ಚನ್ನಪಟ್ಟಣ: ಸಾರ್ವಜನಿಕರ ದಶಕದ ಕನಸು ಇನ್ನು ಈಡೇರಿಲ್ಲ. ಕ್ಷೇತ್ರದಲ್ಲಿ ಘಟಾನುಘಟಿ ರಾಜಕಾರಣಿಗಳಿದ್ರೂ, ಕೂಡ ರೈಲ್ವೆ ಸೇತುವೆ ಕಾಮಗಾರಿಗೆ ಮುಕ್ತಿ ಮಾತ್ರ ದೊರಕಿಲ್ಲ. ನನೆಗುದಿಗೆ ಬಿದ್ದಿರುವ ರೈಲ್ವೆ ಮೇಲ್ಸೇತುವೆಗೆ ರಾಜ್ಯ ಸರ್ಕಾರದಿಂದ ಈ ಯೋಜನೆಗೆ ಅಗತ್ಯವಿರುವ ಹಣವನ್ನು ಬಿಡುಗಡೆ ಮಾಡಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.
ಸುಮಾರು ವರ್ಷಗಳಿಂದ ರಾಮನಗರ ಜಿಲ್ಲೆ ಚನ್ನಪಟ್ಟಣದ ಎಲೇಕೇರಿ ರೈಲ್ವೆ ಮೇಲ್ಸೇತುವೆ ಕಾಮಗಾರಿ ನನೆಗುದಿಗೆ ಬಿದ್ದಿದೆ. ಚನ್ನಪಟ್ಟಣ ಕ್ಷೇತ್ರದ ಎಲೇಕೇರಿ ಗ್ರಾಮದ ಮಾರ್ಗ ವಾಗಿ 15ಕ್ಕೂ ಹೆಚ್ಚು ಗ್ರಾಮಗಳಿಗೆ ಇದೇ ರಸ್ತೆ ಸಂಪರ್ಕ ಕಲ್ಪಿಸುತ್ತದೆ. ಎಲೇಕೆರಿ (ಗೆಂಡೆ ಮಾಡು), ದೇವರಹೊಸಹಳ್ಳಿ, ರಾಂಪುರ, ಪಾರೇದೊಡ್ಡಿ, ಕನ್ನಮಂಗಲ, ಕಣ್ವ, ಕೋಮನಹಳ್ಳಿ ಸೇರಿದಂತೆ 15ಕ್ಕೂ ಹೆಚ್ಚು ಗ್ರಾಮಗಳಿಗೆ ಈ ಸೇತುವೆ ಮಾರ್ಗ ಅನುಕೂಲವಾಗಲಿದೆ.
ಇಂದು, ನಾಳೆ ಪ್ರಾರಂಭವಾಗಲಿದೆ ಎಂಬ ಕನಸು ಕಟ್ಟಿಕೊಂಡಿದ್ದ ಸಾರ್ವಜನಿಕರ ಕನಸು ಮಾತ್ರ ಈಡೇರುವ ಲಕ್ಷಣ ಮಾತ್ರ ಕಾಣುತ್ತಿಲ್ಲ. ಈ ಗ್ರಾಮಗಳಿಗೆ ಪೂರ್ಣ ಸಂಚಾರ ಆಗಬೇಕಾದ್ರೆ ರೈಲ್ವೆ ಸ್ಟೇಷನ್ ಮೇಲ್ಸೇತುವೆ ಮುಗಿದಾಗ ಮಾತ್ರ ಸಾಧ್ಯವಾಗಲಿದೆ. ಇತ್ತೀಚಿಗೆ ಪ್ರತಿ ಗಂಟೆಗೊಮ್ಮೆ ಬೆಂಗಳೂರು-ಮೈಸೂರು ಸೇರಿದಂತೆ ವಿವಿಧ ರಾಜ್ಯಗಳಿಗೆ ಇದೇ ಮಾರ್ಗವಾಗಿ ಸಂಚರಿಸಬೇಕು. ರೈಲು ಸಂಚರಿಸುವಾಗ ರೈಲ್ವೆ ಗೇಟ್ ಅಳವಡಿಸಿದಾಗ ಸುಮಾರು 10ರಿಂದ 15 ನಿಮಿಷ ವಾಹನ ಸಂಚಾರ ಅಸ್ತವ್ಯಸ್ತಗೊಳ್ಳಲಿದೆ. ಇದರಿಂದ ಈ ಭಾಗದ ಜನರು ಸಂಚಾರ ಮಾಡಲು ಸಾಕಷ್ಟು ಸಮಸ್ಯೆ ಅನುಭಸುತ್ತಿದ್ದಾರೆ.
ಸಮಸ್ಯೆಗೆ ಪರಿಹಾರ ಸಿಕ್ಕಿದೆ: ಈ ಸಮಸ್ಯೆಯ ಬಗ್ಗೆ ಮೊದಲಿಗೆ ಸಂಸದ ಡಿ.ಕೆ.ಸುರೇಶ್ ಗಮನಕ್ಕೆ ತಂದಿದ್ದ ಸ್ಥಳೀಯರು, ರೈಲ್ವೆ ಮೇಲ್ಸೇತುವೆ ನಿರ್ಮಾಣ ಮಾಡಿಕೊಡುವಂತೆ ಒತ್ತಾಯ ಮಾಡಿದ್ದರು. ನಂತರ ಈ ಯೋಜನೆಗೆ 15 ಕೋಟಿ ರೂ. ವೆಚ್ಚದ ಕ್ರಿಯಾಯೋಜನೆ ಸಿದ್ಧಪಡಿಸಲಾಗಿತ್ತು. ಆದರೆ, ರೈಲ್ವೆ ಮೇಲ್ಸೇತುವೆ ಕಾಮಗಾರಿಯ ಪೂರಕ ರಸ್ತೆ ಕಾಮಗಾರಿಗೆ ಭೂಸ್ವಾಧೀನ ಪ್ರಕ್ರಿಯೆಯಲ್ಲಿ ಭೂಮಾಲೀಕರಿಗೆ ಕೊಡಬೇಕಾಗಿದ್ದ ಪರಿಹಾರದ ಮೊತ್ತದ ವಿಚಾರದಲ್ಲಿ ಗೊಂದಲವಾಗಿ ಈ ಯೋಜನೆ ಅರ್ಧಕ್ಕೆ ನಿಂತಿತ್ತು. ಇತ್ತೀಚಿಗೆ ಈ ಸೇತವೆ ಕಾಮಗಾರಿಗೆ ಅಡ್ಡವಾಗಿದ್ದ ಎಲ್ಲಾ ಸಮಸ್ಯೆಗಳಿಗೂ ಕೂಡ ಈಗ ಪರಿಹಾರ ಸಿಕ್ಕಿದೆ ಎನ್ನುತ್ತಾರೆ ಸ್ಥಳೀಯರು.
ಕಾಮಗಾರಿ ಅರ್ಧಕ್ಕೆ ನಿಂತಿದೆ: ಇನ್ನು ಈ ರೈಲ್ವೆ ಮೇಲು ಸೇತುವೆ ನಗರಸಭೆ ವ್ಯಾಪ್ತಿಗೆ ಬರುವ ಭೂಮಾಲೀಕರ ಜಾಗಕ್ಕೆ ಚದರಡಿಗೆ 650-700 ರೂಪಾಯಿ ಹಣವನ್ನ ನಿಗದಿ ಮಾಡಲಾಗಿತ್ತು. ಆದರೆ, ಸರ್ಕಾರದ ಮೊತ್ತವನ್ನ ಪ್ರಶ್ನಿಸಿ ಕೆಲವರು ಭೂಮಿಯನ್ನ ಬಿಟ್ಟು ಕೊಡಲು ನಕಾರ ಮಾಡಿದ್ದರು. ಆದರೆ, ನಂತರ ಸಮಸ್ಯೆ ಬಗ್ಗೆ ಚಿಂತನೆ ನಡೆಸಿದ ಎಚ್‌ಡಿಕೆ ಸರ್ಕಾರದ ಜೊತೆಗೆ ಮಾತು ಕತೆ ಮಾಡಿ ಪ್ರತಿ ಚದರಡಿಗೆ 1200-1400 ರೂಪಾಯಿ ಪರಿಹಾರ ಕೊಡಲು ನಿರ್ಧಾರ ಮಾಡಿದ್ದು, ಯೋಜನೆಗೆ ಇದ್ದ ಸಮಸ್ಯೆ ಈಗ ಬಗೆಹರಿದಿದ್ದು 8 ಕೋಟಿಗೂ ಹೆಚ್ಚು ಹಣ ಬಿಡುಗಡೆ ಗೊಳಿಸಿದ್ದಾರೆ. ಆದರೂ, ಕೂಡ ಇದುವರೆಗೆ ಕಾಮಗಾರಿ ಅರ್ಧಕ್ಕೆ ನಿಂತಿದೆ.
ಮಾಜಿ ಸಿಎಂ ಎಚ್‌ಡಿಕೆ ಭರವಸೆ: ಇನ್ನು ಕ್ಷೇತ್ರದ ಶಾಸಕರು ಹಾಗೂ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ರಾಜ್ಯ ಸರ್ಕಾರದಿಂದ ಈ ಯೋಜನೆಗೆ ಅಗತ್ಯವಿದ್ದ ಹಣವನ್ನ ಬಿಡುಗಡೆ ಮಾಡಿಸುವ ಭರವಸೆ ನೀಡಿದ್ದಾರೆ. ಶೀಘ್ರದಲ್ಲೇ ಸರ್ಕಾರದಿಂದ ಹಣ ಬಿಡುಗಡೆ ಮಾಡಿಸಿ ಈ ಭಾಗದ ಜನರಿಗೆ ಅನುಕೂಲ ಮಾಡಿ ಕೊಡಲಿದ್ದಾರೆ. ಪ್ರತಿದಿನ ಕೂಡ ಈ ರೈಲ್ವೆ ಹಳಿಗೆ ಗೇಟ್ ಹಾಕುವುದರಿಂದ ಸಾರ್ವಜನಿಕರು ಕೂಡ ಪರದಾಡುತ್ತಿದ್ದಾರೆ. ಇದು ಕೂಡ ನನ್ನ ಗಮನಕ್ಕೆ ಬಂದಿದೆ. ಈ ಕೂಡಲೆ ಎಲ್ಲ ಸಮಸ್ಯೆಗಳಿಗೆ ಪರಿಹಾರ ಒದಗಿಸಲಾಗುವುದು ಎಂದು ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ತಿಳಿಸಿದ್ದಾರೆ. ಒಟ್ಟಾರೆ ದಶಕಗಳ ಕನಸು ಯಾವಾಗ ಬಗೆ ಹರಿಯಲಿದೆ ಎಂದು ಸಾರ್ವಜನಿಕರು ಕಾತುರದಿಂದ ಕಾಯುತ್ತಿದ್ದಾರೆ.
ಅದಷ್ಟು ಬೇಗ ಕಾಮಗಾರಿ ಮುಗಿದು ಈ ಭಾಗದ ಜನರುಗೆ ಅನುಕೂಲ ಆಗಲಿ ಎಂಬುದು ನಾಗರಿಕರ ಆಶಯ. ಹೃದಯ ಭಾಗದಲ್ಲಿ ನಿರ್ಮಾಣವಾಗುತ್ತಿರುವ ರೈಲ್ವೆ ಮೇಲ್ಸೇತುವೆಗೂ, ನಮಗೂ ಯಾವುದೇ ಸಂಬಂಧ ಇಲ್ಲ. ರಸ್ತೆಗೆ ಮೀಸಲು ಆಗಿರುವ ಜಾಗವನ್ನು ಈಗಾಗಲೆ ಈ ಹಿಂದೆಯೇ ನಗರಸಭೆ ಯಿಂದ ಖಾತೆ ಮಾಡಿ ಕೊಡಲಾಗಿದೆ. ಅವರಿಗೆ ಪರ್ಯಾಯ ಜಾಗ ಮಂಜೂರು ಮಾಡಿದ ಮೇಲೆ ರಸ್ತೆ ನಿರ್ಮಾಣ ಮಾಡಬೇಕಿದೆ. ಸದ್ಯಕ್ಕೆ ನಾವೇನು ಮಾಡಲು ಸಾಧ್ಯವಿಲ್ಲ
. – ಶಿವನಂದ್ ಕರೇಗೌಡ, ಚನ್ನಪಟ್ಟಣ ಆಯುಕ್ತ
ಈಗಾಗಲೆ ರೈಲ್ವೆ ಮೇಲ್ಸೇತುವೆ ಕಾಮ ಗಾರಿ ಮುಗಿದಿದೆ. ರಸ್ತೆ ಸಂಪರ್ಕ ಕಾರ್ಯ ಆಗಬೇಕಿದೆ. ರಸ್ತೆಗಾಗಿ ಈಗಾಗಲೆ ಭೂಮಿಯನ್ನು ಕೂಡ ನಗರಸಭೆ ಎಸ್‌ಆರ್ ದರ ನಿಗದಿಯಲ್ಲೇ ಭೂಮಾಲೀಕರಿಗೆ ನೀಡಿ ವಶಪಡಿಸಿಕೊಳ್ಳಲಾಗಿದೆ. ರಸ್ತೆ ಕಾಮಗಾರಿ ಮುಗಿಯಬೇಕಿತ್ತು. ಸಣ್ಣಪುಟ್ಟ ಗೊಂದಲದಿಂದ ಕಾಮಗಾರಿ ಅರ್ಧಕ್ಕೆ ನಿಂತಿದೆ.
– ಮುದ್ದುಕೃಷ್ಣ, ಚನ್ನಪಟ್ಟಣ ನಗರಸಭೆ ಮಾಜಿ ಉಪಾಧ್ಯಕ್ಷ
– ಎಂ. ಶಿವಮಾದು