Advertisement

ಅಂಡರ್‌-19 ವಿಶ್ವಕಪ್‌ ಕ್ರಿಕೆಟ್‌ ಫೈನಲ್‌ : 6ನೇ ಕಿರೀಟದ ಮೇಲೆ ಭಾರತದ ಕಿರಿಯರ ಕಣ್ಣು

10:57 PM Feb 10, 2024 | Team Udayavani |

ಬೆನೋನಿ (ದಕ್ಷಿಣ ಆಫ್ರಿಕಾ): “ಹಿರಿಯ ಕ್ರಿಕೆಟಿಗರಿಂದ ಸಾಧ್ಯವಾಗದ್ದು ಕಿರಿಯ ಕ್ರಿಕೆಟಿಗರಿಂದಲಾದರೂ ಸಾಕಾರಗೊಳ್ಳಲಿ’ ಎಂಬ ದೇಶದ ಕ್ರೀಡಾಪ್ರೇಮಿಗಳ ಹಾರೈಕೆ ಹಾಗೂ ಅಪಾರ ನಿರೀಕ್ಷೆಯೊಂದಿಗೆ ಉದಯ್‌ ಸಹಾರಣ್‌ ನಾಯಕತ್ವದ ಭಾರತದ ಆಂಡರ್‌-19 ತಂಡ ರವಿವಾರ ವಿಶ್ವಕಪ್‌ ಫೈನಲ್‌ ಆಡಲಿಳಿಯಲಿದೆ. ಎದುರಾಳಿ ತಂಡ ಆಸ್ಟ್ರೇಲಿಯ. ಹೀಗಾಗಿಯೇ ಮೇಲಿನ ಪೀಠಿಕೆ!

Advertisement

ದಾಖಲೆ 5 ಸಲ ವಿಶ್ವಕಪ್‌ ಎತ್ತಿರುವ, ಹಾಲಿ ಚಾಂಪಿಯನ್‌ ಕೂಡ ಆಗಿರುವ ಭಾರತದ ಕಿರಿಯರಿಗೆ ಆಸ್ಟ್ರೇಲಿಯ ವಿರುದ್ಧ ಸೇಡು ತೀರಿಸಿಕೊಳ್ಳಲು ಇದೊಂದು ಉತ್ತಮ ಅವಕಾಶ. ಭಾರತದ ಸೀನಿಯರ್‌ ತಂಡ ಆಸ್ಟ್ರೇಲಿಯ ವಿರುದ್ಧ ಆಡಿದ ಕಳೆದೆರಡೂ ಐಸಿಸಿ ಕೂಟದ ಫೈನಲ್‌ನಲ್ಲಿ ಮುಗ್ಗರಿಸಿ ಮುಖಭಂಗ ಅನುಭವಿಸಿದ್ದನ್ನು ಮರೆಯುವಂತಿಲ್ಲ. ಒಂದು, ಕಳೆದ ವರ್ಷ ಓವಲ್‌ನಲ್ಲಿ ನಡೆದ ಐಸಿಸಿ ವಿಶ್ವ ಟೆಸ್ಟ್‌ ಚಾಂಪಿಯನ್‌ಶಿಪ್‌ ಫೈನಲ್‌; ಇನ್ನೊಂದು, ನ. 19ರಂದು ತವರಲ್ಲೇ ನಡೆದ ಏಕದಿನ ವಿಶ್ವಕಪ್‌ ಫೈನಲ್‌.

ರವಿವಾರದ ಬೆನೋನಿ ಕಾಳಗದಲ್ಲಿ ನಮ್ಮ ಅಂಡರ್‌-19 ತಂಡ ಆಸ್ಟ್ರೇಲಿಯವನ್ನು ಮಣಿಸಿ ಕಿರೀಟ ಉಳಿಸಿಕೊಂಡರೆ ಅದಕ್ಕಿಂತ ಮಿಗಿಲಾದ ಖುಷಿ ಬೇರೊಂದಿರದು.

ಸೇಡಿನ ಪಂದ್ಯವಲ್ಲ
“ಆದರೆ ನಾವು ಸೇಡಿನ ಬಗ್ಗೆ ಯೋಚಿಸುತ್ತಿಲ್ಲ. ಹಿಂದೆ ಏನು ಆಗಿತ್ತು ಎಂಬುದು ಕೂಡ ಮುಖ್ಯ ವಲ್ಲ. ವಾಸ್ತವದತ್ತ ಗಮನ ಹರಿಸಿ ಗೆಲುವಿಗೆ ಪ್ರಯ ತ್ನಿಸುದೊಂದೇ ನಮ್ಮ ಗುರಿ’ ಎಂಬುದು ಭಾರತ ತಂಡದ ನಾಯಕ ಉದಯ್‌ ಸಹಾರಣ್‌ ಹೇಳಿಕೆ.

ಇದು ಭಾರತ-ಆಸ್ಟ್ರೇಲಿಯ ನಡುವಿನ 3ನೇ ಅಂಡರ್‌-19 ವಿಶ್ವಕಪ್‌ ಫೈನಲ್‌. 2012 ಮತ್ತು 2018ರ ಪ್ರಶಸ್ತಿ ಕಾಳಗಗಳೆರಡರಲ್ಲೂ ಭಾರತ ಜಯಭೇರಿ ಮೊಳಗಿಸಿದ್ದನ್ನು ಮರೆಯುವಂತಿಲ್ಲ.

Advertisement

ಅಜೇಯ ತಂಡಗಳು
ಭಾರತ ಮತ್ತು ಆಸ್ಟ್ರೇಲಿಯ ಈ ಕೂಟದ ಅಜೇಯ ತಂಡಗಳೆಂಬ ಗರಿಮೆ ಹೊಂದಿವೆ. ಭಾರತ 3 ಲೀಗ್‌ ಪಂದ್ಯ, 2 ಸೂಪರ್‌ ಸಿಕ್ಸ್‌ ಪಂದ್ಯ ಹಾಗೂ ಸೆಮಿಫೈನಲ್‌ನಲ್ಲಿ ಆತಿಥೇಯ ದಕ್ಷಿಣ ಆಫ್ರಿಕಾವನ್ನು ಮಣಿಸಿ ಪ್ರಶಸ್ತಿ ಸುತ್ತಿಗೆ ನೆಗೆದಿದೆ. ಆಸ್ಟ್ರೇಲಿಯ ಕೂಡ ಲೀಗ್‌ ಪಂದ್ಯದಲ್ಲಿ ಅಜೇಯವಾಗಿದೆ. ಆದರೆ ವೆಸ್ಟ್‌ ಇಂಡೀಸ್‌ ವಿರುದ್ಧ ಕಿಂಬರ್ಲಿಯಲ್ಲಿ ನಡೆಯಬೇಕಿದ್ದ ಸೂಪರ್‌ ಸಿಕ್ಸ್‌ ಪಂದ್ಯ ಮಳೆಯಿಂದ ರದ್ದುಗೊಂಡಿತ್ತು.

ಸೆಮಿಫೈನಲ್‌ ಪಂದ್ಯಗಳು ಎರಡೂ ತಂಡಗಳಿಗೆ “ಟಫ್’ ಆಗಿದ್ದವು. ಭಾರತ, ಉದಯ್‌ ಸಹಾರಣ್‌ ಮತ್ತು ಸಚಿನ್‌ ಧಾಸ್‌ ಅವರ ಅಮೋಘ ಜತೆಯಾಟದಿಂದ ಗೆದ್ದು ಬಂದಿತ್ತು. ಪಾಕಿಸ್ಥಾನ ವಿರುದ್ಧ 180 ರನ್‌ ಗುರಿ ಮುಟ್ಟುವಾಗ ಆಸೀಸ್‌ ಬಳಿ ಒಂದೇ ವಿಕೆಟ್‌ ಉಳಿದಿತ್ತು! ಇದನ್ನು ಕಂಡಾಗ ಬೆನೋನಿ ಟ್ರ್ಯಾಕ್‌ನಲ್ಲಿ ಬೌಲರ್ ಮೇಲುಗೈ ಸಾಧಿಸುವರೇ, ಬ್ಯಾಟಿಂಗ್‌ ಕಠಿನವೇ ಎಂಬ ಪ್ರಶ್ನೆ ಉದ್ಭವಿಸದಿರದು.

ಭಾರತದ ಬ್ಯಾಟಿಂಗ್‌ ಬಲಿಷ್ಠ
ಭಾರತ ಅತ್ಯುತ್ತಮ ಹಾಗೂ ಪ್ರಬಲ ಬ್ಯಾಟಿಂಗ್‌ ಲೈನಪ್‌ ಹೊಂದಿದೆ. ಆದರ್ಶ್‌ ಸಿಂಗ್‌, ಅರ್ಶಿನ್‌ ಕುಲಕರ್ಣಿ, ಮುಶೀರ್‌ ಖಾನ್‌, ಉದಯ್‌ ಸಹಾರಣ್‌, ಸಚಿನ್‌ ಧಾಸ್‌, ಪ್ರಿಯಾಂಶು ಮೋಲಿಯ ಇಲ್ಲಿನ ಪ್ರಮುಖರು. ಇವರಲ್ಲಿ ಸಹಾರಣ್‌ ಅವರದು ನಿಜಕ್ಕೂ ಕಪ್ತಾನನ ಆಟ. ಕೂಟದಲ್ಲಿ ಈಗಾಗಲೇ 389 ರನ್‌ ಬಾರಿಸಿದ್ದಾರೆ. ಸಫ‌ìರಾಜ್‌ ಖಾನ್‌ ಅವರ ಕಿರಿಯ ಸಹೋದರನಾಗಿರುವ ಮುಶೀರ್‌ ಖಾನ್‌ 2 ಶತಕ ಬಾರಿಸಿ ಮಿಂಚಿದ್ದಾರೆ. ಇವರೆಲ್ಲರೂ “ಫೈನಲ್‌ ಜೋಶ್‌’ ತೋರುವುದು ಅನಿವಾರ್ಯ.

ಬೌಲಿಂಗ್‌ನಲ್ಲಿ ಎಡಗೈ ಸ್ಪಿನ್ನರ್‌ ಸೌಮ್ಯಕುಮಾರ್‌ ಪಾಂಡೆ 17 ವಿಕೆಟ್‌ ಕೆಡವಿ ಭಾರತದ ಟ್ರಂಪ್‌ಕಾರ್ಡ್‌ ಆಗಿದ್ದಾರೆ. ಬಲಗೈ ಪೇಸರ್‌ ರಾಜ್‌ ಲಿಂಬಾನಿ, ಎಡಗೈ ಸೀಮರ್‌ ನಮನ್‌ ತಿವಾರಿ ಕೂಡ ಪರಿಣಾಮಕಾರಿ ದಾಳಿ ನಡೆಸುತ್ತಿದ್ದಾರೆ.
ಹಿರಿಯರಂತೆ ಮೈಮರೆತು ಆಡದೇ ಜವಾಬ್ದಾರಿಯುತ ಪ್ರದರ್ಶನ ನೀಡಿದರೆ ಭಾರತ ಕಿರೀಟ ಉಳಿಸಿಕೊಳ್ಳುವುದರಲ್ಲಿ ಅನುಮಾನವಿಲ್ಲ.

ಆಸೀಸ್‌ “ಫೈನಲ್‌ ಜೋಶ್‌’
ಹ್ಯೂ ವೀಬೆjನ್‌ ನೇತೃತ್ವದ ಆಸ್ಟ್ರೇಲಿಯ ಸೆಮಿಫೈನಲ್‌ನಲ್ಲಿ ಪರಾದಾಡಿದರೂ “ಫೈನಲ್‌ ಜೋಶ್‌’ ತೋರುವಲ್ಲಿ ಹಿಂದುಳಿಯದು ಎಂದು ಭಾವಿಸಲಡ್ಡಿಯಿಲ್ಲ. ಓಪನರ್‌ ಹ್ಯಾರಿ ಡಿಕ್ಸನ್‌, ಸೀಮರ್‌ಗಳಾದ ಟಾಮ್‌ ಸ್ಟ್ರೇಕರ್‌, ಕಾಲಮ್‌ ವಿಡ್ಲರ್‌ ಅವರೆಲ್ಲ ಈ ಪಂದ್ಯಾವಳಿಯಲ್ಲಿ ಸ್ಥಿರವಾದ ಪ್ರದರ್ಶನ ನೀಡುತ್ತ ಬಂದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next