Advertisement

ದ್ರಾವಿಡ್ ಗರಡಿಯ ಖಲೀಲ್ ಅಹಮದ್ ಏಶ್ಯಾಕಪ್ ಗೆ ಆಯ್ಕೆ

04:56 PM Sep 01, 2018 | Team Udayavani |

ಖಲೀಲ್ ಅಹಮದ್. ಈ ಹೆಸರು ಭಾರತೀಯ ಕ್ರಿಕೆಟ್ ಅಭಿಮಾನಿಗಳಿಗೆ ಪರಿಚಿತ ಹೆಸರು. 2016ರ ಅಂಡರ್ 19 ಕ್ರಿಕೆಟ್ ವಿಶ್ವಕಪ್ ನಲ್ಲಿ ಆಡಿ ಗಮನ ಸೆಳೆದಿದ್ದ ಈ ಎಡಗೈ ವೇಗಿ ಈಗ ಮತ್ತೆ ಸುದ್ದಿಯಾಗಿದ್ದಾರೆ. ಸಪ್ಟೆಂಬರ್ 15 ರಿಂದ ದುಬೈನಲ್ಲಿ ನಡೆಯುವ ಏಶ್ಯಾಕಪ್ ಏಕದಿನ ಸರಣಿಗೆ ಖಲೀಲ್ ಅಹಮದ್ ಟೀಂ ಇಂಡಿಯಾಗೆ ಆಯ್ಕೆಯಾಗಿದ್ದಾರೆ. 

Advertisement

ಮೂಲತಃ ರಾಜಸ್ಥಾನದವರಾದ ಖಲೀಲ್ ಹುಟ್ಟಿದ್ದು 1997ರ ಡಿಸೆಂಬರ್ 5ರಂದು. ಅಂಡರ್ 16 ಮತ್ತು ಅಂಡರ್ 19 ಕೂಟಗಳಲ್ಲಿ ರಾಜಸ್ಥಾನ ತಂಡವನ್ನು ಪ್ರತಿನಿಧಿಸಿದ್ದರು. 2016ರ ಅಂಡರ್ 19 ಕ್ರಿಕೆಟ್ ವಿಶ್ವಕಪ್ ನಲ್ಲಿ ಭಾರತದ ಪ್ರಮುಖ ವೇಗಿಯಾಗಿದ್ದರು. ರಾಹುಲ್ ದ್ರಾವಿಡ್ ಕೋಚಿಂಗ್ ನಲ್ಲಿ ಖಲೀಲ್ ಅಹಮದ್ ಭಾರತ ಟೂರ್ನಿಯಲ್ಲಿ ಫೈನಲ್ ಗೇರಲು ಪ್ರಮುಖ ಪಾತ್ರ ವಹಿಸಿದ್ದರು. 


ಪ್ರಥಮ ದರ್ಜೆ ಕ್ರಿಕೆಟ್ ನಲ್ಲಿ ಅಷ್ಟೇನು ಗಮನ ಸೆಳೆಯದ ಖಲೀಲ್ ಎರಡು ಪಂದ್ಯಗಳಿಂದ ಎರಡು ವಿಕಟ್ ಅಷ್ಟೇ ಪಡೆದಿದ್ದಾರೆ. ಆದರೆ ಲಿಸ್ಟ್ ಎ ಕ್ರಿಕೆಟ್ ನಲ್ಲಿ 17 ಪಂದ್ಯಗಳಿಂದ ಬರೋಬ್ಬರಿ 28 ವಿಕೆಟ್ ಕಬಳಿಸಿದ್ದಾರೆ. ದೇಶೀಯ ಟಿ20ಯ 12 ಪಂದ್ಯಗಳಿಂದ 17 ವಿಕೆಟ್ ಉರುಳಿಸಿರುವ ಖಲೀಲ್ ಅಹಮದ್ ಸಾಧನೆ ಕಡಿಮೆಯೇನಲ್ಲ.  2018ರ ಸೈಯ್ಯದ್ ಮುಶ್ತಾಕ್ ಅಲಿ ಕೂಟದಲ್ಲಿ ಖಲೀಲ್ 10 ಪಂದ್ಯಗಳಿಂದ 17 ವಿಕಟ್ ಉರುಳಿಸಿದ ಖಲೀಲ್ ಎಕಾನಮಿ ರೇಟ್ ಕೇವಲ 6.77.

ಭಾರತ ಎ ತಂಡದಲ್ಲಿ ಸಾಧನೆ:
ಭಾರತ ಎ ತಂಡದ ಪರವಾಗಿ ಖಲೀಲ್ ತೋರ್ಪಡಿಸಿದ ಅದ್ಭುತ ಸಾಧನೆ ರಾಷ್ಟ್ರೀಯ ಆಯ್ಕೆಗಾರರ ಚಿತ್ತ ಸೆಳೆಯುವಲ್ಲಿ ಕಾರಣವಾಯಿತು. ಎ ತಂಡದ ಪರವಾಗಿ ಇಂಗ್ಲೆಂಡ್ ಸರಣಿ ಮತ್ತು ಇತ್ತೀಚೆಗೆ ಮುಗಿದ ಚತುಷ್ಕೋನ ಸರಣಿಯಲ್ಲಿ ಉತ್ತಮ ಪ್ರದರ್ಶನ ತೊರಿದ್ದರು.  ಕಳೆದ 9 ಪಂದ್ಯಗಳಿಂದ 15 ವಿಕೆಟ್ ಪಡೆದ ಖಲೀಲ್ ಪ್ರತೀ ಪಂದ್ಯದಲ್ಲೂ ವಿಕೆಟ್ ಕಬಳಿಸಿದ್ದಾರೆ ಎನ್ನುವುದು ವಿಶೇಷ. 


ಐಪಿಎಲ್ ನಲ್ಲೂ ಆಡಿರುವ ಖಲೀಲ್ ಅಹಮದ್ ಕಳೆದ ಆವೃತ್ತಿಯಲ್ಲಿ ಸನ್ ರೈಸರ್ಸ್ ಹೈದರಾಬಾದ್ ತಂಡದ ಭಾಗವಾಗಿದ್ದರು. 20 ಲಕ್ಷ ಮೂಲ ಬೆಲೆ ಹೊಂದಿದ್ದ ಖಲೀಲ್ ಬಿಕರಿಯಾಗಿದ್ದು ಮಾತ್ರ ಬರೋಬ್ಬರಿ ಮೂರೂ ಕೋಟಿ ರೂಪಾಯಿಗಳಿಗೆ. 

ಭಾರತದ ಮಾಜಿ ಎಡಗೈ ವೇಗಿ ಜಹೀರ್ ಖಾನ್ ಅವರನ್ನು ಬಹುವಾಗಿ ಮೆಚ್ಚುವ ಖಲೀಲ್ ಅಹಮದ್ ಕೂಡಾ ಎಡಗೈ ವೇಗಿ. ತಾನು ವೇಗದ ಬೌಲರ್ ಆಗಲು ಜಹೀರ್ ಖಾನ್ ಸ್ಪೂರ್ತಿ ಎನ್ನುವ ಖಲೀಲ್ ಬೌಲಿಂಗ್ ಶೈಲಿ ಕೂಡಾ ಜಹೀರ್ ಬೌಲಿಂಗ್ ಶೈಲಿಯನ್ನು ಹೋಲುತ್ತದೆ ಎನ್ನುವುದನ್ನು ಇಲ್ಲಿ ಗಮನಿಸಬಹುದು.  

Advertisement
Advertisement

Udayavani is now on Telegram. Click here to join our channel and stay updated with the latest news.

Next