Advertisement

ಅಂಡರ್‌-17 ವಿಶ್ವಕಪ್‌ ಫ‌ುಟ್‌ಬಾಲ್‌:ದಾಖಲೆ ವೀಕ್ಷಕರು,ದಾಖಲೆ ಗೋಲುಗಳು

06:25 AM Oct 30, 2017 | Team Udayavani |

ಕೋಲ್ಕತಾ: ಫ‌ುಟ್‌ಬಾಲ್‌ ಸಾಧನೆಯಲ್ಲಿ ಜಾಗತಿಕ ಮಟ್ಟದಲ್ಲಿ ಅದೆಷ್ಟೋ ಹಿಂದುಳಿದಿರುವ ಭಾರತ, ಫಿಫಾ ವಿಶ್ವಕಪ್‌ ಆತಿಥ್ಯದಲ್ಲಿ ನಿರೀಕ್ಷೆಗೂ ಮೀರಿದ ಸಾಧನೆಯೊಂದಿಗೆ ವಿಶ್ವ ಮಟ್ಟದಲ್ಲಿ ಗುರುತಿಸಲ್ಪಟ್ಟದೆ. ಇದಕ್ಕೆ ಕಾರಣ ಅಂಡರ್‌-17 ಫಿಫಾ ವಿಶ್ವಕಪ್‌ ಫ‌ುಟ್‌ಬಾಲ್‌ ಯಶಸ್ಸು. 

Advertisement

ಶನಿವಾರ ರಾತ್ರಿ ಇಂಗ್ಲೆಂಡಿನ ಗೆಲುವಿನೊಂದಿಗೆ ಸಂಪನ್ನಗೊಂಡ ಈ ಕಾಲ್ಚೆಂಡಿನ ಸಮರ ಭಾರತದ ಕ್ರೀಡಾ ಸಂಘಟನೆಗೊಂದು ತುರಾಯಿ! ಸ್ವತಃ ಫಿಫಾ ಅಧಿಕಾರಿಗಳೇ ನೀಡಿದ ಸರ್ಟಿಫಿಕೆಟ್‌ ಇದಾಗಿದೆ.

ನಿರ್ದಿಷ್ಟ ವಯೋಮಿತಿಯ ವಿಶ್ವಕಪ್‌ ಫ‌ುಟ್‌ಬಾಲ್‌ ಇತಿಹಾಸದಲ್ಲೇ ಅತ್ಯಧಿಕ ಸಂಖ್ಯೆಯ ವೀಕ್ಷಕರಿಗೆ ಸಾಕ್ಷಿಯಾದ ಈ ಪಂದ್ಯಾವಳಿಯಲ್ಲಿ ದಾಖಲೆ ಸಂಖ್ಯೆಯ ಗೋಲುಗಳು ಸಿಡಿಯಲ್ಪಟ್ಟದ್ದೊಂದು ವಿಶೇಷ. ಶನಿವಾರದ ಸಾಲ್ಟ್ಲೇಕ್‌ ಸ್ಟೇಡಿಯಂನಲ್ಲಿ ಸಾಗಿದ ಇಂಗ್ಲೆಂಡ್‌-ಸ್ಪೇನ್‌ ನಡುವಿನ ಪ್ರಶಸ್ತಿ ಸಮರದ ವೇಳೆ ಕ್ರೀಡಾಂಗಣದಲ್ಲಿದ್ದ ವೀಕ್ಷಕರ ಸಂಖ್ಯೆ 66,684. ಇದು ಭಾರತ ಹಾಗೂ ಕೋಲ್ಕತಾ ಜನರ ಫ‌ುಟ್‌ಬಾಲ್‌ ಅಭಿಮಾನಕ್ಕೆ ಸಾಕ್ಷಿ.

ಚೀನದ ದಾಖಲೆ ಮುರಿದ ಭಾರತ
ಭಾರತದ 6 ಕೇಂದ್ರಗಳಲ್ಲಿ ನಡೆದ ಈ ಪಂದ್ಯಗಳ ವೇಳೆ ಹಾಜರಿದ್ದ ಒಟ್ಟು ವೀಕ್ಷಕರ ಸಂಖ್ಯೆ 13,47,143. ಇದು 1985ರಲ್ಲಿ ಚೀನದಲ್ಲಿ ನಡೆದ ಮೊದಲ ಅಂಡರ್‌-17 ವಿಶ್ವಕಪ್‌ ಫ‌ುಟ್‌ಬಾಲ್‌ ಪಂದ್ಯಾವಳಿಯ ದಾಖಲೆಯನ್ನು ಭಾರೀ ಅಂತರದಲ್ಲಿ ಮೀರಿಸಿತು. ಅಂದು 12,30,976 ವೀಕ್ಷಕರು ಸಾಕ್ಷಿಯಾಗಿದ್ದರು. ಇದಕ್ಕಿಂತ 1,16,167 ಹೆಚ್ಚು ಮಂದಿ ಭಾರತದ ಪಂದ್ಯಗಳನ್ನು ವೀಕ್ಷಿಸಿದರು. ಬ್ರಝಿಲ್‌-ಮಾಲಿ ನಡುವೆ ತೃತೀಯ ಸ್ಥಾನಕ್ಕಾಗಿ ನಡೆದ ಪಂದ್ಯದ ವೇಳೆಯೇ ಈ ದಾಖಲೆ ಮುರಿಯಲ್ಪಟ್ಟಿತ್ತು. ಈ ಪಂದ್ಯವನ್ನು ಒಟ್ಟು 56,432 ಮಂದಿ ಕಣ್ತುಂಬಿಸಿಕೊಂಡಿದ್ದರು.

ಭಾರತದ ಈ ಕೂಟದ ಪ್ರತಿಯೊಂದು ಪಂದ್ಯದ ಸರಾಸರಿ ವೀಕ್ಷಕರ ಸಂಖ್ಯೆ 25,906. ಈ ಲೆಕ್ಕಾಚಾರದ ಪ್ರಕಾರ ಭಾರತಕ್ಕೆ ದ್ವಿತೀಯ ಸ್ಥಾನ ಲಭಿಸಿದೆ. ಚೀನದ ಆರಂಭಿಕ ವಿಶ್ವಕಪ್‌ ವೇಳೆ ಈ ಸರಾಸರಿ 38,469 ಆಗಿತ್ತು. ಆದರೆ ಅಂದು ಪಾಲ್ಗೊಂಡ ತಂಡಗಳ ಸಂಖ್ಯೆ ಹಾಗೂ ಪಂದ್ಯಗಳ ಸಂಖ್ಯೆಗಳೆರಡೂ ಕಡಿಮೆ ಆಗಿದ್ದವು. 2007ರ ಬಳಿಕ ತಂಡಗಳ ಸಂಖ್ಯೆ 24ಕ್ಕೆ ಏರಿದರೆ, ಪಂದ್ಯಗಳ ಸಂಖ್ಯೆ 52ಕ್ಕೆ ಏರಿದೆ.

Advertisement

ನಿರ್ದಿಷ್ಟ ವಯೋಮಿತಿಯ ಫಿಫಾ ವಿಶ್ವಕಪ್‌ ಫ‌ುಟ್‌ಬಾಲ್‌ ಪಂದ್ಯಾವಳಿಗೆ ಅನ್ವಯಿಸಿದಾಗಲೂ ಭಾರತದ ವೀಕ್ಷಕರ ಪ್ರಮಾಣ ಜಾಸ್ತಿ. 2011ರಲ್ಲಿ ಕೊಲಂಬಿಯಾ ಆತಿಥ್ಯದಲ್ಲಿ ನಡೆದ ಅಂಡರ್‌-20 ವಿಶ್ವಕಪ್‌ ಫ‌ುಟ್‌ಬಾಲ್‌ ಕೂಟಕ್ಕೆ ಒಟ್ಟು 13,09,929 ವೀಕ್ಷಕರು ಹಾಜರಿದ್ದರು.

ಕೋಲ್ಕತಾದ ಸಾಲ್ಟ್ಲೇಕ್‌ ಸ್ಟೇಡಿಯಂನಲ್ಲಿ ನಡೆದ 11 ಪಂದ್ಯಗಳನ್ನು ಒಟ್ಟು 6,08,809 ಮಂದಿ ವೀಕ್ಷಿಸಿದರು. ಅಂದರೆ ಪ್ರತಿ ಪಂದ್ಯಕ್ಕೆ ಸರಾಸರಿ 55,346ರಷ್ಟು ವೀಕ್ಷಕರು. ಇದು ಉಳಿದ ಸ್ಟೇಡಿಯಂಗಳಿಗೆ ಹೋಲಿಸಿದರೆ ಹೆಚ್ಚು. ಈ ಸ್ಟೇಡಿಯಂ ಸಾಮರ್ಥ್ಯ 66,600.

ಸರ್ವಾಧಿಕ ಗೋಲು ದಾಖಲೆ
ಈ ಪಂದ್ಯಾವಳಿಯ 52 ಪಂದ್ಯಗಳಿಂದ ಒಟ್ಟು 177 ಗೋಲುಗಳು ಸಿಡಿಯಲ್ಪಟ್ಟವು. ಇದು ಫಿಫಾ ಅಂಡರ್‌-17 ವಿಶ್ವಕಪ್‌ ಪಂದ್ಯಾವಳಿಯೊಂದರ ನೂತನ ದಾಖಲೆ. ಕಳೆದ ಸಲ (2013) ಯುಎಇಯಲ್ಲಿ ನಡೆದ ಪಂದ್ಯಾವಳಿಯಲ್ಲಿ 172 ಗೋಲು ಬಾರಿಸಿದ್ದು ದಾಖಲೆಯಾಗಿತ್ತು.

ಈ ಕೂಟದ ಪಂದ್ಯವೊಂದರ ಗೋಲು ಸರಾಸರಿ 3.40. ಇದು 24 ತಂಡಗಳ ನಡುವಿನ ಸ್ಪರ್ಧೆಯಾದ ಬಳಿಕ ದಾಖಲಾದ ಅತ್ಯಧಿಕ ಗೋಲು ಸರಾಸರಿಯಾದರೆ, ಕೂಟದ ಇತಿಹಾಸದ 3ನೇ ಅತ್ಯುತ್ತಮ ಸರಾಸರಿ ಎನಿಸಿದೆ. 1997 ಮತ್ತು 2003ರ ಕೂಟದ 32 ಪಂದ್ಯಗಳಿಂದ 117 ಗೋಲುಗಳು ದಾಖಲಾಗಿದ್ದವು. ಅಂದಿನ ಪ್ರತಿ ಪಂದ್ಯದ ಗೋಲು ಸರಾಸರಿ 3.66.

Advertisement

Udayavani is now on Telegram. Click here to join our channel and stay updated with the latest news.

Next