ನವೆದಹಲಿ/ಮುಂಬೈ: ಮಹಾರಾಷ್ಟ್ರ ವಿಧಾನಸಭೆಯಲ್ಲಿ ಬಿಜೆಪಿಯ 12 ಶಾಸಕರನ್ನು 2021ರ ಜು.5ರಂದು ಸಸ್ಪೆಂಡ್ ಮಾಡಿರುವ ನಿರ್ಧಾರ ಅಸಾಂವಿಧಾನಿಕ ಮತ್ತು ವಿವೇಚನಾ ರಹಿತವಾದದ್ದು ಎಂದು ಸುಪ್ರೀಂಕೋರ್ಟ್ ಶುಕ್ರವಾರ ತೀರ್ಪು ನೀಡಿದೆ.
ನ್ಯಾ.ಎ.ಎಂ.ಖಾನ್ವಿಲ್ಕರ್, ನ್ಯಾ.ದಿನೇಶ್ ಮಾಹೇಶ್ವರಿ, ನ್ಯಾ.ಸಿ.ಟಿ.ರವಿಕುಮಾರ್ ಅವರನ್ನೊಳಗೊಂಡ ನ್ಯಾಯಪೀಠ ಈ ಆದೇಶ ನೀಡಿದೆ.
2021ರ ಜುಲೈನಲ್ಲಿ ನಡೆದಿದ್ದ ಮಹಾರಾಷ್ಟ್ರ ವಿಧಾನಸಭೆಯ ಮುಂಗಾರು ಅಧಿವೇಶನಕ್ಕೆ ಮಾತ್ರ ಸಸ್ಪೆಂಡ್ ಮಾಡಿ ನಿರ್ಣಯ ಕೈಗೊಂಡಿದ್ದರೆ ಸರಿಯಾಗಿ ಇರುತ್ತಿತ್ತು. ಆದಕ್ಕಿಂತ ಹೆಚ್ಚಿನ ಅವಧಿಗೆ ಶಾಸಕರನ್ನು ಸಸ್ಪೆಂಡ್ ಮಾಡುವ ನಿರ್ಧಾರ ಕೈಗೊಂಡ ಸ್ಪೀಕರ್ ಕ್ರಮ ದುರುದ್ದೇಶಪೂರಿತವಾಗಿದೆ ಎಂದು ಅಭಿಪ್ರಾಯಪಡಬೇಕಾಗುತ್ತದೆ. ಅಧಿವೇಶನ ಈಗಾಗಲೇ ಮುಕ್ತಾಯವಾಗಿರುವುದರಿಂದ ಸಸ್ಪೆಂಡ್ ಮಾಡಿರುವ ನಿರ್ಧಾರಕ್ಕೆ ಈಗ ಮಾನ್ಯತೆಯೇ ಇಲ್ಲವೆಂದು ನ್ಯಾಯಪೀಠ ಅಭಿಪ್ರಾಯಪಟ್ಟಿದೆ.
ಇದನ್ನೂ ಓದಿ:ಮೆಲಾನಿಯಾ ಟ್ರಂಪ್ ಟೋಪಿಗಿಲ್ಲ ಬೆಲೆ
2021 ಜು.5ರಂದು ಮುಂಗಾರು ಅಧಿವೇಶನದ ಮೊದಲ ದಿನ ಬಿಜೆಪಿಯ 12 ಮಂದಿ ಶಾಸಕರು ಸ್ಪೀಕರ್ ಭಾಸ್ಕರ ಜಾಧವ್ ಅವರ ಮೇಲೆ ಹಲ್ಲೆ ಮಾಡಿದ್ದರು ಎಂದು ಆರೋಪಿಸಿ, ಶಾಸಕರನ್ನು 1 ವರ್ಷ ಕಾಲ ಅಮಾ ನತು ಮಾಡುವ ನಿರ್ಣಯ ಕೈಗೊಳ್ಳಲಾಗಿತ್ತು. ಅದನ್ನು ಪ್ರಶ್ನಿಸಿ ಸುಪ್ರೀಂಕೋರ್ಟ್‌ನಲ್ಲಿ ಶಾಸಕರು ದಾವೆ ಹೂಡಿದ್ದರು.
ಎಂವಿಎ ಸರ್ಕಾರಕ್ಕೆ ಮುಖಭಂಗ:
ಸುಪ್ರೀಂಕೋರ್ಟ್ ತೀರ್ಪಿಗೆ ಹರ್ಷ ವ್ಯಕ್ತಪಡಿಸಿದ ಪ್ರತಿಪಕ್ಷ ನಾಯಕ ದೇವೇಂದ್ರ ಫಡ್ನವೀಸ್, “ಈ ತೀರ್ಪಿನಿಂದ ಮಹಾರಾಷ್ಟ್ರದ ಅಘಾಡಿ ಸರ್ಕಾ ರಕ್ಕೆ ಮುಖಭಂಗವಾಗಿದೆ. ಸರ್ಕಾರದ ಅಸಾಂವಿಧಾನಿಕ, ಅನೈತಿಕ, ಪ್ರಜಾಸತ್ತಾತ್ಮಕ ವಿರೋಧಿ ನಿಲುವುಗಳಿಗೆ ಉಂಟಾಗಿರುವ ಹಿನ್ನಡೆಯಾಗಿದೆ’ ಎಂದು ಬಣ್ಣಿಸಿದ್ದಾರೆ.
ಸುಪ್ರೀಂಕೋರ್ಟ್ ನೀಡಿದ ತೀರ್ಪಿನಿಂದ ಸತ್ಯಕ್ಕೆ ಜಯವಿದೆ ಎನ್ನುವುದು ಸಾಬೀತಾಗಿದೆ. ಏಕೆಂದರೆ ವಿಧಾನಸಭೆಯಲ್ಲಿ ಕೈಗೊಂಡದ್ದು ಪ್ರಜಾಪ್ರಭುತ್ವ ವಿರೋಧಿ ನಿರ್ಣಯವಾಗಿತ್ತು. ತೀರ್ಪಿನಿಂದಾಗಿ ಆ ಕ್ರಮ ಸರಿಯಲ್ಲ ಎನ್ನುವುದು ಸಾಬೀತಾಗಿದೆ.
ಜೆ.ಪಿ.ನಡ್ಡಾ, ಬಿಜೆಪಿ ಅಧ್ಯಕ್ಷ