ರಾಂಚಿ: ತುರ್ತು ಸ್ಥಿತಿಯಲ್ಲಿ ಅಂಬುಲೆನ್ಸ್ ಸಿಗದೆ ಇದ್ದಾಗ ರೋಗಿಗಳನ್ನು ಕಿಲೋ ಮೀಟರ್‌ಗಟ್ಟಲೆ ಹೊತ್ತೊಯ್ದ ಘಟನೆಗಳನ್ನು ಕೇಳಿದ್ದೀರಿ, ಜಾರ್ಖಂಡ್‌ನ ಚಂಡ್ವಾದಲ್ಲಿ ತೀವ್ರ ರಕ್ತಸ್ರಾವದಿಂದ ಪ್ರಜ್ಞಾಹೀನಳಾಗಿದ್ದ 4 ತಿಂಗಳ ಗರ್ಭಿಣಿಯನ್ನು ಬೈಕ್‌ನಲ್ಲಿ ತ್ರಿಬಲ್‌ರೈಡ್ ಮೂಲಕ ಆಸ್ಪತ್ರೆಗೆ ಕರೆ ತಂದ ಕಳವಳಕಾರಿ ಘಟನೆ ನಡೆದಿದೆ.
ಗ್ರಾಮೀಣ ಭಾಗದಲ್ಲಿ ಸಕಾಲಕ್ಕೆ ಅಂಬುಲೆನ್ಸ್ ಲಭ್ಯವಾಗದೆ ತುರ್ತಾಗಿ ಚಿಕಿತ್ಸೆ ಗೆಂದು 30 ವರ್ಷದ ಗರ್ಭಿಣಿ ಶಾಂತಿ ದೇವಿ ಎಂಬಾಕೆಯನ್ನು ಬೈಕ್‌ನ ಮಧ್ಯ ಕುಳ್ಳಿರಿಸಿ 10 ಕಿ.ಮೀ ದೂರದ ಆಸ್ಪತ್ರೆಗೆ ಕರೆ ತಂದಿದ್ದಾರೆ.
ಚಂಡ್ವಾ ಪ್ರಾಧಮಿಕ ಆರೋಗ್ಯ ಕೇಂದ್ರಕ್ಕೆ ಬೈಕ್‌ನಲ್ಲಿ ಬಂದ ಬಳಿಕ 27 ಕಿ.ಮೀ ದೂರದ ರಾಂಚಿ ರಿಮ್ಸ್ ಆಸ್ಪತ್ರೆಗೆ ಅಂಬುಲೆನ್ಸ್‌ನಲ್ಲಿ ಕರೆತಂದು ಚಿಕಿತ್ಸೆ ನೀಡಲಾಗುತ್ತಿದೆ.
ನಾವು ಅಂಬುಲೆನ್ಸ್‌ಗಾಗಿ ಕರೆ ಮಾಡಿದರೂ ಬರಲಿಲ್ಲ. ಸರ್ಕಾರಿ 108 ವಾಹನವೂ ಲಭ್ಯವಾಗಲಿಲ್ಲ, ಕೊನೆಗೆ ದಿಕ್ಕು ತೋಚದೆ ಬೈಕ್‌ನಲ್ಲಿ ಆಸ್ಪತ್ರೆಗೆ ಕರೆದೊಯ್ಯುವ ಅನಿವಾರ್ಯತೆ ಎದುರಾಯಿತು ಎಂದು ಕುಟುಂಬ ಸದಸ್ಯರು ಹೇಳಿದ್ದಾರೆ.