ದುಬಾೖ: ಅಂಡರ್-19 ಏಷ್ಯಾ ಕಪ್ ಕ್ರಿಕೆಟ್ ಪಂದ್ಯಾವಳಿ ಯಲ್ಲಿ ಭಾರತ ಗೆಲುವಿನ ಆರಂಭ ಪಡೆದಿದೆ. ಶುಕ್ರವಾರದ ಮೊದಲ ಮುಖಾಮುಖಿಯಲ್ಲಿ ಅಫ್ಘಾನಿಸ್ಥಾನ ವನ್ನು 7 ವಿಕೆಟ್‌ಗಳಿಂದ ಕೆಡವಿದೆ.
ಮೊದಲು ಬ್ಯಾಟಿಂಗ್ ನಡೆಸಿದ ಅಫ್ಘಾನಿಸ್ಥಾನ ಸರಿಯಾಗಿ 50 ಓವರ್‌ಗಳಲ್ಲಿ 173 ರನ್ನಿಗೆ ಆಲೌಟ್ ಆಯಿತು. ಭಾರತ 37.3 ಓವರ್‌ಗಳಲ್ಲಿ 3 ವಿಕೆಟಿಗೆ 174 ರನ್ ಬಾರಿಸಿ ಗೆಲುವು ಸಾಧಿಸಿತು. ದಿನದ ಇನ್ನೊಂದು ಪಂದ್ಯದಲ್ಲಿ ಪಾಕಿಸ್ಥಾನ 7 ವಿಕೆಟ್‌ಗಳಿಂದ ನೇಪಾಲವನ್ನು ಮಣಿಸಿತು.
ಸೊಲ್ಲಾಪುರದ ಅರ್ಷಿನ್ ಕುಲಕರ್ಣಿ ಅವರ ಆಲ್‌ರೌಂಡ್ ಪ್ರದರ್ಶನ ಭಾರತದ ಸರದಿಯ ಪ್ರಮುಖ ಆಕರ್ಷಣೆಯಾಗಿತ್ತು. ಲೆಗ್‌ಸ್ಪಿನ್ ದಾಳಿಯಲ್ಲಿ 3 ವಿಕೆಟ್ ಉರುಳಿಸಿದ ಬಳಿಕ ಚೇಸಿಂಗ್ ವೇಳೆ ಆರಂಭಿಕನಾಗಿ ಇಳಿದು ಅಜೇಯ 70 ರನ್ ಬಾರಿಸಿದರು. 105 ಎಸೆತಗಳ ಈ ಜವಾಬ್ದಾರಿಯುತ ಆಟದ ವೇಳೆ ಅವರು ಹೊಡೆದದ್ದು 4 ಬೌಂಡರಿ ಮಾತ್ರ. ಮುಶೀರ್ ಖಾನ್ ಅಜೇಯ 48 ಮತ್ತು ನಾಯಕ ಉದಯ್ ಸಹಾರಣ್ 20 ರನ್ ಮಾಡಿದರು.
ಭಾರತದ ಬೌಲಿಂಗ್ ಸರದಿಯಲ್ಲಿ ಮಿಂಚಿದ ಇತರರೆಂದರೆ ರಾಜ್ ಲಿಂಬಾನಿ (3 ವಿಕೆಟ್) ಮತ್ತು ನಮನ್ ತಿವಾರಿ (2 ವಿಕೆಟ್). ಅಫ್ಘಾನ್ ಪರ ಆರಂಭಕಾರ ಜಮ್ಶಿದ್ ಜದ್ರಾನ್ ಸರ್ವಾಧಿಕ 43 ರನ್, ಮೊಹಮ್ಮದ್ ಯೂಸುಫ್ ಜದ್ರಾನ್ 26 ರನ್ ಮಾಡಿದರು. ರವಿವಾರ ಭಾರತ-ಪಾಕಿಸ್ಥಾನ ಮುಖಾಮುಖಿ ಆಗಲಿವೆ.
ಸಂಕ್ಷಿಪ್ತ ಸ್ಕೋರ್
ಅಫ್ಘಾನಿಸ್ಥಾನ-50 ಓವರ್‌ಗಳಲ್ಲಿ 173 (ಜಮಿÏದ್ ಜದ್ರಾನ್ 43, ಮೊಹಮ್ಮದ್ ಯೂಸುಫ್ ಜದ್ರಾನ್ 26, ನುಮಾನ್ ಶಾಹ 25, ಅರ್ಷಿನ್ ಕುಲಕರ್ಣಿ 29ಕ್ಕೆ 3, ರಾಜ್ ಲಿಂಬಾನಿ 46ಕ್ಕೆ 3, ನಮನ್ ತಿವಾರಿ 30ಕ್ಕೆ 2). ಭಾರತ-37.3 ಓವರ್‌ಗಳಲ್ಲಿ 3 ವಿಕೆಟಿಗೆ 174 (ಅರ್ಷಿನ್ ಕುಲಕರ್ಣಿ ಔಟಾಗದೆ 70, ಮುಶೀರ್ ಖಾನ್ ಔಟಾಗದೆ 48, ಉದಯ್ ಸಹಾರಣ್ 20).