ಕಲಬುರಗಿ: ನಗರದಲ್ಲಿ ಗುರುವಾರ ಬೆಳಗಿನ ಜಾವ ಪೊಲೀಸರ ಮೇಲೆ ಹಲ್ಲೆ ನಡೆಸಿ ಪರಾರಿಯಾಗಲೆತ್ನಿಸಿದ ದರೋಡೆಕೋರರ ಮೇಲೆ ಪೊಲೀಸರು ಗುಂಡು ಹಾರಿಸಿ ಅವರನ್ನು ಸೆರೆ ಹಿಡಿದ ಘಟನೆ ನಗರದ ಹೊರವಲಯದ ಆಶ್ರಯ ಕಾಲೋನಿ ಬಳಿ ನಡೆದಿದೆ.
ನಗರದ ಆಳಂದ ಚೆಕ್‌ಪೋಸ್ಟ್ ನಿವಾಸಿಗಳಾದ ಶೇಖರ್ ಅಲಿಯಾಸ್ ಶೇಖ್ಯಾ ಹಾಗೂ ಅಜೀಂ ಎನ್ನುವರು ಆಶ್ರಯ ಕಾಲೋನಿ ಬಳಿ ಇರುವ ಖಚಿತ ಮಾಹಿತಿ ಆಧರಿಸಿ ಎ ಉಪವಿಭಾಗದ ಎಎಸ್‌ಪಿ ಲೋಕೇಶ ಮಾರ್ಗದರ್ಶನದಲ್ಲಿ ಪಿಎಸ್‌ಐಗಳಾದ ವಾಹೀದ್ ಕೋತ್ವಾಲ್, ಪರಶುರಾಮ ಹಾಗೂ ಸಿಬ್ಬಂದಿ ದಾಳಿ ನಡೆಸಿದಾಗ, ಶೇಖರ್ ಹಾಗೂ ಅಜೀಂ ಮಾರಕಾಸ್ತ್ರಗಳಿಂದ ಪೇದೆಗಳಾದ ಬಂದೇನವಾಜ್, ಭೀಮಾನಾಯಕ ಎನ್ನುವರ ಮೇಲೆ ಹಲ್ಲೆ ನಡೆಸಿ ಪರಾರಿಯಾಗಲು ಯತ್ನಿಸಿದ್ದರು.
ಪೊಲೀಸ್ ಪೇದೆಗಳ ಮೇಲೆ ಹಲ್ಲೆ ನಡೆದದ್ದನ್ನು ನೋಡಿದ ಫರತಾಬಾದ ಪಿಎಸ್‌ಐ ವಾಹೀದ್ ಕೋತ್ವಾಲ್ ಹಾಗೂ ಪಿಎಸ್‌ಐ ಪರಶುರಾಮ ಆರೋಪಿಗಳ ಕಾಲಿಗೆ ಗುಂಡು ಹಾರಿಸಿ ಬಂಧಿಸಿದ್ದಾರೆ.
ಗಾಯಗೊಂಡಿರುವ ಬಂದೇನವಾಜ್ ಹಾಗೂ ಭೀಮಾನಾಯಕ ಅವರನ್ನು ನಗರದ ಬಸವೇಶ್ವರ ಆಸ್ಪತ್ರೆಗೆ ದಾಖಲಿಸಲಾಗಿದೆ. ಗಾಯಗೊಂಡಿರುವ ದರೋಡೆಕೋರರಾದ ಶೇಖರ ಹಾಗೂ ಅಜೀಂನನ್ನು ನಗರದ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಶೇಖರ್ ಹಾಗೂ ಅಜೀಂ ಮೇಲೆ ದರೋಡೆ, ಕೊಲೆಯತ್ನ ಸೇರಿದಂತೆ ಅನೇಕ ಪ್ರಕರಣಗಳು ದಾಖಲಾಗಿದ್ದು, ವಿವಿಧ ದರೋಡೆ ಪ್ರಕರಣದಲ್ಲಿ ಭಾಗಿಯಾಗಿರುವ ಇವರು, ಮಾರ್ಕೆಟ್ ಸತೀಶನ ಸಹಚರರು ಎನ್ನಲಾಗಿದೆ.
ಐಜಿಪಿ ಅಲೋಕಕುಮಾರ ಈಶಾನ್ಯ ವಲಯದ ಐಜಿಪಿಯಾಗಿದ್ದಾಗ ಅನೇಕ ರೌಡಿಗಳನ್ನು ಮಟ್ಟಹಾಕುವಲ್ಲಿ ಯಶಸ್ವಿಯಾಗಿದ್ದರು. ಈಗ ಮತ್ತೆ ಎ ಉಪವಿಭಾಗದ ಎಎಸ್‌ಪಿ ಲೋಕೇಶ ಮಾರ್ಗದರ್ಶನದಲ್ಲಿ ರೌಡಿಗಳ ಹುಟ್ಟಡಗಿಸಲು ಪೊಲೀಸರು ಸಜ್ಜಾಗುವ ಮೂಲಕ ಮತ್ತೆ ತಲೆ ಎತ್ತಲಿದ್ದ
ರೌಡಿಗಳು ನೇಪಥ್ಯಕ್ಕೆ ಸರಿಯುವಂತಾಗಿದೆ. ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.