Advertisement

ಅನಧಿಕೃತ ಮಾಂಸದ ಅಂಗಡಿಗಳಿಗೆ ಬೀಳಲಿದೆ ಬೀಗ?

12:08 PM Apr 07, 2017 | Team Udayavani |

ಬೆಂಗಳೂರು: ರಾಜಧಾನಿಯಲ್ಲಿರುವ ಅನಧಿಕೃತ ಮಾಂಸ ಮಾರಾಟ ಮಳಿಗೆಗಳಿಗೆ ಬೀಗಮುದ್ರೆ ಹಾಕಲು ಬಿಬಿಎಂಪಿ ಚಿಂತನೆ ನಡೆಸಿದೆ. ಮಾಂಸ ಮಾರಾಟದ ಅಂಗಡಿಗಳನ್ನು ತೆರಿಗೆ ವ್ಯಾಪ್ತಿಗೆ ತಂದು ಪಾಲಿಕೆಯ ಆದಾಯ ವೃದ್ಧಿ ಮಾಡುವುದು ಮತ್ತು ನಗರದ ನೈರ್ಮಲ್ಯ ಕಾಪಾಡುವುದು ಈ ಚಿಂತನೆ ಹಿಂದಿನ ಮೂಲ ಉದ್ದೇಶ.

Advertisement

ಪರವಾನಗಿ ಇಲ್ಲದ ಮಾಂಸ ಮಾರಾಟ ಮಳಿಗೆಗಳಲ್ಲಿ ಪ್ರಾಣಿಜನ್ಯ ತ್ಯಾಜ್ಯವನ್ನು ಸಮರ್ಪಕವಾಗಿ ವಿಲೇವಾರಿ ಮಾಡುತ್ತಿಲ್ಲ. ಹೀಗಾಗಿ ನಗರ ವ್ಯಾಪ್ತಿಯಲ್ಲಿ ನೈರ್ಮಲ್ಯ ಸಮಸ್ಯೆ ಉಂಟಾಗುತ್ತಿದೆ. ಇನ್ನೊಂದೆಡೆ, ಪಾಲಿಕೆ ವ್ಯಾಪ್ತಿಯಲ್ಲಿ ಸುಮಾರು 2500 ಅನದೀಕೃತ ಮಾಂಸದಂಡಿಗಳಿದ್ದು, ಅವುಗಳನ್ನೆಲ್ಲ ತೆರಿಗೆ ವ್ಯಾಪ್ತಿಗೆ ತಂದರೆ ಸಾಕಷ್ಟು ಅದಾಯ ಹರಿದು ಬರಲಿದೆ ಎಂಬುದು ಪಾಲಿಕೆಯ ಮುನ್ನೋಟ.

ಹೀಗಾಗಿ ಅನಧಿಕೃತ ಮಾಂಸ ಮಾರಾಟ ಮಳಿಗೆಗಳಿಗೆ ಬೀಗಮುದ್ರೆ ಹಾಕಲು ಬಿಬಿಎಂಪಿ ನಿರ್ಧರಿಸಿದೆ. ನಗರದ ಬಹುಪಾಲು ಮಾಂಸ ಮಾರಾಟಗಾರರು ತಮ್ಮ ಮಳಿಗೆಯಲ್ಲಿ ನಿತ್ಯ ಉತ್ಪತ್ತಿಯಾಗುವ ಪ್ರಾಣಿಜನ್ಯ ತ್ಯಾಜ್ಯ ವಿಲೇವಾರಿಗೆ ಸೂಕ್ತ ವ್ಯವಸ್ಥೆಯನ್ನೇ ಮಾಡಿ ಕೊಂಡಿಲ್ಲ. ಬಹುಪಾಲು ಮಳಿಗೆದಾರರು ತ್ಯಾಜ್ಯವನ್ನು ಸಾಮಾನ್ಯ ತ್ಯಾಜ್ಯದೊಂದಿಗೆ ಪಾಲಿಕೆಯ ಪೌರ ಕಾರ್ಮಿ ಕರಿಗೆ ನೀಡುವುದು,

ಖಾಲಿ ನಿವೇಶನ, ಫ‌ುಟ್‌ಪಾತ್‌, ಕಸದ ರಾಶಿಗೆ ಸುರಿಯುವುದು, ಪ್ಲಾಸ್ಟಿಕ್‌ ಚೀಲದಲ್ಲಿ ತುಂಬಿ ಕೆರೆ, ಕಾಲುವೆ ಅಂಚಿನಲ್ಲಿ ಎಸೆಯುತ್ತಿದ್ದಾರೆ. ಇದ ರಿಂದ ಒಂದೆಡೆ ನೈರ್ಮಲ್ಯ ಹಾಳಾದರೆ ಇನ್ನೊಂದೆಡೆ ಬೀದಿನಾಯಿಗಳ ಹಾವಳಿ ಹೆಚ್ಚಾಗುತ್ತಿದೆ. ಈ ಬಗ್ಗೆ ಸಾರ್ವಜನಿಕರಿಂದ ನಿರಂತರವಾಗಿ ದೂರು ಕೇಳಿಬರುತ್ತಿರುವ ಹಿನ್ನೆಲೆಯಲ್ಲಿ ಪಾಲಿಕೆ ದಿಟ್ಟ ಕ್ರಮಕ್ಕೆ ಮುಂದಾಗಿದೆ.

ಬೀಗ ಹಾಕಲು ವಿಶೇಷ ದಳ ರಚನೆ: ಈಗಾಗಲೇ ನಗರದಲ್ಲಿರುವ ಅನಧಿಕೃತ ಮಾಂಸದ ಮಳಿಗೆಗಳನ್ನು ಗುರುತಿಸಿರುವ ಪಾಲಿಕೆ ಪಶುಪಾಲನಾ ವಿಭಾಗದ ಅಧಿ 
ಕಾರಿಗಳು ಮಳಿಗೆದಾರರಿಗೆ ನೋಟಿಸ್‌ ಜಾರಿಗೊಳಿಸಿ ದ್ದಾರೆ. ಅನದೀಕೃತ ಅಂಗಡಿಗಳನ್ನು ಬಂದ್‌ ಮಾಡಲು 2 ವಿಶೇಷ ದಳವನ್ನೂ ರಚಿಸಲು ಯೋಜಿಸಲಾಗಿದೆ. ಮುಂದಿನ ಹದಿನೈದು ದಿನಗಳೊಳಗೆ ಎರಡು ದಳ ರಚನೆ ಯಾಗಲಿದ್ದು, ನಗರದಾದ್ಯಂತ ಕಾರ್ಯಾಚರಣೆ ನಡೆಸಿ ಅನಧಿಕೃತ ವ್ಯಾಪಾರಿಗಳಿಗೆ ದಂಡ ವಿಧಿಸಿ ಮಳಿಗೆಗಳನ್ನು ಬಂದ್‌ ಮಾಡಿಸಲು ಸಿದ್ಧತೆ ನಡೆಯುತ್ತಿದೆ. 

Advertisement

ಕಾಲುವೆ ಸೇರುವ ಪ್ರಾಣಿಜನ್ಯ ತ್ಯಾಜ್ಯ: ಮಾಂಸದಂಗಡಿ ಗಳಲ್ಲಿ ಉತ್ಪತ್ತಿಯಾಗುವ ಪ್ರಾಣಿಜನ್ಯ ತ್ಯಾಜ್ಯದ ವೈಜ್ಞಾನಿಕ ವಿಲೇವಾರಿ ಬಗ್ಗೆ ಪರವಾನಗಿ ಪತ್ರದಲ್ಲಿ ವಿವರವಾಗಿ ತಿಳಿಸಲಾಗಿದೆ. ಆದರೆ ಅನಧಿಕೃತ ಮಾಂಸದ ಮಳಿಗೆಗಳು ಹಾಗೂ ಹಲವು ಅಧಿಕೃತ ಮಳಿಗೆದಾರರು ಪ್ರಾಣಿಜನ್ಯ ತ್ಯಾಜ್ಯವನ್ನು ಸಮೀಪದ ಕಾಲುವೆಗಳಿಗೆ ಸುರಿಯುತ್ತಿ ದ್ದಾರೆ. ಕೋಳಿ, ಕುರಿ, ಮೇಕೆ ಇತರೆ ಪ್ರಾಣಿಜನ್ಯ ತ್ಯಾಜ್ಯವನ್ನು ಪ್ಲಾಸ್ಟಿಕ್‌ ಚೀಲದಲ್ಲಿ ಕಟ್ಟಿ ರಾತ್ರಿ ವೇಳೆ ಕಾಲುವೆಗೆ ಎಸೆಯಲಾಗುತ್ತಿದೆ.

ಇದರಿಂದ ತ್ಯಾಜ್ಯ ಕೊಳೆತು ದುರ್ನಾತ ಬೀರುತ್ತದೆ. ಜತೆಗೆ ಬೀದಿನಾಯಿಗಳು, ಹದ್ದುಗಳು ಕಾಲುವೆ ಬಳಿ ಗುಂಪುಗೂಡುವುದರಿಂದ ಕಾಲುವೆಗೆ ಹೊಂದಿಕೊಂಡಂತಿರುವ ಮನೆಗಳ ನಿವಾಸಿಗಳು ತೊಂದರೆ ಅನುಭವಿಸುವಂತಾಗಿದೆ. ಜತೆಗೆ ಕಾಲುವೆಯಲ್ಲಿ ನೀರು ಸರಾಗವಾಗಿ ಹರಿಯದೆ ನಿಂತು ರೋಗ- ರುಜಿನ ಹರಡಲು ಕಾರಣವಾಗಿದೆ.

ಈ ಹಿಂದೆಯೇ ಕ್ರಮ ಕೈಗೊಂಡಿದ್ದ ಪಾಲಿಕೆ
ಪಾಲಿಕೆಯಿಂದ ಈ ಹಿಂದೆಯೇ ಅಕ್ರಮ ಮಳಿಗೆಗಳ ವಿರುದ್ಧ ಕಾರ್ಯಾಚರಣೆ ಆರಂಭಿಸಲಾಗಿತ್ತು. ಸಮರ್ಪಕ ತ್ಯಾಜ್ಯ ವಿಲೇವಾರಿ ಹಾಗೂ ಪಾಲಿಕೆಗೆ ಆದಾಯ ತರುವ ನಿಟ್ಟಿನಲ್ಲಿ ಕಾರ್ಯಾಚರಣೆ ಮುಂದುವರಿಸಲಾಗುತ್ತಿದೆ ಎಂದು ಪಾಲಿಕೆ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ನಗರದಲ್ಲಿರುವ ಅನಧಿಕೃತ ಮಾಂಸದ ಮಳಿಗೆಗಳಿಗೆ ಕಡಿವಾಣ ಹಾಕಲು ಪಾಲಿಕೆಯಿಂದ ಎರಡು ವಿಶೇಷ ದಳ ರಚಿಸಲಾಗುತ್ತಿದೆ. ನಗರದಲ್ಲಿ ಉತ್ಪತ್ತಿಯಾಗುವ ಪ್ರಾಣಿಜನ್ಯ ತ್ಯಾಜ್ಯದ ವೈಜ್ಞಾನಿಕ ವಿಲೇವಾರಿಗೆ ಕ್ರಮ ಕೈಗೊಳ್ಳಲು ಹಾಗೂ ಎಲ್ಲ ಮಳಿಗೆಗಳನ್ನು ತೆರಿಗೆ ವ್ಯಾಪ್ತಿಗೆ ತರಲು ಈ ಕ್ರಮ ಕೈಗೊಳ್ಳಲಾಗಿದೆ.
-ಎನ್‌. ಮಂಜುನಾಥ ಪ್ರಸಾದ್‌, ಬಿಬಿಎಂಪಿ ಆಯುಕ್ತರು

Advertisement

Udayavani is now on Telegram. Click here to join our channel and stay updated with the latest news.

Next