ಸರಕಾರಿ ಕಾಲೇಜುಗಳಲ್ಲಿ ಪಾಠವೇ ಮುಗಿದಿಲ್ಲ; ಆದರೆ ಪರೀಕ್ಷೆಗೆ ತಯಾರಿ ನಡೆಸುವ ಅನಿವಾರ್ಯ ವಿದ್ಯಾರ್ಥಿಗಳದ್ದು. ಒಂದು ವೇಳೆ ಈ ಕಾರಣಕ್ಕೆ ಪರೀಕ್ಷೆಯನ್ನು ಮುಂದೂಡಿದರೆ, ಪಠ್ಯ ಬಹುತೇಕ ಪೂರ್ಣವಾಗಿರುವ ಖಾಸಗಿ ಕಾಲೇಜುಗಳ ವಿದ್ಯಾರ್ಥಿಗಳು ಪರೀಕ್ಷೆ ಇಲ್ಲದೆ ಅಡಕತ್ತರಿಯಲ್ಲಿ ಸಿಲುಕಿದಂತಾಗಲಿದ್ದಾರೆ.
Advertisement
ಸರಕಾರಿ ಕಾಲೇಜಿನಲ್ಲಿ ಅತಿಥಿ ಉಪನ್ಯಾಸಕರಿಗೆ ಸಂಬಂಧಿಸಿದಂತೆ ಶೇ. 75ಕ್ಕೂ ಅಧಿಕ ಪಠ್ಯ ಬೋಧನೆಗೆ ಬಾಕಿ ಉಳಿದಿವೆ. ಆದರೆ ವಿ.ವಿ. ವ್ಯಾಪ್ತಿಯ ಖಾಸಗಿ ಕಾಲೇಜುಗಳಲ್ಲಿ ಶೇ. 90ಕ್ಕೂ ಅಧಿಕ ಪಠ್ಯ ಬೋಧನೆ ಪೂರ್ಣವಾಗಿದ್ದು, ಪರೀಕ್ಷೆಗೆ ತಯಾರಿಯೂ ನಡೆಯುತ್ತಿದೆ. ಇದು ಪರೀಕ್ಷೆ ಪ್ರಕ್ರಿಯೆಗೆ ಬಹುದೊಡ್ಡ ಸವಾಲು ತಂದಿರಿಸಿದೆ.ಮಂಗಳೂರು ವಿ.ವಿ.ಯಲ್ಲಿ ಮಾ. 5ಕ್ಕೆ ಈ ಸಾಲಿನ ಶೈಕ್ಷಣಿಕ ಕ್ಯಾಲೆಂಡರ್ ಅಂತ್ಯಗೊಳ್ಳಲಿದೆ. ವಿ.ವಿ. ವ್ಯಾಪ್ತಿಯಲ್ಲಿ 38 ಸರಕಾರಿ ಕಾಲೇಜುಗಳಿದ್ದು, ಉಳಿದ ಶೇ. 75ರಷ್ಟು ಖಾಸಗಿ ಕಾಲೇಜುಗಳು. ಇನ್ನು ಒಂದು ತಿಂಗಳೊಳಗೆ ಖಾಸಗಿ ಕಾಲೇಜುಗಳಲ್ಲಿ ಎಲ್ಲ ಪಠ್ಯ ಪೂರ್ಣವಾಗುವ ನಿರೀಕ್ಷೆಯಿದೆ. ಆದರೆ ಸರಕಾರಿ ಕಾಲೇಜಿನಲ್ಲಿ ಪಠ್ಯ ಮುಗಿಯದ ಕಾರಣ ಶೈಕ್ಷಣಿಕ ವರ್ಷವನ್ನು ಮುಂದೂಡುವಂತೆ ಆಗ್ರಹಿಸಿ ಕೆಲವು ಕಾಲೇಜಿನವರು ವಿ.ವಿ.ಗೆ ಮನವಿ ಮಾಡಿದ್ದಾರೆ.
ಅತಿಥಿ ಉಪನ್ಯಾಸಕರ ಹಿತರಕ್ಷಣ ಸಮಿತಿ ದ.ಕ. ಜಿಲ್ಲಾಧ್ಯಕ್ಷ ಧೀರಜ್ ಕುಮಾರ್ “ಉದಯವಾಣಿ’ ಜತೆಗೆ ಮಾತನಾಡಿ, ಸರಕಾರದ ನೀತಿಯಿಂದಾಗಿ ಇಂದು ವಿದ್ಯಾರ್ಥಿಗಳ ಪರೀಕ್ಷೆ ವಿಚಾರ ಅನಿಶ್ಚಿತವಾಗಿದೆ. ಅತಿಥಿ ಉಪನ್ಯಾಸಕರ ಕೆಲಸ ಕಿತ್ತುಕೊಂಡು ಅನ್ಯಾಯ ಮಾಡುತ್ತಿರುವುದು ಸರಿಯಲ್ಲ. ಆದರೂ ಶೈಕ್ಷಣಿಕ ಅವಧಿ ವಿಸ್ತರಿಸಿದರೆ ಬಾಕಿಯಾದ ಪಠ್ಯ ಪೂರ್ಣಗೊಳಿಸಲು ನಾವು ಬದ್ಧರಾಗಿದ್ದೇವೆ ಎಂದು ತಿಳಿಸಿದ್ದಾರೆ.
ಪ್ರಸಕ್ತ ಶೈಕ್ಷಣಿಕ ಕ್ಯಾಲೆಂಡರನ್ನು ಮುಂದೂಡಲು ಸದ್ಯಕ್ಕೆ ಮಂಗಳೂರು ವಿಶ್ವವಿದ್ಯಾನಿಲಯಕ್ಕೆ ಮನಸ್ಸಿಲ್ಲ. ಒಂದು ವೇಳೆ ಕಷ್ಟವಾದರೆ ಶೇ. 25ರಷ್ಟು ಪಠ್ಯ ಕಡಿತ ಮಾಡಿಯಾದರೂ ನಿಗದಿತ ದಿನಾಂಕ ದಲ್ಲೇ ಪರೀಕ್ಷೆ ಮಾಡಲೇ ಬೇಕು ಎಂಬ ಉತ್ಸಾಹದಲ್ಲಿದೆ. ಇದೇ ಸಲಹೆಯನ್ನು ಸರಕಾರಕ್ಕೆ ನೀಡಿದೆ. ಮುಂದೇನು? ಎಂಬ ಪ್ರಶ್ನೆಗೆ ಉತ್ತರ ಸಿಗಬೇಕಿದೆ. ಇದನ್ನೂ ಓದಿ:ಜೆಎನ್‌ಯುಗೆ ಶಾಂತಿ ಪಂಡಿತ್ ಕುಲಪತಿ; ಇದೇ ಮೊದಲ ಬಾರಿಗೆ ಮಹಿಳಾ ಕುಲಪತಿ ನೇಮಕ
Related Articles
ಕಾಲೇಜು ಪರೀಕ್ಷೆಯ ಅನಿಶ್ಚಿತತೆ ಎದುರಾಗುವ ಬಗ್ಗೆ ಎಚ್ಚೆತ್ತುಕೊಂಡಿರುವ ಸರಕಾರ ರಾಜ್ಯದ 23 ವಿ.ವಿ.ಗಳ ಜತೆಗೆ ಪ್ರಥಮ ಹಂತದ ಸಭೆ ನಡೆಸಿದೆ. ಪ್ರಸ್ತುತ ಸರಕಾರಿ ಕಾಲೇಜಿನ ಪಠ್ಯ ಪೂರ್ಣವಾಗದ ಕಾರಣ ಮುಂದೇನು ಮಾಡಬಹುದು ಎಂಬ ಬಗ್ಗೆ ಚರ್ಚಿಸಲಾಗಿದೆ. ಇದರಂತೆ ಎಲ್ಲ ವಿ.ವಿ.ಗಳು ತಾವು ನಿಗದಿ ಮಾಡಿದ ಪರೀಕ್ಷಾ ವೇಳಾಪಟ್ಟಿಯ ವಿವರವನ್ನು ಸರಕಾರಕ್ಕೆ ಸಲ್ಲಿಸಲಿವೆ. ಅದರ ಆಧಾರದಲ್ಲಿ ರಾಜ್ಯಾದ್ಯಂತ ಎಲ್ಲ ವಿ.ವಿ. ವ್ಯಾಪ್ತಿಗೆ ಏಕಸೂತ್ರದಂತೆ ಹೊಸ ವೇಳಾಪಟ್ಟಿ ಪ್ರಕಟಿಸುವ ಸಾಧ್ಯತೆಯೂ ಇದೆ ಎನ್ನಲಾಗಿದೆ.
Advertisement
ಸರಕಾರದ ತೀರ್ಮಾನದಂತೆ ಕ್ರಮ
ಮಾ. 5ಕ್ಕೆ ಮಂಗಳೂರು ವಿ.ವಿ. ವ್ಯಾಪ್ತಿಯಲ್ಲಿ ಈ ಸಾಲಿನ ಶೈಕ್ಷಣಿಕ ಕ್ಯಾಲೆಂಡರ್ ಅಂತ್ಯಗೊಳ್ಳಲಿದೆ. ಖಾಸಗಿ ಕಾಲೇಜುಗಳಲ್ಲಿ ಈಗಾಗಲೇ ಬಹುತೇಕ ಪಠ್ಯ ಪೂರ್ಣಗೊಂಡಿದ್ದರೆ ಸರಕಾರಿ ಕಾಲೇಜುಗಳಲ್ಲಿ ಬಾಕಿಯಿದೆ. ಆದ್ದರಿಂದ ಶೇ. 25ರಷ್ಟು ಪಠ್ಯ ಕಡಿತ ಮಾಡಿಯಾದರೂ ಪರೀಕ್ಷೆ ನಡೆಸುವ ಬಗ್ಗೆ ಸರಕಾರಕ್ಕೆ ವಿವರ ನೀಡಲಾಗಿದೆ. ಸರಕಾರದ ತೀರ್ಮಾನದಂತೆ ಮುಂದಿನ ಕ್ರಮ ಕೈಗೊಳ್ಳಲಾಗುವುದು.
- ಪ್ರೊ| ಪಿ.ಎಸ್. ಯಡಪಡಿತ್ತಾಯ,
ಮಂಗಳೂರು ವಿ.ವಿ. ಕುಲಪತಿ -ದಿನೇಶ್ ಇರಾ