ನಾಯಕ ಜುವಾನ್‌ ಜೇಮ್ಸ್‌ ಅವರದೇ ಹೆಚ್ಚಿನ ಗಳಿಕೆ. ಟ್ರಿಸ್ಟನ್‌ ಲೂಸ್‌ ಕ್ಷಿಪ್ರಗತಿಯಲ್ಲಿ 23 ರನ್‌ ಮಾಡಿ ಅಜೇಯರಾಗಿ ಉಳಿದರು.

9 ಓವರ್‌ ಮುಗಿಯುವಷ್ಟರಲ್ಲಿ ಸ್ಟೀವ್‌ ಸ್ಟಾಕ್‌ (14) ಮತ್ತು ಡೇವಿಡ್‌ ಟೀಗರ್‌ (0) ಅವರನ್ನು ಕಳೆದು ಕೊಂಡ ಬಳಿಕ ಜತೆಗೂಡಿದ ಪ್ರಿಟೋರಿ ಯಸ್‌-ಸಿಲೆಟ್‌ಸ್ವೇನ್‌ 3ನೇ ವಿಕೆಟಿಗೆ 72 ರನ್‌ ಪೇರಿಸಿ ತಂಡವನ್ನು ಆಧರಿಸಿ ದರು. ಆದರೆ ಇದಕ್ಕಾಗಿ 22 ಓವರ್‌ ತೆಗೆದುಕೊಂಡರು. ರನ್‌ರೇಟ್‌ ಐದರ ಒಳಗೇ ಉಳಿಯುವಂತೆ ನೋಡಿ ಕೊಳ್ಳುವಲ್ಲಿ ಭಾರತದ ಬೌಲರ್ ಯಶಸ್ವಿಯಾಗಿದ್ದರು.

ಪೇಸ್‌ ಬೌಲರ್‌ ರಾಜ್‌ ಲಿಂಬಾನಿ (60ಕ್ಕೆ 3) ದಕ್ಷಿಣ ಆಫ್ರಿಕಾಕ್ಕೆ ಆರಂಭಿಕ ಆಘಾತ ನೀಡುವಲ್ಲಿ ಧಾರಾಳ ಯಶಸ್ಸು ಕಂಡರು. ಎಡಗೈ ಸ್ಪಿನ್ನರ್‌ಗಳಾದ ಸೌಮ್ಯ ಪಾಂಡೆ (38ಕ್ಕೆ 1) ಮತ್ತು ಮುಶೀರ್‌ ಖಾನ್‌ (43ಕ್ಕೆ 2), ಆಫ್ ಸ್ಪಿನ್ನರ್‌ ಪ್ರಿಯಾಂಶು ಮೋಲಿಯ (7 ಓವರ್‌, 25 ರನ್‌) ಹರಿಣಗಳಿಗೆ ಕಡಿವಾಣ ಹಾಕಿದರು.

ಸಂಕ್ಷಿಪ್ತ ಸ್ಕೋರ್‌: ದಕ್ಷಿಣ ಆಫ್ರಿಕಾ ಯು19-7 ವಿಕೆಟಿಗೆ 244 (ಪ್ರಿಟೋರಿಯಸ್‌ 76, ಸಿಲೆಟ್‌ಸ್ವೇನ್‌ 64, ಜುವಾನ್‌ ಜೇಮ್ಸ್‌ 24, ಟ್ರಿಸ್ಟನ್‌ ಲೂಸ್‌ ಔಟಾಗದೆ 23, ಒಲಿವರ್‌ ವೈಟ್‌ಹೆಡ್‌ 22, ರಾಜ್‌ ಲಿಂಬಾನಿ 60ಕ್ಕೆ 3, ಮುಶೀರ್‌ ಖಾನ್‌ 43ಕ್ಕೆ 2). ಭಾರತ ಯು19-48.5 ಓವರ್‌ಗಳಲ್ಲಿ 8 ವಿಕೆಟಿಗೆ 248 (ದಾಸ್‌ 96, ಸಹಾರಣ್‌ 81, ಎಂಫ‌ಕ 32ಕ್ಕೆ 3, ಲೂಸ್‌ 37ಕ್ಕೆ 3).

ಪಂದ್ಯಶ್ರೇಷ್ಠ: ಉದಯ್‌ ಸಹಾರಣ್‌.

Advertisement

Udayavani is now on Telegram. Click here to join our channel and stay updated with the latest news.

Next