ಹಗರಿಬೊಮ್ಮನಹಳ್ಳಿ: ಮಕ್ಕಳನ್ನು ಕೇವಲ ಅಂಕಗಳಿಕೆ ಯಂತ್ರಗಳಂತೆ ಪರಿಗಣಿಸುವುದು ಸೂಕ್ತವಲ್ಲ. ಪಠ್ಯದ ಜತೆಗೆ ಪಠ್ಯೇತರ ಚಟುವಟಿಕೆಗಳಲ್ಲೂ ಸಕ್ರಿಯವಾಗಿ ತೊಡಗಿಸಿಕೊಳ್ಳುವಂತೆ ಉತ್ತೇಜನ ನೀಡಬೇಕು ಎಂದು ಶಾಸಕ ಭೀಮಾನಾಯ್ಕ ಸಲಹೆ ನೀಡಿದರು.
ಪಟ್ಟಣದ ಆದರ್ಶ ಶಾಲೆ ಅವರಣದಲ್ಲಿ ನಡೆದ ತಾಲೂಕು ಮಟ್ಟದ ಪ್ರತಿಭಾ ಕಾರಂಜಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಮಕ್ಕಳ ಸುಪ್ತ ಪ್ರತಿಭೆ ಹೊರ ತರಲು ಪ್ರತಿಭಾಕಾರಂಜಿ ಕಾರ್ಯಕ್ರಮ ಪೂರಕವಾಗಿದೆ. ದೇಶಕ್ಕಾಗಿ ಹೋರಾಡಿದ ಮಹಾನ್ ಪುರುಷರ ಸಾಧನೆಗಳನ್ನು ಸ್ಮರಿಸುವಂತಹ ವೇಷಭೂಷಣಗಳನ್ನು ಶಿಕ್ಷಕರು ಕಟ್ಟಿಕೊಡಬೇಕು. ಶಾಲೆಗೆ ಶುದ್ಧ ಕುಡಿವ ನೀರಿನ ಘಟಕ, ಸೈಕಲ್ ಸ್ಟ್ಯಾಂಡ್ಡ್, ಬಸ್ ತಂಗುದಾಣದ ಸೌಲಭ್ಯ ಕಲ್ಪಿಸಲಾಗುವುದು ಎಂದು ಭರವಸೆ ನೀಡಿದರು.
ಬಿಇಒ ಶೇಖರಪ್ಪ ಹೊರಪೇಟೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಛದ್ಮವೇಷ ಸ್ಪರ್ಧೆಯಲ್ಲಿ ಪಾಲ್ಗೊಂಡ ವಿದ್ಯಾರ್ಥಿಗಳು ವಿವಿಧ ವೇಶಭೂಷಣ ತೊಟ್ಟು ಗಮನ ಸೆಳೆದರು. ಪ್ರೌಢಶಾಲಾ ವಿಭಾಗದಲ್ಲಿ ಶಕ್ತಿದೇವತೆಗಳು ಪ್ರತ್ಯಕ್ಷವಾದಂತಿತ್ತು. ಮಧುರೆ ಮೀನಾಕ್ಷಿ, ಕಂಚಿ ಕಾಮಾಕ್ಷಿ, ಮಹಂಕಾಳಿ, ಶಾರದೆ, ಲಕ್ಷ್ಮೀ, ರುಂಡ ಮಾಲೀನಿ ಹೀಗೆ ಶಕ್ತಿ ದೇವತೆಗಳ ಅವತಾರವೇ ಧರೆಗಿಳಿದಂತಿತ್ತು.
ಮಧುರೆ ಮೀನಾಕ್ಷಿಯಾಗಿ ವಲ್ಲಭಾಪುರ ಮೊರಾರ್ಜಿ ವಸತಿ ಶಾಲೆ ಮೇಘನಾ ಮೆಚ್ಚುಗೆಗೆ ಪಾತ್ರರಾದರು. ವರಲಹಳ್ಳಿ ಶಾಲೆ ವಿದ್ಯಾರ್ಥಿ ರುಂಡ ಮಾಲಿನಿಯಾಗಿ ನೋಡುಗರನ್ನು ಕ್ಷಣಕಾಲ ಬೆಚ್ಚಿ ಬೀಳಿಸಿದರು. ಜಾನಪದ ನೃತ್ಯ, ಸಾಮೂಹಿಕ ನೃತ್ಯದಲ್ಲಿ ಅಂಬಳಿ ಮೊರಾರ್ಜಿ ವಸತಿ ಶಾಲೆಯ ಮಕ್ಕಳು ವಿಶೇಷ ಪ್ರದರ್ಶನ ನೀಡಿ ಪ್ರಥಮ ಸ್ಥಾನಗಳಿಸಿದರು. ಉಳಿದಂತೆ ಕೋಲಾಟ, ನಾಟಕ, ಕ್ಲೇ ಮಾಡಲಿಂಗ್, ಚರ್ಚಾಸ್ಪರ್ಧೆ, ಭರತನಾಟ್ಯ, ಕವ್ವಾಲಿ, ಗಜಲ್. ಧಾರ್ಮಿಕ ಪಠಣ ಸೇರಿದಂತೆ ವಿವಿಧ ಸ್ಪರ್ಧೆಗಳಲ್ಲಿ ತಾಲೂಕಿನ 13 ವಲಯದ ಒಟ್ಟು 920 ವಿದ್ಯಾರ್ಥಿಗಳು ತಮ್ಮ ಪ್ರತಿಭೆಯ
ಮೂಲಕ ಗಮನ ಸೆಳೆದರು.
ತಾಪಂ ಅಧ್ಯಕ್ಷೆ ನಾಗಮ್ಮ, ಉಪಾಧ್ಯಕ್ಷೆ ಕೊಚಾಲಿ ಸುಶೀಲಮ್ಮ ಮಂಜುನಾಥ್, ಜಿಪಂ ಮಾಜಿ ಸದಸ್ಯರಾದ ಅಕ್ಕಿ ತೋಟೇಶ್, ಹೆಗ್ಗಾಳ್ ರಾಮಣ್ಣ, ಕಾಂಗ್ರೆಸ್ ಬ್ಲಾಕ್ ಮಾಜಿ ಅಧ್ಯಕ್ಷ ಮುಟುಗನಹಳ್ಳಿ ಕೊಟ್ರೇಶ್, ರೈತರ ಸಹಕಾರಿ ಬ್ಯಾಂಕ್ ಮಾಜಿ ಅಧ್ಯಕ್ಷ ಹುಡೇದ್ ಗುರು ಬಸವರಾಜ, ನೋಡೆಲ್ ಅಧಿಕಾರಿ ಮುಸ್ತಾಕ್ ಅಹಮದ್, ತಾಲೂಕು ಶಿಕ್ಷಕರ ಸಂಘದ ಅಧ್ಯಕ್ಷ ಹ್ಯಾಟಿ ಲೋಕಪ್ಪ, ಕಾರ್ಯದರ್ಶಿ ಬಿ.ಕೊಟ್ರಪ್ಪ, ಪದವೀಧರರ ಶಿಕ್ಷಕರ ಸಂಘದ ಅಧ್ಯಕ್ಷ ಹಲಿಗೇರಿ ಸುರೇಶ, ಎಸಿಎಂಸಿ ಅಧ್ಯಕ್ಷ ಸುರೇಶ್, ಉಪಾಧ್ಯಕ್ಷೆ ಶಿಲ್ಪಾ, ಮಂಜುನಾಥಸ್ವಾಮಿ ಇತರರಿದ್ದರು. ಆದರ್ಶ ಶಾಲೆ ಮುಖ್ಯಗುರು ಶ್ರೀನಿವಾಸ, ದೈಹಿಕ ಶಿಕ್ಷಕ ಮಲ್ಲಿಕಾರ್ಜುನ, ವಿಜ್ಞಾನ ಶಿಕ್ಷಕ ಸುಕುಮುನಿ ಸ್ವಾಮಿ ನಿರೂಪಿಸಿದರು.