ನವದೆಹಲಿ:ಕಾನೂನು ಬಾಹಿರ ಚಟುವಟಿಕೆಯಲ್ಲಿ ತೊಡಗಿದೆ ಎಂದು ಆರೋಪಿಸಿ ಕೇಂದ್ರ ಗೃಹ ಸಚಿವಾಲಯ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಸಂಘಟನೆಯನ್ನು ಐದು ವರ್ಷಗಳ ಕಾಲ ನಿಷೇಧಿಸಿರುವುದಕ್ಕೆ ಅಸಮಧಾನ ವ್ಯಕ್ತಪಡಿಸಿರುವ ಎಸ್ ಡಿಪಿಐ ಪತ್ರಿಕಾ ಪ್ರಕಟಣೆ ಬಿಡುಗಡೆ ಮಾಡಿದ್ದು, ಪಿಎಫ್ ಐ ಮತ್ತು ಸಹವರ್ತಿ ಸಂಘಟನೆಗಳನ್ನು ನಿಷೇಧಿಸಿರುವುದು ಬಿಜೆಪಿ ಆಡಳಿತಾವಧಿಯಲ್ಲಿನ ಅಘೋಷಿತ ತುರ್ತುಪರಿಸ್ಥಿತಿಯಂತಿದೆ ಎಂದು ದೂರಿದೆ.
ಇದನ್ನೂ ಓದಿ:ಚಾಮರಾಜನಗರ: ತಾಳಿಕಟ್ಟಿದವನಿಗೆ 3 ವರ್ಷ, ಕಟ್ಟಿಸಿದ ಶಾಸ್ತ್ರಿಗೆ 1 ವರ್ಷ ಜೈಲು ಶಿಕ್ಷೆ
ಕೇಂದ್ರದ ಭಾರತೀಯ ಜನತಾ ಪಕ್ಷ ನೇತೃತ್ವದ ಸರ್ಕಾರದ ಈ ನಿರ್ಧಾರ ಪ್ರಜಾಪ್ರಭುತ್ವದ ಆಶಯಕ್ಕೆ ಧಕ್ಕೆ ತರಲಿದ್ದು, ಇದು ಜನರ ಸಾಂವಿಧಾನಿಕ ಹಕ್ಕುಗಳನ್ನು ಕಸಿದುಕೊಂಡಂತೆ ಎಂದು ಎಸ್ ಡಿಪಿಐ ತಿಳಿಸಿದೆ.
“ಬಿಜೆಪಿ ಆಡಳಿತದ ತಪ್ಪು ಮತ್ತು ಜನವಿರೋಧಿ ನೀತಿಗಳ ವಿರುದ್ಧ ಯಾರೇ ಮಾತನಾಡಿದರು ಅವರು ಕೇಂದ್ರದ ತನಿಖಾ ಸಂಸ್ಥೆಗಳಿಂದ ಬಂಧನ ಮತ್ತು ದಾಳಿಗಳನ್ನು ಎದುರಿಸಬೇಕಾಗುತ್ತದೆ. ಭಾರತೀಯ ಸಂವಿಧಾನದ ಮೂಲಭೂತ ಹಕ್ಕುಗಳಾದ ವಾಕ್ ಸ್ವಾತಂತ್ರ್ಯ ಹಾಗೂ ಸಂಘಟನೆಗಳ ಪ್ರತಿಭಟನೆಗಳನ್ನು ನಿರ್ದಯವಾಗಿ ಹತ್ತಿಕ್ಕಲಾಗುತ್ತಿದೆ ಎಂದು ಎಸ್ ಡಿಪಿಐ ಪ್ರಕಟಣೆಯಲ್ಲಿ ಆರೋಪಿಸಿದೆ.
ದೇಶದಲ್ಲಿ ಅಘೋಷಿತ ತುರ್ತುಪರಿಸ್ಥಿತಿ ಜಾರಿಯಾದಂತೆ ಕಾಣಿಸುತ್ತಿದೆ ಎಂದು ಎಸ್ ಡಿಪಿಐನ ಎಂ.ಕೆ.ಫೈಝಿ ದೂರಿದ್ದು, ಈ ಸರ್ವಾಧಿಕಾರಿ ಆಡಳಿತವನ್ನು ವಿರೋಧಿಸುವ ನಿಟ್ಟಿನಲ್ಲಿ ಎಲ್ಲಾ ಜಾತ್ಯತೀತ ಪಕ್ಷಗಳು ಒಗ್ಗೂಡಿ ಹೋರಾಡುವ ಮೂಲಕ ಭಾರತದ ಸಾಂವಿಧಾನಿಕ ಮೌಲ್ಯ ಮತ್ತು ಪ್ರಜಾಪ್ರಭುತ್ವವನ್ನು ರಕ್ಷಿಸಬೇಕಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿರುವುದಾಗಿ ವರದಿಯಾಗಿದೆ.