ಬೆನೋನಿ: “ಡಿ’ ವಿಭಾಗದ ಕೊನೆಯ ಪಂದ್ಯದಲ್ಲಿ ಸ್ಕಾಟ್ಲೆಂಡ್ ವಿರುದ್ಧ 83 ರನ್ನುಗಳ ಜಯಭೇರಿ ಮೊಳಗಿಸಿದ ಭಾರತ ತಂಡ ಅಂಡರ್-19 ವನಿತಾ ಟಿ20 ವಿಶ್ವಕಪ್ ಪಂದ್ಯಾವಳಿಯಲ್ಲಿ ಅಜೇಯವಾಗಿ ಸೂಪರ್ ಸಿಕ್ಸ್ ಹಂತಕ್ಕೆ ಲಗ್ಗೆ ಇರಿಸಿದೆ.
ಬುಧವಾರದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ನಡೆಸಿದ ಭಾರತ ಗಳಿಸಿದ್ದು 4 ವಿಕೆಟಿಗೆ 149 ರನ್ ಮಾತ್ರ. ಸ್ಕಾಟ್ಲೆಂಡ್ ತೀವ್ರ ಕುಸಿತ ಅನುಭವಿಸಿ 13.1 ಓವರ್‌ಗಳಲ್ಲಿ 66ಕ್ಕೆ ಆಲೌಟ್ ಆಯಿತು.
ಭಾರತದ ಸರದಿಯಲ್ಲಿ ಆರಂಭಿಕ ಆಟಗಾರ್ತಿ ಜಿ. ತಿೃಷಾ ಸರ್ವಾಧಿಕ 57 ರನ್ ಹೊಡೆದರು (51 ಎಸೆತ, 6 ಬೌಂಡರಿ). ಆದರೆ ನಾಯಕಿ ಶಫಾಲಿ ವರ್ಮ (1), ಸೋನಿಯಾ ಮೆಂಧಿಯಾ (6) ಯಶಸ್ಸು ಕಾಣಲಿಲ್ಲ. ಜಿ. ತಿೃಷಾ-ರಿಚಾ ಘೋಷ್ 3ನೇ ವಿಕೆಟಿಗೆ 70 ರನ್ ಪೇರಿಸಿ ಸ್ಕಾಟ್ಲೆಂಡ್ ದಾಳಿಯನ್ನು ತಡೆದು ನಿಂತರು. ರಿಚಾ ಗಳಿಕೆ 33 ರನ್. ಇಲ್ಲಿ 6ನೇ ಕ್ರಮಾಂಕದಲ್ಲಿ ಬ್ಯಾಟ್ ಹಿಡಿದು ಬಂದ ಶ್ವೇತಾ ಸೆಹ್ರಾವತ್ ಬಿರುಸಿನ ಆಟಕ್ಕಿಳಿದು ಹತ್ತೇ ಎಸೆತಗಳಿಂದ ಅಜೇಯ 31 ರನ್ ಹೊಡೆದರು. ಸಿಡಿಸಿದ್ದು 4 ಬೌಂಡರಿ ಹಾಗೂ 2 ಸಿಕ್ಸರ್.
ಸ್ಕಾಟ್ಲೆಂಡ್ ಪತನದಲ್ಲಿ ಪ್ರಮುಖ ಪಾತ್ರ ವಹಿಸಿದವರು ಮನ್ನತ್ ಕಶ್ಯಪ್ (4 ವಿಕೆಟ್), ಅರ್ಚನಾ ದೇವಿ (3 ವಿಕೆಟ್) ಮತ್ತು ಸೋನಂ ಯಾದವ್ (2 ವಿಕೆಟ್).
ಸಂಕ್ಷಿಪ್ತ ಸ್ಕೋರ್
ಭಾರತ-4 ವಿಕೆಟಿಗೆ 149 (ಜಿ. ತಿೃಷಾ 57, ರಿಚಾ ಘೋಷ್ 33, ಶ್ವೇತಾ ಸೆಹ್ರಾವತ್ ಅಜೇಯ 31, ಕ್ಯಾಥರಿನ್ ಫ್ರೆಸರ್ 31ಕ್ಕೆ 2). ಸ್ಕಾಟ್ಲೆಂಡ್-13.1 ಓವರ್‌ಗಳಲ್ಲಿ 66 (ಡಾರ್ಸಿ ಕಾರ್ಟರ್ 24, ಅಲಿಸಾ ಲಿಸ್ಟರ್ 14, ಮನ್ನತ್ ಕಶ್ಯಪ್ 12ಕ್ಕೆ 4, ಅರ್ಚನಾ ದೇವಿ 14ಕ್ಕೆ 3, ಸೋನಂ ಯಾದವ್ ಒಂದಕ್ಕೆ 2).