ಪೊಚೆಫ್ ಸ್ಟ್ರೂಮ್: ಚೊಚ್ಚಲ ಐಸಿಸಿ ವನಿತಾ ಅಂಡರ್-19 ವಿಶ್ವಕಪ್ ಫೈನಲ್ ಕ್ಷಣಗಣನೆ ಮೊದಲ್ಗೊಂಡಿದೆ. ಎರಡು ಬಲಿಷ್ಠ ಹಾಗೂ ನೆಚ್ಚಿನ ತಂಡಗಳಾದ ಭಾರತ ಮತ್ತು ಇಂಗ್ಲೆಂಡ್ ರವಿವಾರದ ಪ್ರಶಸ್ತಿ ಸಮರದಲ್ಲಿ ಎದುರಾಗಲಿವೆ. ಅದೃಷ್ಟ ಶಫಾಲಿ ವರ್ಮ ನೇತೃತ್ವದ ಭಾರತದ ಪಾಲಾದೀತೇ ಎಂಬ ನಿರೀಕ್ಷೆ ಎಲ್ಲರದು.
ಎರಡೂ ಸೆಮಿಫೈನಲ್ ಪಂದ್ಯಗಳು ಸಾಗಿದ ರೀತಿ ಕಂಡಾಗ ಪ್ರಶಸ್ತಿ ಯಾರಿಗೆ ಒಲಿದೀತು ಎಂದು ಊಹಿಸುವುದು ಬಹಳ ಕಷ್ಟ. ಹೀಗಾಗಿ ಮೇಲ್ನೋಟಕ್ಕೆ ಇದೊಂದು 50-50 ಪಂದ್ಯ.
ಭಾರತ ಲೀಗ್‌ನಲ್ಲಿ ಆಸ್ಟ್ರೇಲಿಯಕ್ಕೆ ಶರಣಾದುದನ್ನು ಬಿಟ್ಟರೆ ಉಳಿದೆಲ್ಲ ಪಂದ್ಯಗಳಲ್ಲಿ ಜಯಭೇರಿ ಮೊಳಗಿಸುತ್ತ ಬಂದಿದೆ. ನಾಯಕಿ ಶಫಾಲಿ ವರ್ಮ, ಕೀಪರ್ ರಿಚಾ ಘೋಷ್ ರಾಷ್ಟ್ರೀಯ ಸೀನಿ ಯರ್ ತಂಡದ ಅನುಭವಿಗಳಾಗಿರುವುದು ಪ್ಲಸ್ ಪಾಯಿಂಟ್. ಇಬ್ಬರೂ ಸಾಮರ್ಥ್ಯಕ್ಕೆ ತಕ್ಕ ಪ್ರದರ್ಶನ ನೀಡುತ್ತ ಬಂದಿದ್ದಾರೆ. ಅದರಲ್ಲೂ ಶಫಾಲಿ ಬೌಲಿಂಗ್‌ನಲ್ಲೂ ಕ್ಲಿಕ್ ಆಗಿರುವುದು ಉಲ್ಲೇಖನೀಯ.
ಶಫಾಲಿ ಜತೆಗಾರ್ತಿ ಶ್ವೇತಾ ಸೆಹ್ರಾವತ್ ಅತ್ಯು ತ್ತಮ ಫಾರ್ಮ್ನಲ್ಲಿದ್ದಾರೆ. ಸೌಮ್ಯಾ ತಿವಾರಿ, ಜಿ. ತಿೃಷಾ ಅವರನ್ನೊಳಗೊಂಡ ಭಾರತದ ಅಗ್ರ ಕ್ರಮಾಂಕ ಅತ್ಯಂತ ಬಲಿಷ್ಠ. ಸ್ಪಿನ್ ತ್ರಿವಳಿಗಳಾದ ಪಾರ್ಶವಿ ಚೋಪ್ರಾ, ಮನ್ನತ್ ಕಶ್ಯಪ್, ಅರ್ಚನಾ ದೇವಿ; ಮಧ್ಯಮ ವೇಗಿ ತಿತಾಸ್ ಸಾಧು ಭಾರತದ ಅಪಾಯಕಾರಿ ಬೌಲಿಂಗ್ ಅಸ್ತ್ರವಾ ಗಿದ್ದಾರೆ. ಪಿಚ್ ಸ್ಪಿನ್ನಿಗೆ ನೆರವು ನೀಡಿದರೆ ಭಾರತಕ್ಕೆ ಖಂಡಿತ ಮೇಲುಗೈ ಸಾಧ್ಯ.
ಇಂಗ್ಲೆಂಡ್ ಅಜೇಯ ತಂಡ
ಇಂಗ್ಲೆಂಡ್ ಈ ಪಂದ್ಯಾ ವಳಿಯ ಅಜೇಯ ತಂಡ. ಇನ್ನೇನು ಆಸ್ಟ್ರೇಲಿಯ ಎದುರಿನ ಸೆಮಿ ಫೈನಲ್‌ನಲ್ಲಿ 99ಕ್ಕೆ ಕುಸಿದ್ದು ಬಿದ್ದೇ ಹೋಯಿತು ಎಂಬ ಸ್ಥಿತಿಯಲ್ಲೂ ಎದ್ದು ನಿಂತ ಹೆಗ್ಗಳಿಕೆ ಇಂಗ್ಲೆಂಡ್‌ನದ್ದು. ಈ ಸಣ್ಣ ಮೊತ್ತವನ್ನು ಉಳಿಸಿಕೊಳ್ಳಲು ಆಂಗ್ಲ ಬೌಲರ್ ತೋರ್ಪಡಿಸಿದ ಆಕ್ರಮಣ ಅಸಾಮಾನ್ಯ. 18.4 ಓವರ್‌ಗಳಲ್ಲಿ ಕಾಂಗರೂ ಪಡೆ ಯನ್ನು 96 ರನ್ನಿಗೆ ಉರುಳಿ ಸುವ ಮೂಲಕ ಇಂಗ್ಲೆಂಡ್ ನಂಬಲಾಗದ ಜಯ ಸಾಧಿಸಿತ್ತು. ಹನ್ನಾಹ್ ಬೇಕರ್ 10ಕ್ಕೆ 3 ವಿಕೆಟ್ ಹಾಗೂ ನಾಯಕಿ ಗ್ರೇಸ್ ಸ್ಕ್ರಿವೆನ್ಸ್ 8 ರನ್ನಿಗೆ 2 ವಿಕೆಟ್ ಉರುಳಿಸಿ ಮ್ಯಾಜಿಕ್ ಮಾಡಿದ್ದರು. ಹೀಗಾಗಿ ಭಾರತ ಎಚ್ಚರಿಕೆಯ ಹೆಜ್ಜೆ ಇಡಬೇಕಿದೆ.
ಆರಂಭ: ಸಂಜೆ 5.15
ಪ್ರಸಾರ: ಸ್ಟಾರ್ ಸ್ಪೋರ್ಟ್ಸ್ ಸೆಲೆಕ್ಟ್ 1