Advertisement

ನೆಚ್ಚಿನ ಇಂಗ್ಲೆಂಡ್‌ ವಿರುದ್ಧ ಅಚ್ಚರಿಯ ಅಫ್ಘಾನಿಸ್ಥಾನ

11:09 PM Jan 31, 2022 | Team Udayavani |

ನಾರ್ತ್‌ ಸೌಂಡ್‌ (ಆಂಟಿಗಾ): ವೀಸಾ ಸಮಸ್ಯೆಯಿಂದಾಗಿ ವಿಳಂಬವಾಗಿ ಆಗಮಿಸಿದ ಅಫ್ಘಾನಿಸ್ಥಾನವೀಗ ಅಂಡರ್‌-19 ವಿಶ್ವಕಪ್‌ ಸೆಮಿಫೈನಲ್‌ಗೆ ಅಚ್ಚರಿಯ ಪ್ರವೇಶ ಪಡೆದಿದೆ.

Advertisement

ಮಂಗಳವಾರ ಇಲ್ಲಿನ “ಸರ್‌ ವಿವಿಯನ್‌ ರಿಚರ್ಡ್ಸ್‌ ಸ್ಟೇಡಿಯಂ’ನಲ್ಲಿ ನಡೆಯುವ ಮೊದಲ ಉಪಾಂತ್ಯದಲ್ಲಿ ನೆಚ್ಚಿನ ಇಂಗ್ಲೆಂಡ್‌ ತಂಡವನ್ನು ಎದುರಿಸಲಿದೆ.

ಅಲ್ಪ ಮೊತ್ತದ ಕ್ವಾರ್ಟರ್‌ ಫೈನಲ್‌ನಲ್ಲಿ ಶ್ರೀಲಂಕಾವನ್ನು ರೋಚಕ ಹೋರಾಟದಲ್ಲಿ ಮಣಿಸುವ ಮೂಲಕ ಆಫ್ಘಾನಿಸ್ಥಾನ ಕೂಟದ ದೊಡ್ಡದೊಂದು ಏರುಪೇರಿಗೆ ಕಾರಣವಾಗಿತ್ತು. ಹೀಗಾಗಿ ಫ‌ುಲ್‌ ಜೋಶ್‌ನಲ್ಲಿದೆ. ಇಂಗ್ಲೆಂಡನ್ನೂ ಒಂದು ಕೈ ನೋಡಿಯೇ ಬಿಡುವ ಉಮೇದು ಅಫ್ಘಾನ್‌ ಹುಡುಗರದು.

ಗೆದ್ದರೆ ಮೊದಲ ಫೈನಲ್‌
ಇಲ್ಲಿ ಗೆದ್ದರೆ ಅಫ್ಘಾನಿಸ್ಥಾನ ಇತಿಹಾಸ ವೊಂದನ್ನು ನಿರ್ಮಿಸಲಿದ್ದು, ಮೊದಲ ಸಲ ಅಂಡರ್‌-19 ವಿಶ್ವಕಪ್‌ ಪಂದ್ಯಾವಳಿಯ ಫೈನಲ್‌ ತಲುಪಲಿದೆ. ಇದಕ್ಕೂ ಮುನ್ನ ನ್ಯೂಜಿಲ್ಯಾಂಡ್‌ ಆತಿಥ್ಯದ 2018ರ ವಿಶ್ವಕಪ್‌ ಕೂಟದಲ್ಲೂ ಅಫ್ಘಾನ್‌ ಸೆಮಿಫೈನಲ್‌ ತನಕ ಸಾಗಿತ್ತು.

ಗ್ರೂಪ್‌ ಹಂತದ ಎಲ್ಲ 3 ಪಂದ್ಯಗಳನ್ನು ಗೆದ್ದ ಕಾರಣಕ್ಕಾಗಿಯೂ ಅಫ್ಘಾನಿಸ್ಥಾನವನ್ನು ಗಂಭೀರವಾಗಿಯೇ ಪರಿಗಣಿಸಬೇಕಿದೆ. ಬಿಲಾಲ್‌ ಸಮಿ, ನವೀದ್‌ ಜದ್ರಾನ್‌, ನೂರ್‌ ಅಹ್ಮದ್‌, ಇಝರುಲ್ಲಾಕ್‌ ನವೀದ್‌ ಅವರನ್ನೊಳಗೊಂಡ ಅಫ್ಘಾನ್‌ ಬೌಲಿಂಗ್‌ ಸರದಿ ಹೆಚ್ಚು ವೈವಿಧ್ಯಮಯ. ಈ ಕಾರಣಕ್ಕಾಗಿಯೇ ಲಂಕೆಗೆ 135 ರನ್‌ ಟಾರ್ಗೆಟ್‌ ಕೂಡ ಮರೀಚಿಕೆಯಾಗಿ ಪರಿಣಮಿಸಿತ್ತು.

Advertisement

ಇದನ್ನೂ ಓದಿ:ಭಾರತ ವಿರುದ್ಧದ ಟಿ20 ಸರಣಿಗೂ ಶಿಮ್ರನ್‌ ಹೆಟ್‌ಮೈರ್‌ ಇಲ್ಲ

ಇಂಗ್ಲೆಂಡ್‌ ಬಲಿಷ್ಠ
ಬಲಾಬಲದ ದೃಷ್ಟಿಯಲ್ಲಿ ಅಫ್ಘಾನ್‌ಗಿಂತ ಇಂಗ್ಲೆಂಡ್‌ ತಂಡವೇ ಫೇವರಿಟ್‌ ಎಂಬುದನ್ನು ಒಪ್ಪಲೇಬೇಕು. ಆಂಗ್ಲರ ಬ್ಯಾಟಿಂಗ್‌ ಆಲ್‌ರೌಂಡರ್‌ ಜೇಕಬ್‌ ಬೆಥೆಲ್‌ ಅತ್ಯಂತ ಅಪಾಯಕಾರಿ. ನಾರ್ತ್‌ ಸೌಂಡ್‌ನ‌ಲ್ಲೇ ನಡೆದ ದಕ್ಷಿಣ ಆಫ್ರಿಕಾ ಎದುರಿನ ಕ್ವಾರ್ಟರ್‌ ಫೈನಲ್‌ನಲ್ಲಿ 42 ಎಸೆತಗಳಿಂದ 88 ರನ್‌ ಸಿಡಿಸಿದ್ದರು. ಮೂಲತಃ ಬಾರ್ಬಡಾಸ್‌ನವರೇ ಆಗಿರುವ ಬೆಥೆಲ್‌ ಈ ಕೂಟದಲ್ಲಿ 50.25ರ ಸರಾಸರಿಯೊಂದಿಗೆ 201 ರನ್‌ ಪೇರಿಸಿದ್ದಾರೆ. ಇದರಲ್ಲಿ 2 ಅರ್ಧ ಶತಕ ಒಳಗೊಂಡಿದೆ.

ಭಾರತೀಯ ಕಾಲಮಾನದಂತೆ ಪಂದ್ಯ 6.30ಕ್ಕೆ ಆರಂಭವಾಗಲಿದೆ. ಬುಧವಾರದ ಸೆಮಿಫೈನಲ್‌ನಲ್ಲಿ ಭಾರತ-ಆಸ್ಟ್ರೇಲಿಯ ಮುಖಾಮುಖಿ ಆಗಲಿವೆ.

 

Advertisement

Udayavani is now on Telegram. Click here to join our channel and stay updated with the latest news.

Next