ಅಂದು ಎಲೆಕ್ಷನ್ ದಿನ. ಎಲ್ಲೆಲ್ಲೂ ಸಂಭ್ರಮದ ವಾತಾವರಣವಿತ್ತು. ಅಪ್ಪ ಅಮ್ಮನ ಜೊತೆ ತಾನೂ ಎಲೆಕ್ಷನ್ ಬೂತಿಗೆ ಹೋಗಬೇಕೆಂಬುದು ವಿಕಾಸನ ಆಸೆ. ಆದರೆ ಹನ್ನೊಂದು ಗಂಟೆಯಾದರೂ ಅಪ್ಪ ಅಮ್ಮ ಅಲ್ಲಾಡೋದೇ ಇಲ್ಲವಲ್ಲ ಅಂದುಕೊಂಡ ವಿಕಾಸ. ಹದಿನೆಂಟು ವರ್ಷ ತುಂಬಿದವರೆಲ್ಲ ವೋಟು ಮಾಡಬೇಕು ಎಂದಿದ್ದ ಟೀಚರ್ ಮಾತುಗಳು ವಿಕಾಸನ ಮೇಲೆ ಪರಿಣಾಮ ಬೀರಿತ್ತು. ಅಪ್ಪ ಅಮ್ಮ ಮರೆತಿರಬಹುದೆಂದು “ವೋಟು ಮಾಡಲು ಹೋಗೋಣ’ ಎಂದು ಅವನು ಒಂದೆರೆಡು ಬಾರಿ ನೆನಪಿಸಿಯೂ ಇದ್ದ.
ಹನ್ನೊಂದೂವರೆಗೆ ಅಪ್ಪನ ಸ್ನೇಹಿತ ರಾವ್ ಬಂದರು. ವಿಕಾಸನಿಗೆ ಬೇಸರ. ಅಪ್ಪ ಅಮ್ಮ ವೋಟು ಮಾಡಲು ಹೋಗುವುದು ಇನ್ನೂ ನಿಧಾನವಾಗುತ್ತದಲ್ಲ ಎಂದು. ಅಪ್ಪ ಮತ್ತು ರಾವ್ ಅಂಕಲ್ ಹರಟೆಗೆ ಕುಳಿತರು. ವಿಕಾಸನೂ ದೂರದ ಕುರ್ಚಿಯಲ್ಲಿ ಕುಳಿತು ಅವರ ಸಂಭಾಷಣೆಯನ್ನು ಕೇಳುತ್ತಿದ್ದ.
“ನೀನು ಏನೇ ಹೇಳು ಕುಮಾರ್, ಈ ಎಲೆಕ್ಷನ್ನು, ವೋಟಿಂಗ್ ಸಿಸ್ಟಮ್ಮು ಎಲ್ಲ ಬೋಗಸ್. ನಮಗೆ ಪ್ರಜಾಪ್ರಭುತ್ವ ಆಡಳಿತ ಸರಿಯೇ ಅಲ್ಲ. ಏನಿದ್ದರೂ ಮಿಲಿಟರಿ ಆಡಳಿತವೇ ಸರಿ. ಸಾರ್ವಜನಿಕ ಸೇವೆ ಎನ್ನುವುದು ಒಂದು ದಂಧೆಯಾಗಿದೆ. ವೋಟು ಗಳಿಸಲು ಎಲೆಕ್ಷನ್ ಸಮಯದಲ್ಲಿ ಖರ್ಚು ಮಾಡುತ್ತಾರೆ. ಗೆದ್ದ ಬಳಿಕ ಅದರ ಹತ್ತರಷ್ಟು ಗಳಿಸುತ್ತಾರೆ. ಅದಕ್ಕೆ ನಾನು ಎಲೆಕ್ಷನ್ ದಿವಸ ವೋಟು ಮಾಡಲು ಹೋಗುವುದೇ ಇಲ್ಲ. ನಮ್ಮನೇಲಿ ಯಾರೂ ಹೋಗುವುದಿಲ್ಲ. ಅದೆಲ್ಲ ದಂಡ ಏನೂ ಪ್ರಯೋಜನವಿಲ್ಲ. ಆ ಎಲೆಕ್ಷನ್ ಬೂತಿಗೆ ಹೋಗೋದು, ಬಿಸಿಲಲ್ಲಿ ಗಂಟೆಗಟ್ಟಲೆ ನಿಲ್ಲೋದು ಎಲ್ಲ ತಾಪತ್ರಯ. ಅದಕ್ಕೆ ವೋಟು ಮಾಡುವುದೇ ಇಲ್ಲ. ಇವತ್ತು ರಜೆ ಕೊಟ್ಟದ್ದು ವಾಸಿ ಆಯಿತು. ಒಂದು ದಿವಸ ಆರಾಮ’.
ಮಾತು ಮುಂದುವರೆಯಿತು. ಸ್ವಲ್ಪ ಸಮಯದ ನಂತರ ಅಮ್ಮ ಮಜ್ಜಿಗೆ ತಂದರು. ಮಧ್ಯಾಹ್ನ ಒಂದೂವರೆಯಾದರೂ ಎದ್ದು ಹೋಗುವ ಸೂಚನೆ ಕಾಣಲಿಲ್ಲ. ವಿಕಾಸನಿಗೆ ಅಪ್ಪ ಅಮ್ಮನ ಜೊತೆ ವೋಟಿನ ಬೂತಿಗೆ ಹೋಗುವ ತವಕ. ಅಸಹನೆಯಿಂದ ವಿಕಾಸ ಅಪ್ಪ ಮತ್ತು ರಾವ್ ಇದ್ದ ಸೋಫಾ ಬಳಿ ಬಂದು ಧೊಪ್ ಎಂದು ಕುಳಿತುಕೊಂಡ. ವಿಕಾಸನ ವರ್ತನೆಯನ್ನು ಗಮನಿಸಿ ಅಪ್ಪ ಹೇಳಿದರು,” ನನ್ನ ಮಗ ವಿಕಾಸ, ಬೆಳಗಿನಿಂದ ನೂರು ಬಾರಿ ನೆನಪಿಸಿದ್ದಾನೆ. ವೋಟು ಮಾಡಲು ಹೋಗಬೇಕೆಂದು. ನೀನು ಬಂದದ್ದರಿಂದ ಇನ್ನೂ ವಿಳಂಬವಾಯಿತೆಂದು ಬೇಸರಿಸಿದ್ದಾನೆ.
ರಾವ್ ಕೇಳಿದರು, “ಹೌದೇನೋ ವಿಕಾಸ, ಎಲೆಕ್ಷನ್ನು, ವೋಟಿಂಗ್ ಅಂದ್ರೆ ನಿನಗೆ ಇಷ್ಟಾನ?”ಹೂಂ ಎಂದು ತಲೆ ಆಡಿಸಿದ ವಿಕಾಸ. “ಅದೆಲ್ಲ ದಂಡ. ನಮ್ಮ ಟೈಮು ವೇಸ್ಟು, ಅಂದರು ಮಾಮ. “ಯಾಕೆ? ಎಂದ ವಿಕಾಸ. “ನೀನಿನ್ನೂ ಚಿಕ್ಕವನು, ವಿಕಾಸ್. ನಿನಗೇನೂ ಅರ್ಥವಾಗುವುದಿಲ್ಲ. ಈ ಎಲೆಕ್ಷನ್ನು ವೋಟಿಂಗ್ ಎಲ್ಲ ಕಣ್ಣೊರೆಸುವ ತಂತ್ರಗಳು. “ಇಲ್ಲ ಅಂಕಲ್, ನಮ್ಮ ಟೀಚರ್ ಹೇಳಿದ್ದಾರೆ ಪ್ರಜಾಪ್ರಭುತ್ವವೇ ಶ್ರೇಷ್ಠವಂತೆ. ಎಲ್ಲರೂ ವೋಟು ಮಾಡಲೇಬೇಕಂತೆ’. “ಓಹೋ….. ನಿಮ್ಮ ಟೀಚರ್ ನಿನ್ನ ಕಿವಿ ಕೆಡಿಸಿದ್ದಾರೆ!’
ಅಪ್ಪ ಹೇಳಿದರು,”ನಮ್ಮ ವಿಕಾಸನಿಗೆ ಎಲ್ಲವೂ ಅರ್ಥವಾಗುತ್ತೆ, ರಾವ್. ಶಾಲೆಯಲ್ಲಿ ಟೀಚರು ಹೇಳಿದ್ದನ್ನೆಲ್ಲ ಚಾಚೂ ತಪ್ಪದೆ ಮನೆಯಲ್ಲಿ ಹೇಳುತ್ತಾನೆ. ನಾವು ವೋಟು ಮಾಡಲೇಬೇಕೆಂದು ಬೆಳಗ್ಗಿನಿಂದ ಹಟ ಹಿಡಿದಿದ್ದಾನೆ. ವಿಕಾಸನಿಗೋಸ್ಕರವಾದರೂ ನಾನು ನನ್ನ ಹೆಂಡತಿ ವೋಟ್ ಮಾಡಿ ಬರಬೇಕು’. ಇದನ್ನು ಕೇಳಿ ವಿಕಾಸನಿಗೆ ಸಂತೋಷವಾಯಿತು.
“ನಿನ್ನ ಮಗ ವಿಕಾಸ ಇಷ್ಟು ಚಿಕ್ಕ ವಯಸ್ಸಿಗೆ ಬಹಳ ಚುರುಕಿದ್ದಾನೆ ಕಣಯ್ನಾ…’ ಎಂದರು ರಾವ್. ಅಪ್ಪ “ಅಷ್ಟೇ ಅಲ್ಲ ರಾವ್, ವಿಕಾಸ ಕನ್ನಡದಲ್ಲೂ ಚೆನ್ನಾಗಿ ಬರೆಯಲು ಕಲಿತಿದ್ದಾನೆ’. “ಹಾಗೇನು?! ವಿಕಾಸ ಪುಟ್ಟ, ಕನ್ನಡದಲ್ಲಿ ಏನಾದರೂ ಬರೆದು ತೋರಿಸು ರಾವ್ ಮಾಮಂಗೆ. ಪೆನ್ನು ಪೇಪರ್ ತರಲು ವಿಕಾಸ ಎದ್ದು ಓಡಿ ಹೋದ. ಸ್ನೇಹಿತರಿಬ್ಬರೂ ತಮ್ಮ ಸಂಭಾಷಣೆಯನ್ನು ಮುಂದುವರೆಸಿದರು.
ಐದು ನಿಮಿಷಗಳ ನಂತರ ವಿಕಾಸ ಒಂದು ಮುಚ್ಚಿದ ಕವರನ್ನು ತಂದು ರಾವ್ ಅವರ ಕೈಯಲ್ಲಿರಿಸಿ ತನ್ನ ಕೋಣೆಗೆ ಹೋಗಿ ಬಾಗಿಲ ಸಂದಿನಿಂದ ದೊಡ್ಡವರಿಬ್ಬರನ್ನು ನೋಡುತ್ತಿದ್ದ. ಮಾತಿನ ಮಧ್ಯೆ ಕವರನ್ನು ರಾವ್ ತೆರೆದರು. ಸುತ್ತ ಒಮ್ಮೆ ಕಣ್ಣು ಹಾಯಿಸಿ, ತಮ್ಮಲ್ಲೆ ಒಮ್ಮೆ ಓದಿಕೊಂಡರು.
“ಕುಮಾರ್, ಬರ್ತೀನಪ್ಪ ಅರ್ಜೆಂಟ್ ಕೆಲಸ ಇದೆ’, ಎನ್ನುತ್ತ ಅವರಸರದಿಂದ ಹೊರಟರು ರಾವ್.
ವಿಕಾಸ ಏನು ಬರೆದಿದ್ದಾನೆ ಪತ್ರದಲ್ಲಿ ಎಂಬ ಕುತೂಹಲದಿಂದ ಅಪ್ಪ, ರಾವ್ ಅವರ ಕೈಯಿಂದ ಕವರ್ ತೆಗೆದುಕೊಂಡರು. ಒಳಗಿದ್ದ ವಿಕಾಸನ ಪತ್ರ ಓದಿದರು.
“ರಾವ್ ಮಾಮ, ಹೋಗಿ ವೋಟ್ ಮಾಡಿ, ಪ್ಲೀಸ್
ಮತ್ತೂರು ಸುಬ್ಬಣ್ಣ