Advertisement
2006ರಲ್ಲಿ ಗ್ರಾಮಗಳ ಸಮಗ್ರ ಅಭಿವೃದ್ಧಿಗೆಂದು ಆರಂಭಿಸಿದ್ದ ಯೋಜನೆಯಡಿ ಸಿಎಂ ಗ್ರಾಮ ವಾಸ್ತವ್ಯ ಕಾರ್ಯಕ್ರಮಕ್ಕೆ ತಾಲೂಕಿನ ಎರಡು ಗ್ರಾಮ ಆಯ್ಕೆ ಮಾಡಿಕೊಂಡಿದ್ದರು. ಒಂದು ಬಂಡಿಹೊಳೆ ಮತ್ತೂಂದು ನವಿಲುಮಾರನಹಳ್ಳಿ. ಕಾರಣಾಂತರಗಳಿಂದ ನವಿಲು ಮಾರನಹಳ್ಳಿಯಲ್ಲಿ ವಾಸ್ತವ್ಯ ಮಾಡಲಿಲ್ಲ. ಆದರೆ ಬಂಡಿಹೊಳೆ ಗ್ರಾಮದ ಶ್ರೀನಿವಾಸಶೆಟ್ಟಿ ಮನೆಯಲ್ಲಿ ವಾಸ್ತವ್ಯ ಮಾಡಿ ಬೆಳಗ್ಗೆ ಗ್ರಾಮದ ಸರ್ಕಾರಿ ಶಾಲಾ ಆವರಣದಲ್ಲಿ ಬಹಿರಂಗ ಸಭೆ ನಡೆಸಿ ಗ್ರಾಮಸ್ಥರ ಕುಂದುಕೊರತೆಗಳ ಮನವಿ ಪತ್ರಗಳನ್ನೂ ಸ್ವೀಕರಿಸಿ ಅಭಿವೃದ್ಧಿ ಮಾಡುವುದಾಗಿ ಭರವಸೆಯೂ ನೀಡಿದ್ದರು.
Related Articles
Advertisement
ಎಂದಿನಂತೆ ಇತರೆ ಗ್ರಾಮಗಳಂತೆ ವಿವಿಧ ಯೋಜನೆಗಳಡಿ ಕೆಲ ರಸ್ತೆಗಳಿಗೆ ಕಾಂಕ್ರೀಟ್ ಹಾಕಲಾಗಿದೆ. ಅದೂ ಕಳಪೆ ಕಾಮಗಾರಿ ಮಾಡಲಾಗಿದೆ. ಜೊತೆಗೆ ವಿದ್ಯುತ್ ಕಂಬಗಳ ಅಳವಡಿಕೆ ಮತ್ತು ನಾಲ್ಕು ಕೊಳವೆ ಬಾವಿ ಕೊರೆಸಿದ್ದಾರೆ. ಒಬ್ಬ ಅಂಗವಿಕಲನಿಗೆ ಸೆಸ್ಕ್ ಕಚೇರಿಯಲ್ಲಿ ಕೆಲಸ ಕೊಡಿಸಿದ್ದಾರೆ. ಇವು ಹೊರತುಪಡಿಸಿ ಗ್ರಾಮದಲ್ಲಿ ಯಾವುದೇ ಅಭಿವೃದ್ಧಿ ಕೆಲಸಗಳು ನಡೆದಿಲ್ಲ.
ಮುಖ್ಯವಾಗಿ ಚರಂಡಿ ಅಭಿವೃದ್ಧಿಯಾಗಿಲ್ಲ. ಮುಖ್ಯಮಂತ್ರಿಗಳು ಬಹಿರಂಗ ಸಭೆ ನಡೆಸಿದ ಶಾಲಾ ಕಟ್ಟಡ ಕುಸಿದು ಬಿದ್ದಿದ್ದರೂ ಶಾಲೆಯ ಅಭಿವೃದ್ಧಿಗೆ ಒಂದೇ ಒಂದು ರೂಪಾಯಿ ಹಣ ನೀಡಿಲ್ಲ. ಜೊತೆಗೆ ಸರ್ಕಾರಿ ಆಸ್ಪತ್ರೆಯತ್ತ ಯಾರೂ ತಿರುಗಿಯೂ ನೋಡಿಲ್ಲ.
ವಾಸ್ತವ್ಯವಿದ್ದ ಮನೆಗೂ ಸಿಗದ ನೆರವು: ರಾಜ್ಯದ ಮುಖ್ಯಮಂತ್ರಿ ನಾಡಿನ ದೊರೆ ನಮ್ಮ ಮನೆಗೆ ಬರುತ್ತಾರೆಂದರೆ ದೇವರೆ ನಮ್ಮ ನಮಗೆ ಬಂದಷ್ಟು ಅಪರೂಪ ಮತ್ತು ಶ್ರದ್ಧಾಭಕ್ತಿ. ಅವರು ಬಂದರೆ ನಮ್ಮ ಕಷ್ಟಗಳೆಲ್ಲವೂ ತೊಲಗಿ ನೆಮ್ಮದಿಯ ಜೀವನ ನಡೆಸಬಹುದು ಎಂದು ಶ್ರೀನಿವಾಸಶೆಟ್ಟಿ ಹತ್ತಾರು ಕನಸು ಕಂಡಿದ್ದರು. ಮುಖ್ಯಮಂತ್ರಿಗಳೂ ಮನೆ ಮಾಲೀಕನ ಸಮಸ್ಯೆಗಳ ಮಾಹಿತಿ ಪಡೆದುಕೊಂಡರು. ಕೃಷಿಗೆ ಜಮೀನು ಇಲ್ಲವೆಂದು ಕೂಡಲೇ ಎರಡು ಎಕರೆ ಜಮೀನು ನೀಡುತ್ತೇನೆ. ಬಳಿಕ ನಿಮ್ಮಿಬ್ಬರು ಮಕ್ಕಳ ಪೈಕಿ ಒಬ್ಬರಿಗೆ ಸರ್ಕಾರಿ ಕೆಲಸ ಕೊಡಿಸುತ್ತೇನೆ ಎಂದು ಭರವಸೆ ನೀಡಿದರು.
ಆದರೆ ಮುಖ್ಯಮಂತ್ರಿಗಳು ಗ್ರಾಮದಲ್ಲಿ ಹೇಳಿದ್ದಷ್ಟೆ ಹೊರತು, ಗ್ರಾಮದಿಂದ ಹೊರ ಹೋಗುತ್ತಿದ್ದಂತೆ ಅವೆಲ್ಲವೂ ಮುಖ್ಯಮಂತ್ರಿಗಳಿಗೆ ಮರೆತೇ ಹೋಯಿತು.
ಸೋರುವ ಮೇಲ್ಛಾವಣಿ: ಮುಖ್ಯಮಂತ್ರಿಗಳು ಬರುವ ಮುನ್ನ ಶ್ರೀನಿವಾಸಶೆಟ್ಟಿ ಮನೆಗೆ ಶೌಚಾಲಯ, ಹಾಸಿಗೆ, ದಿಂಬು, ಫ್ಯಾನ್ ಮತ್ತಿತರ ಸೌಲಭ್ಯಗಳು ನೀಡಿದ್ದರು. ಅತ್ತ ಮುಖ್ಯಮಂತ್ರಿ ಗ್ರಾಮದಿಂದ ಹೊರಡುತ್ತಿದ್ದರೆ ಇತ್ತ ಅಧಿಕಾರಿಗಳು ಮನೆಗೆ ನೀಡಿದ್ದ ಎಲ್ಲಾ ಸವಲತ್ತುಗಳನ್ನು ಮತ್ತೆ ವಾಪಾಸ್ ತೆಗೆದುಕೊಂಡು ಹೋಗಿಬಿಟ್ಟರು. ಬಳಿಕ ಜಮೀನೂ ಇಲ್ಲಾ, ಮಕ್ಕಳಿಗೆ ಕೆಲಸವೂ ಕೊಡಿಸಿಲ್ಲ. ಜೊತೆಗೆ ಅಧಿಕಾರಿಗಳು ಅವರ ಮನೆಯಲ್ಲಿದ್ದ ಗುಣಮಟ್ಟದ ಹಳೆಯ ಮರಗಳನ್ನೂ ತೆಗೆದು ಕಳಪೆ ಗುಣಮಟ್ಟದ ಜಂತಿಗಳನ್ನು ಬಳಸಿಕೊಂಡು ಮೇಲ್ಛಾವಣಿ ನಿರ್ಮಿಸಿಕೊಟ್ಟಿದ್ದರು. ಈಗ ಮಳೆ ಬಂದರೆ ಆ ಮೇಲ್ಛಾವಣಿಯೂ ಸೋರುತ್ತಿದೆ.